ಸೋಮವಾರ, ಆಗಸ್ಟ್ 8, 2022
24 °C
ಇಂಧನ, ಆಹಾರ, ವಿದ್ಯುತ್‌, ಪ್ರಯಾಣದರ ಗಗನಮುಖಿ: ದುಡಿದುಂಬುವರ ಸ್ಥಿತಿ ನೆಲಮುಖಿ

ಒಳನೋಟ | ಕೋವಿಡ್‌ ಬಾಣಲೆ: ಬೆಲೆಯ ‘ಬಲೆ’

ಪ್ರವೀಣ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಅಬ್ಬರದಿಂದ ಹೈರಾಣಾದವರು, ‘ಇನ್ನೇನು ಲಾಕ್‌ಡೌನ್‌ ನಿರ್ಬಂಧಗಳು ಸಡಿಲವಾಗಲಿವೆ, ಎಲ್ಲವೂ ಸಹಜವಾಗಲಿವೆ’ ಎಂದು ನಿಟ್ಟುಸಿರು ಬಿಡುತ್ತಿರಬಹುದು. ಆದರೆ, ದರ ಏರಿಕೆಯ ಭಾರ ಜನರ ಹೆಗಲೇರಲು ಸಜ್ಜಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಕಂಗಾಲಾದವರು, ಸಂಬಳ ಕಡಿತದಿಂದ ಚಡಪಡಿಸುತ್ತಿರುವವರು, ಕೆಲಸವಿಲ್ಲದೇ ಒಪ್ಪೊತ್ತಿನ ಕೂಳಿಗೂ ಪರದಾಡುವ ಕೂಲಿ ಕಾರ್ಮಿಕರು, ಮನೆಯ ಆಧಾರ ಸ್ತಂಭದಂತಿದ್ದವರನ್ನೇ ಕೋವಿಡ್‌
ನಿಂದಾಗಿ ಕಳೆದುಕೊಂಡವರು.. ಎಲ್ಲರೂ ದರ ಏರಿಕೆಯ ಬಿಸಿ ಅನುಭವಿಸಬೇಕು.

ಪೆಟ್ರೋಲ್‌ ದರವು ಪ್ರತಿ ಲೀಟರ್‌ಗೆ ಹಲವೆಡೆ ₹ 100ರ ಗಡಿ ದಾಟಿದೆ. ಸ್ವಂತ ವಾಹನವನ್ನು ರಸ್ತೆಗಿಳಿಸುವ ಮುನ್ನ ಯೋಚಿಸಬೇಕಾದ ಸ್ಥಿತಿ ಇದೆ. ಸಾರ್ವಜನಿಕ ವಾಹನ ಬಳಸೋಣ ಎಂದರೆ, ಡೀಸೆಲ್ ದರ ಏರಿಕೆಯ ಭಾರವನ್ನು ನಿಭಾಯಿಸಲು ಪ್ರಯಾಣ ದರ ಹೆಚ್ಚಿಸಲು ಸಾರಿಗೆ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಬೇಳೆಕಾಳುಗಳ ದರ ಕೆ.ಜಿ.ಗೆ ₹ 150ರ ಗಡಿ ದಾಟಿದ್ದರೆ, ಪ್ರತಿ ಲೀಟರ್‌ ಅಡುಗೆ ಎಣ್ಣೆ ದರ ದ್ವಿಶತಕ ಬಾರಿಸುವ (ರೂಪಾಯಿ) ಸನಿಹದಲ್ಲಿದೆ. ವಿದ್ಯುತ್‌ ಬಿಲ್‌ ಕೂಡ ತುಟ್ಟಿಯಾಗಿದೆ.

ತೈಲೋತ್ಪನ್ನಗಳ ದರ ಏರಿಕೆಗನುಗುಣವಾಗಿ ಸರಕು ಸಾಗಣೆ ವೆಚ್ಚವೂ ಹೆಚ್ಚಲಿದೆ. ವಿದ್ಯುತ್‌ ದರ ಏರಿಕೆಯು ಸೇವಾ ವಲಯ ಹಾಗೂ ವಿವಿಧ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡಲಿದೆ. ಆಹಾರ ಸಂಸ್ಕರಣಾ ಉದ್ದಿಮೆಗಳ ಮೇಲೂ ಇದರ ಕರಿನೆರಳು ಬೀಳಲಿದೆ. ಅಂತಿಮವಾಗಿ ಈ ಎಲ್ಲ ಹೊರೆಗಳೂ ವರ್ಗವಾಗುವುದು ಗ್ರಾಹಕರಿಗೆ ಎಂದು ವಿಶ್ಲೇಷಿಸುತ್ತಾರೆ ತಜ್ಞರು.

‘ಅಕ್ಕಿ, ಬೇಳೆ, ಅಡುಗೆ ಎಣ್ಣೆ ಮೊದಲಾದ ದಿನಬಳಕೆಯ ಆಹಾರ ಸಾಮಗ್ರಿಗಳಿಗೆ ತಿಂಗಳಿಗೆ ₹ 4,500ರಿಂದ ₹ 5 ಸಾವಿರ ವೆಚ್ಚವಾಗುತ್ತಿತ್ತು. ಈಗ ₹ 6,500 ರಿಂದ ₹ 7,000 ವೆಚ್ಚವಾಗುತ್ತಿದೆ. ಪ್ರತಿ ಲೀಟರ್‌ಗೆ ₹ 90ಕ್ಕೆ ಸಿಗುತ್ತಿದ್ದ ಅಡುಗೆ ಎಣ್ಣೆಗೆ ಈಗ ₹ 180 ಕೊಡಬೇಕು. ₹ 80ಕ್ಕೆ ಸಿಗುತ್ತಿದ್ದ ಕೆ.ಜಿ ಉದ್ದಿನ ಬೇಳೆಗೆ ಈಗ ₹ 180. ಕೆ.ಜಿ. ತೊಗರಿ ಬೇಳೆ ದರವೂ ₹ 140ರ ಆಸು‍ಪಾಸಿನಲ್ಲಿದೆ. ಕರೆಂಟ್‌ ಬಿಲ್‌ ತಿಂಗಳಿಗೆ ₹ 450ರ ಒಳಗೆ ಇರುತ್ತಿತ್ತು. ಇನ್ನು ಅದೂ ಹೆಚ್ಚಳವಾಗಲಿದೆ’ ಎಂದು ಬೆಂಗಳೂರಿನ ಮತ್ತೀಕೆರೆಯ ರತ್ನಾವತಿ ಅಳಲು ತೋಡಿಕೊಂಡರು.

ದರ ಏರಿಕೆಗೆ ಕೇಂದ್ರ ಸರ್ಕಾರದ ನೀತಿ ಹೇಗೆ ಕಾರಣವಾಗುತ್ತಿದೆ ಎಂಬುದನ್ನು ಬೆಂಗಳೂರು ಎಪಿಎಂಸಿಯ ವರ್ತಕರ ಸಂಘಗಳ ಒಕ್ಕೂಟದ ಅಧ್ಯಕ್ಷ ರಮೇಶ್ಚಂದ್ರ ಲಾಹೋಟಿ ವಿವರಿಸಿದ್ದು ಹೀಗೆ... ‘ಪ್ರತಿಭಟನಾನಿರತ ರೈತರನ್ನು ತೃಪ್ತಿಪಡಿಸಲು ಕೇಂದ್ರ ಸರ್ಕಾರ ತೊಗರಿಯ ಕನಿಷ್ಠ ಬೆಂಬಲ ಬೆಲೆಯನ್ನು ಇತ್ತೀಚೆಗೆ ಕ್ವಿಂಟಲ್‌ಗೆ ಏಕಾಏಕಿ ₹ 300ರಷ್ಟು ಹೆಚ್ಚಿಸಿದೆ. ತೊಗರಿಯನ್ನು ನಾವು ಕೆ.ಜಿ.ಗೆ ₹ 70ರಂತೆ ಖರೀದಿಸಿದರೂ, ಸಂಸ್ಕರಣೆಗೆ ಪ್ರತಿ ಕೆ.ಜಿಗೆ ₹ 6ಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಡೀಸೆಲ್‌ ದರ ಏರಿಕೆಯಿಂದ ಲಾರಿ ಬಾಡಿಗೆ ಹೆಚ್ಚಿದೆ. ಹೀಗಿರುವಾಗ ನಾವು ತೊಗರಿ ಬೇಳೆಯ ದರ ಇಳಿಸಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಕೃಷಿ ಕಾಯ್ದೆಗಳ ತಿದ್ದುಪಡಿಗೆ ಮುನ್ನ ಕೇಂದ್ರ ಸರ್ಕಾರ ತೊಗರಿ ದಾಸ್ತಾನಿನ ಮಿತಿಯನ್ನು ರದ್ದುಪಡಿಸಿತ್ತು. ಆಗ ಕಾರ್ಪೊರೇಟ್‌ ಕಂಪನಿಗಳೆಲ್ಲ ತೊಗರಿ ಖರೀದಿಸಿ ಭಾರಿ ಪ್ರಮಾಣದಲ್ಲಿ ದಾಸ್ತಾನಿಟ್ಟುಕೊಂಡವು. ದರ ಏರಿಕೆ ಬಗ್ಗೆ ಜನಾಕ್ರೋಶ ಹೆಚ್ಚುತ್ತಿದ್ದಂತೆಯೇ ಕೇಂದ್ರವು ತೊಗರಿ ದಾಸ್ತಾನಿನ ಲೆಕ್ಕ ಕೇಳುತ್ತಿದೆ. ಎಪಿಎಂಸಿಗಳಲ್ಲಿ ಮಾತ್ರ ಖರೀದಿಗೆ ಅವಕಾಶ ಇದ್ದಾಗ ದಾಸ್ತಾನಿನ ಲೆಕ್ಕ ಸಿಗುತ್ತಿತ್ತು. ಈಗ ದಾಸ್ತಾನು ಪತ್ತೆ ಹಚ್ಚುವುದು ಕಷ್ಟಸಾಧ್ಯ. ಎಲ್ಲವನ್ನೂ ಕಾರ್ಪೊರೇಟ್‌ ಕಂಪನಿಗಳ ನಿಯಂತ್ರಣಕ್ಕೆ ಕೊಟ್ಟ ಪರಿಣಾಮವಿದು’ ಎಂದು ಅವರು ವಿವರಿಸಿದರು. 

‘ನಿರ್ಮಾಣಕ್ಕೆ ಬಳಸುವ ಉಕ್ಕಿನ ದರ ಪ್ರತಿ ಕೆ.ಜಿ.ಗೆ ₹ 30 ಇದ್ದುದು ₹ 80ಕ್ಕೆ ತಲುಪಿದೆ. ತಾಮ್ರದ ದರವೂ ದುಪ್ಪಟ್ಟಾಗಿದೆ. ಬಹುತೇಕ ಎಲ್ಲ ಕೈಗಾರಿಕೆಗಳ ಕಚ್ಚಾವಸ್ತುಗಳ ಸ್ಥಿತಿಯೂ ಇದೇ. ಈ ಪ್ರಮಾಣದಲ್ಲಿ ದರ ಹೆಚ್ಚಳವಾದರೆ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೆಲ್ಲವೂ (ಎಂಎಸ್‌ಎಂಇ) ಸಮಸ್ಯೆಗೆ ಸಿಲುಕಲಿವೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಆಲ್‌ ಇಂಡಿಯಾ ಮ್ಯಾನ್ಯುಫ್ಯಾಕ್ಚರರ್ಸ್‌ ಆರ್ಗನೈಸೇಷನ್‌ ಅಧ್ಯಕ್ಷ ಎಸ್‌. ಸಂಪತ್‌ ರಾಮನ್‌.

‘ಕೇಂದ್ರ ಸರ್ಕಾರ ರಫ್ತಿಗೆ ಅಗತ್ಯಕ್ಕಿಂತ ಹೆಚ್ಚು ಆದ್ಯತೆ ನೀಡುತ್ತಿರುವುದೇ ಈ ಸಮಸ್ಯೆಯ ಮೂಲ. ಕೇಂದ್ರವೇ ಇದನ್ನು ಸರಿಪಡಿಸಬೇಕು’ ಎಂದರು.

‘ಲಾಕ್‌ಡೌನ್‌ ಹಾಗೂ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಬೆಲೆ ಏರಿಕೆಯನ್ನು ಯಾರೂ ಬಯಸುವುದಿಲ್ಲ. ಸಗಟು ಮಾರಾಟ ಸೂಚ್ಯಂಕಕ್ಕೆ ಸಂಬಂಧಿಸಿದ ದತ್ತಾಂಶಗಳ ಪ್ರಕಾರ 2021ರ ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಭಾರಿ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿದೆ. ಕಚ್ಚಾವಸ್ತುಗಳ ಬೆಲೆ ಹೆಚ್ಚಿದಂತೆ ಅಂತಿಮ ಉತ್ಪನ್ನಗಳ ಬೆಲೆಯೂ ಹೆಚ್ಚಳವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್‌) ಪ್ರಾಧ್ಯಾಪಕಿ ಮೀನಾಕ್ಷಿ ರಾಜೀವ್‌.

‘ಬೇಡಿಕೆ ಕಡಿಮೆ ಇದ್ದರೂ ದರ ಹೆಚ್ಚಳ ಏಕೆ ಆಗುತ್ತಿದೆ ಎನ್ನುವುದು ಚೋದ್ಯ. ಅನೇಕ ಕಂಪನಿಗಳ ಒಟ್ಟು ವರಮಾನ ಕಡಿಮೆಯಾದರೂ ಅವುಗಳ ಲಾಭಾಂಶ ಹೆಚ್ಚಳವಾಗಿದೆ. ಉತ್ಪಾದನಾ ಸಾಮರ್ಥ್ಯ ಕಡಿತಗೊಳಿಸಿ, ಉತ್ಪನ್ನಗಳ ದರ ಹೆಚ್ಚಿಸುವ ಮೂಲಕ ಅವು ಲಾಭ ಗಳಿಸಿವೆ. ಸಿಮೆಂಟ್‌, ಪೆಟ್ರೋಲಿಯಂ ಉದ್ದಿಮೆಗಳ ತ್ರೈಮಾಸಿಕ ವರದಿಗಳ ಮೇಲೆ ಕಣ್ಣಾಡಿಸಿದರೆ ಇದು ಸ್ಪಷ್ಟವಾಗುತ್ತದೆ. 2012 ಅನ್ನು ಮೂಲ ವರ್ಷವೆಂದು ಪರಿಗಣಿಸಿ ಅವಲೋಕಿಸಿದರೆ ಸಗಟು ದರ ಸೂಚ್ಯಂಕ 2021ರಲ್ಲಿ ಶೇ 98ರಷ್ಟು ಏರಿಕೆ ಕಂಡಿದೆ’ ಎಂದು ಐಸೆಕ್‌ನ ಡಾ. ಖಲೀಲ್‌ ಷಾ ತಿಳಿಸಿದರು. 

ಅಡುಗೆ ಎಣ್ಣೆ ದರ ಗಗನಕ್ಕೆ ಏರಿದ್ದು ಏಕೆ?

ಕೆಂದ್ರ ಸರ್ಕಾರವು 2020ರ ಜನವರಿ 1ರಿಂದ ತಾಳೆ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇ 37.5ರಿಂದ ಶೇ 45ಕ್ಕೆ ಏರಿಸಿತು. ವಿದೇಶಿ ವಹಿವಾಟು ನಿರ್ದೇಶನಾಲಯವು 2020ರ ಜನವರಿ 8ರಂದು ತಾಳೆ ಎಣ್ಣೆಯನ್ನು ‘ಮುಕ್ತ’ ಮಾರಾಟದ ಪಟ್ಟಿಯಿಂದ ನಿರ್ಬಂಧಿತ ಮಾರಾಟದ ಸರಕುಗಳ ಪಟ್ಟಿಗೆ ಸೇರಿಸಿತು. ಮಲೇಷ್ಯಾವು ಭಾರತದ ಕೆಲವು ನೀತಿಗಳನ್ನು ಟೀಕಿಸಿದ ಕಾರಣಕ್ಕೆ ಈ ಮಾರ್ಪಾಡುಗಳು ಆಗಿದ್ದವು.

ದೇಶಕ್ಕೆ ಆಮದಾಗುವ ತಾಳೆ ಎಣ್ಣೆಯಲ್ಲಿ ಶೇ 40ರಷ್ಟು ಪೂರೈಕೆ ಆಗುತ್ತಿದ್ದುದು ಮಲೇಷ್ಯಾ ಮತ್ತು ಇಂಡೊನೇಷ್ಯಾಗಳಿಂದ. ಈ ಎರಡು ದೇಶಗಳೇ ವಿಶ್ವದ ತಾಳೆ ಎಣ್ಣೆ ಬೇಡಿಕೆಯ ಶೇ 80ರಷ್ಟನ್ನು ಪೂರೈಸುತ್ತಿವೆ. ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಹೆಚ್ಚಾಗಿ ಅರ್ಜೆಂಟೀನಾ, ಬ್ರೆಜಿಲ್‌, ಉಕ್ರೇನ್‌ ಮತ್ತು ರಷ್ಯಾಗಳಿಂದ ಆಮದಾಗುತ್ತದೆ. ವರ್ಷದಲ್ಲಿ 25 ಲಕ್ಷ ಟನ್‌ಗಳಷ್ಟು ಸೂರ್ಯಕಾಂತಿ ಎಣ್ಣೆ ರಷ್ಯಾ ಮತ್ತು ಉಕ್ರೇನ್‌ನಿಂದ ತರಿಸಲಾಗುತ್ತಿದೆ. ಈ ಎರಡು ದೇಶಗಳು ಜಗತ್ತಿನ ಒಟ್ಟು ಬೇಡಿಕೆಯ ಶೇ 50ರಷ್ಟು ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸುತ್ತಿವೆ. ಈ ಎರಡೂ ದೇಶಗಳು ಬರಗಾಲ ಎದುರಿಸುತ್ತಿದ್ದು, ಎಣ್ಣೆ ಬೀಜ ಉತ್ಪಾದನೆ ಅಲ್ಲಿ ಕುಸಿದಿದೆ. 

ಬೆಲೆ ಏರಿಕೆಯು ಗ್ರಾಹಕರನ್ನು ಹಾಗೂ ಅವುಗಳ ಸಂಸ್ಕರಣೆ ಮಾಡುವ ಉದ್ದಿಮೆಗಳೆರಡನ್ನೂ ಬೇರೆ ಬೇರೆ ರೀತಿಯಲ್ಲಿ ಬಾಧಿಸಿದೆ. ಸಂಸ್ಕರಣೆ ಕೈಗಾರಿಕೆಗಳಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಅಂತೆಯೇ ಬಳಕೆದಾರರು ದರ ಏರಿಕೆಯಿಂದ ತತ್ತರಿಸಿದ್ದಾರೆ. 

ದೇಶದಲ್ಲಿ 2019ರವರೆಗೆ ಅಡುಗೆ ಎಣ್ಣೆಯ ವಾರ್ಷಿಕ ಉತ್ಪಾದನಾ ಸಾಮರ್ಥ್ಯಕ್ಕೆ ಹೋಲಿಸಿದರೆ ಬಳಕೆ ಪ್ರಮಾಣ ಶೇ 75ರಷ್ಟಿತ್ತು. ಅದೀಗ ಶೇ 65ಕ್ಕೆ ಇಳಿದಿದೆ. ಬೇಡಿಕೆ ಕುಸಿದರೂ ಅಡುಗೆ ಎಣ್ಣೆ ಉತ್ಪಾದಿಸುವ ಉದ್ದಿಮೆಗಳ ಲಾಭಾಂಶದ ಪ್ರಮಾಣ ಹಿಂದಿನಷ್ಟೇ ಇದೆ. ಏಕೆಂದರೆ ಉತ್ಪನ್ನಗಳ ದರ ಹೆಚ್ಚಾಗುತ್ತಲೇ ಇದೆ.

–ಡಾ.ಖಲೀಲ್‌ ಷಾ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು