ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ವಲಸೆ: ಮಧ್ಯವರ್ತಿಗೆ ಶುಕ್ರದೆಸೆ

Last Updated 20 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಬದುಕಿನ ಬಂಡಿ ಸಾಗಿಸಲು ಬಡವರು ಕೆಲಸ ಅರಸಿ ವಲಸೆ ಹೋಗುವುದು ನಿಂತಿಲ್ಲ. ಉದ್ಯೋಗ ಖಾತ್ರಿ, ಸರ್ಕಾರಿ ಪಡಿತರ ಇವರ ಕೈ ಹಿಡಿಯುತ್ತಿಲ್ಲ.

‘ವಲಸೆಯಿಂದ ಆರ್ಥಿಕ ಸಬಲತೆ’ ಎಂಬುದು ದೂರದ ಮಾತು. ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಿಂದ ಕೆಲಸ ಅರಸಿ ರಾಜ್ಯ–ಹೊರ ರಾಜ್ಯಗಳ ಮಹಾನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚು. ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಗುಡಿ–ಗೃಹ ಕೈಗಾರಿಕೆಗಳಿಗೆ ಉತ್ತೇಜನ ಸಿಗುತ್ತಿಲ್ಲ. ಅರಣ್ಯ ಪ್ರದೇಶ ಅತ್ಯಲ್ಪ. ಕಲ್ಯಾಣ ಕರ್ನಾಟಕದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳವರಲ್ಲಿ ಭೂ ಒಡೆತನ ಬಹಳ ಕಡಿಮೆ. ಇದ್ದರೂ ಚೂರುಪಾರು ಭೂಮಿ. ಹೀಗಾಗಿ ಇಲ್ಲಿ ಕೃಷಿ ಕೂಲಿಕಾರ್ಮಿಕರ ಸಂಖ್ಯೆ ಅಧಿಕ. ಮಳೆ– ಬೆಳೆ ಬಾರದಿದ್ದಾಗ ಅವರಿಗೆ ಆಶಾಕಿರಣವಾಗಿ ಕಾಣುವುದು ವಲಸೆ.

ಇದು ಅಸುರಕ್ಷಿತ ಬದುಕಿನ ಪ್ರತಿ ರೂಪ. ಊರಿನಿಂದ ಪ್ರಯಾಣ ಬೆಳಸುವುದರೊಂದಿಗೆ ಅವರ ಬೆನ್ನು ಬೀಳುತ್ತದೆ. ಪ್ರಯಾಣ ದರ ಕಡಿಮೆ ಎಂಬ ಕಾರಣಕ್ಕೆ ಅಸುರಕ್ಷಿತ/ ಸರಕು ವಾಹನ ಗಳಲ್ಲಿ ಪ್ರಯಾಣಿಸುತ್ತಾರೆ. ಇಂತಹ ವಾಹನಗಳು ಅಪಘಾತಕ್ಕೀಡಾಗಿ ಲೆಕ್ಕವಿಲ್ಲದಷ್ಟು ಜನ ಸತ್ತಿದ್ದಾರೆ. ಕೆಲಸದ ವೇಳೆ ಸುರಕ್ಷತಾ ನಿಯಮಗಳ ಪಾಲನೆಯಾಗುವುದಿಲ್ಲ. ಗುಡಿಸಲು ಹಾಕಿಕೊಂಡು ಅಭದ್ರತೆಯಲ್ಲಿ ಬದುಕು ಸಾಗಿಸಬೇಕು.

ಕಬ್ಬು ಕಟಾವಿಗಾಗಿ ವಲಸೆ ಬಂದಿರುವ ಕಾರ್ಮಿಕರು ವಾಸಿಸುವ ಸ್ಥಳದಲ್ಲಿ ಬಾಲಕಿಯೊಬ್ಬಳು ಪಾತ್ರೆ ತೊಳೆಯುತ್ತಿರುವುದು (ಸಂಗ್ರಹ ಚಿತ್ರ)
ಕಬ್ಬು ಕಟಾವಿಗಾಗಿ ವಲಸೆ ಬಂದಿರುವ ಕಾರ್ಮಿಕರು ವಾಸಿಸುವ ಸ್ಥಳದಲ್ಲಿ ಬಾಲಕಿಯೊಬ್ಬಳು ಪಾತ್ರೆ ತೊಳೆಯುತ್ತಿರುವುದು (ಸಂಗ್ರಹ ಚಿತ್ರ)

ಹೀಗೆ ಎರಡೂ ಕಡೆ ಅಸುರಕ್ಷತೆಯ ಭಯ. ಇನ್ನು ‘ದಲ್ಲಾಳಿಗಳು’ ಕಡಿಮೆ ಕೂಲಿ ನೀಡಿ ವಂಚಿಸುವುದು, ಮುಂಗಡ ಹಣ ಕೊಟ್ಟು ಹೆಚ್ಚು ಕೆಲಸ ಮಾಡಿಸಿ ಕೊಂಡು ಶೋಷಿಸುವುದಕ್ಕೆ ಕಡಿವಾಣ ಬಿದ್ದಿಲ್ಲ. ರಾಜ್ಯದಿಂದ ಹೊರಗೆ ಹೋಗುವ, ಹೊರ ರಾಜ್ಯಗಳಿಂದ ನಮ್ಮಲ್ಲಿಗೆ ಬರುವ ಕಾರ್ಮಿಕರು ಇಂತಹ ದಾರುಣ ಸ್ಥಿತಿಯಲ್ಲೇ ಬದುಕು ಸಾಗಿಸಬೇಕು. ಆದರೂ, ‘ಗುಳೆ ಹೋಗುವುದು ಕೆಲವರಿಗೆ ಹವ್ಯಾಸ ವಾಗಿದೆ’ ಎಂದು ಅಧಿಕಾರಸ್ಥರು ಹೀಯಾಳಿಸಿದ್ದೂ ಉಂಟು!

ವಲಸೆ ಬಹುವಾಗಿ ಪರಿಣಾಮ ಬೀರುತ್ತಿರುವುದು ವೃದ್ಧರು ಮತ್ತು ಮಕ್ಕಳ ಮೇಲೆ. ವಯಸ್ಸಾದವರನ್ನು ಊರಲ್ಲೇ ಬಿಟ್ಟು ದುಡಿಯಲು ಬೇರೆ ಊರುಗಳಿಗೆ ಹೋಗುವುದರಿಂದ ಆ ಹಳ್ಳಿ, ತಾಂಡಾ, ಹಟ್ಟಿಗಳು ವೃದ್ಧಾಶ್ರಮದಂತೆ ಭಾಸವಾಗುತ್ತಿರುತ್ತವೆ. ತಂದೆ–ತಾಯಿ ಮಕ್ಕಳನ್ನು ಕರೆದುಕೊಂಡು ಹೋಗುವುದರಿಂದ ಅಂತಹಮಕ್ಕಳ ಶಿಕ್ಷಣ ಅರ್ಧಕ್ಕೇ ಮೊಟಕುಗೊಳ್ಳುತ್ತದೆ.

‘ವಯಸ್ಸಿಗೆ ಬಂದ ಮಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಕೆಲಸಕ್ಕೆ ಅಲೆಯುವ ಬದಲು ಮದುವೆ ಮಾಡಿಕೊಟ್ಟರೆ ಆಕೆ ಗಂಡನ ಮನೆಯಲ್ಲಿ ಸುರಕ್ಷಿತವಾಗಿರಬಲ್ಲಳು’ ಎಂಬ ನಂಬಿಕೆ ಬಹುಪಾಲು ಪಾಲಕರದ್ದು. ಈ ಕಾರಣಕ್ಕಾಗಿಯೇ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ. ಈ ತಾಯಂದಿರು ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಾರೆ. ಈ ಕಾರಣಕ್ಕಾಗಿಯೇ ತಾಯಿ–ಶಿಶುಮರಣ ಪ್ರಮಾಣ ಹೆಚ್ಚು ತ್ತಿದೆ. ವಲಸೆ ಎಂಬುದು ಸಂಕಷ್ಟಗಳ ವಾಹಕವಾಗಿಯೂ ಕಾಡುತ್ತಿದೆ.

ಉದ್ಯೋಗ ಖಾತ್ರಿ: ಜನರಿಗೆ ಅವರ ಊರಿನಲ್ಲೇ ಕೂಲಿ ಕೆಲಸ ನೀಡುವ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದೆ. ಆದರೆ, ನಮ್ಮ ರಾಜ್ಯದಲ್ಲಿ ಇದರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಬಹಳ ಕಡಿಮೆ. ರಾಜ್ಯದಲ್ಲಿ ನರೇಗಾದಲ್ಲಿ ಕೂಲಿಮಾಡುತ್ತಿರುವ ಮಹಿಳೆಯರ ಪ್ರಮಾಣ ಶೇ49ರಷ್ಟು ಮಾತ್ರ.ಉತ್ತರ ಭಾರತಕ್ಕೆ ಹೋಲಿಸಿದರೆ ಇದು ಅತ್ಯಲ್ಪ.ಈ ಪ್ರಮಾಣವನ್ನು ಶೇ5ರಷ್ಟಾದರೂ ಹೆಚ್ಚಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ‘ಮಹಿಳಾ ಕಾಯಕ ಶಕ್ತಿ ಅಭಿಯಾನ’ ಆರಂಭಿಸಿದೆ.

ವಲಸೆ ತಡೆಗೆ ನರೇಗಾ ಸಹಕಾರಿ ಆಗುತ್ತಿಲ್ಲವೇ ಎಂಬ ಪ್ರಶ್ನೆಗೆ, ‘ಲಾಕ್‌ಡೌನ್‌ ವೇಳೆ ತವರಿಗೆ ವಾಪಸ್ಸಾದ ಕಾರ್ಮಿಕರ ಹೊಟ್ಟೆ ತುಂಬಿಸಿದ್ದು ಉದ್ಯೋಗ ಖಾತ್ರಿ ಯೋಜನೆಯೇ. ಆದರೆ, ಅಧಿಕಾರದಲ್ಲಿರುವವರಲ್ಲಿ ಬದ್ಧತೆಯ ಕೊರತೆ ಹಾಗೂಕೆಳಹಂತದಲ್ಲಿಯ ಭ್ರಷ್ಟಾಚಾರದಿಂದಾಗಿ ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಗ್ರಾಮ ಪಂಚಾಯಿತಿಗಳ ಜಡತ್ವದಿಂದಾಗಿ ಕೆಲವೆಡೆ ವರ್ಷಕ್ಕೆ 100 ದಿನವೂ ಉದ್ಯೋಗ ಸಿಗುತ್ತಿಲ್ಲ. ಕೆಲಸ ಮಾಡಿಸಲು ನಮ್ಮಲ್ಲಿ ಸ್ಥಳಾವಕಾಶವೇ ಇಲ್ಲ ಎಂದು ಬಹುಪಾಲು ಪಿಡಿಒಗಳು ಹೇಳುತ್ತಾರೆ. ಹುಡುಕಿ ನಾವೇ ಹೇಳಿ ಕೆಲಸ ಆರಂಭಿಸಿದ ಉದಾಹರಣೆಗಳೂ ಸಾಕಷ್ಟಿವೆ’ ಎನ್ನುತ್ತಾರೆ ಈ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ, ಕಲಬುರ್ಗಿಯ ಕೆ.ನೀಲಾ.

ಶೇ 31ರಷ್ಟು ‘ಕಾಣಿಕೆ’
ರಾಜ್ಯ ಸರ್ಕಾರ 2019–20ನೇ ಸಾಲಿನಲ್ಲಿ ಎರಡು ಬಾರಿ ಗ್ರಾಮ ಸಭೆಗಳನ್ನು ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಿತ್ತು. 6ರಿಂದ 13 ವಯೋಮಾನದ70,166ಮಕ್ಕಳು ಶಾಲೆಯಿಂದ ಹೊರಗುಳಿದ ಮಾಹಿತಿ ಲಭಿಸಿತ್ತು. ಅವರಲ್ಲಿ ಶೇ 31.10ರಷ್ಟು ಮಕ್ಕಳು ವಲಸೆ ಕಾರಣಕ್ಕಾಗಿಯೇ ಶಾಲೆಯಿಂದ ಹೊರಗುಳಿದಿರುವುದನ್ನುಈ ಸಮೀಕ್ಷೆ ಗುರುತಿಸಿತ್ತು.

ಶೇ 30ರಷ್ಟು ಜನ ಮತ್ತೆ ವಲಸೆ
ಲಾಕ್‌ಡೌನ್‌ ವೇಳೆ ತವರಿಗೆ ಮರಳಿದ್ದ ವಲಸೆ ಕಾರ್ಮಿಕರಲ್ಲಿ ಶೇ 30ರಷ್ಟು ಜನ ಮರಳಿ ತಾವು ದುಡಿಯುವ ಸ್ಥಳಗಳಿಗೆ ಹೋಗಿದ್ದಾರೆ ಎಂಬುದು ನಾವು ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಉದ್ಯೋಗ ಖಾತ್ರಿ ಕೆಲಸ ನೀಡಿದರೂ ಅವರಿಗೆ ಆ ಶ್ರಮದಾಯಕ ಕೆಲಸ ಮಾಡುವ ರೂಢಿ ಇಲ್ಲ. ಇನ್ನು ಶೇ 40ರಷ್ಟು ಜನ ಇಲ್ಲೇ ಉಳಿದು ನರೇಗಾದಲ್ಲಿ ಕೆಲಸ ಮಾಡುತ್ತ, ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಇಟ್ಟಿಗೆ ತಯಾರಿಕೆಯೂ ಸೇರಿದಂತೆ ಇನ್ನೂ ಹೆಚ್ಚಿನ ಬಗೆಯ ಕಾಮಗಾರಿಗಳನ್ನು ಉದ್ಯೋಗ ಖಾತ್ರಿಯಲ್ಲಿಯೂ ತೆಗೆದುಕೊಂಡರೆ ಅರೆ ವಲಸೆ ತಡೆಗೆ ಸಹಕಾರಿಯಾಗುತ್ತದೆ. ಗ್ರಾಮೀಣ ಪ್ರದೇಶಕ್ಕಷ್ಟೇ ಸೀಮಿತವಾಗಿರುವ ನರೇಗಾವನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು.


-ಕೆ.ನೀಲಾ, ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ

ಕಾರ್ಮಿಕರ ಕಾರ್ಡ್ ಬಗ್ಗೆ ತಿಳಿದಿಲ್ಲ!
ದೇವನಹಳ್ಳಿ ಸುತ್ತಮುತ್ತ ಕಟ್ಟಡಗಳ ನಿರ್ಮಾಣಕ್ಕೆ ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಉತ್ತರ ಕರ್ನಾಟಕದಿಂದ ವಲಸೆ ಬಂದಿರುವ 25 ಸಾವಿರಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದೇವೆ. ನಾನು ದೇವನಹಳ್ಳಿಯಲ್ಲಿ ಆರು ವರ್ಷಗ ಳಿಂದ ಗಾರೆ ಕೆಲಸ ಮಾಡುತ್ತಿದ್ದೇನೆ. ಕಾರ್ಮಿಕರ ಕಾರ್ಡ್ ಬಗ್ಗೆ ತಿಳಿದಿಲ್ಲ. ಒಬ್ಬ ಅಧಿಕಾರಿಯೂ ಸಂಪರ್ಕಿಸಿಲ್ಲ.

-ಬಾಬು, ವಲಸೆ ಕಾರ್ಮಿಕ

ಬದುಕಲು ವಲಸೆ ಅನಿವಾರ್ಯ
ನಮ್ಮಲ್ಲಿ ಕೂಲಿ ಸಿಗದಿರುವುದರಿಂದ ಮಕ್ಕಳೊಂದಿಗೆ ಕಾಫಿಸೀಮೆ ಅಥವಾ ಬೆಂಗಳೂರಿಗೆ ವಲಸೆ ಹೋಗುತ್ತೇವೆ. ಯುಗಾದಿ, ದೀಪಾವಳಿ ಹಬ್ಬದ ಸಮಯದಲ್ಲಿ ಮಾತ್ರ ಊರಿಗೆ ಬಂದು ಹೋಗುತ್ತೇವೆ. ವಲಸೆ ಹೋದಲ್ಲಿ ತಾತ್ಕಾಲಿಕವಾಗಿ ಪ್ಲಾಸ್ಟಿಕ್‌ ಅಥವಾ ತಗಡುಗಳನ್ನು ಬಳಸಿ ನಿರ್ಮಿಸಿಕೊಂಡ ಹಂದಿಗೂಡಿನಂತಹ ಗುಡಿಸಲಿನಲ್ಲೇ ನಾಲ್ಕೈದು ಮಂದಿ ವಾಸಿಸುತ್ತೇವೆ. ರಾತ್ರಿ ವೇಳೆ ಬೆಳಕೂ ಇರುವುದಿಲ್ಲ. ಹಾವು–ಚೇಳುಗಳ ನಡುವೆಯೇ ವಾಸಿಸುವುದು ಅನಿವಾರ್ಯ. ಕೆಲವೊಮ್ಮೆ ಮಳೆ ಬಂದಾಗ ಗುಡಿಸಲು ಹಾರಿಹೋಗಿ, ಬಯಲಲ್ಲೇ ಇರಬೇಕಾಗುತ್ತದೆ.ಮಕ್ಕಳು ಶಾಲೆಗೆ ಹೋಗುವುದಿಲ್ಲ. ನಾವು ಕೆಲಸಕ್ಕೆ ಹೋಗಿ ಬರುವವರೆಗೂ ಮಕ್ಕಳು ಗುಡಿಸಲಿನಲ್ಲೇ ಇರುತ್ತಾರೆ.

ನೆಲದಲ್ಲಿ ಕೇಬಲ್ ಕೆಲಸಕ್ಕಾಗಿ ಭೂಮಿ ಅಗೆಯುವಾಗ ಕರೆಂಟ್ ತಗುಲಿ ನಮ್ಮವರು ಸತ್ತುಹೋಗಿದ್ದಾರೆ. ಎರಡು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಒಳಚರಂಡಿ‌ ಒಳಗೆ ಕೆಲಸ ಮಾಡುತ್ತಿದ್ದಾಗ ಉಸಿರುಗಟ್ಟಿ ನಮ್ಮೂರಿನ ಇಬ್ಬರು ಸತ್ತುಹೋಗಿದ್ದರು. ಯಾವಾಗ ಏನು ಆಗುತ್ತದೆಯೋ ಹೇಳಲು ಸಾಧ್ಯವಿಲ್ಲ. ಹತ್ತಾರು ವರ್ಷಗಳಿಂದ ಇದೇ ಸ್ಥಿತಿಯಲ್ಲೇ ಜೀವನ ನಡೆಸುತ್ತಿದ್ದೇವೆ. ನಾವು ಬದುಕಬೇಕೆಂದರೆ ನೂರಾರು ಮೈಲಿ ದೂರ ಕೆಲಸ ಹುಡುಕಿಕೊಂಡು ವಲಸೆ ಹೋಗುವುದು ಅನಿವಾರ್ಯ. ಇದು ನಮ್ಮ ಹಣೆಬರಹ. ಏನೂ ಮಾಡಲು ಸಾಧ್ಯವಿಲ್ಲ.


-ಹಿರಿಯಮ್ಮ, ವಲಸೆ ಮಹಿಳಾ ಕಾರ್ಮಿಕರು,ಬೆಂಚಿಕಟ್ಟೆ ಗ್ರಾಮ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ

ಅವತ್ತಿನ ದುಡಿಮೆ ಅವತ್ತಿಗೆ ಆಗುತ್ತಿದೆ
ನಾವು ಆಂಧ್ರಪ್ರದೇಶದವರು. ಮಾಗಡಿ ಸುತ್ತಲಿನ ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಗಂಡ–ಹೆಂಡತಿ ಇಬ್ಬರೂ ಇಟ್ಟಿಗೆ ತಯಾರಿಸುತ್ತೇವೆ. ತಿಂಗಳಿಗೆ ಇಂತಿಷ್ಟು ದಿನಗಳ ಲೆಕ್ಕದಲ್ಲಿ ಮಾತ್ರ ಕೆಲಸ ಸಿಗುತ್ತಿದೆ. ಎಷ್ಟು ಇಟ್ಟಿಗೆ ಮಾಡುತ್ತೇವೋ ಅದರ ಲೆಕ್ಕದಲ್ಲಿ ಕೂಲಿ ಕೊಡುತ್ತಾರೆ. ಅವತ್ತಿನ ದುಡಿಮೆ ಅವತ್ತಿಗೆ ಆಗುತ್ತಿದೆ. ಸದ್ಯ ಕಾರ್ಖಾನೆಯ ಮಾಲೀಕರು ನೀಡಿರುವ ಶೆಡ್‌ನಲ್ಲೇ ವಾಸ. ಈ ಕಷ್ಟದಲ್ಲೇ ಮಗಳನ್ನು ಪಿಯುಸಿ ಓದಿಸುತ್ತಿದ್ದೇವೆ. ಸ್ಥಳೀಯರೊಬ್ಬರ ಸಹಕಾರದಿಂದ ವಾರದ ಹಿಂದಷ್ಟೇ ರೇಷನ್ ಕಾರ್ಡ್‌ ಸಿಕ್ಕಿದೆ. ಉಳಿದಂತೆ ಯಾವ ಸರ್ಕಾರಿ ಸವಲತ್ತುಗಳ ಬಗ್ಗೆಯೂ ನಮಗೆ ಗೊತ್ತಿಲ್ಲ.


-ಮಾಬು,ಇಟ್ಟಿಗೆ ಕಾರ್ಖಾನೆ ಕಾರ್ಮಿಕ, ಮಾಗಡಿ

ಮಕ್ಕಳ ಹಕ್ಕುಗಳ ಉಲ್ಲಂಘನೆ
ವಲಸೆ ಮಕ್ಕಳ ಹಕ್ಕುಗಳ ಉಲ್ಲಂಘನೆಗೂ ಕಾರಣವಾಗುತ್ತಿದೆ.ತಾಯಿಯೊಂದಿಗೆ ಮಕ್ಕಳು ದುಡಿದರೂ ಆ ಹಣತಂದೆಯ ಕುಡಿತಕ್ಕೆ ವೆಚ್ಚವಾಗುವುದೇ ಹೆಚ್ಚು. 13–14ವರ್ಷ ತುಂಬುತ್ತಿದ್ದಂತೆಯೇ ಬಾಲಕಿಯರಿಗೆ ಮದುವೆ ಮಾಡಿಕೊಡುವುದೂ ನಡೆಯುತ್ತಿದೆ. ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರುಗಳನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಗಳನ್ನಾಗಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.


-ಡಾ.ಜಯಶ್ರೀ,ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ

ಕೈ ಕಳೆದುಕೊಂಡು ಬಂದೆ
ನನಗೆ ಆಗ 10 ವರ್ಷ. ಬಡತನದಿಂದಾಗಿ ನನ್ನ ತಂದೆ ತಾಯಿ ಜತೆಗೆ ಮುಂಬೈಗೆ ಹೋದಾಗ ನಾನು ಅಂಗಡಿಯೊಂದರಲ್ಲಿ ತಿಂಗಳಿಗೆ ₹300ಕ್ಕೆ ದುಡಿಯುತ್ತಿದ್ದೆ. ಒಂದು ದಿನ ಅಕಸ್ಮಿಕವಾಗಿ ಅಂಗಡಿಯಲ್ಲಿ ಬಿದ್ದುಬಿಟ್ಟೆ. ಕೈ ಮುರಿಯಿತು. ಚಿಕಿತ್ಸೆಗೆ ಹಣ ಇಲ್ಲದಿದ್ದಾಗ, ತಂದೆ– ತಾಯಿ ಚಿಕ್ಕಪುಟ್ಟ ಚಿಕಿತ್ಸೆ ಕೊಡಿಸಿದರು. ಕೈಯ ಬಾವು ಕಡಿಮೆಯಾಗಲಿಲ್ಲ. ನನ್ನ ಕೈಗೆ ಬಟ್ಟೆ ಸುತ್ತಿದ್ದರು. ಕೆಲವೆ ದಿನಗಳಲ್ಲಿ ಸೆಪ್ಟಿಕ್ ಆಗಿ ಕೈ ಕತ್ತರಿಸಲಾಯಿತು. ಮನೆಗೆ ಹಿರಿಯ ಮಗ ನಾನೇ. ರಟ್ಟೆ ನಂಬಿ ಹೊಟ್ಟೆ ತುಂಬಿಸಿಕೊಳ್ಳಲು ಹೋಗಿ ಕೈಕಳೆದುಕೊಂಡಿದ್ದೇನೆ. ದುಡಿದ ಹಣ ನನ್ನ ಚಿಕಿತ್ಸೆಗೆ ಖರ್ಚು ಮಾಡಿ ಖಾಲಿ ಕೈಲಿ ಊರಿಗೆ ಬಂದಿದ್ದೇವೆ. ನಂತರ ಹಾಸ್ಟೆಲ್‌ನಲ್ಲಿ ಉಳಿದು ಶಿಕ್ಷಣ ಪಡೆದಿದ್ದೇನೆ. ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಮುಗಿಸಿದ್ದೇನೆ.


-ರಮೇಶ ಜಾಧವ,ಚಿಕ್ಕಲಿಂಗದಳ್ಳಿ ತಾ. ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT