ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಗೋಮಾಳವೆಂಬ ಗೋಜಲು -ಸರ್ಕಾರದ ಬಳಿಯೇ ಇಲ್ಲ ಒತ್ತುವರಿ ಮಾಹಿತಿ

ದೂಳು ತಿನ್ನುತ್ತಿವೆ ದೂರುಗಳ ಕಡತ
Last Updated 7 ಮಾರ್ಚ್ 2021, 3:38 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ’ ರಾಜ್ಯದಲ್ಲಿ ಜಾರಿಯೇನೊ ಆಗಿದೆ. ಜೊತೆಗೇ ಗೋ ರಕ್ಷಣೆಯ ಹೊಣೆ ಸರ್ಕಾರದ ಹೆಗಲೇರಿದೆ. ಅದರ ಬೆನ್ನಲ್ಲೇ, ಗೋಶಾಲೆಗಳು ಮತ್ತು ಗೋಮಾಳಗಳ ವಿಚಾರ ಮುನ್ನೆಲೆಗೆ ಬಂದಿದೆ. ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕಾದ ಸವಾಲು ಪಶು ಸಂಗೋಪನೆ ಇಲಾಖೆಯ ಮುಂದೆ ಇದೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಮಾತ್ರಕ್ಕೆ, ವಯಸ್ಸಾದ, ಉಳುಮೆ ಮಾಡಲು ಸಾಧ್ಯವಾಗದ, ಸಾಕಲು ಹೊರೆ ಅನ್ನಿಸುವಂಥ ಗೋವುಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿಲ್ಲ. ಅವುಗಳನ್ನು ಗೋಶಾಲೆಗಳಿಗೆ ಬಿಡಲು ಅವಕಾಶವಿದೆ. ವಿಪರ್ಯಾಸ ಎಂದರೆ, ಸರ್ಕಾರದ ಬಳಿ ಸ್ವಂತ ಗೋಶಾಲೆಗಳೇ ಇಲ್ಲ. ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ 29 ಜಿಲ್ಲೆಗಳಲ್ಲಿ ವಿವಿಧ ಖಾಸಗಿ, ಸೇವಾ ಟ್ರಸ್ಟ್‌ಗಳು, ಮಠಗಳು ನಡೆಸುವ ಒಟ್ಟು 188 ಗೋಶಾಲೆಗಳಿವೆ. ಆ ಶಾಲೆಗಳಲ್ಲಿರುವ ಜಾನುವಾರುಗಳ ನಿರ್ವಹಣೆಗೆ ದಿನವೊಂದಕ್ಕೆ ಒಂದು ಜಾನುವಾರಿಗೆ ₹ 17ರಂತೆ (ಗರಿಷ್ಠ 200ಕ್ಕೆ) ಸರ್ಕಾರ ಅನುದಾನ ನೀಡುತ್ತಿದೆ.

ಮಾಹಿತಿಯೇ ಇಲ್ಲ: ಲಭ್ಯ ಅಂಕಿಅಂಶಗಳ ಪ್ರಕಾರ, ರಾಜ್ಯ ಸರ್ಕಾರದ ವಶದಲ್ಲಿ 17.59 ಲಕ್ಷ ಹೆಕ್ಟೇರ್‌ ಗೋಮಾಳವಿದೆ. ಲಕ್ಷಾಂತರ ಎಕರೆ ಗೋಮಾಳ ಒತ್ತುವರಿಯಾಗಿದೆ. ಆದರೆ ಒತ್ತುವರಿಯಾದ ಗೋಮಾಳ ಜಮೀನಿನ ಮಾಹಿತಿಯೇ ಸರ್ಕಾರದ ಬಳಿಯಿಲ್ಲ!

ಗೋಮಾಳ, ಗಾಯರಾಣ, ಹುಲ್ಲು ಬನ್ನಿ ಪ್ರದೇಶಗಳಲ್ಲಿ ಭೂರಹಿತರು ಸಾಗುವಳಿ ಮಾಡಿದರೆ ಅಂಥವರ ಪೂರ್ವಾಪರಗಳನ್ನು ಪರಿಶೀಲಿಸಿ, ಸಾಗುವಳಿ ಚೀಟಿ ನೀಡುವ ಪರಿಪಾಟ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ಪ್ರತ್ಯೇಕ ಕಾನೂನು ಮತ್ತು ಭೂ ಮಂಜೂರಾತಿ ಸಮಿತಿಗಳಿವೆ.

ಆದರೆ, ಅಕ್ರಮವಾಗಿ ಸಾಗುವಳಿ ಚೀಟಿ ಮಾಡಿಸಿಕೊಂಡು ಈ ಜಮೀನನ್ನು ರಾಜಕಾರಣಿಗಳಿಂದ ಹಿಡಿದು, ಕಂದಾಯ ಇಲಾಖೆಯ ನೌಕರರವರೆಗೆ ಎಲ್ಲರೂ ಸ್ವಂತಕ್ಕೆ ಬಳಸಿಕೊಂಡಿರುವ ಉದಾಹರಣೆಗಳಿವೆ. ಇವುಗಳ ಈಗಿನ ಮೌಲ್ಯ ನೂರಾರು ಕೋಟಿ ರೂಪಾಯಿ.

ತೆರವಿಗೆ ಇಲ್ಲ ಇಚ್ಛಾಶಕ್ತಿ: ಮಂಡ್ಯ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗೋಮಾಳಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಹಲವೆಡೆ ಶಾಲೆಗಳಿಗೆ ಜಾಗ ನೀಡಲಾಗಿದೆ. ಸ್ಮಶಾನಗಳಾಗಿಯೂ ಬಳಕೆಯಾಗುತ್ತಿವೆ. ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಒತ್ತುವರಿಯಾದ ಎಕರೆಗಟ್ಟಲೆ ಜಾಗದಲ್ಲಿ ಅನುಕೂಲಸ್ಥರು ಕಾಫಿ, ಟೀ ಎಸ್ಟೇಟ್‌ ಮಾಡಿಕೊಂಡಿದ್ದಾರೆ. ಅತಿಕ್ರಮಣಕ್ಕೆ ಸಂಬಂಧಿಸಿದ ಹಲವು ದೂರುಗಳು ಕಂದಾಯ ಇಲಾಖೆಯ ಕಚೇರಿಗಳಲ್ಲಿ ದೂಳು ತಿನ್ನುತ್ತಿವೆ. ಕೆಲವು ಪ್ರಕರಣಗಳು ನ್ಯಾಯಾಲಯಗಳಲ್ಲಿವೆ. ತೆರವು ಮಾಡುವಂತೆ ಕೋರ್ಟ್‌ ಆದೇಶ ನೀಡಿದರೂ ಕಾರ್ಯಾಚರಣೆಗೆ ಸ್ಥಳೀಯಾಡಳಿತಗಳು ಮುಂದಾಗುತ್ತಿಲ್ಲ ಎಂಬ ಆರೋಪಗಳಿವೆ.

ರಾಜ್ಯ ಸರ್ಕಾರ ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತಂದು 192ಎ ಅನ್ವಯ ಒತ್ತುವರಿದಾರರನ್ನು ತೆರವುಗೊಳಿಸಲು ಅವಕಾಶ ಕಲ್ಪಿಸಿದೆ.

ಸರ್ಕಾರಿ ಭೂಮಿ ಒತ್ತುವರಿ ತಡೆಗಟ್ಟಲು ಎ.ಟಿ. ರಾಮಸ್ವಾಮಿ, ಬಾಲಸುಬ್ರಹ್ಮಣ್ಯ ನೇತೃತ್ವದ ಸಮಿತಿಗಳ ವರದಿಗಳ ಅನ್ವಯ ಕೋರ್ಟ್‌ ಆದೇಶದಂತೆ ಸರ್ಕಾರಿ ಭೂಸಂರಕ್ಷಣೆ ಮತ್ತು ಒತ್ತುವರಿ ಜಮೀನು ತೆರವುಗೊಳಿಸಲು 2013ರಲ್ಲಿಯೇ ಅಂದಿನ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಆ ಆದೇಶ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.

ಅಕ್ರಮ– ಸಕ್ರಮ: ‘1978ಕ್ಕೆ ಮುಂಚಿನ ಗೋಮಾಳ ಜಮೀನು ಸಾಗುವಳಿ ಪ್ರಕರಣಗಳು ಸಕ್ರಮವಾಗಿವೆ. ಆದರೆ, 1989ಕ್ಕೆ ಮುಂಚಿನ ಪ್ರಕರಣಗಳಲ್ಲಿ ನಮೂನೆ 50ರ ಅಡಿ ಹಾಗೂ 1999ಕ್ಕೆ ಮೊದಲಿನ ನಮೂನೆ 53 ಅಡಿ ಪ್ರಕರಣಗಳಲ್ಲಿ ಅರ್ಜಿಗಳು ವಿಲೇವಾರಿಯಾಗಿಲ್ಲವೆಂದು 2017ರಲ್ಲಿ ರಾಜ್ಯ ಸರ್ಕಾರ ಗೋಮಾಳ ಜಮೀನು ಸಾಗುವಳಿಯನ್ನೂ ಸಕ್ರಮ ಮಾಡುವ ನಿರ್ಣಯ ತೆಗೆದುಕೊಂಡಿತ್ತು. ಸಂಪುಟದ ತೀರ್ಮಾನ ಆಧರಿಸಿ ಭೂಮಂಜೂರಾತಿ ಕಂದಾಯ ನಿಯಮಾವಳಿಯಲ್ಲಿ ತಿದ್ದುಪಡಿ ಮಾಡಿ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ.

***

‘ಗೋಮಾಳ ಒತ್ತುವರಿ ತೆರವು’:ರಾಜ್ಯದ ಕಂದಾಯ ಸಚಿವರು ಮತ್ತು ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಗೋಮಾಳ ಒತ್ತುವರಿ ಆಗಿದ್ದರೆ ತೆರವುಗೊಳಿಸುವ ಬಗ್ಗೆ ಮಾತನಾಡಿದ್ದೇನೆ. ಈ ಬಾರಿಯ ಬಜೆಟ್ ಪಶುಸಂಗೋಪನೆ ಇಲಾಖೆಗೆ ಆಶಾದಾಯಕವಾಗಿರಲಿದೆ. ಬಜೆಟ್‌ ಅಧಿವೇಶನದ ನಂತರ ತಾಲ್ಲೂಕಿಗೊಂದು ಗೋಶಾಲೆ ಆರಂಭಿಸುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು.

- ಪ್ರಭು ಚವಾಣ್‌, ಪಶು ಸಂಗೋಪನಾ ಸಚಿವ

***

ಕಡತದಲ್ಲಷ್ಟೆ ಆದೇಶ!:

‘ಕರ್ನಾಟಕ ಭೂ ಕಂದಾಯ ನಿಯಮಾವಳಿಗಳು 1966 ನಿಯಮ 97 (1)ರ ಪ್ರಕಾರ ಪ್ರತಿಯೊಂದು ಗ್ರಾಮದಲ್ಲಿ ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್‌ ಗೋಮಾಳ, ಗಾಯರಾಣ, ಹುಲ್ಲು ಬನ್ನಿ ಜಮೀನನ್ನು ಕಾಯ್ದಿರಿಸಬೇಕು. ಅದಕ್ಕಿಂತ ಹೆಚ್ಚಿನ ಭೂಮಿ ಲಭ್ಯ ಇದ್ದರೆ ಮಾತ್ರ ಕರ್ನಾಟಕ ಭೂ ಕಂದಾಯ ಕಾಯ್ದೆ 94ಎ, ಬಿ ಮತ್ತು ಸಿ ಪ್ರಕಾರ ಅನಧಿಕೃತವಾಗಿ ಸಾಗುವಳಿ ಮಾಡುವವರಿಗೆ ಸಕ್ರಮಗೊಳಿಸಲು ಅವಕಾಶವಿದೆ ಎಂದು 2006 ನ. 18ರಂದು ಹೈಕೋರ್ಟ್‌ ಆದೇಶ ನೀಡಿದೆ. ಈ ಆದೇಶದ ಮೇರೆಗೆ 2007ರಲ್ಲಿ ಆದೇಶ ಹೊರಡಿಸಿದ್ದ ಸರ್ಕಾರ, 1966 ನಿಯಮ 97 (1)ರ ಪ್ರಕಾರ ಗೋಮಾಳ ಇದೆಯೇ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು. ಹೆಚ್ಚಿದ್ದರೆ ಮಾತ್ರ ಆ ಜಾಗದಲ್ಲಿ ಅಕ್ರಮವಾಗಿ ಸಾಗುವಳಿ ಮಾಡುವವರು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಬಹುದು. ಅದಕ್ಕಿಂತ ಕಡಿಮೆ ಇದ್ದರೆ ಸಕ್ರಮಕ್ಕೆ ಅವಕಾಶ ಇಲ್ಲ. ಖಾಸಗಿ ಸಂಸ್ಥೆಗೆ, ವ್ಯಕ್ತಿಗೆ ಅಥವಾ ಗಣಿಗಾರಿಕೆಗೆ ಮಂಜೂರು ಮಾಡಬಾರದು ಎಂದು ಕಂದಾಯ ಇಲಾಖೆಯ ಆದೇಶದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT