ಮಂಗಳವಾರ, ನವೆಂಬರ್ 19, 2019
27 °C
ಏಜೆನ್ಸಿಗಳಿಂದ ಸಿಬ್ಬಂದಿ ಶೋಷಣೆ * ಸುಳ್ಳು ಲೆಕ್ಕಕ್ಕೆ ಅಧಿಕಾರಿಗಳ ರಕ್ಷಣೆ * ಕೋಟಿಗಟ್ಟಲೆ ಲೂಟಿ

ಒಳನೋಟ: ಹೊರಗುತ್ತಿಗೆ ಎಂಬ 'ಜೀತ', ಕೋಟಿಗಟ್ಟಲೆ ಲೂಟಿ

Published:
Updated:
Prajavani

ಬೆಂಗಳೂರು: ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ ಹೊರಗುತ್ತಿಗೆ ಹೆಸರಿನಲ್ಲಿ ಕೋಟ್ಯಂತರ ರೂ ಹಣ ಲೂಟಿಯಾಗುತ್ತಿದ್ದು, ನೌಕರರ ಶೋಷಣೆಯೂ ಮೇರೆ ಮೀರಿದೆ.

ಸಾವಿರಾರು ಸಂಖ್ಯೆಯಲ್ಲಿ ಖಾಲಿ ಬಿದ್ದಿರುವ ಸಿ ಮತ್ತು ಡಿ ಹುದ್ದೆಗಳಿಗೆ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತಿದೆ. ಈ ನೌಕರರನ್ನು ಇಲಾಖೆಗಳಲ್ಲಿ ಅಗ್ಗದ ಆಳುಗಳಾಗಿ ದುಡಿಸಿಕೊಳ್ಳಲಾಗುತ್ತಿದೆ. ಜತೆಗೆ, ಏಜೆನ್ಸಿಗಳು ಸರಿಯಾಗಿ ವೇತನ‌ವನ್ನೂ ನೀಡದೆ ಶೋಷಿಸುತ್ತಿವೆ.

ಇದನ್ನೂ ಓದಿ: ಒಳನೋಟ: ಸರ್ಕಾರದ ನೆರಳಲ್ಲೇ ಶೋಷಣೆ, ನಾನಾ ಇಲಾಖೆಗಳಲ್ಲಿ ಸಾವಿರಾರು ಹುದ್ದೆ ಖಾಲಿ

ಸೇವಾ ಶುಲ್ಕ ಷರತ್ತಿನಡಿ ಸಿಬ್ಬಂದಿ ಪೂರೈಸುವ ಏಜೆನ್ಸಿಗಳು ಟೆಂಡರ್ ಷರತ್ತುಗಳನ್ನು ಉಲ್ಲಂಘಿಸುತ್ತಿವೆ. ಕೆಲಸ ಸಿಕ್ಕರೆ ಸಾಕು ಎಂಬ ಅಸೆಯನ್ನೇ ಬಂಡವಾಳ ಮಾಡಿಕೊಳ್ಳುವ ಏಜೆನ್ಸಿಗಳು ನೌಕರರ ವೇತನದಲ್ಲಿ ದೊಡ್ಡ ಮೊತ್ತವನ್ನು ಕಮಿಷನ್‌ ರೂಪದಲ್ಲಿ ಕಿತ್ತುಕೊಳ್ಳುತ್ತಿವೆ. ಪಿಎಫ್, ಇಎಸ್ಐ ಹೆಸರಿನಲ್ಲಿ ಕಡಿತ ಮಾಡುವ ಮೊತ್ತವನ್ನೂ ಕದಿಯುತ್ತಿವೆ. ಈ ದರೋಡೆಯಲ್ಲಿ ಶಾಮೀಲಾಗುವ ಅಧಿಕಾರಿಗಳು ಅಕ್ರಮದಲ್ಲಿ ಪಾಲು ಪಡೆಯುತ್ತಿದ್ದಾರೆ.

ಐದನೇ ತಾರೀಕಿನ ಒಳಗೆ ಸಿಬ್ಬಂದಿ ಬ್ಯಾಂಕ್ ಖಾತೆಗೆ ಸಂಬಳವನ್ನು ಏಜೆನ್ಸಿಗಳು ಜಮೆ ಮಾಡಬೇಕು. ಐದಾರು ತಿಂಗಳಾದರೂ ವೇತನ ಪಾವತಿಯಾಗದೆ ಈ ಸಿಬ್ಬಂದಿ ಪ್ರತಿಭಟಿಸಿದ್ದಾರೆ. ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಆದರೂ, ಹಣ ನುಂಗುವ ಚಾಳಿಯನ್ನು ಏಜೆನ್ಸಿಗಳು ಬಿಟ್ಟಿಲ್ಲ. ಹೊರಗುತ್ತಿಗೆ ನೌಕರರ ಮೇಲಿನ ದೌರ್ಜನ್ಯದ ಮಾಹಿತಿ ಇದ್ದರೂ ಸರ್ಕಾರ ಕ್ರಮಕ್ಕೆ ಮುಂದಾಗದೆ ಹೊರಗುತ್ತಿಗೆ ವ್ಯವಸ್ಥೆ ಮುಂದುವರಿಸಿದೆ.

ಯಾರಿದ್ದಾರೆ?: ಡಾಟಾ ಎಂಟ್ರಿ ಆಪರೇಟರ್‌ಗಳು, ಚಾಲಕರು, ಅಟೆಂಡರ್‌ಗಳು, ಕಾವಲುಗಾರರು, ಸ್ವಚ್ಛತಾ ನೌಕರರು, ಲಿಫ್ಟ್‌ ಆಪರೇಟರ್‌ಗಳು ಸೇರಿದಂತೆ ‘ಡಿ’ ದರ್ಜೆಯ ನೌಕರರು ಈ ಗುತ್ತಿಗೆ ವ್ಯವಸ್ಥೆಯಲ್ಲಿದ್ದಾರೆ. ಇವರು ಇಲ್ಲದಿದ್ದರೆ ಆಡಳಿತ ಯಂತ್ರವೇ ಸ್ಥಗಿತಗೊಳ್ಳುತ್ತದೆ. ಗಂಟೆಗಳ ಪರಿವಿಲ್ಲದೆ ದುಡಿಯುವ ಈ ಸಿಬ್ಬಂದಿಯನ್ನು ಹೊರಗುತ್ತಿಗೆ ಅಡಕತ್ತರಿಯಲ್ಲಿ ಸಿಲುಕಿಸಿ ಅವರ ಭವಿಷ್ಯವನ್ನು ತ್ರಿಶಂಕು ಸ್ಥಿತಿಯಲ್ಲಿ ಇರಿಸಲಾಗಿದೆ.

ಟೆಂಡರ್‌ ಹಂತದಿಂದಲೇ ಶೋಷಣೆ ಆರಂಭವಾಗುತ್ತದೆ. ಟೆಂಡರ್ ಪಡೆದವರು, ಈ ಹಿಂದೆ ನೇಮಕಗೊಂಡಿದ್ದ ನೌಕರರಿಗೆ ಕರೆ ಮಾಡಿ, ‘ನಿಮ್ಮ ಮುಂದಿನ ಗುತ್ತಿಗೆದಾರರು ನಾವೇ’ ಎಂದು ಘೋಷಿಸಿ ನೋಂದಣಿ ಶುಲ್ಕ ಎಂದು 30 ಸಾವಿರದಿಂದ 50 ಸಾವಿರತನಕ  ವಸೂಲಿ ಮಾಡುತ್ತಾರೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಟವರ್‌ನಲ್ಲಿ ಸ್ವಚ್ಛತೆ, ಕಾವಲುಗಾರ ಕೆಲಸಕ್ಕೆ ನೇಮಕಗೊಂಡವರಿಂದ ಏಜೆನ್ಸಿಗಳು ಭದ್ರತಾ ಠೇವಣಿ ವಸೂಲಿ ಮಾಡಿರುವ ಆರೋಪವಿದೆ. ಇದೇ ಕೆಸಲಕ್ಕೆ ಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ₹ 10 ಸಾವಿರದಿಂದ 20 ಸಾವಿರ ಸಂಗ್ರಹಿಸಲಾಗುತ್ತದೆ. ಮಾಸಿಕ ವೇತನವೇ ₹ 8 ಸಾವಿರದಿಂದ ₹ 10 ಸಾವಿರ. ಹೀಗೆ ಸಂಗ್ರಹಿಸುವ ಮೂಲಕ 2–3 ತಿಂಗಳ ವೇತನವನ್ನು ನೌಕರರಿಂದ ಮುಂಚಿತವಾಗಿ ಏಜೆನ್ಸಿಗಳು ಕಿತ್ತು ಕೊಳ್ಳುತ್ತವೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಹೊರ ಗುತ್ತಿಗೆ ನೌಕರರಿಗೆ ತಿಂಗಳಿಗೆ ₹ 18 ಸಾವಿರದಿಂದ ₹ 20 ಸಾವಿರ ಸಂಬಳ ಬರುತ್ತದೆ. ಪಿಎಫ್‌, ಇಎಸ್‌ಐ ಕಡಿತವಾಗಿ ₹ 12,300 ಖಾತೆಗೆ ಬರುತ್ತದೆ. ಆ ಸಂಬಳದಲ್ಲಿ ಏಜೆನ್ಸಿಯವರು  ಕ್ಲಿನಿಕ್‌ ವಿಭಾಗದವರಿಂದ ₹ 2 ಸಾವಿರ, ನಾನ್‌ ಕ್ಲಿನಿಕ್‌ ನೌಕರರಿಂದ ₹ 3 ಸಾವಿರ ಕಮಿಷನ್ ಪಡೆಯುತ್ತಾರೆ. ಇದನ್ನು ಬಹಿರಂಗಪಡಿಸಿದರೆ ಕಿತ್ತು ಹಾಕುವುದಾಗಿ ಬೆದರಿಸುತ್ತಾರೆ’ ಎಂದೂ ನೌಕರರು ಅಳಲು ತೋಡಿಕೊಳ್ಳುತ್ತಾರೆ.

ಸುತ್ತೋಲೆಗೆ ಕಿಮ್ಮತ್ತಿಲ್ಲ: ದೂರುಗಳು ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತರು, ‘ಹೊರಗುತ್ತಿಗೆ ಸಿಬ್ಬಂದಿಗೆ ಗುತ್ತಿಗೆದಾರರು ನಿಯಮಾನುಸಾರ ವೇತನ, ಪಿಎಫ್, ಇಎಸ್‌ಐ ಪಾವತಿಸಬೇಕು. ತಪ್ಪಿದಲ್ಲಿ ಆಸ್ಪತ್ರೆ ಮುಖ್ಯಸ್ಥರು, ಜಿಲ್ಲಾಧಿಕಾರಿಗಳಿಗೆ ಏಜೆನ್ಸಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕು’ ಎಂದು ಕಳೆದ ಮಾರ್ಚ್ ನ ಲ್ಲಿ  ಸುತ್ತೋಲೆ ಹೊರಡಿಸಿದ್ದಾರೆ. ಆದರೂ ಶೋಷಣೆ ನಿಂತಿಲ್ಲ.

ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನೀಡುವಂತೆ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಆಗಸ್ಟ್ 9ರಂದು ಸುತ್ತೋಲೆ ಹೊರಡಿಸಿದ್ದರು. ಪಿಎಫ್ ಹಾಗೂ ಇಎಸ್‌ಐ ಮೊತ್ತವನ್ನು ಖಾತೆಗೆ ಪಾವತಿಸದ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಗುತ್ತಿಗೆದಾರರು ಈ ಎಚ್ಚರಿಕೆಗೆ ಕಿಮ್ಮತ್ತು ನೀಡುತ್ತಿಲ್ಲ.

ರಾಮಸ್ವಾಮಿ ಆಡಳಿತ ಸುಧಾರಣಾ ಆಯೋಗದ ವರದಿ ಆಧಾರದಲ್ಲಿ, ವಿವಿಧ ಇಲಾಖೆಗಳಲ್ಲಿ 2000 ಇಸವಿ ಏಪ್ರಿಲ್ 1ಕ್ಕೆ ಇದ್ದ ಖಾಲಿ ಹುದ್ದೆಗಳ ಪೈಕಿ ಶೇ 80ರಷ್ಟನ್ನು ರದ್ದುಪಡಿಸಲು ಸರ್ಕಾರ ಆದೇಶಿಸಿತ್ತು. ಇದಲ್ಲದೆ, ಚಾಲಕರು ಹಾಗೂ ಡಿ ವೃಂದದ ಖಾಲಿ ಇರುವ ಮತ್ತು ಮುಂದೆ ಖಾಲಿಯಾಗುವ ಹುದ್ದೆಗಳನ್ನು ಬಾಹ್ಯ ಮೂಲಗಳ ಮೂಲಕ ಪೂರೈಸುವಂತೆ 2005ರ ಜುಲೈನಲ್ಲೇ ಸುತ್ತೋಲೆ ಹೊರಡಿಸಿತ್ತು. ಎಲ್ಲ ಇಲಾಖೆಗಳನ್ನು ‘ಹೊರ ಗುತ್ತಿಗೆ’ ಪದ್ಧತಿ ಆವರಿಸಿಕೊಳ್ಳಲು ಈ ಸುತ್ತೋಲೆ ಅಡಿಪಾಯ ಹಾಕಿತ್ತು.

ಸುಳ್ಳು ಲೆಕ್ಕ: ನಿಗದಿತ ಸಂಖ್ಯೆಗಿಂತ ಶೇ 30ರಿಂದ 40ರಷ್ಟು ಕಮ್ಮಿ ನೌಕರರನ್ನು ನೇಮಿಸುವ ಏಜೆನ್ಸಿಗಳು, ನಿಗದಿತ ಸಂಖ್ಯೆಯ ನೌಕರರ ವೇತನದ ಹಣ ಪಡೆಯುತ್ತಿವೆ. ಇದಕ್ಕೆ ಪರೋಕ್ಷ ನೆರವು ನೀಡುವ ಅಧಿಕಾರಿಗಳ ಕಿಸೆ ತುಂಬುತ್ತದೆ. ಮೂರು ಪಾಳಿಯಲ್ಲಿ ಕಾವಲುಗಾರರ ಕೆಲಸ ನಡೆಯುತ್ತದೆ. ಮೂರು ಪಾಳಿಯ ಕೆಲಸವನ್ನು ಒಂದೂವರೆ ಪಾಳಿಯಂತೆ ಇಬ್ಬರಿಂದ ಮಾಡಿಸಿ, ಮೂವರ ವೇತನವನ್ನು ಏಜೆನ್ಸಿಗಳು ಲಪಟಾಯಿಸುತ್ತವೆ. ಅಂದರೆ, 60 ಮಂದಿಯನ್ನು ನೇಮಿಸಿಕೊಂಡ ಲೆಕ್ಕ ತೋರಿಸುತ್ತದೆ. ಆದರೆ, 40 ಮಂದಿಯನ್ನು ನಿಯೋಜಿಸುತ್ತವೆ. ವಾಸ್ತವವಾಗಿ ಅಷ್ಟು ನೌಕರರು ಕೆಲಸ ಮಾಡುತ್ತಿದ್ದಾರೆಯೇ? ಅವರಿಗೆ ಗುತ್ತಿಗೆದಾರರು ಸರಿಯಾಗಿ ವೇತನ ನೀಡುತ್ತಿದ್ದಾರಾ? ಪಿಎಫ್, ಇಎಸ್ಐ ಪಾವತಿಸಿದ್ದಾರಾ ಎಂದು ಪರಿಶೀಲಿಸುವ ವ್ಯವಸ್ಥೆ ಇಲ್ಲ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸುಮಾರು 1,600 ಡಾಟಾ ಎಂಟ್ರಿ ಆಪರೇಟರ್‌ಗಳು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. 10 ತಿಂಗಳಾದರೂ ಅವರಿಗೆ ನೇಮಕ ಆದೇಶವೂ ಇಲ್ಲ, ಸಂಬಳವೂ ಇಲ್ಲ. ಬಿಬಿಎಂಪಿ ಶಾಲೆಗಳಲ್ಲಿ 600ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಕಾಯಂ ಶಿಕ್ಷಕರಿಗಿಂತಲೂ ಹೆಚ್ಚು ಕೆಲಸವನ್ನು ನಮ್ಮಿಂದ ತೆಗೆದುಕೊಳ್ಳುತ್ತಾರೆ. ಆದರೆ, ವೇತನ ಮಾತ್ರ ತಿಂಗಳಿಗೆ ₹ 12,895. ₹ 16 ಸಾವಿರದಲ್ಲಿ ಪಿಎಫ್‌, ಇಎಸ್‌ಐ ಕಡಿತಗೊಳಿಸಿ ಇಷ್ಟನ್ನು ಖಾತೆಗೆ ಹಾಕಲಾಗುತ್ತಿದೆ. ಪ್ರೌಢಶಾಲಾ ಶಿಕ್ಷಕರಾದ ನಮಗೆ ಪೌರಕಾರ್ಮಿಕರಿಗಿಂತ ಕಡಿಮೆ ವೇತನ. ವೇತನ ಚೀಟಿ ನೀಡಿಲ್ಲ. ಭವಿಷ್ಯನಿಧಿ ಖಾತೆಯಲ್ಲಿ ಎಷ್ಟು ದುಡ್ಡಿದೆ ಎಂಬುದನ್ನೂ ತಿಳಿಸುವುದಿಲ್ಲ’ ಎಂದು ಹೊರಗುತ್ತಿಗೆ ಶಿಕ್ಷಕರೊಬ್ಬರು ಶೋಷಣೆಯ ಪರಿಯನ್ನು ಬಣ್ಣಿಸಿದರು.

ಇದು ಸರ್ಕಾರ ಮತ್ತು ಏಜೆನ್ಸಿ ನಡುವಿನ ಒಪ್ಪಂದ ಆಗಿರುವುದರಿಂದ ನೇಮಕಗೊಂಡವರ ಮೇಲೆ ಸರ್ಕಾರದ ಅಧಿಕಾರಿಗಳಿಗೆ ಹಿಡಿತ ಇಲ್ಲ. ಕೆಲಸ ಮಾಡಿಸಿಕೊಂಡು ಏಜೆನ್ಸಿಗಳಿಗೆ ಹಣ ಬಿಡುಗಡೆ ಹೊರತು ಈ ನೌಕರರ ಯಾವ ವಿಷಯದಲ್ಲೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೆಂದು, ಧ್ವನಿ ಎತ್ತಿದರೆ ಕೆಲಸಕ್ಕೆ ಸಂಚಕಾರ ಎಂಬ ಭಯದಿಂದ ಬಾಯಿ ಮುಚ್ಚಿ ಕುಳಿತುಕೊಳ್ಳಬೇಕಾದ ಅಸಹಾಯಕತೆ ಈ ಬಡಪಾಯಿಗಳದ್ದು. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವ ಕೆಲವು ನೌಕರರು ಏಜೆನ್ಸಿ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ಅದಕ್ಕೆ ನಾಲ್ವರನ್ನು ಏಜೆನ್ಸಿ ಮನೆಗೇ ಕಳುಹಿಸಿತ್ತು.

ಕಾನೂನು ಕ್ರಮ ಖಚಿತ

‘ಹೊರ ಗುತ್ತಿಗೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ, ಆಶಯ ಈಡೇರಿಲ್ಲ. ಖಾಲಿ ಹುದ್ದೆ ಭರ್ತಿ ಮಾಡದೆ, ಹೊರಗುತ್ತಿಗೆ ಪದ್ಧತಿಯಲ್ಲೇ ಹೆಚ್ಚು ಅವಧಿ ಆಡಳಿತ ನಡೆಸುವುದು ಸಾರ್ವಜನಿಕ ಹಿತದೃಷ್ಟಿಯಿಂದಲೂ ಸೂಕ್ತವಲ್ಲ. ಅರ್ಹರನ್ನು ನೇಮಕ ಮಾಡದಿದ್ದರೆ ದುರಾಡಳಿತಕ್ಕೂ ಕಾರಣವಾಗುತ್ತದೆ. ಉದ್ಯೋಗ ಅಗತ್ಯವೆಂಬ ಕಾರಣಕ್ಕೆ ಹೊರ ಗುತ್ತಿಗೆ ವ್ಯವಸ್ಥೆಗೆ ಬಂದು ಸಂಕಷ್ಟ ಅನುಭವಿಸುವವರಿಗೆ ನ್ಯಾಯ ಸಿಗಬೇಕು. ನೌಕರರ ಸಮಗ್ರ ಮಾಹಿತಿ ನೀಡುವಂತೆ ಕಾರ್ಮಿಕ ಇಲಾಖೆಗೆ ಆದೇಶಿಸಿದ್ದೇನೆ. ಕಾನೂನು ತಳಹದಿಯಲ್ಲಿ ನೌಕರರ ಹಕ್ಕುಗಳ ರಕ್ಷಣೆ ಆಗಬೇಕು. ಶೋಷಣೆಗೆ ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಖಚಿತ’
-ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ಲೋಕಾಯುಕ್ತ

ಪ್ರತಿಕ್ರಿಯಿಸಿ (+)