ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಮೋಹಕ ಮಳೆಗಾಲ ಮಾರಕವಾಯಿತು

ಮಲೆನಾಡು, ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ಮಳೆಗಾಲದ ಸವಾಲು
Last Updated 3 ಜುಲೈ 2021, 21:07 IST
ಅಕ್ಷರ ಗಾತ್ರ

ಮಡಿಕೇರಿ: ‘ದಿನವಿಡೀ ಮಳೆ ಸುರಿಯುವಾಗ ಕೊಡೆ ಹಿಡಿದ ಮಕ್ಕಳು ಶಾಲೆ, ಕಾಲೇಜಿಗೆ ನಡೆದು ಹೋಗುವುದು ಆನಂದ ತರುತ್ತಿತ್ತು. ರಸ್ತೆಯಂಚಿನ ಪುಟ್ಟ ಜಲಪಾತ, ಶಾಂತ ನದಿ–ಹೊಳೆ, ಹಸಿರು ಮೈದುಂಬುತ್ತಿತ್ತು. ತೇವವಾದ ಬಟ್ಟೆಯಲ್ಲೇ ಮಕ್ಕಳು ಪಾಠ ಕೇಳುತ್ತಿದ್ದರು. ಆದರೆ ಇತ್ತೀಚಿಗೆ ಮಳೆ ಎಂದರೆ ಭಯ. ಮಕ್ಕಳ ಕಲಿಕೆಯು ಪ್ರವಾಹ, ಭೂಕುಸಿತದ ದುರಂತಗಳಲ್ಲಿ ನಲುಗುತ್ತಿದೆ...’

ಭಾಗಮಂಡಲದ ಗೃಹಿಣಿ ಸುಷ್ಮಾ ಹೀಗೆ ಹೇಳುವಾಗ ಅವರ ದನಿಯಲ್ಲಿ ದುಗುಡವಿತ್ತು. ಮೋಹಕ ಮಳೆಗಾಲ ಮಾರಕವಾದ ಬಗ್ಗೆ ವಿಷಾದವೂ ಇತ್ತು.

ಕೊಡಗು ಸೇರಿದಂತೆ ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳುಮೂರು ವರ್ಷಗಳಿಂದ ಪ್ರವಾಹದಿಂದ ತತ್ತರಿಸುತ್ತಿವೆ. ಈಗ ಮತ್ತೊಂದು ಮಳೆಗಾಲ ಕಾಲಿಟ್ಟಿದ್ದು ಜುಲೈ, ಆಗಸ್ಟ್‌ನಲ್ಲಿ ಮಳೆ ಏನು ಅನಾಹುತ ಮಾಡುವುದೋ ಎಂಬ ಆತಂಕ ಮಡುಗಟ್ಟಿದೆ.

‘ಜೋರು ಮಳೆ, ಗಾಳಿ ಬೀಸಿದರೆ ಒಂದೆರಡು ದಿನ ರಜೆ ಘೋಷಿಸಿ, ಮಳೆ ಕಡಿಮೆಯಾದಂತೆ ಮತ್ತೆ ತರಗತಿಗಳು ಆರಂಭವಾಗುತ್ತಿದ್ದವು. ಆದರೆ, ಈಗ ಮಳೆಗಾಲದ ದುರಂತಗಳು ಮಕ್ಕಳ ಶೈಕ್ಷಣಿಕ ಬದುಕನ್ನೇ ಕೊಚ್ಚಿಕೊಂಡು ಹೋಗುತ್ತಿವೆ’ ಎಂದು ಶಿಕ್ಷಕ ರವಿ ಹೇಳುತ್ತಾರೆ.

2018ರ ಭೂಕುಸಿತ, ಪ್ರವಾಹದಿಂದ ಕೊಡಗು ಜಿಲ್ಲೆಯ ನಾಲ್ಕು ಗ್ರಾಮಗಳ ಶಾಲೆಗಳು ಸಂಪೂರ್ಣ ಬಂದ್‌ ಆಗಿದ್ದವು. ಮಕ್ಕಳೊಂದಿಗೆ ಪೋಷಕರು ಗ್ರಾಮವನ್ನು ತೊರೆದಿದ್ದರು. ಎರಡು ವರ್ಷಗಳ ಬಳಿಕ ಶಾಲೆ ಆರಂಭಿಸುವ ಪ್ರಯತ್ನ ನಡೆದರೂ ಕೋವಿಡ್‌ ಕಾರಣಕ್ಕೆ ಇನ್ನೂ ತೆರೆದಿಲ್ಲ.

ಮನೆಗಳು ಕುಸಿದಿದ್ದರಿಂದ ಪುಸ್ತಕ, ದಾಖಲೆಗಳು ಮಣ್ಣಿನಲ್ಲಿ ಹುದುಗಿ ಹೋಗಿದ್ದವು. ಹೊಸದಾಗಿ ದಾಖಲೆ ಪಡೆಯಲು ಆ ಮಕ್ಕಳು ಪರದಾಡಿದ್ದರು.

2018ರಲ್ಲಿ ಕೊಡಗು ಜಿಲ್ಲೆಯ 32 ಗ್ರಾಮಗಳಲ್ಲಿ ಭೂಕುಸಿತವಾಗಿತ್ತು. 2019ರಲ್ಲಿ ಸಿದ್ದಾಪುರ ಭಾಗದಲ್ಲಿ ಕಾವೇರಿ ನದಿ, ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಲಕ್ಷ್ಮಣತೀರ್ಥ ನದಿಗಳ ಪ್ರವಾಹದಿಂದ ಹಲವು ಕುಟುಂಬಗಳು ನೆಲೆ ಕಳೆದುಕೊಂಡಿದ್ದವು. ಕಳೆದ ವರ್ಷವೂ ಭೂಕುಸಿತವಾಗಿತ್ತು. ಆಗ ಜಿಲ್ಲಾಡಳಿತ ತೆರೆದಿದ್ದ ಕಾಳಜಿ ಕೇಂದ್ರಕ್ಕೆ ಮಕ್ಕಳೊಂದಿಗೆ ಪೋಷಕರು ಬಂದು ವಾಸ್ತವ್ಯ ಮಾಡಿದ್ದರು.

‘ಕಾಳಜಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಆತಂಕದಲ್ಲಿರುತ್ತಾರೆ. ಅದನ್ನು ನಿವಾರಿಸಲು ಹಾಡು, ನೃತ್ಯಕ್ಕೆ ಆದ್ಯತೆ ನೀಡುತ್ತೇವೆ. ಈ ವರ್ಷವೂ ಕಾಳಜಿ ಕೇಂದ್ರದಲ್ಲಿ ಕಲಿಕಾ ವಾತಾವರಣ ಕಲ್ಪಿಸಲು ಯೋಜನೆ ರೂಪಿಸಿದ್ದೇವೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮದೆ ಗ್ರಾಮದಲ್ಲಿ ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನೂ ಗ್ರಾಮಸ್ಥರೇ ಸ್ವಚ್ಛಗೊಳಿಸಿ, ಹೊಸ ಪೀಠೋಪಕರಣ ಖರೀದಿಸಿ ಕಳೆದ ವರ್ಷ ಪುನರ್‌ ಆರಂಭಕ್ಕೆ ಮುನ್ನುಡಿ ಬರೆದಿದ್ದರು. ಗ್ರಾಮಸ್ಥರ ಉತ್ಸಾಹ ಕಂಡು ಶಿಕ್ಷಣ ಇಲಾಖೆ ಶಿಕ್ಷಕರನ್ನು ನಿಯೋಜಿಸಿತ್ತು. ಶಾಲಾ ಸಮೀಪವೇ ಸಂತ್ರಸ್ತರ ಪುನರ್ವಸತಿ ಬಡಾವಣೆಯಿದ್ದು 42 ವಿದ್ಯಾರ್ಥಿಗಳೂ ದಾಖಲಾಗಿದ್ದರು. ಅದಾದ ಮೇಲೆ ಕೊರೊನಾದಿಂದ ಶಾಲೆ ನಡೆಯಲಿಲ್ಲ.

ಅತಂತ್ರವಾಗುವ ವಿದ್ಯಾರ್ಥಿಗಳ ಕಲಿಕೆ
ಹುಬ್ಬಳ್ಳಿ/ಮೈಸೂರು/ಹಾಸನ: ನದಿಗಳು ಹಾಗೂ ಹಳ್ಳಗಳು ಉಕ್ಕಿ ಹರಿದಾಗ, ಜನರಿಗೆ ಪುನರ್ವಸತಿ ಒದಗಿಸಲು ಸ್ಥಳೀಯ ಆಡಳಿತದ ಮೊದಲ ಆಯ್ಕೆ ಶಾಲೆಗಳು. ನೆರೆ ಇಳಿದು ಜನರು ಮತ್ತೆ ತಮ್ಮ ನೆಲೆಗೆ ಹೋಗುವವರೆಗೆ ಶಾಲೆಗಳು ಬಂದ್ ಆಗುತ್ತವೆ.

‘ಮೈಸೂರು ಜಿಲ್ಲೆಯ ಹುಣಸೂರು, ನಂಜನಗೂಡು, ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿತ್ತು. ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿತ್ತು. ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಸ್ವಚ್ಛಗೊಳಿಸಿ, ಶಾಲೆ ಆರಂಭಿಸಲಾಯಿತು’ ಎನ್ನುತ್ತಾರೆ ಮೈಸೂರು ಜಿಲ್ಲೆ ಡಿಡಿಪಿಐ ಪಾಂಡುರಂಗ.

ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಆನೆಮಹಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮ್ಯಾಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿತ್ತು.

2019ರ ಪ್ರವಾಹದಲ್ಲಿ ಹಲವು ಶಾಲಾ ಕಟ್ಟಡಗಳು ಜಲಾವೃತಗೊಂಡಿದ್ದವು. ಮರದ ಕೆಳಗೆ, ದೇಗುಲದ ಪ್ರಾಂಗಣ, ಟೆಂಟ್‌, ಸಮುದಾಯ ಭವನ ಮಕ್ಕಳ ತರಗತಿ ಕೊಠಡಿಗಳಾಗಿ ಬದಲಾಗಿದ್ದವು. ಧಾರವಾಡ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಯ ಹಲವು ಹಳ್ಳಿಗಳ ಶಾಲೆಗಳು ಇಂಥ ಸ್ಥಿತಿಗೆ ಸಾಕ್ಷಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT