ಕ್ರಿಕೆಟ್ ಬೆಟ್ಟಿಂಗ್ ಕೇಕೆ: ಹರಿಯುತ್ತಿದೆ ಹಣದ ಹೊಳೆ

ಶುಕ್ರವಾರ, ಮೇ 24, 2019
22 °C
ಹಳ್ಳಿಗಳಲ್ಲೂ ಜೂಜಾಟದ ಅಮಲು

ಕ್ರಿಕೆಟ್ ಬೆಟ್ಟಿಂಗ್ ಕೇಕೆ: ಹರಿಯುತ್ತಿದೆ ಹಣದ ಹೊಳೆ

Published:
Updated:

ಬೆಂಗಳೂರು: ಪುಟ್ಟ ಪಟ್ಟಣ ಸಿಂದಗಿಯ ಆ ಮನೆಯ ಜನ ಈಗ ಕ್ರಿಕೆಟ್ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಐಪಿಎಲ್ ಹೆಸರೆತ್ತಿದ್ದರೆ ಆಕ್ರೋಶ ಸಿಕ್ಸರ್‌ಗಿಂತಲೂ ಬಿರುಸಾಗಿ ಸಿಡಿಯುತ್ತದೆ!

ಆದರೆ ಕೆಲವು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆ ಮನೆಯ ಪಡಸಾಲೆಯಲ್ಲಿದ್ದ ಟಿವಿಯಲ್ಲಿ ಕ್ರಿಕೆಟ್‌ ನಿರಂತರವಾಗಿ ಸದ್ದು ಮಾಡುತ್ತಿತ್ತು. ಮನೆಯವರ ನಾಲಿಗೆಯ ಮೇಲೆ ಕ್ರಿಕೆಟ್ ತಾರೆಯರ ಹೆಸರುಗಳು ನಲಿಯುತ್ತಿದ್ದವು. ಆದರೆ ಈಗ ಏನಾಯಿತು?

ಇದನ್ನೂ ಓದಿ: ಕ್ರಿಕೆಟ್ ರನ್ ಹೊಳೆಯಲ್ಲಿ ಭೀಕರ ‘ಬೆಟ್ಟಿಂಗ್’ ಸುಳಿ

ಕ್ರಿಕೆಟ್‌ ಅಕ್ರಮ ಬೆಟ್ಟಿಂಗ್ ಭೂತಕ್ಕೆ ಈ ಮನೆಯ ಸಂತಸ, ಸಮೃದ್ಧಿಗಳೆಲ್ಲವೂ ಮಣ್ಣುಪಾಲಾದವು. ಮನೆಯ ಹಿರಿಯ ಮಗ ಮಲ್ಲೇಶ (ಹೆಸರು ಬದಲಿಸಲಾಗಿದೆ) ಅಂಟಿಸಿಕೊಂಡ ಕ್ರಿಕೆಟ್‌ ಬೆಟ್ಟಿಂಗ್ ಹುಚ್ಚಿಗೆ ಅಕ್ಕಿ ಗಿರಣಿ, ಮೂವತ್ತು ಲಕ್ಷಕ್ಕೂ ಹೆಚ್ಚಿನ ನಗದು, ಪತ್ನಿಯ ಒಡವೆಗಳು ಮಾರಾಟ ವಾದವು. ಜೊತೆಗೆ ಲಕ್ಷಾಂತರ ರೂಪಾಯಿ ಸಾಲ. ಮನೆಯನ್ನೂ ಗಿರವಿ ಇಟ್ಟ. ಇದನ್ನು ಅರಿತ ಅಣ್ಣ ತಮ್ಮಂದಿರು ಮತ್ತು ತಂದೆ ತಾಯಿ. ಹೇಗೋ ಮಾಡಿ ಮನೆಯನ್ನು ಉಳಿಸಿಕೊಂಡರು. ಮಲ್ಲೇಶ, ಆತನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಮನೆಯಿಂದ ಹೊರಗಟ್ಟಿದರು. ಇದೀಗ ಮಲ್ಲೇಶ ಬೆಂಗಳೂರಿನ ಮಾಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ದುಡಿಯುತ್ತಿದ್ದಾನೆ. ಬೆಟ್ಟಿಂಗ್ ಬಗ್ಗೆ ಮಾತು ತೆಗೆದರೆ ಮುಖ ಮುಚ್ಚಿಕೊಂಡು ನೇಪಥ್ಯಕ್ಕೆ ಸರಿಯುತ್ತಾನೆ.

ಇದನ್ನೂ ಓದಿ: ಬ್ಯಾನ್‌ ಮಾಡಿದ್ರೆ ಜೀವ ಉಳಿತಾವೆ..

‘ಇದೊಂದು ಚಕ್ರವ್ಯೂಹ. ಒಳಗೆ ಹೋಗುವುದಷ್ಟೇ. ಹೊರಗೆ ಬರುವುದು ಯಾರಿಗೂ ಗೊತ್ತಿಲ್ಲ. ಅಗ್ಗದ ದರಕ್ಕೆ ಸಿಗುವ ಸ್ಮಾರ್ಟ್‌ಫೋನ್, ಉಚಿತ ಡಾಟಾದಿಂದಾಗಿ ಬೆಟ್ಟಿಂಗ್ ಲೋಕವೂ ಡಿಜಿಟಲೀಕರಣಗೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೊದಲಿನ ತರಹ ಯಾವುದೋ ಮಹಾನಗರಿಯಲ್ಲಿ ಕುಳಿತ ಒಬ್ಬ ವ್ಯಕ್ತಿ ಇದನ್ನು ನಿಯಂತ್ರಿಸುತ್ತಿಲ್ಲ. ಈಗ ಎಲ್ಲ ಪಟ್ಟಣ, ನಗರಗಳಲ್ಲಿಯೂ ಕಿಂಗ್‌ಪಿನ್‌ ಗಳಿದ್ದಾರೆ. ಬುಕ್ಕಿಗಳು, ಬಾಜಿ ಕಟ್ಟುವವರ ದ್ವೀಪಗಳು ಸೃಷ್ಟಿಯಾಗಿವೆ. ತಮ್ಮ ಪಕ್ಕದಲ್ಲಿಯೇ ಕೂತಿರುವ ಮಗ ಬೆಟ್ಟಿಂಗ್‌ ಜಾಲದಲ್ಲಿ ತೇಲಾಡುತ್ತಿದ್ದರೂ ಅಪ್ಪ–ಅಮ್ಮನಿಗೆ ಗೊತ್ತೇ ಆಗದ ಪರಿಸ್ಥಿತಿ. ನಮ್ಮ ಹುಡುಗನದ್ದೂ ಅದೇ ಕಥೆಯಾಯಿತು. ಬಿಸಿನೆಸ್‌ಗಾಗಿ ಸಾಲ ಮಾಡಿದ್ದಾನೆಂದು ಮನೆಯವರೆಲ್ಲ ತಿಳಿದುಕೊಂಡಿದ್ದರು.  ಆದರೆ, ನಿಜಾಂಶ ತಿಳಿಯುವಷ್ಟರ  ಹೊತ್ತಿಗೆ ಎಲ್ಲವೂ ಮುಗಿದಿತ್ತು’ ಎಂದು ಗದ್ಗಿದಿತರಾದರು ಆ ಹಿರಿಯರು.

‘ಶ್ರೀಮಂತರು ಮೋಜಿಗಾಗಿ ಬೆಟ್ಟಿಂಗ್ ಮಾಡುತ್ತಾರೆ. ಅವರಿಗೆ ಕಳೆದುಕೊಂಡಿದ್ದನ್ನು ಮರಳಿ ಗಳಿಸುವುದು ಗೊತ್ತಿರುತ್ತದೆ. ನಮ್ಮಂತಹ ಮಧ್ಯಮ, ಕೆಳಮಧ್ಯಮ ವರ್ಗದ ಕುಟುಂಬಗಳು ಒಮ್ಮೆ ಹಾಳಾದರೆ ಚೇತರಿಸಿಕೊಳ್ಳಲು ಸಾಧ್ಯವೇ? ಇದರಲ್ಲಿ ಕ್ರಿಕೆಟ್‌ನ ತಪ್ಪಿದೆ ಎಂದು ನಾನು ಹೇಳಲ್ಲ. ಆದರೆ, ಅದನ್ನು ದುರುಪಯೋಗ ಮಾಡಿಕೊಂಡು ಅಮಾಯಕರ ಕುಟುಂಬಗಳನ್ನು ಮುಳುಗಿಸುತ್ತಿರುವ ಮಾಫಿಯಾಗಳನ್ನು ನಿಯಂತ್ರಿಸುವವರು ಯಾರು? ನಮ್ಮದೊಂದೇ ಕುಟುಂಬ ಈ ರೀತಿಯಾಗಿಲ್ಲ.

 ಹಳ್ಳಿ, ನಗರಗಳ ತಾರತಮ್ಯವಿಲ್ಲದಂತೆ ಎಲ್ಲ ಕಡೆಯೂ ಈ ಮಾರಿ ತನ್ನ ಕಬಂಧಬಾಹುಗಳನ್ನು ಚಾಚಿದೆ’ ಎಂದು ಪ್ರಶ್ನಿಸುತ್ತಾರೆ.

ದುಡಿಯದೇ, ದುಃಖಪಡದೇ ಸುಲಭವಾಗಿ ಹಣಗಳಿಸಬೇಕು. ಮೋಜು, ಮಜಾ ಉಡಾಯಿಸಬೇಕು ಎಂಬ ವಿಲಾಸಿ ಸಂಸ್ಕೃತಿಯ ವಾಂಛೆಯೇ ಇಂತಹ ಚಟಗಳತ್ತ ವಾಲಲು ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯ.  ಆರಂಭದಲ್ಲಿ ಸಣ್ಣ ಮೊತ್ತದ ಹಣ ಕಟ್ಟಿ ಒಂದಿಷ್ಟು ಗೆದ್ದುಬಿಟ್ಟರೆ, ಮುಂದೆ ಅದೇ ಗೀಳಾಗಿ ಹೋಗುತ್ತದೆ. ಗೆದ್ದಿದ್ದಕ್ಕಿಂತ ಹೆಚ್ಚು ಗೆಲ್ಲುವ, ಸೋಲುತ್ತ ಹೋದಂತೆ ಸೋತಿದ್ದನ್ನು ಮರಳಿ ಗಳಿಸಿಕೊಳ್ಳುವ ಹುಚ್ಚು ಕುದುರೆಯಂತೆ ಮನಸ್ಸು  ಓಡತೊಡಗುತ್ತದೆ.

ಹೋಟೆಲ್‌ಗಳಲ್ಲಿ  ಸಪ್ಲೈಯರ್ ಆಗಿ ದುಡಿಯುವ ಹುಡುಗರದ್ದು ಇನ್ನೊಂದು ಕಥೆ. ಅವರು ಬೆಟ್ಟಿಂಗ್‌ಗಾಗಿ  ಐಪಿಎಲ್ ಅಥವಾ ಭಾರತ ತಂಡ ಆಡುವ ಟೂರ್ನಿಗಳನ್ನಷ್ಟೇ ನೆಚ್ಚಿಕೊಂಡಿಲ್ಲ.

‘ಐಪಿಎಲ್ ಒಂದೇ ಅಲ್ಲ ಸರ್. ಜಗತ್ತಿನ ಯಾವ ಮೂಲೆಯಲ್ಲಿ ಕ್ರಿಕೆಟ್‌ ಪಂದ್ಯಗಳು ನಡೆದರೂ ಇಲ್ಲಿ ಬೆಟ್ಟಿಂಗ್ ಮಾಡಬಹುದು. ಈಚೆಗೆ ಆಫ್ಗಾನಿಸ್ತಾನ ಮತ್ತು ಐರ್ಲೆಂಡ್ ನಡುವಣ ನಡೆದ ಪಂದ್ಯಕ್ಕೂ ನಾವು ಬೆಟ್‌ ಕಟ್ಟಿದ್ದೆವು. ಈಗ ಟಿವಿ ಮತ್ತು ಆ್ಯಪ್‌ಗಳಲ್ಲಿ ಜಗತ್ತಿನ ಮೂಲೆಮೂಲೆಗಳಲ್ಲಿ ನಡೆಯು ಕ್ರಿಕೆಟ್‌ ಪಂದ್ಯಗಳನ್ನು ನೋಡುವ ಅವಕಾಶ ಇದೆ’ ಎಂದು ನಕ್ಕ ಮೆಜೆಸ್ಟಿಕ್ ಎದುರಿನ ಸಸ್ಯಾಹಾರಿ ಹೋಟೆಲ್ ಸಪ್ಲಾಯರ್.

ಕ್ರಿಕೆಟ್‌ ಬೆಟ್ಟಿಂಗ್‌ ನಲ್ಲಿ ಕಳೆದುಕೊಂಡಿದ್ದನ್ನು ಮರಳಿ ಗಳಿಸಲು ಬೇರೆ ಬೇರೆ ಜೂಜಾಟಗಳಿಗೂ ಜನರು ವಾಲುತ್ತಿದ್ದಾರೆ. ಇದರಿಂದಾಗಿ ಕ್ಯಾಸಿನೊ, ಇಸ್ಪೀಟ್, ಮಟ್ಕಾ ದಂಧೆಗಳಿಗೂ ಶುಕ್ರದೆಸೆ ಬಂದಿದೆ. ಕೋಳಿ ಅಂಕ, ಟಗರಿನ ಕಾಳಗಗಳಿಗೆ ಸೀಮಿತವಾಗಿದ್ದ ಗ್ರಾಮೀಣ ಭಾಗದ ಜೂಜಾಟ ಈಗ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ.  ರಂಗುರಂಗಿನ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ   ‘ಕುರುಡು ಕಾಂಚಾಣ ಕುಣಿಯುತಲಿದೆ. ಕಾಲಿಗೆ ಬಿದ್ದವರ ತುಳಿಯುತಿದೆ’.

ಮಾಫಿಯಾ, ಪೊಲೀಸ್ ವ್ಯವಸ್ಥೆ ಮತ್ತು ಪ್ರಭಾವಿ ರಾಜಕಾರಣಿಗಳ ಜೊತೆಯಾಟದಿಂದಾಗಿ ಬೆಟ್ಟಿಂಗ್ ಎಂಬ ಸಾಮಾಜಿಕ ಪಿಡುಗಿನ ಇನಿಂಗ್ಸ್‌ ದೊಡ್ಡದಾಗಿ ಬೆಳೆಯುತ್ತಿದೆ. ಈ ಜೊತೆಯಾಟವನ್ನು ಮುರಿಯುವ ಶಕ್ತಿ ಇರುವುದು ಸಮಾಜಕ್ಕೆ ಮತ್ತು ಕ್ರಿಕೆಟ್‌ ಪ್ರಿಯರಿಗೆ ಮಾತ್ರ!

ಕಾನೂನು ಬದ್ಧ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಆಡಳಿತ ಸುಧಾರಣೆಗಾಗಿ ಶಿಫಾರಸ್ಸುಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ನಿವೃತ್ತ ನ್ಯಾ. ಆರ್.ಎಂ. ಲೋಧಾ ಸಮಿತಿಯು ಬೆಟ್ಟಿಂಗ್‌ ಅನ್ನು ಕಾನೂನುಬದ್ಧಗೊಳಿಸಬೇಕು ಎಂದು ಹೇಳಿದೆ. 

ಅನಧಿಕೃತ ಬೆಟ್ಟಿಂಗ್‌ನಿಂದಾಗಿ ಬಹಳಷ್ಟು ಅಕ್ರಮ ನಡೆಯು ತ್ತಿವೆ. ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಕಾನೂನು ಬದ್ಧಗೊಳಿಸಿದರೆ ಆದಾಯ ಸಿಗುತ್ತದೆ. ಜನರನ್ನು ಮೋಸಗೊಳಿಸುವ ಕುತಂತ್ರಗಳಿಗೆ ಕಡಿವಾಣ ಹಾಕಿ ದಂತಾಗುತ್ತದೆ ಎಂದು ಈ ಶಿಫಾರಸು ಮಾಡಲಾಗಿದೆ.

‘ಅಕ್ರಮ ಬೆಟ್ಟಿಂಗ್ ವೃತ್ತಿಪರ ಆಟಗಾರರ ಮೇಲೆಯೂ ತನ್ನ ಪ್ರಭಾವ ಬೀರುತ್ತಿದೆ. ಆದ್ದರಿಂದ ಬೆಟ್ಟಿಂಗ್ ಸಕ್ರಮವಾಗಲಿ; ಮ್ಯಾಚ್ ಫಿಕ್ಸಿಂಗ್ ಶಿಕ್ಷಾರ್ಹ ಅಪರಾಧವಾಗಬೇಕು. ಅದಕ್ಕಾಗಿ ಕಾನೂನು ರೂಪಗೊಳ್ಳಬೇಕು’ ಎಂದು ಶಿಫಾರಸು ಮಾಡಿದೆ.

ಕಾನೂನು ಆಯೋಗವೂ ಕಾನೂನುಬದ್ಧಗೊಳಿಸಲು ಸಲಹೆ ನೀಡಿತ್ತು.  ಆಸ್ಟ್ರೇಲಿಯಾ, ಯುಕೆ, ದ. ಆಫ್ರಿಕಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅನ್ನು ಕಾನೂನುಬದ್ಧಗೊಳಿಸಲಾಗಿದೆ. ಜೂಜುಪ್ರಿಯರ ದೇಶ ಆಸ್ಟ್ರೇಲಿಯಾದಲ್ಲಿ ಪ್ರತಿವರ್ಷ ಬೆಟ್ಟಿಂಗ್ ನಿಂದ ಸರ್ಕಾರಕ್ಕೆ ಅಪಾರ ಆದಾಯ ಬರುತ್ತಿದೆ. ಇಲ್ಲಿ ಟೆನಿಸ್ , ಫುಟ್‌ಬಾಲ್ ಮತ್ತಿತರ ಕ್ರೀಡೆಗಳ ಬೆಟ್ಟಿಂಗ್ ಗಳನ್ನೂ ಸಕ್ರಮಗೊಳಿಸಲಾಗಿದೆ.

ಬೆಟ್ಟಿಂಗ್ ಅಂದು, ಇಂದು...

ಬೆಟ್ಟಿಂಗ್ ಇವತ್ತು ನಿನ್ನೆಯ ಸಮಸ್ಯೆಯಲ್ಲ. ಮಹಾಭಾರತದ ಜೂಜಾಟದ ಸಮಯದಿಂದಲೂ ಐತಿಹ್ಯವಿದೆ. ಗ್ರಾಮೀಣ ಭಾಗದ ಕುಸ್ತಿ, ಕಬಡ್ಡಿ, ಕೋಳಿ ಅಂಕ, ಟಗರಿನ ಕಾಳಗ, ಎತ್ತುಗಳ ಓಟ ಇತ್ಯಾದಿ ಕ್ರೀಡೆಗಳಲ್ಲಿ ಬೆಟ್ಟಿಂಗ್ ನಡೆಯುವುದು ರಹಸ್ಯವೇನಲ್ಲ.

ಆದರೆ, ‘ಮಿಲಿಯನ್ ಡಾಲರ್ ಬೇಬಿ’ ಕ್ರಿಕೆಟ್‌ನಲ್ಲಿ ಮಾತ್ರ. ಇದು ರಾಕ್ಷಸಾಕಾರವಾಗಿದೆ. 90ರ ದಶಕಕ್ಕಿಂತ ಮೊದಲು ಪಂದ್ಯದ ಗೆಲುವು ಮತ್ತು ಸೋಲುಗಳು ಮಾತ್ರ ಬೆಟ್ಟಿಂಗ್‌ನ ಕೇಂದ್ರಬಿಂದುವಾಗಿದ್ದವು. ಸ್ನೇಹಿತರ, ಬಂಧುಗಳ ವಲಯದ ಮಟ್ಟಿಗೆ ಇದು ನಡೆಯುತ್ತಿತ್ತು. ಇದರ ಲಾಭ, ಜನಪ್ರಿಯತೆ ಹೆಚ್ಚಾದಂತೆ ಮುಂಬೈ ಭೂಗತ ಜಗತ್ತು ಇದನ್ನು ತಮ್ಮ ಕೈವಶ ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿತು. ಅಲ್ಲಿಂದ ಶುರುವಾಯಿತು ಕ್ರಿಕೆಟ್‌ ಬೆಟ್ಟಿಂಗ್‌ನ ರುದ್ರ ನರ್ತನ.

ಲೇಖಕ ಚಂದ್ರಮೋಹನ್ ಪುಪ್ಪಳ ಅವರು ಈಚೆಗೆ ಬರೆದಿರುವ ‘ನೋ ಬಾಲ್’ ಆಂಗ್ಲ ಕೃತಿಯಲ್ಲಿ ಮುಂಬೈ ಮಾಫಿಯಾದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದರಲ್ಲಿ ಎರಡು ವಿಧಗಳನ್ನು ಗುರುತಿಸುತ್ತಾರೆ. ಒಂದು ಹರಡಿಕೊಂಡಂತೆ ಮಾದರಿಯ ಬೆಟ್ಟಿಂಗ್ (ಸ್ಪ್ರೆಡ್ ಬೆಟ್ಟಿಂಗ್) ಮತ್ತು ಸಮಗ್ರ ಮಾದರಿಯ ಬೆಟ್ಟಿಂಗ್ (ಟೋಟಲ್ ಬೆಟ್ಟಿಂಗ್) .

ಸ್ಪ್ರೆಡ್ ಬೆಟ್ಟಿಂಗ್ ಎಂದರೆ, ಪಂದ್ಯದ ಟಾಸ್, ತಂಡಗಳ ಸ್ಕೋರ್,,ಆಟಗಾರರ ವೈಯಕ್ತಿಕ ಸ್ಕೋರ್ ಗಳ ಸುತ್ತ ಬಾಜಿ ಕಟ್ಟಲಾಗುತ್ತದೆ. ಟೋಟಲ್ ಬೆಟ್ಟಿಂಗ್ ವ್ಯಾಪ್ತಿ ದೊಡ್ಡದು. ಟಾಸ್‌, ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ, ಬೆಸ್ಟ್ ಬೌಲರ್, ವಿನ್ನರ್, ಲೂಸರ್, ಟೋಟಲ್ ಸ್ಕೋರ್  ಎಲ್ಲವನ್ನೂ ಒಳಗೊಂಡಿರುತ್ತದೆ. ಆದರೆ ಇಲ್ಲಿಯ ಲೆಕ್ಕಾಚಾರ ತುಸು ಕ್ಲಿಷ್ಟಕರ. ಆದರೂ ಈ ಮಾದರಿಯತ್ತಲೇ ಬಹಳ ಜನರಿಗೆ ಆಕರ್ಷಣೆ ಹೆಚ್ಚು. 

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕ್ರಿಕೆಟ್‌ ಬೆಟ್ಟಿಂಗ್ ಮೂಲಕವೇ ಕೋಟ್ಯಂತರ ಹಣ ಗಳಿಸಿದ ದಾಖಲೆಗಳು ಪೊಲೀಸ್ ಕಡತಗಳಲ್ಲಿವೆ. ಬೆಟ್ಟಿಂಗ್‌ ಅನ್ನು ತಮಗೆ ಬೇಕಾದ ಹಾಗೆ ಲಾಭದ ದಂಧೆ ಮಾಡಿಕೊಳ್ಳಲು ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಷಿಂಗ್  ಶುರುವಾದವು. ಭಾರತ, ದಕ್ಷಿಣ ಆಫ್ರಿಕಾ,ಪಾಕಿಸ್ತಾನ ಸೇರಿದಂತೆ ಹಲವು ದೇಶಗಳ ಖ್ಯಾತನಾಮ ಕ್ರಿಕೆಟಿಗರು ಸಿಕ್ಕಿಹಾಕಿಕೊಂಡಿದ್ದು ಇತಿಹಾಸ. 2013ರಲ್ಲಿ ಐಪಿಎಲ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್  ಅತಿ ದೊಡ್ಡ ಹಗರಣವಾಗಿ ಗಮನ ಸೆಳೆಯಿತು. ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ರಾಜಸ್ಥಾನ್ ರಾಯಲ್ಸ್‌ ತಂಡಗಳನ್ನು ಎರಡು ವರ್ಷ ಅಮಾನತಿನಲ್ಲಿಡಲಾಯಿತು. ಶ್ರೀಶಾಂತ್, ಚಾಂಡಿಲಾ ಅವರಂತಹ ಆಟಗಾರರು ನಿಷೇಧ ಶಿಕ್ಷೆಅನುಭವಿಸಿದರು. ಕ್ರಿಕೆಟ್ ಆಟವನ್ನು ಬಹಳಷ್ಟು ಜನರು ಸಂಶಯದ ದೃಷ್ಟಿಯಿಂದ ನೋಡುವಂತಾಯಿತು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !