ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ವೈದ್ಯಶಿಕ್ಷಣವನ್ನು ಹರಾಜಿಗಿಟ್ಟ ಖಾಸಗಿ ಸಂಸ್ಥೆಗಳು

Last Updated 26 ಅಕ್ಟೋಬರ್ 2019, 21:37 IST
ಅಕ್ಷರ ಗಾತ್ರ

ಬೆಂಗಳೂರು: ಬ್ಲಾಕಿಂಗ್ ಎಂದು ಅಧಿಕೃತವಾಗಿ ಹೇಳಲು ಯಾವುದೇ ದಾಖಲೆಗಳು ಇಲ್ಲ. ಆದರೂ, 2018-19 ನೇ ಸಾಲಿನ ದಾಖಲಾತಿ ಸಂದರ್ಭದಲ್ಲಿ ‘ಶಂಕಿತ’ ಸೀಟ್ ಬ್ಲಾಕಿಂಗ್ ನಡೆದಿದೆ ಎಂದು ಸರ್ಕಾರದ ಮಟ್ಟದಲ್ಲೆ ಗಂಭೀರ ಚರ್ಚೆ ನಡೆದಿದ್ದು ಈ ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವ ಇ.ತುಕರಾಂ ಅದನ್ನು ಒಪ್ಪಿಕೊಂಡಿದ್ದರು. ಈ ಸಂಬಂಧ ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ಗೆ ಪತ್ರ ಬರೆಯುವಂತೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

‘ಪ್ರಜಾವಾಣಿ’ ಬಳಿ ಲಭ್ಯವಿರುವ ದಾಖಲೆಗಳ ಪ್ರಕಾರ, ಸುಮರು 212 ವಿದ್ಯಾರ್ಥಿಗಳು ಕಳೆದ ವರ್ಷ ರಾಜ್ಯ ದಲ್ಲಿ ಮೆಡಿಕಲ್ ಸೀಟು ಪಡೆದು ಕೊನೆ ಕ್ಷಣದಲ್ಲಿ ಪ್ರವೇಶ ಪಡಯದೇ ‘ಮಾಪ್ ಅಪ್ ರೌಂಡ್’ ಸೀಟು ಹಂಚಿಕೆ ನಂತರ ಹಿಂದಿರುಗಿಸಿರುತ್ತಾರೆ. ಅಷ್ಟೂ ವಿದ್ಯಾರ್ಥಿಗಳೂ ನೀಟ್ ಪರೀಕ್ಷೆಯಲ್ಲಿ 15000 ಕ್ಕಿಂತಲೂ ಕಡಿಮೆ ರ‍್ಯಾಂಕಿಂಗ್ ಪಡೆದವರಾಗಿದ್ದರು. ಆಗ ಸಚಿವರಾಗಿದ್ದ ತುಕಾರಾಂ ಅವರು ಈ ವಿಷಯದ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ನೀಡಿರುವ ನಿರ್ದೇಶನದ ಪ್ರತಿ ಲಭ್ಯವಿದ್ದು, ‘ಸೀಟುಗಳನ್ನು ಸರೆಂಡರ್ ಮಾಡಿರುವವರು ಮೆರಿಟ್ ವಿದ್ಯಾರ್ಥಿಗಳಾಗಿರುವುದರಿಂದ ದೇಶದ ಬೇರೆ ಕಾಲೇಜುಗಳಲ್ಲಿ ಸೀಟು ಪಡೆದಿರುವ ಸಾಧ್ಯತೆ ಇದೆ, ಆದ್ದರಿಂದ ಇದನ್ನು ಬ್ಲಾಕಿಂಗ್ ಎಂದು ಪರಿಗಣಿಸಿ, ಬೇರೆ ಕಾಲೇಜುಗಳಲ್ಲಿ ಪಡೆದಿರುವ ದಾಖಲಾತಿ ರದ್ದು ಪಡಿಸಲು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ ಪತ್ರ ಬರೆಯುವುದು’ ಎಂದು ನಿರ್ದೇಶಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 212 ಪ್ರಥಮ ವರ್ಷದ ಎಂಬಿಬಿಸ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡಲು ನಿರಾಕ ರಿಸಿತ್ತು. ಆದರೆ ಕೋರ್ಟ್ ನಿರ್ದೇಶನದ ಪ್ರಕಾರ ಕೊನೆಗೆ ಅವಕಾಶ ನೀಡಿತ್ತು ಮತ್ತು ಫಲಿತಾಂಶ ಕೂಡ ತಡೆಹಿಡಿದಿತ್ತು. ಇತ್ತೀಚೆಗೆ ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲಾದ ನಿರ್ಧಾರದ ಪ್ರಕಾರ ಆ ವಿದ್ಯಾರ್ಥಿಗಳ ಫಲಿತಾಂಶವನ್ನೂ ಬಿಡುಗಡೆಗೊಳಿಸಲಾಯಿತು.

ಶುಲ್ಕ ನಿಯಂತ್ರಣ ಸಮಿತಿ ಸದಸ್ಯರೊಬ್ಬರು ವಿವರಿಸುವ ಪ್ರಕಾರ ಇತ್ತೀಚೆಗೆ ಬೆಂಗಳೂರು ಮೂಲದ ವಿದ್ಯಾರ್ಥಿನಿ ತನಗೆ ಸರ್ಕಾರಿ ಕೋಟಾ ವೈದ್ಯ ಸೀಟು ಅನ್ಯಾಯವಾಗಿದ್ದು ಕೊಡಿಸುವಂತೆ ಮನವಿ ಮಾಡಿದ್ದಾಳೆ, ಕೂಲಂಕಷವಾಗಿ ವಿಚಾರಣೆ ನಡೆಸಿದ ಸಮಿತಿಗೆ ಆಶ್ಚರ್ಯ ಕಾದಿತ್ತು. ‘ಆ ವಿದ್ಯಾರ್ಥಿನಿಯ ಜತೆ ಬಂದವರು ಪೋಷಕರೋ ಏಜೆಂಟರೋ ಎಂಬ ಅನುಮನವೂ ನಮ್ಮಲ್ಲಿ ಮೂಡಿತ್ತು. ಸಂಪೂರ್ಣ ವಿವರ ಪಡೆದ ನಂತರ ತಿಳಿದ ವಿಷಯವೆಂದರೆ ಆ ವಿದ್ಯಾರ್ಥಿನಿ ಆಲ್ ಇಂಡಿಯಾ ಕೋಟಾದಡಿ ಅದಾಗಲೇ ಸೀಟು ಪಡೆದು ಅದನ್ನು ರೂ 20 ಲಕ್ಷಕ್ಕೆ ಕಾಲೇಜಿಗೆ ಬಿಟ್ಟು ಕೊಟ್ಟಿರುತ್ತಾಳೆ. ಆಕೆಯ ನೀಟ್ ರ‍್ಯಾಂಕ್ ಉತ್ತಮವಾಗಿದ್ದ ಕಾರಣ ಸರ್ಕಾರಿ ಕೋಟಾದಡಿ ಕಡಿಮೆ ಶುಲ್ಕಕ್ಕೆ ಸೀಟು ಗಿಟ್ಟಿಸಲು ಪ್ಲಾನ್ ಮಾಡಿದ್ದಳು’, ಎನ್ನುತ್ತಾರೆ ಶುಲ್ಕ ನಿಯಂತ್ರಣ ಸಮಿತಿ ಸದಸ್ಯರೊಬ್ಬರು.

ಹತ್ತು ವರ್ಷಗಳ ಹಿಂದೆ ಸುಮಾರು 30-35 ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ತಾವು ಸರ್ಕಾರಿ ಕೋಟಾದಡಿ ಪಡೆದ ಮೆಡಿಕಲ್ ಸೀಟುಗಳನ್ನು ಕಾಲೇಜು ಆಡಳಿತ ಮಂಡಳಿಗಳಿಗೆ ಹಿಂದಿರುಗಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು ಸರ್ಕಾರದ ಹಂತದಲ್ಲಿ ತನಿಖೆಗೂ ಅದೇಶಿಸಲಾಗಿತ್ತು. ಆದರೆ ತನಿಖೆ ಏನಾಯಿತು ಎಂಬ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಬಳಿಯೂ ಮಾಹಿತಿ ಇಲ್ಲ.

ಕೇಂದ್ರದ ನಿಯಮ ಅಗತ್ಯ
ವಿಷಯ ತಜ್ಞರ ಪ್ರಕಾರ ಸೀಟ್ ಬ್ಲಾಕಿಂಗ್ ದಂಧೆ ಬಹಳ ಹಿಂದಿನಿಂದಲೂ ನಡೆಯುತ್ತಿದ್ದು ಇತ್ತೀಚೆಗೆ ಅವ್ಯಾಹತವಾಗಿದೆ. ವೃತ್ತಿಶಿಕ್ಷಣ ಕಾಲೇಜುಗಳ ಪ್ರವೇಶ ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಂದ ನೇಮಿಸಲಾಗಿರುವ ಪ್ರವೇಶ ಮೇಲುಸ್ತುವಾರಿ ಸಮಿತಿ (ಅಡ್ಮಿಷನ್ ಓವರ್ ಸೀಯಿಂಗ್ ಕಮಿಟಿ) ಪ್ರಕಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿಯಮ ರೂಪಿಸುವ ಮೂಲಕ ಇದನ್ನು ಸಂಪೂರ್ಣವಾಗಿ ತಡೆಯಬಹುದು.

ಸೀಟ್‌ ಬ್ಲಾಕಿಂಗ್‌ ವಂಚನೆ ಸ್ವರೂಪ
ಸೀಟ್ ಬ್ಲಾಕಿಂಗ್ ದಂಧೆಯ ಮೂಲ ರಾಜಧಾನಿ ಹೊಸ ದಿಲ್ಲಿಯೇ ಆದರೂ, ಅದರ ಕರಾಳ ಕೈಗಳು ಚಾಚಿಕೊಂಡಿರುವುದು ಕರ್ನಾಟಕವನ್ನು. ಸೀಟ್ ಬ್ಲಾಕಿಂಗ್ ಎರಡು ಹಂತದಲ್ಲಿ ನಡೆಯುತ್ತದೆ. ನೀಟ್ ಪರೀಕ್ಷೆ ಮತ್ತು ಸೀಟು ಆಯ್ಕೆ ಸಂದರ್ಭದಲ್ಲಿ.

ನೀಟ್ ಪರೀಕ್ಷೆ ಸಮೀಪಿಸುತ್ತಿದಂತೆ ಚುರುಕಾಗುವ ಏಜೆಂಟರು ಈ ಹಿಂದೆ ನೀಟ್ ಪರೀಕ್ಷೆ ಬರೆದ ಟಾಪ್ ವಿದ್ಯಾಥಿಗಳ ಪಟ್ಟಿ ಸಿದ್ಧಪಡಿಸುತ್ತಾರೆ. ಅವರನ್ನು ಸಂಪರ್ಕಿಸಿ ನಕಲಿ ವಿದ್ಯಾರ್ಥಿ (ಇಂಪರ್ಸನೇಷನ್) ಯಾಗಿ ಪರೀಕ್ಷೆ ಬರೆಯಲು ಒಪ್ಪಿಸುತ್ತಾರೆ. ಇದೂ ಸಹ ಲಕ್ಷ ಗಟ್ಟಲೆ ಡೀಲ್. ಅವರ ಮೆಡಿಕಲ್ ಕೋರ್ಸ್‌ಗೆ ವ್ಯಯಿಸಿರುವ ಹಣ ಹಿಂದಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಬಡ – ಮದ್ಯಮ ವರ್ಗದ ಮೆರಿಟ್ ವಿದ್ಯಾರ್ಥಿಗಳು ಈ ಜಾಲಕ್ಕೆ ಬಲಿಯಾಗುತ್ತಾರೆ. ಇದೇ ಸಮಯದಲ್ಲಿ ಸೀಟಿಗಾಗಿ ಹಪಹಪಿಸುವ ಶ್ರೀಮಂತ ವರ್ಗದ ಮೆರಿಟ್ ಇಲ್ಲದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ಹೆಸರಿನಲ್ಲಿ ‘ನಕಲಿ’ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಸಲಾಗುತ್ತದೆ.

ಎರಡನೇ ಹಂತದ ಬ್ಲಾಕಿಂಗ್ ನಡೆಯುವುದು ಸೀಟು ಆಯ್ಕೆ ಸಂದರ್ಭದಲ್ಲಿ. ಈ ಹಂತದಲ್ಲಿ ಕೂಡ ಏಜೆಂಟರು ಟಾಪ್ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಿ ಅವರ ಮನವೊಲಿಸಿ ಕರ್ನಾಟಕದಲ್ಲಿ ಸೀಟು ಪಡೆಯಲು ಒಪ್ಪಿಸುತ್ತಾರೆ. ಇದೇ ವಿದ್ಯಾರ್ಥಿಗಳು ಏಕ ಕಾಲದಲ್ಲಿ ಕರ್ನಾಟಕ ಮ್ತತು ಬೇರೆ ರಾಜ್ಯದ ಕಾಲೇಜು ಗಳಲ್ಲೂ ಸೀಟು ಆಯ್ಕೆ ಮಾಡುತ್ತಾರೆ. ಇದಕ್ಕೆ ತಗಲುವ ವೆಚ್ಚವನ್ನು ಏಜೆಂಟನೇ ಭರಿಸುತ್ತಾನೆ. ಹೀಗೆ ಆಯ್ಕೆ ಮಾಡಿದ ಸೀಟನ್ನು ಕೊನೆಯ ಹಂತದ ರೌಂಡ್‌ವರೆಗೂ ಹಿಂದಿರುಗಿಸುವುದೂ ಇಲ್ಲ, ಆಯ್ಕೆ ಮಾಡಿಕೊಂಡ ಕಾಲೇಜಿಗೆ ಹೋಗಿ ಪ್ರವೇಶವನ್ನೂ ಪಡೆಯುವುದಿಲ್ಲ. ‘ಮಾಪ್‌ಅಪ್’ ಸುತ್ತಿನ ನಂತರ ಹಿಂದಿರುಗಿಸಿ ತಾವು ಸಲ್ಲಿಸಿದ ದಾಖಲಾತಿಗಳನ್ನು ವಾಪಸ್ ಪಡೆಯುತ್ತಾರೆ. ಬಳಿಕ, ಆ ಸೀಟುಗಳು ಮ್ಯಾನೇಜ್‌ಮೆಂಟ್ ಸೀಟುಗಳಾಗಿ ಬದಲಾಗುತ್ತವೆ ಮತ್ತು ಕಾಲೇಜು ಹಂತದಲ್ಲೇ ಹಂಚಿಕೆಯಗುತ್ತವೆ. ಖಾಸಗಿ ಸಂಸ್ಥೆ ತೋಚಿದಷ್ಟು ಹಣಕ್ಕೆ ಸೀಟುಗಳನ್ನು ಮಾರಲು ಅವಕಾಶವಾಗುತ್ತದೆ.

ಮೆರಿಟ್ ವಿದ್ಯಾರ್ಥಿಗಳೇ ಬಲಿಪಶು
ಸೀಟ್ ಬ್ಲಾಕ್ ಮಾಡಲು ಏಜೆಂಟ್‌ಗಳು ಮತ್ತು ಕಾಲೇಜು ಆಡಳಿತ ಮಂಡಳಿಗಳು ದುರು ಪಯೋಗ ಪಡಿಸಿಕೊಳ್ಳು ವುದು ಮೆರಿಟ್ ವಿದ್ಯರ್ಥಿಗಳನ್ನೇ. ಮೆರಿಟ್ ವಿದ್ಯಾರ್ಥಿ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಪ್ರವೇಶ ಪಡೆದಿದ್ದರೆ ಅವರನ್ನು ನಕಲಿ/ಬದಲಿ ವಿದ್ಯಾಥಿಯಾಗಿ ಬೇರೆ ವಿದ್ಯಾರ್ಥಿಯ ಪರವಾಗಿ ಪರೀಕ್ಷೆ ಬರೆಯಲು ಹಣದ ಆಮಿಷವೊಡ್ಡಿ ಬಳಸುತ್ತಾರೆ.

ಆಲ್ ಇಂಡಿಯಾ ಕೋಟಾ ಅಥವಾ ರಾಜ್ಯ ಕೋಟಾದಡಿ ಮೆರಿಟ್ ವಿದ್ಯಾರ್ಥಿಗಳಿಂದ ಸೀಟು ಆಯ್ಕೆ ಮಾಡಿಸಿ ನಂತರ ಅವರಿಗೆ ಆರೋ ಏಳೋ ಲಕ್ಷ ಹಣ ನೀಡಿ ಆ ಸೀಟನ್ನು ಮಾಪ್ ಅಪ್ ರೌಂಡ್ ಬಳಿಕ ಸರೆಂಡರ್ ಮಾಡಿಸುತ್ತಾರೆ. ಹಾಗೆ ಸರೆಂಡರ್ ಆದ ಸೀಟುಗಳನ್ನು ಕಾಲೇಜುಗಳ ಹಂತದಲ್ಲಿ 60 ರಿಂದ 80 ಲಕ್ಷಕ್ಕೆ ಮಾರಾಟ ಮಾಡುತ್ತಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಎರಡೂ ಕಾಲೇಜು ಹೊಂದಿರುವ ಆಡಳಿತ ಮಂಡಳಿಗಳು ಮೆಡಿಕಲ್ ಸೀಟು ಪಡೆದ ಮೆರಿಟ್ ವಿದ್ಯಾರ್ಥಿಯ ಆರ್ಥಿಕ ಅಗತ್ಯಗಳನ್ನು ದುರುಪ ಯೋಗ ಪಡಿಸಿಕೊಂಡು ಆ ವಿದ್ಯಾರ್ಥಿಗೆ ಹಣದ ಆಮಿಷವೊಡ್ಡಿ ಆ ಸೀಟನ್ನು ಹಿಂದಿರುಗಿಸಲು ಪ್ರೇರೇಪಿಸುತ್ತಾರೆ, ಆ ಸೀಟಿಗೆ ಬದಲಾಗಿ ತಮ್ಮದೇ ಸ್ವಾಮ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ನೀಡುತ್ತಾರೆ.

ಅನ್ಯಾಯ...
ಸೀಟ್ ಬ್ಲಾಕಿಂಗ್‌ನಿಂದ ಮೆರಿಟ್ ವಿದ್ಯಾರ್ಥಿಗಳಿಗೆ ಮೋಸವಾಗುತ್ತದೆ. ಬ್ಲಾಕ್ ಮಾಡಿದ ಸೀಟುಗಳು ಕೊನೆ ಕ್ಷಣದಲ್ಲಿ ಕಾಲೇಜುಗಳ ಪಾಲಾಗುವುದರಿಂದ ಸರತಿ ಪ್ರಕಾರ ಆ ಸೀಟಿಗೆ ಅರ್ಹರಾಗಿದ್ದ ಮೆರಿಟ್ ವಿದ್ಯಾರ್ಥಿಗಳಿಗೆ ಅನ್ಯಾಯವಗುತ್ತದೆ, ಪ್ರೀ ಮತ್ತು ಪೋಸ್ಟ್ ಬ್ಲಾಕಿಂಗ್ ಎರಡೂ ಹಂತದಲ್ಲೂ ಮೆರಿಟ್ ವಿದ್ಯಾರ್ಥಿಗಳು ಬಲಿಯಗುತ್ತಿರುವುದು ದುರಂತವೇ ಸರಿ.

ಕಾಯ್ದೆಗೆ ತಿದ್ದುಪಡಿ ಆಗಬೇಕು...
ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಮನಸ್ಸು ಮಾಡಿದರೆ ಈ ದಂಧೆಯನ್ನು ಬುಡ ಸಮೇತ ಕಿತ್ತೊಗೆಯಲು ಸಾಧ್ಯವಿದೆ. ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ‘ಕರ್ನಾಟಕ ವೃತ್ತಿ ಶಿಕ್ಷಣ ಕಾಯ್ದೆ 2006 ಕ್ಕೆ ತಿದ್ದುಪಡಿ ತರುವುದರಿಂದ ಈ ಅಕ್ರಮವನ್ನು ಹತ್ತಿಕ್ಕಲು ಸಾದ್ಯ.’

‘ಪ್ರಸ್ತುತ ಸರೆಂಡರ್ ಸೀಟುಗಳಿಗೆ ವಿದ್ಯಾರ್ಥಿಗಳಿಂದ ದಂಡ ವಸೂಲಿ ಮಾಡಲಾಗುತ್ತಿದೆ, ಆದರೆ ಅದು ಪರಿಣಾಮಕಾರಿಯಗಿಲ್ಲ. ಉದಾಹರಣೆಗೆ, ವಿದ್ಯರ್ಥಿಗಳು ಸೀಟು ಆಯ್ಕೆ ಸಂದರ್ಭದಲ್ಲಿ ಪಾವತಿಸಿದ ಮೊತ್ತವನ್ನು ಕರ್ನಾಟಕ ಪರೀಕ್ಷಾ ಪ್ರಧಿಕಾರ ದಂಡ ಶುಲ್ಕವಾಗಿ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಇದರ ಬದಲು, ಆ ವಿದ್ಯಾರ್ಥಿಗಳಿಂದ ಕೋರ್ಸಿನ ಸಂಪೂರ್ಣ ಶುಲ್ಕವನ್ನು ಪಡೆದು ಅದೇ ಹಣವನ್ನು ಕಾಲೇಜುಗಳಿಗೆ ನೀಡಿದರೆ, ಕಾಲೇಜುಗಳ ಧನದಾಹಿತನ ತಗ್ಗುತ್ತದೆ. ಹಾಗೆ ಸರೆಂಡರ್ ಮಾಡಲಾದ ಸೀಟುಗಳನ್ನು ಮುಂದಿನ 4 ವರ್ಷವೂ ಖಾಲಿ ಇರಿಸಿಕೊಳ್ಳ ಬೇಕು, ಸರ್ಕಾರವೇ ಹಣವನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡಿ ಕಾಲೇಜುಗಳಿಗೆ ನೀಡಿ, ಆ ಸರೆಂಡರ್ ಸೀಟುಗಳನ್ನು ಖಾಲಿ ಇರಿಸಿಕೊಳ್ಳಲು ಸೂಚಿಸಿದರೆ, ಖಂಡಿತ ಬ್ಲಾಕಿಂಗ್ ನಿಲ್ಲುತ್ತದೆ,’ ಎಂಬುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿವೃತ್ತ ಆಡಳಿತಧಿಕಾರಿಯೊಬ್ಬರ ಅಭಿಪ್ರಾಯ.

ಸರ್ಕಾರಗಳು ಏನು ಮಾಡಬೇಕು ?

*ಕೇಂದ್ರ ಸರ್ಕಾರದ ಮಟ್ಟದಲ್ಲಿ ಸೀಟ್ ಬ್ಲಾಕಿಂಗ್ ತಡೆಗೆ ರಾಷ್ಟ್ರೀಯ ನೀತಿ ರೂಪಿಸಬೇಕು

*ಸರೆಂಡರ್ ಸೀಟುಗಳನ್ನು ಸರ್ಕಾರದ ಮಟ್ಟದಲ್ಲೇ ಭರ್ತಿ ಮಾಡಬೇಕು

*ಸುಪ್ರೀಂಕೋರ್ಟಿನ ಸ್ಟ್ರೇ ಸೀಟ್ಸ್ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬೇಕು

*ಸೀಟುಗಳನ್ನು ಹಿಂದಿರುಗಿಸುವಾಗ ವಿದ್ಯಾರ್ಥಿಗಳಿಂದ ಸಂಬಂಧಪಟ್ಟ ಕೋರ್ಸಿನ ಸಂಪೂರ್ಣ ಶುಲ್ಕವನ್ನು ದಂಡ ರೂಪದಲ್ಲಿ ವಸೂಲಿ ಮಾಡಬೇಕು

*ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ ದಂಡ ಶುಲ್ಕವನ್ನು ಸೀಟು ಹಿಂದಿರುಗಿಸಲ್ಪಟ್ಟ ಕಾಲೇಜಿಗೇ ನೀಡಿ, ಖಾಲಿ ಉಳಿದ ಸೀಟನ್ನು ಮುಂದಿನ ನಾಲ್ಕು ವರ್ಷವೂ ಹಾಗೆಯೇ ಇರಿಸಿಕೊಳ್ಳುವಂತೆ ನಿರ್ದೇಶಿಸಬೇಕು

*ಈ ರೀತಿ ಸೀಟು ಪಡೆದು ಕೊನೇ ಕ್ಷಣದಲ್ಲಿ ಹಿಂದಿರುಗಿಸುವ ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸಿ ತನಿಖೆ ನಡೆಸಬೇಕು

*ಪ್ರತಿ ವರ್ಷ ತಮ್ಮ ಹಂತದಲ್ಲಿ ಕೊನೇ ಕ್ಷಣದಲ್ಲಿ ಸರ್ಕಾರದ ಗಮನಕ್ಕೆ ತಾರದೇ ಪ್ರವೇಶ ನೀಡುವ ಕಾಲೇಜುಗಳ ವಿರುದ್ದ ಕ್ರಮ ಕೈಕೊಳ್ಳಬೇಕು.

*ಸರ್ಕಾರಕ್ಕೆ ತಿಳಿಸದೇ ಕಾಲೇಜು ಹಂತದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಾರದು.

*ಹೊಸ ಖಾಸಗಿ ಮೆಡಿಕಲ್ ಕಾಲೇಜು ಪ್ರಸ್ತಾವನೆಗೆ ಕಡಿವಣ ಹಾಕಬೇಕು

*ವೈದ್ಯರ ಅಗತ್ಯ ಪೂರೈಸಲು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಕಾಲೇಜುಗಳನ್ನು ತೆರೆಯಬೇಕು

*ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ವಿದ್ಯಾರ್ಥಿಗಳು ರಾಜ್ಯದಲ್ಲಿ ಸೀಟು ಪಡೆದು, ಕೊನೆ ಕ್ಷಣದಲ್ಲಿ ಹಿಂದಿರುಗಿಸಿದ್ದಾರೆಂಬ ಪಟ್ಟಿ ತಯಾರಿಸಿ, ಅಂಥ ಪ್ರಕರಣಗಳನ್ನು ಶಂಕಿತ ಬ್ಲಾಕಿಂಗ್ ಎಂದು ಪರಿಗಣಿಸಿ ತನಿಖೆ ನಡೆಸಬೇಕು

*ಎಲ್ಲಾ ರಾಜ್ಯಗಳಲ್ಲೂ ಸೀಟು ಆಯ್ಕೆ ಸಮಯದಲ್ಲಿ ಮೂಲ ದಾಖಲೆಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಬೇಕು

**
ನೀಟ್ ನಿರ್ಬಂಧಿಸಬೇಕು
‘ಸೀಟ್ ಬ್ಲಾಕಿಂಗ್ ತಡೆಯಲು ಮೂರು ದಾರಿಗಳಿವೆ. ನೀಟ್ ಮೂಲಕ ಸೀಟು ಪಡೆದು ಮೆಡಿಕಲ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೆ ನೀಟ್ ಪರೀಕ್ಷೆ ಬರೆಯದಂತೆ ನಿರ್ಬಂಧ ವಿಧಿಸುವುದು. ಮಾಪ್ಆಫ್ ಸುತ್ತಿಗೂ ಮೊದಲೇ ಸೀಟುಗಳನ್ನು ಸರೆಂಡರ್ ಮಾಡುವುದನ್ನು ಕಡ್ಡಾಯಗೊಳಿಸುವುದು ಮತ್ತು ಮಾಪ್ಆಫ್ ಸುತ್ತಿನ ನಂತರ ಸೀಟು ಹಿಂದಿರುಗಿಸುವ ವಿದ್ಯಾರ್ಥಿಗಳಿಗೆ ಭಾರಿ ಮೊತ್ತದ ದಂಡ ವಿಧಿಸಬೇಕು’
–ಡಾ. ಸಚ್ಚಿದಾನಂದ, ಉಪಕುಲಪತಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ

**
ಸರ್ಕಾರ ನಿರ್ಧರಿಸಬೇಕು
‘ನಾವು ಪ್ರತಿ ಸೀಟು ಹಂಚಿಕೆ ಮತ್ತು ಪ್ರವೇಶದ ಬಳಿಕ ಎಲ್ಲ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ಸಂಬಂಧಿಸಿದ ಸಂಸ್ಥೆಗಳಿಗೆ ಕಳುಹಿಸುತ್ತೇವೆ. ಆದರೆ ಇವತ್ತಿನತನಕ ಯಾವುದೇ ಸಂಸ್ಥೆಯು ಹಿಂದಿರುಗಿಸಲ್ಪಟ್ಟ ಸೀಟುಗಳ ಬಗ್ಗೆ ಮಾಹಿತಿ ‍ಕೇಳಿಲ್ಲ. ಇದು ಬಹಳ ಕಾಲದಿಂದ ನಡೆಯುತ್ತಿರುವ ದಂಧೆ. ಸರ್ಕಾರದ ಮಟ್ಟದಲ್ಲಿ ನಿರ್ಣಯ ಕೈಗೊಳ್ಳದಿದ್ದರೆ ಇದನ್ನು ತಡೆಯಲು ಸಾಧ್ಯವಿಲ್ಲ’
–ಡಾ. ಎಸ್. ಕುಮಾರ್, ಕಾರ್ಯದರ್ಶಿ, ಕಾಮೆಡ್ ಕೆ.

**
ಕಡಿವಾಣ ಬೇಕು
‘ಸೀಟ್ ಬ್ಲಾಕಿಂಗ್ ದಂಧೆ ರಾಜ್ಯದ ಶಿಕ್ಷಣ ಕ್ಷೆತ್ರಕ್ಕೆ ಒಂದು ಕಪ್ಪು ಚುಕ್ಕೆ. ದಲ್ಲಾಳಿಗಳು ಮತ್ತು ಖಾಸಗಿ ಶಿಕ್ಷಣಮಂಡಳಿಗಳ ದುರಾಸೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಕನಸಾಗಿದೆ. ವಿಶೇಷವಾಗಿ ಡೀಮ್ಡ್ ವಿವಿ ಗಳ ಪ್ರವೇಶ ಮತ್ತು ನೀಟ್ ನಿಯಮಪಾಲನೆ ವಿಚಾರದಲ್ಲಿ ಗೊಂದಲ ಇದ್ದು ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ಸಮಿತಿ ರಚಿಸಿ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕಬೇಕು. ವೈದ್ಯಕೀಯ ಶಿಕ್ಷಣ ಸರ್ವರಿಗೂ ಸಿಗುವಂತಾಗಬೇಕು.’
–ಹರ್ಷ ನಾರಾಯಣ, ರಾಜ್ಯ ಕಾರ್ಯದರ್ಶಿ, ಎಬಿವಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT