ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಅನುಮೋದನೆ ದೊರೆತರೂ ಪ್ರಗತಿ ಶೂನ್ಯ

Last Updated 2 ಜನವರಿ 2021, 20:33 IST
ಅಕ್ಷರ ಗಾತ್ರ

ಮೈಸೂರು/ಚಾಮರಾಜನಗರ: ಮೈಸೂರು (ಬೆಳಗೊಳ)– ಕುಶಾಲನಗರ ಹಾಗೂ ಹೆಜ್ಜಾಲ-ಚಾಮರಾಜನಗರ ನಡುವಿನ ನೂತನ ರೈಲು ಮಾರ್ಗಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿ ವರ್ಷ ಕಳೆದಿದೆ. ಆದರೆ ಕಾಮಗಾರಿ ಆರಂಭವಾಗದೆ ನನೆಗುದಿಗೆ ಬಿದ್ದಿವೆ.

ರೈಲ್ವೆ ಸಂಪರ್ಕದಿಂದ ವಂಚಿತವಾಗಿರುವ ಏಕೈಕ ಜಿಲ್ಲೆ ಕೊಡಗು. ಈ ಜಿಲ್ಲೆಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂದು ಬ್ರಿಟಿಷರ ಕಾಲದಿಂದಲೂ ಬೇಡಿಕೆ ಇದೆ.

ಸುಮಾರು 87 ಕಿ.ಮೀ ಉದ್ದದ ಮೈಸೂರು (ಬೆಳಗೊಳ)–ಕುಶಾಲನಗರ ಮಾರ್ಗದ ಕಾಮಗಾರಿಗೆ ಕೊನೆಗೂ 2018–19ರಲ್ಲಿ ಅನುಮೋದನೆ ಲಭಿಸಿದ್ದು, ₹ 1,855 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಬೇಕಿದೆ. ರಾಜ್ಯ ಸರ್ಕಾರದಿಂದ ಉಚಿತವಾಗಿ ಭೂಮಿಯನ್ನು ನೀಡುವಂತೆ ಕೊಡಗು ಭಾಗದ ಶಾಸಕರು ಮನವಿ ಮಾಡಿದ್ದಾರೆ.

ಕೊಡಗಿನಲ್ಲಿ ರೈಲು ಮಾರ್ಗ ನಿರ್ಮಿಸುವುದರಿಂದ ಪರಿಸರಕ್ಕೆ ಧಕ್ಕೆ ಉಂಟಾಗಲಿದೆ ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ವಿಳಂಬವಾಗಿತ್ತು. ರೈಲು ಸಂಪರ್ಕ ಕಲ್ಪಿಸಲು ಈ ಹಿಂದೆಯೇ ಸಮೀಕ್ಷೆ ನಡೆಸಲಾಗಿತ್ತು. ಈ ಮಾರ್ಗವು ಲಾಭದಾಯಕವಲ್ಲ ಎಂದು ರೈಲ್ವೆ ಅಧಿಕಾರಿಗಳು ಯೋಜನೆಯನ್ನು ಕೈಬಿಟ್ಟಿದ್ದರು.

ಈ ನೂತನ ಮಾರ್ಗ ನಿರ್ಮಾಣವಾದರೆ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಬೈಲುಕುಪ್ಪೆ ಹಾಗೂ ಕುಶಾಲನಗರದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಜೊತೆಗೆ ಈ ಭಾಗದ ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗೂ ನೆರವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ವಿವಿಧೆಡೆಯಿಂದ ಕೊಡಗು ಜಿಲ್ಲೆಗೆ ಬರುತ್ತಾರೆ.

ಆಲೂರು (ಹಾಸನ)–ಬೇಲೂರು (32 ಕಿ.ಮೀ) ನೂತನ ರೈಲು ಮಾರ್ಗ ನಿರ್ಮಾಣದ ಕಾಮಗಾರಿಗೆ ₹ 463 ಕೋಟಿ ಮೀಸಲಿಡಲಾಗಿದೆ. ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ಆರಂಭವಾಗದ ಹೆಜ್ಜಾಲ–ಚಾಮರಾಜನಗರ ಮಾರ್ಗ
ಚಾಮರಾಜನಗರದಿಂದ ಕೊಳ್ಳೇಗಾಲ, ಮಳವಳ್ಳಿ, ಕನಕಪುರ ಮಾರ್ಗವಾಗಿ ಹೆಜ್ಜಾಲ ತಲುಪುವ ರೈಲು ಮಾರ್ಗದ ಯೋಜನೆ ಕೂಡ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಆರಂಭವಾಗದೇ ಇರುವುದು ಇದಕ್ಕೆ ಕಾರಣ.ಯೋಜನೆ ಅನುಷ್ಠಾನಕ್ಕೆ 1,732 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ.

₹1,382 ಕೋಟಿ ವೆಚ್ಚದ 142 ಕಿ.ಮೀ ಉದ್ದದ ರೈಲು ಮಾರ್ಗದ ಯೋಜನೆ ಇದಾಗಿದೆ. ಚಾಮರಾಜನಗರದಿಂದ ಮೈಸೂರಿಗೆ ತೆರಳದೆಯೇ ಈ ಮಾರ್ಗ ನೇರವಾಗಿ ಬೆಂಗಳೂರನ್ನು ಸಂಪರ್ಕಿಸಲಿದೆ. ಈ ಯೋಜನೆಗಳ ಬಗ್ಗೆ ಪ್ರತಿವರ್ಷ ಪಿಂಕ್‌ ಬುಕ್‌ನಲ್ಲಿ ಪ್ರಸ್ತಾಪವಾಗುತ್ತದೆ. ಆದರೆ, ಪ್ರಗತಿ ಮಾತ್ರ ಶೂನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT