ಶುಕ್ರವಾರ, ಜುಲೈ 1, 2022
27 °C
ತತ್ತರಿಸಿದ ಹೋಟೆಲ್‌ ಕಾರ್ಮಿಕರು: ಪರ್ಯಾಯ ಉದ್ಯೋಗಕ್ಕೆ ಪರದಾಟ

ಒಳನೋಟ: ‘ಸಾಯುವ ತನಕ ಬದುಕಬೇಕಲ್ಲ...’

ಸಚ್ಚಿದಾನಂದ ಕುರಗುಂದ. Updated:

ಅಕ್ಷರ ಗಾತ್ರ : | |

ತತ್ತರಿಸಿದ ಹೋಟೆಲ್‌ ಕಾರ್ಮಿಕರು

ಬೆಂಗಳೂರು: ‘ಲಾಕ್‌ಡೌನ್‌ ಬಳಿಕ ಮಾಲೀಕರು ಅನಿವಾರ್ಯವಾಗಿ ಹೋಟೆಲ್‌ ಮುಚ್ಚಿದರು. ಊರಿಗೆ ಮರಳಿ ಚಿಕ್ಕ ಅಂಗಡಿ ಆರಂಭಿಸಿದೆ. ಆದರೆ ಅದು ಕೈಹಿಡಿಯಲಿಲ್ಲ. ಬದುಕು ಮೂರಾಬಟ್ಟೆಯಾಗಿದೆ...’

ಹೋಟೆಲ್‌ ಕಾರ್ಮಿಕರಾಗಿದ್ದ ಕುಂದಾಪುರದ ಗಣೇಶ ಅವರ ನೋವಿನ ನುಡಿಗಳಿವು. 15 ವರ್ಷಗಳಿಂದ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಗಣೇಶ್‌ ಅವರ ಬದುಕು ಸುಗಮವಾಗಿ ನಡೆಯುತ್ತಿತ್ತು. ಆದರೆ, ದಿಢೀರ್‌ ಎದುರಾದ ಕೋವಿಡ್‌ ಪಿಡುಗು ಜೀವನಕ್ಕೆ ಕುತ್ತು ತಂದಿತು.

‘ಹೋಟೆಲ್‌ನಲ್ಲಿ ವ್ಯಾಪಾರ ಚೆನ್ನಾಗಿತ್ತು, ಸಂಬಳವೂ ಚೆನ್ನಾಗಿತ್ತು. ಮೊದಲ ಲಾಕ್‌ಡೌನ್‌ ವೇಳೆ ಹೋಟೆಲ್‌ ಮುಚ್ಚಬೇಕಾಯಿತು. ಮಾಲೀಕರು ಅನಿವಾರ್ಯವಾಗಿ ನನ್ನನ್ನು ಕೆಲಸದಿಂದ ತೆಗೆದರು. ಬೇರೆ ದಾರಿ ಕಾಣದೆ ಊರಿಗೆ ತೆರಳಿ, ಕೂಡಿಟ್ಟ ಹಣದಲ್ಲಿ ಅಂಗಡಿ ಮಾಡಿದೆ. ಅದೂ ಕೈಹಿಡಿಯಲಿಲ್ಲ. ನನಗೆ ವ್ಯಾಪಾರ ಮಾಡುವ ಕೌಶಲ ಇರಲಿಲ್ಲ. ಈಗ ಕೆಲಸವಿಲ್ಲ. ಮಕ್ಕಳನ್ನು ಓದಿಸುವುದು ಕಷ್ಟವಾಗಿದೆ. ಬೆಂಗಳೂರಿಗೆ ಪುನಃ ಬರಲು ಧೈರ್ಯ ಸಾಲುತ್ತಿಲ್ಲ’ ಎಂದು ಪಡಿಪಾಟಲನ್ನು ಗಣೇಶ್‌ ವಿವರಿಸುತ್ತಾರೆ.

ಕೋವಿಡ್‌ ನಂತರ ಹೋಟೆಲ್‌ ಕಾರ್ಮಿಕರ ಬದುಕು ತತ್ತರಿಸಿತು. ಹತ್ತಾರು ಸಮಸ್ಯೆಗಳೊಂದಿಗೆ ಕಾರ್ಮಿಕರನ್ನು ಬೀದಿಗೆ ತಂದು ನಿಲ್ಲಿಸಿತು. ಪರ್ಯಾಯ ಬದುಕು ಕಟ್ಟಿಕೊಳ್ಳಲಾಗದೆಯೇ ಪರದಾಡಿದರು.

ಬೆಂಗಳೂರಿನಲ್ಲಿ ಹೋಟೆಲ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಹಾಸನದ ಮಂಜುನಾಥ್‌ ಈಗ ಒಲ್ಲದ ಮನಸ್ಸಿನಿಂದ ತೆಂಗಿನಕಾಯಿ ವ್ಯಾಪಾರ ಆರಂಭಿಸಿದ್ದಾರೆ. ‘ಬದುಕುವುದು ಅನಿವಾರ್ಯ. ಸಾವು ಬರುವವರೆಗೆ ಜೀವನದ ಬಂಡಿ ನೂಕಬೇಕು. ಹೋಟೆಲ್‌ಗಳನ್ನು ಸಾಧ್ಯವಾದಷ್ಟು ಕಡಿಮೆ ಕೆಲಸಗಾರರಿಂದ ನಡೆಸುತ್ತಿದ್ದಾರೆ. ಮಾಲೀಕರು ನನ್ನನ್ನು ವಾಪಸ್‌ ಕರೆಯಲಿಲ್ಲ. ನನಗೂ ಈಗ ಹೋಗಲು ಮನಸ್ಸಿಲ್ಲ’ ಎನ್ನುತ್ತಾರೆ ಮಂಜುನಾಥ್‌.

ಕಾರ್ಕಳದ ಸುರೇಶ್‌ ಅವರ ಕಥೆಯೂ ಭಿನ್ನವಾಗಿಲ್ಲ. ‘ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್‌ ಆದಾಗ ಊರಿಗೆ ಬಂದೆ. ಆದರೆ, ವಾಪಸ್‌ ಹೋದಾಗ ಕೆಲಸಕ್ಕೆ ಬರಬೇಡ ಎಂದರು. ಬೇರೆ ಹೋಟೆಲ್‌ಗಳಲ್ಲಿಯೂ ಕೆಲಸ ಸಿಗಲಿಲ್ಲ. ಮತ್ತೆ ಊರಿಗೆ ಬಂದೆ. ಆದರೆ, ಹೋಟೆಲ್‌ಗಳಲ್ಲಿ ಕೆಲಸಕ್ಕೆ ಸೇರಿಸಿಕೊಂಡರೂ ಹೆಚ್ಚಿನ ಸಂಬಳ ನೀಡುವುದಿಲ್ಲ. ಈಗ ಹೈದರಾಬಾದ್‌ಗೆ ಮರಳಲು ಮನಸ್ಸಿಲ್ಲ’ ಎಂದು ಸಂದಿಗ್ದ ಪರಿಸ್ಥಿತಿಯನ್ನು ಅನಾವರಣಗೊಳಿಸಿದರು.

ಈಶಾನ್ಯ ರಾಜ್ಯದವರಿಗೆ ಮಣೆ

ಬೆಂಗಳೂರಿನಲ್ಲಿರುವ ಬಹುಪಾಲು ಹೋಟೆಲ್‌ಗಳಲ್ಲಿ ಈಶಾನ್ಯ ಮತ್ತು ಉತ್ತರ ಭಾರತದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ.

‘ಈಶಾನ್ಯ ರಾಜ್ಯದವರು ಶ್ರಮಜೀವಿಗಳು. ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಪದೇ ಪದೇ ರಜೆ ಕೇಳುವುದಿಲ್ಲ. ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ರಜೆ ಹೋಗುತ್ತಾರೆ. ಹೀಗಾಗಿ, ಸ್ಥಳೀಯರಿಗಿಂತ ಅವರನ್ನು ನೇಮಿಸಿಕೊಳ್ಳಲು ಬಯಸುತ್ತಾರೆ’ ಎಂದು ಹೋಟೆಲ್‌ ಉದ್ಯಮಿಯೊಬ್ಬರು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು