ಗುರುವಾರ , ಆಗಸ್ಟ್ 11, 2022
24 °C
ರಿಯಲ್ ಎಸ್ಟೇಟ್ ದಂಧೆಗೆ ವರವಾಯ್ತು ಸುಪ್ರೀಂ ಕೋರ್ಟ್‌ ಆದೇಶ

ಒಳನೋಟ: ಪಿಟಿಸಿಎಲ್ ಕಾಯ್ದೆ ಹಲ್ಲು ಕಿತ್ತ ಹಾವು

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂಮಿ ಪರಭಾರೆ ತಡೆಯಲು ಜಾರಿಗೆ ತಂದ ಎಸ್‌ಸಿ/ಎಸ್‌ಟಿ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್) ಈಗ ಹಲ್ಲು ಕಿತ್ತ ಹಾವಾಗಿದೆ. ಅರ್ಜಿ ಸಲ್ಲಿಸಲು ಕಾಲಮಿತಿ ಇರಲಿ ಎಂಬ ಸುಪ್ರೀಂ ಕೋರ್ಟ್ ಆದೇಶ, ರಿಯಲ್ ಎಸ್ಟೇಟ್‌ ದಂಧೆಯ ಹಾದಿಯನ್ನು ಸುಗಮಗೊಳಿಸಿದೆ.

ಪರಿಶಿಷ್ಟ ಸಮುದಾಯಗಳಿಗೆ ಭೂಮಿ ಒಡೆತನ ಹಕ್ಕು ನೀಡುವ ಮೂಲಕ ಸಾಮಾಜಿಕ ಕ್ರಾಂತಿ ಆರಂಭವಾಗಿದ್ದು, ಮೈಸೂರು ಅರಸರಿಂದ. 1924ರಲ್ಲಿ ಭೂ ಒಡೆತನವನ್ನು ಅರಸರು ನೀಡಿದರು. ಸ್ವಾತಂತ್ರ್ಯ ನಂತರ ಸಂವಿಧಾನದ ಆಶಯಗಳಂತೆ ಭೂಸುಧಾರಣಾ ಕಾಯ್ದೆಗಳು ಜಾರಿಗೆ ಬಂದವು.  ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು, ಬಸವಲಿಂಗಪ್ಪ ಅವರ ಸಾಮಾಜಿಕ ಕಳಕಳಿ ಮತ್ತು ಬಿ.ಕೃಷ್ಣಪ್ಪ ನೇತೃತ್ವದಲ್ಲಿ ನಡೆದ ಹೋರಾಟಗಳ ಫಲವಾಗಿ 1978ರಲ್ಲಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿದೆ.

ರಿಯಲ್ ಎಸ್ಟೇಟ್‌ ವಹಿವಾಟಿನಲ್ಲಿ ರೈತರ ಆಸ್ತಿ ಖರೀದಿಗೆ ಮುನ್ನ ಅದಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತದೆ. ಪರಿಶಿಷ್ಟ ಸಮುದಾಯದವರಿಗೆ ಮಂಜೂರಾಗಿದ್ದ ಭೂಮಿ ಎಂದ ಕೂಡಲೇ ಅದನ್ನು ಖರೀದಿಸುವ ಸಾಹಸಕ್ಕೆ ಯಾರೂ ಕೈ ಹಾಕುವುದಿಲ್ಲ. ಪರಿಶಿಷ್ಟ ಸಮುದಾಯದವರ ಭೂ ಒಡೆತನವನ್ನು ಕಾಯುವ ರಕ್ಷಣಾತ್ಮಕ ಗೋಡೆ ಎಂದರೆ ಪಿಟಿಸಿಎಲ್ ಕಾಯ್ದೆ. ಪರಿಶಿಷ್ಟ ಸಮುದಾಯದವರ ಬಳಿಯೇ ಭೂಮಿ ಉಳಿಯ ಬೇಕು ಎಂಬ ಸದುದ್ದೇಶದಿಂದ ಜಾರಿಗೆ ಬಂದ ಕಾಯ್ದೆ ಇದಾಗಿದೆ.

ಈ ಕಾಯ್ದೆ ಜಾರಿಗೆ ಬರುವುದಕ್ಕೆ ಪೂರ್ವದಲ್ಲಿ ಮತ್ತು ನಂತರ ಮಂಜೂರಾದ ಭೂಮಿಗಳ ಪರಭಾರೆ ಮಾಡಲು ಸರ್ಕಾರದ ಪೂರ್ವಾನುಮತಿ ಅತ್ಯವಶ್ಯ. ಷರತ್ತು ಉಲ್ಲಂಘಿಸಿ ಪರಭಾರೆಯಾಗಿದ್ದಲ್ಲಿ ಭೂಮಿ ಕಳೆದುಕೊಂಡವರು ಮರು ಮಂಜೂರಾತಿ ಕೋರಿ ಉಪ ವಿಭಾಗಾಧಿಕಾರಿ ಮುಂದೆ ಅರ್ಜಿ ಸಲ್ಲಿಸಬಹುದು. ಕಾಯ್ದೆ ಉಲ್ಲಂಘನೆ ಆಗಿರುವ ಬಗ್ಗೆ ಮಾಹಿತಿ ಬಂದರೆ ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿ ಸ್ವಯಂ ಪ್ರೇರಿತವಾಗಿ ಮೂಲ ವಾರಸುದಾರರಿಗೆ ಮರು ಮಂಜೂರಾತಿ ಮಾಡಿಕೊಡಲು ಅವಕಾಶ ಇದೆ. ಪರಭಾರೆಯಾದ ಇಂತಿಷ್ಟೇ ದಿನಗಳಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಕಾಲಮಿತಿ ಕಾಯ್ದೆಯಲ್ಲಿ ಇಲ್ಲ.

‘ಮರು ಮಂಜೂರಾತಿ ಪ್ರಶ್ನಿಸಿ ಮೇಲ್ಮನವಿ ಹೋದ ಪ್ರಕರಣಗಳಲ್ಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಸೋಲು ಅನುಭವಿಸಿ ಭೂಮಿ ಬಿಟ್ಟುಕೊಡಬೇಕಾದ ಸ್ಥಿತಿ 2017ರ ತನಕ ಇತ್ತು. 2017ರ ಅಕ್ಟೋಬರ್ 26ರಲ್ಲಿ ನೆಕ್ಕಂಟಿ ರಾಮಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘ಸಮುಚಿತ ಸಮಯದೊಳಗೆ ಅರ್ಜಿ ಸಲ್ಲಿಸಬೇಕು’ ಎಂದು ಅಭಿಪ್ರಾಯಪಟ್ಟಿತು. ಭೂಮಿ ಪರಭಾರೆಯಾದ ಎಷ್ಟು ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದು ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ಭೂಮಿ ಮರು ಮಂಜೂರಾತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಈ ಆದೇಶ ಮುಂದಿಟ್ಟುಕೊಂಡು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಮುಲಾಜಿಲ್ಲದೆ ವಜಾಗೊಳಿಸುತ್ತಿದ್ದಾರೆ. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ, ಪಿಟಿಸಿಎಲ್‌ ಕಾಯ್ದೆ ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ’ ಎಂದು ಭೂಮಿಗಾಗಿ ಅರ್ಜಿ ಸಲ್ಲಿಸಿ ಹೋರಾಟ ನಡೆಸುತ್ತಿರುವ ಹುಬ್ಬಳ್ಳಿಯ ಗೋಪಾಲನಾಯ್ಕ ಮತ್ತು ರಾಮನಗರದ ಎಂ.ಎಚ್‌. ಮಂಜುನಾಥ ಹೇಳಿದರು.

‘ಈ ಆದೇಶ ಮರುಪರಿಶೀಲನೆ ಕೋರಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ಇಲ್ಲವೇ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಕಾಲಮಿತಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಆಗ ಮಾತ್ರ ಪಿಟಿಸಿಎಲ್‌ ಕಾಯ್ದೆಗೆ ಮತ್ತೆ ಜೀವ ಬರಲಿದೆ. ಇಲ್ಲದಿದ್ದರೆ ಸದುದ್ದೇಶದ ಕಾಯ್ದೆಯೊಂದು ಇದ್ದೂ ಇಲ್ಲದಂತಾಗಿದೆ’ ಎಂದರು.

***
ಸಮಗ್ರ ತಿದ್ದುಪಡಿ ಅಗತ್ಯ
ಸುಪ್ರೀಂ ಕೋರ್ಟ್ ಆದೇಶ ಅಧಿಕಾರಿಗಳಿಗೆ ಕೇವಲ ನೆಪವಾಗಿದೆ. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿಗಾಗಿ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಎಚ್. ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಿಂದ ಪ್ರಯತ್ನ ನಡೆಯುತ್ತಿದೆ. ತಿದ್ದುಪಡಿ ಕಾಯ್ದೆಯ ಮಾದರಿ ಕರಡು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿಕೊಡುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟಿದ್ದಾರೆ. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಜವಾಬ್ದಾರಿ ವಹಿಸಿಕೊಂಡು ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಬೇಕು.
-ಬಿ.ಟಿ. ವೆಂಕಟಸ್ವಾಮಿ, ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ

 **
‘ಪರಿಶಿಷ್ಟರ ಹೆಸರಿನಲ್ಲಿ ಅವ್ಯವಹಾರ’
ಈ ದೇಶದಲ್ಲಿ ಪರಿಶಿಷ್ಟ ಜಾತಿ, ಅಸ್ಪೃಶ್ಯತೆ ಹೆಸರಿನಲ್ಲಿ ಸರ್ಕಾರದ ಹಣ ನುಂಗಲಾಗುತ್ತಿದೆ. ಎಸ್‌ಸಿ/ಎಸ್‌ಟಿ ಸಮುದಾಯದ ಹಲವು ಯೋಜನೆಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಇದೊಂದು ದೊಡ್ಡ ರೋಗ. ಉಪಯೋಗಕ್ಕೆ ಬಾರದ ಜಮೀನು ಹಂಚಿಕೆ ಮಾಡಲಾಗುತ್ತಿದೆ. ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆ ತೋರಿಸಲಾಗುತ್ತಿದೆ. ನಾನು ಕಂದಾಯ ಸಚಿವನಾಗಿದ್ದಾಗಲೇ ಇಂಥ ವಿಚಾರಗಳು ಗಮನಕ್ಕೆ ಬರುತ್ತಿದ್ದವು.

ಭೂಮಿ ಮಂಜೂರಾಗಿ, ಅದನ್ನು ಪರಿಶಿಷ್ಟರು ಮಾರಾಟ ಮಾಡಿದ್ದರೆ ವಾಪಸ್‌ ಕೊಡಿಸಬೇಕು ಎಂಬುದು ಪಿಟಿಸಿಎಲ್‌ ಕಾಯ್ದೆಯ ಉದ್ದೇಶ. ಒಮ್ಮೆ ಇದರಲ್ಲಿ ಗೊಂದಲ ಉಂಟಾಯಿತು. 10 ವರ್ಷಗಳ ಹಿಂದೆ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರಿಗೆ ಸರ್ಕಾರದಿಂದ ಭೂಮಿ ಹಂಚಿಕೆಯಾಯಿತು. ಅದನ್ನು ಆತ ಬೇರೆಯವರಿಗೆ ಮಾರಾಟ ಮಾಡಿದ್ದ. ಕಾಯ್ದೆ ಪ್ರಕಾರ ಆತನಿಗೆ ಭೂಮಿ ವಾಪಸ್‌ ಕೊಡಿಸಬೇಕು. ಆದರೆ, ಖರೀದಿ ಮಾಡಿದವನೂ ಬಡವ. ತನ್ನ ಹಿಂದಿನ ಜಮೀನು ಮಾರಾಟ ಮಾಡಿ, ಈ ಭೂಮಿ ಖರೀದಿಸಿ ಅಭಿವೃದ್ಧಿಪಡಿಸಿದ್ದ. ಭೂಮಿ ವಾಪಸ್‌ ಕೊಡಿಸಿದರೆ ಆ ಬಡವನ ಪಾಡೇನು? ಆತನಿಗೂ ಅನ್ಯಾಯ ಆಗಬಾರದು, ಪರಿಶಿಷ್ಟ ಜಾತಿ ವ್ಯಕ್ತಿಗೂ ಅನ್ಯಾಯವಾಗಬಾರದೆಂದು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮಧ್ಯಸ್ಥಿಕೆ ವಹಿಸಿ ಇಬ್ಬರಿಗೂ ಸಮಾನಾಗಿ ಆ ಜಮೀನು ಹಂಚಿಕೆ ಮಾಡಿಸಿದ್ದೆ.

ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಪ್ರಕರಣಗಳು ಬರುತ್ತಿಲ್ಲ. ಬಂದರೂ ಪದೇಪದೇ ಮುಂದಕ್ಕೆ ಹಾಕಲಾಗುತ್ತಿದ್ದು, ಅಲೆಯಬೇಕಾದ ಪರಿಸ್ಥಿತಿ ಇದೆ.
-ವಿ.ಶ್ರೀನಿವಾಸಪ್ರಸಾದ್‌, ಬಿಜೆಪಿ ಸಂಸದ

**
ಮುಲಾಜಿಲ್ಲದೇ ಕ್ರಮ ಜರುಗಿಸಬೇಕು
ಭೂಮಿ ಖರೀದಿಸಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಹಂಚುವ ಯೋಜನೆಯನ್ನು ಸದುದ್ದೇಶದಿಂದ ತರಲಾಗಿದೆ. ಸಮುದಾಯದ ಬಾಳು ಹಸನಾಗಿಸಲು ರೂಪಿಸಿದ ಯೋಜನೆ ಕೂಡ. ಜೀತದಿಂದ ಮುಕ್ತರಾದವರಿಗೆ ಜಮೀನು ನೀಡಿ, ಸ್ವಂತವಾಗಿ ಉಳುಮೆ ಮಾಡಲು ಅವಕಾಶ ಮಾಡಿಕೊಡಬೇಕು. ಆದರೆ, ವಿತರಿಸಲು ಗುರಿ ಇಟ್ಟುಕೊಂಡಿರುವುದೇ ತೀರಾ ಕಡಿಮೆ. ಈಚೆಗೆ ದುರುಪಯೋಗವಾಗುತ್ತಿದೆ. ಈ ರೀತಿ ಮಾಡಿದವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನೇರ ಕ್ರಮ ತೆಗೆದುಕೊಳ್ಳಲು ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯಡಿಯೇ ಅವಕಾಶವಿದೆ. ಈ ಸಮುದಾಯದವರಿಗೆ ವಂಚನೆ ಮಾಡಬಾರದು.
-ಆರ್‌.ಧ್ರುವನಾರಾಯಣ, ಮಾಜಿ ಸಂಸದ

**
‘ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ’
ಆನ್‌ಲೈನ್‌ ಅರ್ಜಿ ವ್ಯವಸ್ಥೆ ಮಧ್ಯವರ್ತಿ ಹಾವಳಿ ಹೆಚ್ಚುವಂತೆ ಮಾಡಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಸಕಾಲಕ್ಕೆ ಸಭೆ ನಡೆಯದೆ ಫಲಾನುಭವಿ ಆಯ್ಕೆ ವಿಳಂಬವಾಗುತ್ತಿದೆ. ಕಾನೂನು ತಜ್ಞರ ಅಭಿಪ್ರಾಯ, ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಯೋಜನೆ ಫಲಕಾರಿ ಆಗುತ್ತಿಲ್ಲ.

ಸರ್ಕಾರ ನಿಗದಿಪಡಿಸಿದ ಅನುದಾನದಲ್ಲಿ ಭೂಮಿ ಖರೀದಿಸುವುದು ಅಸಾಧ್ಯವಾಗಿದೆ. ಬೆಂಗಳೂರು, ಮೈಸೂರು ಸೇರಿ ಅನೇಕ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಸಾಧ್ಯವಾಗುತ್ತಿಲ್ಲ. ಕೋಳಿ, ಕುರಿ ಖರೀದಿಗೆ ನೀಡುವ ಅನುದಾನವನ್ನು ಭೂ ಒಡೆತನದ ಯೋಜನೆಗೆ ಒದಗಿಸಿದರೆ ಅನುಕೂಲ.

‍ಪಿಟಿಸಿಎಲ್‌ ಕಾಯ್ದೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ತೀರ್ಪು ಮುಂದಿಟ್ಟುಕೊಂಡು ದಲಿತರನ್ನು ವಂಚಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತ್ಯೇಕ ನೀತಿ ರೂಪಿಸುವ ಅಗತ್ಯವಿದೆ.
-ಎ.ನಾರಾಯಣಸ್ವಾಮಿ, ಸಂಸದ, ಚಿತ್ರದುರ್ಗ

*
‘ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ’
ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿದರೆ ಮಾತ್ರ ‘ಭೂ ಒಡೆತನ ಯೋಜನೆ’ಯ ಆಶಯ ಸಾಕಾರಗೊಳ್ಳುತ್ತದೆ. ಯೋಜನೆಗೆ ಇನ್ನೂ ಹೆಚ್ಚಿನ ಅನುದಾನ ಒದಗಿಸಿ, ಪಾರದರ್ಶಕವಾಗಿ ಜಮೀನು ಖರೀದಿಸಿ, ಹಂಚುವ ವ್ಯವಸ್ಥೆ ಮಾಡಿದರೆ ಮಾತ್ರ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕುತ್ತದೆ.
–ಎನ್‌. ಮಹೇಶ್‌, ಶಾಸಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು