ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಡ್ರಗ್ಸ್ ಸುಳಿಯಲ್ಲಿ ರಾಜ್ಯ– ಮಲೆನಾಡಿನ ಹೊಲಗಳಲ್ಲೂ ಸಮೃದ್ಧ ಗಾಂಜಾ ಬೆಳೆ

Last Updated 12 ಫೆಬ್ರುವರಿ 2022, 20:45 IST
ಅಕ್ಷರ ಗಾತ್ರ

ಶಿವಮೊಗ್ಗ: ಹಲವು ದಶಕಗಳಿಂದ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಗಾಂಜಾ ಬಳಕೆಯಲ್ಲಿದೆ. ದಟ್ಟ ಕಾಡು, ಮನೆಗಳ ಹಿತ್ತಲು, ಹೊಲ–ಗದ್ದೆಗಳ ಮಧ್ಯೆ ಯಾರಿಗೂ ತಿಳಿಯದಂತೆ, ಸೀಮಿತವಾಗಿ ಬೆಳೆಯಲಾಗುತ್ತಿದ್ದ ಈ ದಂಧೆ ಕೆಲವು ವರ್ಷಗಳಿಂದ ಈಚೆಗೆ ವಾಣಿಜ್ಯ ಸ್ವರೂಪ ಪಡೆದಿದೆ. ಹಣದಾಸೆಗೆ ಈ ಜಾಲದಲ್ಲಿ ಸಿಲುಕಿ ಮಲೆನಾಡಿನ ರೈತರು ಅಪರಾಧಿಗಳಾಗುತ್ತಿದ್ದಾರೆ.

ಪ್ರಸ್ತುತ ಮಲೆನಾಡಿನ ಹೊಲ, ತೋಟಗಳಲ್ಲಿ ಉಪ ಬೆಳೆಯಂತೆ ಗಾಂಜಾ ಬೆಳೆಯಲಾಗುತ್ತಿದೆ.ಮಲೆನಾಡಿನ ಕಾಡಿನಂಚಿನಲ್ಲಿರುವ, ಬಡ ರೈತರನ್ನು ಗುರುತಿಸುವ ಕೆಲವು ಮಧ್ಯವರ್ತಿಗಳು ಗಾಂಜಾ ಬೀಜಗಳನ್ನು ನೀಡುತ್ತಿದ್ದಾರೆ. ಗಾಂಜಾ ಬೆಳೆದ ಬಳಿಕ ತಾವೇ ಖರೀದಿಸುತ್ತಿದ್ದಾರೆ. ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಯೋಚಿಸದ ಕೆಲವು ರೈತರುಹಣದಾಸೆಗೆ ಗುಡ್ಡ ಪ್ರದೇಶಗಳಲ್ಲಿ, ಶುಂಠಿ ಹೊಲಗಳಲ್ಲಿ, ಮೆಕ್ಕೆಜೋಳದ ಮಧ್ಯೆ ಗುಟ್ಟಾಗಿ ಬೆಳೆಯುತ್ತಿದ್ದಾರೆ. ಯಾರ ಕಣ್ಣಿಗೂ ಸಿಗದೇ ವ್ಯವಹಾರ ಪೂರೈಸಿಕೊಂಡು ಹಣ ಸಂಪಾದಿಸುವ ಮಂದಿ ಸಾಕಷ್ಟು ಇದ್ದಾರೆ.

ಗಾಂಜಾ ಪತ್ತೆಗೆ ಡ್ರೋನ್‌ ಬಳಕೆ: ಗಾಂಜಾ ಬೆಳೆ ವಿರುದ್ಧ ಪೊಲೀಸರು, ಅಬಕಾರಿ ಇಲಾಖೆ ಎಷ್ಟೇ ಕ್ರಮ ಕೈಗೊಂಡರೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಪತ್ತೆಹಚ್ಚುವ ಪ್ರಯತ್ನಗಳು ಜಿಲ್ಲೆಯಲ್ಲಿ ನಿರಂತರವಾಗಿ ನಡೆದಿತ್ತು. ಆದರೂ ದಂಧೆಗೆ ಸಂಪೂರ್ಣ ಕಡಿವಾಣ ಬಿದ್ದಿರಲಿಲ್ಲ. ಇಂತಹ ಸಮಯದಲ್ಲಿ ಡ್ರೋನ್‌ ಬಳಸಿ ಗಾಂಜಾ ಪತ್ತೆಹಚ್ಚಲಾಗುತ್ತಿದೆ. ಸ್ವಲ್ಪ ಮಟ್ಟಿಗೆ ಇದು ಯಶಸ್ವಿಯೂ ಆಗಿದೆ.

ವಿಶಾಖಪಟ್ಟಣವೇ ಮೂಲ:ಜಿಲ್ಲೆಯ ಮಾದಕ ವ್ಯಸನಿಗಳು ಬಳಸುವ ಗಾಂಜಾದ ಶೇ 20ರಷ್ಟನ್ನು ಮಾತ್ರ ಮಲೆನಾಡು ಪೂರೈಸಿದರೆ ಶೇ 80ರಷ್ಟು ಆಂಧ್ರಪ್ರದೇಶದಿಂದ ಸರಬರಾಜಾಗುತ್ತಿದೆ. ಜಿಲ್ಲಾ ಪೊಲೀಸರು ಜಿಲ್ಲೆಗೆ ಗಾಂಜಾ ಪೂರೈಸುವ ಆಂಧ್ರಪ್ರದೇಶದ ಜಾಲಗಳನ್ನು ಭೇದಿಸುತ್ತಿದ್ದಾರೆ.

ವಿಶೇಷ ತಂಡ ರಚನೆ: ಗಾಂಜಾ ಸೇವನೆ, ವಿತರಣೆ, ಬೆಳೆ ಕ್ಷೇತ್ರ, ಪೂರೈಕೆ ಜಾಲಗಳ ಮೇಲೆ ನಿರಂತರ ನಿಗಾ ಇಟ್ಟು ನಿಯಂತ್ರಿಸಲು ಪ್ರತ್ಯೇಕ ತಂಡಗಳನ್ನೇ ರಚಿಸಲಾಗಿದೆ. ಈ ತಂಡಗಳು ಹೊರ ಜಿಲ್ಲೆ, ರಾಜ್ಯಗಳಿಂದ ಶಿವಮೊಗ್ಗ ನಗರ, ಜಿಲ್ಲೆಯ ಇತರ ಪಟ್ಟಣಗಳು, ಗ್ರಾಮಾಂತರ ಪ್ರದೇಶಗಳಿಗೆ ಬರುವ ಹಸಿ ಮತ್ತು ಒಣ ಗಾಂಜಾಗಳನ್ನು ನಿರಂತರವಾಗಿ ಪತ್ತೆಮಾಡಿ, ವಶಕ್ಕೆ ಪಡೆಯುತ್ತಿವೆ. ಎರಡು ತಿಂಗಳಲ್ಲಿ ₹ 50 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಇದುವರೆಗೂ ಬೆಳೆಗಾರರು, ಸ್ಥಳೀಯ ವಿತರಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಪೂರೈಕೆಯ ಮೂಲಗಳನ್ನು ಪತ್ತೆ ಮಾಡಲಾಗುತ್ತಿದೆ. ಗಾಂಜಾ ವ್ಯಸನಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ.

ಗಾಂಜಾ ಆಂಧ್ರದಿಂದ ಬರುತ್ತಿದೆ

ಎರಡು ತಿಂಗಳಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಶೇ 80ರಷ್ಟು ದಂಧೆಗೆ ಕಡಿವಾಣ ಬಿದ್ದಿದೆ. ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಶೇ 80ರಷ್ಟು ಗಾಂಜಾ ಆಂಧ್ರದ ವಿಶಾಖಪಟ್ಟಣ ಸುತ್ತಮುತ್ತಲಿನಿಂದ ಬರುತ್ತದೆ. ಅಲ್ಲಿನ ಪೊಲೀಸ್‌ ಮೂಲಗಳ ಪ್ರಕಾರ 12 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಶಿವಮೊಗ್ಗ ಸೇರಿ ರಾಜ್ಯದ ಪೊಲೀಸರ ಮಾಹಿತಿ ನಂತರ ಅಲ್ಲಿನ ಸರ್ಕಾರ ‘ಆಪರೇಷನ್‌ ಪರಿವರ್ತನ್‌’ ಆರಂಭಿಸಿದೆ. 5,500 ಹೆಕ್ಟೇರ್ ನಾಶ ಮಾಡಲಾಗಿದೆ.

ಶಾಲೆ–ಕಾಲೇಜು ತೊರೆದವರು, ರೌಡಿ ನಡವಳಿಕೆ ರೂಢಿಸಿಕೊಂಡವರು, ಕೂಲಿ ಕೆಲಸ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜಾಗೃತಿ ಮೂಡಿಸಲು ಪ್ರತಿ ಕಾಲೇಜಿನಲ್ಲೂ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಲಾಗಿದೆ. ವಿದ್ಯಾರ್ಥಿಗಳ ನಡವಳಿಕೆ, ಹಣದ ಬಳಕೆ ಮೇಲೆ ನಿಗಾವಹಿಸಲಾಗಿದೆ.

–ಬಿ.ಎಂ.ಲಕ್ಷ್ಮೀ ಪ್ರಸಾದ್,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT