ಸೋಮವಾರ, ಜೂನ್ 27, 2022
26 °C
ಪಡಿತರಧಾನ್ಯ ಅಕ್ರಮ ದಾಸ್ತಾನು

ಒಳನೋಟ: ‘ಅನ್ನ ಭಾಗ್ಯ’ಕ್ಕಿಲ್ಲ ಕಣ್ಗಾವಲು! ಬಡವರ ಅಕ್ಕಿ ಅನ್ಯರ ಪಾಲು

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅನ್ನ ಭಾಗ್ಯ’ ಯೋಜನೆಯಡಿ ಬಡವರಿಗೆ ವಿತರಿಸಬೇಕಿದ್ದ ಅಕ್ಕಿ ಸೇರಿದಂತೆ ಆಹಾರಧಾನ್ಯ ದಾಸ್ತಾನು, ಕಳ್ಳಸಾಗಣೆಯಿಂದ ಕಾಳಸಂತೆಯಲ್ಲಿ ರಾಜಾರೋಷವಾಗಿ ಅನ್ಯರ ಪಾಲಾಗುತ್ತಿದೆ. ಹಸಿದವರು ಪಡಿತರ ಸಿಗದೆ ಸಂಕಟ ಪಡುತ್ತಿದ್ದರೆ, ಹೊಟ್ಟೆ ತುಂಬಿದವರು ದುರ್ಬಳಕೆಯಿಂದ ದುಡ್ಡು ಮಾಡುತ್ತಿದ್ದಾರೆ. ಈ ಕಳ್ಳ ದಂಧೆ ತಡೆಗೆ ಕಣ್ಗಾವಲೇ ಇಲ್ಲ!

ಆಹಾರ ಇಲಾಖೆಯ ಮಾಹಿತಿ ಪ್ರಕಾರ, 2020–21ರಲ್ಲಿ ‘ಅನ್ನ ಭಾಗ್ಯ’ ಯೋಜನೆಯಡಿ ಅಕ್ರಮವಾಗಿ ಸಂಗ್ರಹಿಸಿದ ಪಡಿತರ ದಾಸ್ತಾನಿಗೆ ಸಂಬಂಧಿಸಿ 300 ಪ್ರಕರಣಗಳು ದಾಖಲಾಗಿವೆ. ರಾಜ್ಯದಾದ್ಯಂತ 33,092 ಕ್ವಿಂಟಲ್‌ ಅಕ್ಕಿ ವಶಪಡಿಸಲಾಗಿದೆ. 111 ಕ್ವಿಂಟಲ್‌ ಗೋಧಿ, 562 ಕ್ವಿಂಟಲ್‌ ರಾಗಿ ಜಪ್ತಿ ಮಾಡಲಾಗಿದೆ. ಬಳ್ಳಾರಿ, ಚಾಮರಾಜನಗರ, ಮೈಸೂರು, ಕಲಬುರ್ಗಿಯಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದೆ.

ಪಡಿತರಧಾನ್ಯ ಪ್ರತಿ ತಿಂಗಳು ನೇರವಾಗಿ, ನೈಜ ಫಲಾನುಭವಿಗೇ ತಲುಪಬೇಕು. ಆ ಉದ್ದೇಶದಿಂದ ಹಂಚಿಕೆಗೆ ಹಲವು ಸುಧಾರಣಾ ಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಪಡಿತರ ಚೀಟಿಗೆ ಫಲಾನುಭವಿಗಳ ಆಧಾರ್‌ ಜೋಡಿಸಲಾಗಿದೆ. ಪಾರದರ್ಶಕ ಹಂಚಿಕೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆಯಿದೆ. ಬಿಲ್ಲಿಂಗ್‌ ಆನ್‌ಲೈನ್‌ಗೊಳಿಸಲಾಗಿದೆ. ಆದರೆ, ಧಾನ್ಯಗಳ ದಾಸ್ತಾನು ಗೋದಾಮು, ಅಲ್ಲಿಂದ ನ್ಯಾಯಬೆಲೆ ಅಂಗಡಿಗೆ ಸಾಗಿಸುವ ವಾಹನಗಳ ಮೇಲೆ ‘ನಿಗಾ’ ಇಲ್ಲದಿರುವುದನ್ನೇ ಅಕ್ಕಿ ಕಳ್ಳರು ಬಂಡವಾಳ ಮಾಡಿಕೊಂಡಿದ್ದಾರೆ.

ಕಳವಿನ ಕೈ ಚಳಕ: ಗೋದಾಮಿನಿಂದಲೇ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ ಕಾಳಸಂತೆಯಲ್ಲಿ ಮಾರುವ ಬಹುದೊಡ್ಡ ಜಾಲವಿದೆ. ಈ ಕಳವಿನ ಕರಾಮತ್ತಿನಲ್ಲಿ ಪ್ರಭಾವಿಗಳು, ಆಹಾರ ಇಲಾಖೆಯ ಅಧಿಕಾರಿಗಳು, ಉಗ್ರಾಣದ ಸಿಬ್ಬಂದಿ, ಅಕ್ಕಿ ಸಾಗಿಸುವ ಲಾರಿಯವರು, ಎತ್ತುವಳಿ ಮಾಡುವ ಸಗಟು ಮಾರಾಟಗಾರರು, ರೈಸ್‌ ಮಿಲ್‌ ಮಾಲೀಕರು, ನ್ಯಾಯಬೆಲೆ ಅಂಗಡಿಯವರು ಶಾಮೀಲಾಗಿದ್ದಾರೆ. ಗೋದಾಮುಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಕಣ್ಣಿಲ್ಲ. ಉಗ್ರಾಣಕ್ಕೆ ಬಂದ ಪಡಿತರದ ಪ್ರಮಾಣ, ಬಂದುಹೋಗುವ ವಾಹನಗಳ ಸಂಖ್ಯೆ ದಾಖಲಾಗುತ್ತಿಲ್ಲ. ಹೀಗಾಗಿ, ಮೂಟೆಗಟ್ಟಲೆ ಅಕ್ಕಿ ರೈಸ್‍ಮಿಲ್‍ ತಲುಪಿ, ಪಾಲಿಶ್ ಪಡೆದು ರಾಜ್ಯದ ಗಡಿ ದಾಟಿ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಪಾಲಾಗುತ್ತಿದೆ. ರೈಸ್‌ಮಿಲ್‌ಗಳು ಹೆಚ್ಚು ಇರುವ ಕೊಪ್ಪಳ, ರಾಯಚೂರು, ಯಾದಗಿರಿ, ದಾವಣಗೆರೆ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ‘ಅನ್ನಭಾಗ್ಯ’ದ ಅಕ್ಕಿ ವಶ ಪ್ರಕರಣಗಳು ಈ ಅಕ್ರಮ ಜಾಲವನ್ನು ತೆರೆದಿಡುತ್ತವೆ.

ಹೀಗೆ ‘ಸೋರಿಕೆ’ಗೆ ಬ್ರೇಕ್ ಹಾಕಲು ಲಾರಿಗಳಿಗೆ ವಿಶೇಷವಾದ ‘ಸಂವೇದಿ ಜಿಪಿಎಸ್’ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಅಳವಡಿಸಬೇಕೆಂಬ ಚಿಂತನೆ ‘ಅನ್ನ ಭಾಗ್ಯ’ ಯೋಜನೆ ಜಾರಿ ಆದಂದಿನಿಂದಲೂ ಇದೆ. 2014ರಲ್ಲಿ ಅಂದಿನ ಆಹಾರ ಇಲಾಖೆ ಆಯುಕ್ತರಾಗಿದ್ದ ಹರ್ಷ ಗುಪ್ತ, ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಗೋದಾಮುಗಳಿಂದ ಸಗಟು ಮಳಿಗೆಗಳಿಗೆ ಪಡಿತರ ಸಾಗಿಸುವ ಎಲ್ಲ ಲಾರಿಗಳಿಗೆ ಜಿಪಿಎಸ್‌ ಅಳವಡಿಸಲು ಮುಂದಾಗಿದ್ದರು. 2018ರಲ್ಲಿ ಕರೆದ ಟೆಂಡರ್‌ನಲ್ಲಿ ಗೋಲ್‌ಮಾಲ್‌ ನಡೆದಿದೆ ಎಂಬ ಆರೋಪದ ಮೇಲೆ ಅಂದಿನ ಆಯುಕ್ತ ಟಿ.ಎಚ್‌.ಎಂ. ಕುಮಾರ್‌, ಭ್ರಷ್ಟಾಚಾರ ನಿಗ್ರಹ ದಳ ಮತ್ತು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನಂತರ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

‘ಪಡಿತರ ಅಕ್ರಮ ತಡೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಿಗಾ ಸಮಿತಿ ರಚಿಸಿದ್ದೇವೆ. ಸಾಗಣೆ ವೇಳೆ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಲಾರಿಗಳಿಗೆ ಜಿಪಿಎಸ್‌, ಗೋದಾಮುಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಬೇಕೆಂಬ ಪ್ರಸ್ತಾವ ಹಲವು ವರ್ಷಗಳಿಂದ ಇದೆ. ಆದರೆ, ಅನುದಾನ ಇಲ್ಲ. ಎಲ್ಲ ಗೋದಾಮುಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಮತ್ತು ಎಲ್ಲ ವಾಹನಗಳಿಗೆ ಜಿಪಿಎಸ್‌ ಅಳವಡಿಸಿ, ಅದನ್ನು ಜಿಲ್ಲೆ ಮತ್ತು ಕೇಂದ್ರ ಕಚೇರಿಯಲ್ಲಿರುವ ನಿಗಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಸ್ತಾವವನ್ನು ಈ ವರ್ಷ ಕೂಡಾ ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ’ ಎನ್ನುತ್ತಾರೆ ಆಹಾರ ಇಲಾಖೆಯ ಆಯುಕ್ತರಾದ ಶಮ್ಲಾ ಇಕ್ಬಾಲ್‌.

ಕಾಲ ಕೂಡಿ ಬಂದಿಲ್ಲ!: ಅಕ್ಕಿ, ಗೋಧಿ, ರಾಗಿ, ಸಕ್ಕರೆ ಸೇರಿದಂತೆ ಪಡಿತರ ಧಾನ್ಯಗಳನ್ನು ದಾಸ್ತಾನು ಮಳಿಗೆಯಿಂದ ತುಂಬಿಕೊಂಡು ನ್ಯಾಯಬೆಲೆ ಅಂಗಡಿಗಳಿಗೆ ಹೋಗುವ ಲಾರಿಗಳು ಯಾವ ಮಾರ್ಗದಿಂದ ಸಾಗುತ್ತಿವೆ ಮತ್ತು ಎಷ್ಟು ‘ತೂಕ’ದ ಧಾನ್ಯಗಳನ್ನು ಕೊಂಡೊಯ್ಯುತ್ತಿವೆ ಎಂಬ ವಿವರಗಳನ್ನು ಕುಳಿತಲ್ಲೇ ನಿಯಂತ್ರಿಸಲು ಜಿಪಿಎಸ್‌ ತಂತ್ರಜ್ಞಾನದ ಮೊರೆ ಹೋಗಲು ಇಲಾಖೆ ನಿರ್ಧರಿಸಿತ್ತು. ಎಷ್ಟು ಟ್ರಿಪ್, ಎಷ್ಟು ದೂರ, ದಾಸ್ತಾನು ಮಳಿಗೆಯಿಂದ ಧಾನ್ಯ ತುಂಬಿಕೊಂಡು ಹೊರಟ ಸಮಯ, ನಿಗದಿಪಡಿಸಿದ ಸ್ಥಳಗಳಲ್ಲಿ ಎಷ್ಟು ಸಮಯದವರೆಗೆ ನಿಲುಗಡೆಯಾಗಿದೆ, ಮಾರ್ಗ ಬದಲಾದರೆ, ಅನುಮತಿ ಇಲ್ಲದ ಸ್ಥಳದಲ್ಲಿ ವಾಹನ ನಿಲುಗಡೆಯಾದರೆ, ವಿನಾಕರಣ ತೂಕ ಕಡಿಮೆಯಾದರೆ ಇ-ಮೇಲ್, ಎಸ್‌ಎಂಎಸ್ ಸಂದೇಶ ಅಧಿಕಾರಿಗಳಿಗೆ ರವಾನೆಯಾಗುವ ವ್ಯವಸ್ಥೆಯದು. ಆದರೆ, ಅದಕ್ಕೆ ಮುಹೂರ್ತ ಕೂಡಿ ಬಂದಿಲ್ಲ!

‘ಹೊಸ ಬ್ರ್ಯಾಂಡ್‌’
‘ಗೋದಾಮಿನಿಂದ ಅಕ್ಕಿ ತುಂಬಿದ ಲಾರಿ ಹೊರಟ ಲೆಕ್ಕ ಇರುತ್ತದೆಯೇ ವಿನಾ ಅಕ್ಕಿ ತಲುಪಿದ ಖಾತ್ರಿ ಇರುವುದಿಲ್ಲ. ಹೀಗಾಗಿಯೇ ಅಕ್ಕಿ ಸಲೀಸಾಗಿ ನ್ಯಾಯಬೆಲೆ ಅಂಗಡಿ ಬದಲು ರೈಸ್‌ಮಿಲ್‌ಗೆ ಸೇರುತ್ತದೆ. ಉಗ್ರಾಣದಲ್ಲಿ ಸಿ.ಸಿ. ಕ್ಯಾಮರಾ ಇಲ್ಲದಿರುವುದು ಈ ದಂಧೆಗೆ ದಾರಿಮಾಡಿಕೊಟ್ಟಿದೆ. ರೈಸ್‌ಮಿಲ್‌ ತಲುಪಿದ ಅಕ್ಕಿಯನ್ನು ‘ಅನ್ನಭಾಗ್ಯ’ದ ಮುದ್ರೆಯಿರುವ ಚೀಲದಿಂದ ಹೊರತೆಗೆದು, ಮರು ಪಾಲಿಶ್ ಮಾಡಿ, ಸ್ಟೀಮ್ ಮಾಡಿದರೆ ಸೋನಾ ಮಸೂರಿಯಂತಾಗುತ್ತದೆ. ಆ ಅಕ್ಕಿಯನ್ನು ಹೊಸ ಚೀಲಕ್ಕೆ ತುಂಬಿಸಿ ‘ಹೊಸ ಬ್ರ್ಯಾಂಡ್‌’ ಸೃಷ್ಟಿಸಲಾಗುತ್ತದೆ. ಅದನ್ನು ಅಕ್ರಮವಾಗಿ ಸಾಗಿಸಿದರೆ ಯಾರಿಗೂ ಅನುಮಾನವೇ ಬಾರದು’ ಎನ್ನುತ್ತಾರೆ ಅಕ್ಕಿ ಸಾಗಣೆ ಗುತ್ತಿಗೆ ಪಡೆದ ಗುತ್ತಿಗೆದಾರ.

*
ಪಡಿತರ ದಾಸ್ತಾನಿಡುವ ಗೋದಾಮುಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ, ಸಾಗಣೆ ವಾಹನಗಳಿಗೆ ಜಿಪಿಎಸ್‌ ಅಳವಡಿಸುವ ಪ್ರಸ್ತಾವ ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ.
-ಶಮ್ಲಾ ಇಕ್ಬಾಲ್, ಆಯುಕ್ತರು, ಆಹಾರ ಇಲಾಖೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು