ಶನಿವಾರ, ಸೆಪ್ಟೆಂಬರ್ 18, 2021
29 °C

ಒಳನೋಟ: ಕಣ್ಣಿಗೆ ಕಾಣದ ‘ಕಲ್ಯಾಣ’

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಎಂಬುದು ದಾಸ್ಯದ ಸಂಕೇತ ಎಂಬ ಕಾರಣಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿ ಸೆ. 17ಕ್ಕೆ ಎರಡು ವರ್ಷ ತುಂಬುತ್ತಿದೆ. ‘ಅಭಿವೃದ್ಧಿ ಪರ್ವ ಆರಂಭಿಸುತ್ತೇವೆ’ ಎಂದು ಹೇಳಿದ್ದ ರಾಜ್ಯ ಸರ್ಕಾರ, 371 (ಜೆ) ಕೋಶವನ್ನು ಬೆಂಗಳೂರಿನಿಂದ ಕಲಬುರ್ಗಿಗೆ ಸ್ಥಳಾಂತರಿಸುವಂತಹ ಸಣ್ಣ ಕೆಲಸವನ್ನೂ ಇದುವರೆಗೆ ಮಾಡಿಲ್ಲ!

ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತಂದು ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಎಂಟು ವರ್ಷಗಳಾಗುತ್ತಿವೆ. ಆದರೆ ಕೇಂದ್ರ ಸರ್ಕಾರ ಈವರೆಗೂ ವಿಶೇಷ ಅನುದಾನ ಕೊಟ್ಟಿಲ್ಲ.

ಇನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಘೋಷಿಸಿದಷ್ಟು ಅನುದಾನ ಕೊಡು ವುದು ಹೋಗಲಿ, ಎರಡು ವರ್ಷದಿಂದ ಜನಪ್ರತಿನಿಧಿಗಳು–ಪರಿಣತರನ್ನೊಳಗೊಂಡ ಆಡಳಿತ ಮಂಡಳಿಯನ್ನೇ ರಚಿಸಿಲ್ಲ. ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ಇಲ್ಲಗಳ ಸರಮಾಲೆ ಒಂದೆಡೆಯಾ ದರೆ, ಕೆಕೆಆರ್‌ಡಿಬಿಗೆ ರಾಜ್ಯ ಸರ್ಕಾರ 2013–14ರಿಂದ ಈ ವರೆಗೆ ₹ 8,878.33 ಕೋಟಿ ವಿಶೇಷ ಅನುದಾನಘೋಷಿಸಿದೆ. ಆ ಪೈಕಿ ₹ 6,209.07 ಕೋಟಿ ಬಿಡುಗಡೆಯಾಗಿದ್ದು, ₹ 5,965.97 ಕೋಟಿ (ಕಳೆದ ಆಗಸ್ಟ್31ರವರೆಗೆ) ವೆಚ್ಚವಾಗಿದೆ. ನಂಜುಂಡಪ್ಪ ವರದಿ ಅನ್ವಯ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ರಾಜ್ಯ ಸರ್ಕಾರ ಈ ವರೆಗೆ ರಾಜ್ಯದ ಹಿಂದುಳಿದ ತಾಲ್ಲೂಕುಗಳಿಗೆ ₹ 22 ಸಾವಿರ ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಿದ್ದು, ಆ ಪೈಕಿ₹ 4 ಸಾವಿರ ಕೋಟಿಗೂ ಹೆಚ್ಚು ಈ ಭಾಗಕ್ಕೇ ವೆಚ್ಚವಾಗಿದೆ. ಆದರೂ,ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಭಾಗದ ಜಿಲ್ಲೆಗಳು ಇನ್ನೂ ಕೆಳಮಟ್ಟದಲ್ಲಿಯೇ ಇವೆ.

ಜನರ ಜೀವನಮಟ್ಟ ಅಳೆಯುವ ಹತ್ತು ಮಾನದಂಡ ಇಟ್ಟು ಕೊಂಡು ನೀತಿ ಆಯೋಗ ನಡೆಸಿದ 2021 ಸಾಲಿನ ಅಧ್ಯಯನದ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ ‘ಬಡವರ’ ಸಂಖ್ಯೆ (Headcount Ratio) ಶೇ 1.9ರಷ್ಟಿದ್ದರೆ, ಯಾದಗಿರಿ ಜಿಲ್ಲೆಯಲ್ಲಿ ಅವರ ಪ್ರಮಾಣ ಶೇ 49ರಷ್ಟಿದೆ!

ಅಭಿವೃದ್ಧಿ ಆದ್ಯತಾ ವಲಯದ ನಿರ್ಲಕ್ಷ್ಯ: ‘ಕೆಕೆಆರ್‌ಡಿಬಿಯ ಹೆಚ್ಚಿನ ಅನುದಾನ ರಸ್ತೆ ಮತ್ತು ಕಟ್ಟಡ ನಿರ್ಮಾಣಕ್ಕೇ ವ್ಯಯವಾಗುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ ಸೃಜನೆಯಂತಹ ಮಾನವ ಸಂಪನ್ಮೂಲ ಅಭಿವೃದ್ಧಿಯ ಆದ್ಯತಾ ವಲಯವನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಅಪೌಷ್ಟಿಕತೆ, ರಕ್ತ ಹೀನತೆ, ವಲಸೆ ಸಮಸ್ಯೆಗೆ ಮುಕ್ತಿ ದೊರೆತಿಲ್ಲ. ಕೆಕೆಆರ್‌ಡಿಬಿಗೆ ‘ಮಿನಿ ಸರ್ಕಾರ’ದಂತೆ ಕೆಲಸ ಮಾಡುವ ಅಧಿಕಾರ ಇದ್ದರೂ ಅದನ್ನು ಮಾಡು ತ್ತಿಲ್ಲ. ಮಾನವ ಸಂಪನ್ಮೂಲ ಸದ್ಬಳಕೆ ಮತ್ತು ಯುವಜನತೆಯಲ್ಲಿ ಕೌಶಲ ಹೆಚ್ಚಿಸುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಸ್ಥಾಪಿಸಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವೂ, ತಾಲ್ಲೂಕುಗಳಲ್ಲಿ ಸಾಂಸ್ಕೃತಿಕ ಭವನಗಳನ್ನು ನಿರ್ಮಿಸುತ್ತಿ ರುವುದು ದುರಂತವೇ ಸರಿ’ ಎನ್ನುತ್ತಾರೆ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ, ರಾಯಚೂರಿನ ರಜಾಕ್‌ ಉಸ್ತಾದ್‌.

ಪ್ರಕೃತಿ ಸಹಜ ಅತಿವೃಷ್ಟಿ–ಅನಾವೃಷ್ಟಿಯ ಹಾವಳಿ ಒಂದೆಡೆಯಾ ದರೆ, ರಾಜಕೀಯ ಪ್ರಾತಿನಿಧ್ಯದ ಕೃತಕ ಬರವನ್ನೂ ಈ ಸರ್ಕಾರ ಸೃಷ್ಟಿಸಿದೆ. ರಾಜ್ಯ ಸಂಪುಟದಲ್ಲಿ ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲ.

ಕಲ್ಯಾಣ ಕರ್ನಾಟಕ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಈ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಘೋಷಿಸಿದ್ದರು. ಅದು ಇನ್ನೂ ಈಡೇರಿಲ್ಲ. ಕೆಎಟಿ ಕಲಬುರ್ಗಿ ಪೀಠ ಕಾರ್ಯಾರಂಭ ಮಾಡಿದೆ. ಆದರೆ, ಮಾಹಿತಿ ಆಯೋಗಕ್ಕೆ ಈಗಷ್ಟೇ ಜಾಗ ಗುರುತಿಸಲಾಗಿದೆ.

ಮೀಸಲಾತಿ, ನೌಕರಿ ಫಲ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ್ದರ ಫಲ ಈ ಭಾಗದವರಿಗೆ ಸಿಗುತ್ತಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳೂ ವೈದ್ಯಕೀಯ ಶಿಕ್ಷಣ ಪಡೆಯುವಂತಹ ಅವಕಾಶದ ಹೆಬ್ಬಾಗಿಲು ತೆರೆದಿದೆ. ಈ ವರೆಗೆ 30 ಸಾವಿರದಷ್ಟು ಜನರಿಗೆ ಸರ್ಕಾರಿ ನೌಕರಿ ಸಿಕ್ಕಿದೆ. 

ಅನುದಾನ ಕೊಡಿ ಸ್ವಾಮಿ: ಕಲ್ಯಾಣ ಕರ್ನಾಟಕ ಪ್ರದೇಶವನ್ನು 2030ರ ವೇಳೆಗೆ ಸಮಗ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಗುರಿ ಹಾಕಿಕೊಂಡಿದ್ದು, ಇದಕ್ಕಾಗಿ ₹ 1,500 ಕೋಟಿಗಳಿಂದ ₹ 3 ಸಾವಿರ ಕೋಟಿ ಮೊತ್ತದ ವಿಶೇಷ ಅನುದಾನವನ್ನು ಐದು ವರ್ಷಗಳವರೆಗೆ ಕೊಡಿ ಎಂದು ಪ್ರಸಕ್ತ ವರ್ಷದ ಫೆಬ್ರುವರಿ 15ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದರು.

‘ನಂಜುಂಡಪ್ಪ ಸಮಿತಿ ಗುರುತಿಸಿದ್ದ ರಾಜ್ಯದ ಹಿಂದುಳಿದ 114 ತಾಲ್ಲೂಕುಗಳ ಪೈಕಿ 29 ತಾಲ್ಲೂಕುಗಳು ಈ ಭಾಗದಲ್ಲಿವೆ. ತೆಲಂಗಾಣ 371 (ಡಿ) ಮತ್ತು ವಿದರ್ಭ 371 (2) ತಿದ್ದುಪಡಿಯನ್ನು ಮಾದರಿಯಾಗಿಟ್ಟುಕೊಂಡೇ 371 (ಜೆ) ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಇದು ಸತತ ಬರ ಪೀಡಿತ ಪ್ರದೇಶ. ಇಲ್ಲಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಅತ್ಯಂತ ಕೆಳಮಟ್ಟದಲ್ಲಿದೆ. ಈ ಭಾಗದ ಜನರ ಜೀವನ ಮಟ್ಟ ಸುಧಾರಣೆ ಹಾಗೂ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ವಿಶೇಷ ಅನುದಾನದ ಅವಶ್ಯಕತೆ ಇದೆ’ ಎಂದು ಉಲ್ಲೇಖಿಸಿದ್ದ ಅವರು, ಈ ಭಾಗ ಹಿಂದುಳಿದಿರುವಿಕೆ ಬಗ್ಗೆ ನೀತಿ ಆಯೋಗದ ನೀಡಿದ್ದ ವರದಿಯನ್ನೇ ಈ ಪತ್ರದೊಂದಿಗೆ ಲಗತ್ತಿಸಿದ್ದರು.

‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ’ ಮಾಡಲು ವಿಶೇಷ ಅನುದಾನ ಕೊಡಿ ಎಂದು ಕೇಳಿದ್ದರು. ಆದರೆ, ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುತ್ತವೆ ರಾಜ್ಯ ಸರ್ಕಾರದ ಮೂಲಗಳು.

ಹೊಸ ಸಮೀಕ್ಷೆ ನಡೆಯಲಿ: ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಡಾ.ಡಿ.ಎಂ. ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ನೀಡಿದ್ದ ವರದಿಯ ಮಾನದಂಡವನ್ನೇ ’ಕೆಕೆಆರ್‌ಡಿಬಿ’ಯ ಅನುದಾನ ಬಳಕೆಗೆ ಅನುಸರಿಸಲಾಗುತ್ತಿದೆ. 2000ನೇ ಇಸ್ವಿಯಲ್ಲಿ ರಚನೆಯಾಗಿದ್ದ ಈ ಸಮಿತಿ 2002ರಲ್ಲಿ ವರದಿ ನೀಡಿತ್ತು. ಎರಡು ದಶಕಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. 

‘ನಂಜುಂಡಪ್ಪ ವರದಿ ಬಂದಾಗ ಗಂಗಾವತಿ ತಾಲ್ಲೂಕು ಒಂದೇ ಇತ್ತು. ಅದು ಹಿಂದುಳಿದ ತಾಲ್ಲೂಕು ಪಟ್ಟಿಯಲ್ಲಿತ್ತು. ಈಗ ಅಲ್ಲಿ ಕನಕಗಿರಿ, ಕಾರಟಗಿ ಎರಡು ತಾಲ್ಲೂಕು ಆಗಿವೆ. ಗಂಗಾವತಿ ಪಟ್ಟಣ ಮುಂದುವರೆದಿರಬಹುದು. ಆದರೆ, ಗ್ರಾಮೀಣ ಪ್ರದೇಶದ ಸ್ಥಿತಿ ಇನ್ನೂ ಹಾಗೇ ಇದೆ. ಮೂರೂ ತಾಲ್ಲೂಕು ಸೇರಿ ಕೊಡುತ್ತಿರುವ ಅನುದಾನ ಕಡಿಮೆ ಇದೆ. ಅತೀ ಹಿಂದುಳಿದ ತಾಲ್ಲೂಕಿಗೆ ಸಿಗುತ್ತಿರುವ ಅನುದಾನ ಇದಕ್ಕೆ ಮೂರುಪಟ್ಟು ಹೆಚ್ಚಿಗೆ ಇದೆ. ಅಂದು ಅತಿ ಹಿಂದುಳಿದ ತಾಲ್ಲೂಕುಗಳು ಈಗ ನೀರಾವರಿ–ಕೈಗಾರಿಕಾ ಅಭಿವೃದ್ಧಿಯ ಕಾರಣ ಮುಂದುವರೆದಿವೆ. ಆದರೂ, ಆ ತಾಲ್ಲೂಕುಗಳಿಗೆ ಹೆಚ್ಚಿನ ಅನುದಾನ ಹೋಗುತ್ತಿದೆ. ಇಂತಹ ತಾರತಮ್ಯ ಹೋಗಲಾಡಿಸಲು ರಾಜ್ಯ ಸರ್ಕಾರ ಇನ್ನೊಮ್ಮೆ ಆರ್ಥಿಕ ಸಮೀಕ್ಷೆ ನಡೆಸಿ ಹೊಸ ಮಾನದಂಡ ಅಳವಡಿಸಿಕೊಳ್ಳಬೇಕು’ ಎನ್ನುವುದು ರಜಾಕ್‌ ಉಸ್ತಾದ್‌ ಅವರ ಒತ್ತಾಯ.

ನಂಜುಂಡಪ್ಪ ವರದಿ ಅನುಷ್ಠಾನ ಮೇಲ್ವಿಚಾರಣಾ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರೂ ಆಗಿದ್ದ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ. ನಮೋಶಿ, ‘ನಾನು ಅಧ್ಯಕ್ಷನಾಗಿದ್ದಾಗಲೇ ಪುನರ್‌ ಸಮೀಕ್ಷೆ ನಡೆಸಬೇಕು ಎಂಬ ಚರ್ಚೆ ನಡೆದಿತ್ತು. ನಮ್ಮ ಸರ್ಕಾರ ಹೋದ ನಂತರ ಅದು ಅರ್ಧಕ್ಕೆ ನಿಂತಿತು. ಹೊಸ ಸಮೀಕ್ಷೆ ನಡೆಯಬೇಕು’ ಎನ್ನುತ್ತಾರೆ.

ಯಾರು ಏನಂತಾರೆ?

ನಂಜುಂಡಪ್ಪ ವರದಿಯ ಮಾನದಂಡದಂತೆ ಅನುದಾನ ವೆಚ್ಚಮಾಡುತ್ತಿದ್ದೇವೆ. ಕಳಪೆ ಕಾಮಗಾರಿಗೆ ಅವಕಾಶ ನೀಡಿಲ್ಲ.ಕಳೆದ ವರ್ಷ ಕೋವಿಡ್‌ ಸಂಕಷ್ಟದ ಮಧ್ಯೆಯೂ ಮಂಡಳಿಯ ಇತಿಹಾಸದಲ್ಲೇ ಅತೀ ಹೆಚ್ಚು ಕೆಲಸ ಮಾಡಿದ್ದೇವೆ/

-  ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ಡಿಬಿ ಅಧ್ಯಕ್ಷ

ಆಡಳಿತಾತ್ಮಕ ಕಾರಣಗಳಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ಕೆಕೆಆರ್‌ಡಿಬಿ ಅಧ್ಯಕ್ಷರಾಗಬೇಕು ಎಂಬ ನಿಯಮವನ್ನು ಕಾಂಗ್ರೆಸ್ ಸರ್ಕಾರ ರೂಪಿಸಿತ್ತು. ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡುವ ತಿದ್ದುಪಡಿ ತಂದು ಬಿಜೆಪಿ ಸರ್ಕಾರ ಮಂಡಳಿಯನ್ನು ಅಧೋಗತಿಗೆ ಇಳಿಸಿದೆ.

- ಶರಣಪ್ರಕಾಶ ಪಾಟೀಲ, ಮಾಜಿ ಅಧ್ಯಕ್ಷ, ಕೆಕೆಆರ್‌ಡಿಬಿ

ಮೀಸಲಾತಿ ನಿಯಮ ಪಾಲನೆ ಇಲ್ಲ

371 (ಜೆ) ಮೀಸಲಾತಿಯಿಂದ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಇದ್ದರೂ ಅನ್ಯಾಯ ಮುಂದುವರೆದಿದೆ.ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ 8ರಷ್ಟು ಮೀಸಲಾತಿ ನೀಡುವ ನಿಯಮ ಪಾಲನೆಯಾಗುತ್ತಿಲ್ಲ.

–ಶಶೀಲ್‌ ಜಿ.ನಮೋಶಿ, ವಿಧಾನ ಪರಿಷತ್‌ ಸದಸ್ಯ, ಕಲಬುರ್ಗಿ

ಅನುದಾನ ಹೆಚ್ಚಬೇಕು

ಗುಡಿಸಲುವಾಸಿಗಳಿಗೆ ಮನೆ, ಶೌಚಾಲಯ, ಎಲ್ಲರಿಗೂ ಅಡುಗೆ ಅನಿಲ ಪೂರೈಕೆ, ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ಸಿಗಬೇಕು. ರಾಜ್ಯದ ಬಜೆಟ್‌ ಗಾತ್ರಕ್ಕೆ ತಕ್ಕಂತೆ ’ಕೆಕೆಆರ್‌ಡಿಬಿ‘ಗೆ ಹಂಚಿಕೆ ಮಾಡುವ ಅನುದಾನ ಹೆಚ್ಚಿಸಬೇಕು

- ರಜಾಕ್‌ ಉಸ್ತಾದ್‌, ಉಪಾಧ್ಯಕ್ಷ, ಹೈ–ಕ ಹೋರಾಟ ಸಮಿತಿ

ಬಿಜೆಪಿ ಸರ್ಕಾರದಿಂದ ಅನ್ಯಾಯ

ಬಿಜೆಪಿಯು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಲ್ಯಾಣ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಹೊಸ ಯೋಜನೆ ನೀಡುವುದು ಹೋಗಲಿ, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನೀಡಿದ ಯೋಜನೆಗಳನ್ನೂ ಕಿತ್ತುಕೊಳ್ಳಲಾಗಿದೆ.

– ಪ್ರಿಯಾಂಕ್‌ ಖರ್ಗೆ, ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ

ಹಳೇ ಅಂಕಿ–ಅಂಶದಲ್ಲೇ ಅನುದಾನ

ನಂಜುಂಡಪ್ಪ ವರದಿ ಭಗವದ್ಗೀತೆ ಇದ್ದಂತೆ. ಆದರೆ, 2002ರಲ್ಲಿಯ ಅಂಕಿಅಂಶ ಇಟ್ಟುಕೊಂಡು ಈಗಲೂ ಅನುದಾನ ಹಂಚಿಕೆ ಎಷ್ಟು ಸರಿ? ಅಪೌಷ್ಟಿಕತೆಯ ಪ್ರಮಾಣ ಆಗಿನದಕ್ಕಿಂತ ಈಗ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕಕ್ಕೇ ಸೀಮಿತವಾಗಿ ಗ್ರಾಮಗಳನ್ನು ಘಟಕವಾಗಿ ಇಟ್ಟುಕೊಂಡು ಹೊಸದಾಗಿ ಅಧ್ಯಯನ ನಡೆಸಿ ಅದರ ಆಧಾರದ ಮೇಲೆ ಅನುದಾನ ಹಂಚಿಕೆಯಾಗಬೇಕು

– ಪ್ರೊ.ಸಂಗೀತಾ ಕಟ್ಟಿಮನಿ, ಅರ್ಥಶಾಸ್ತ್ರ ಉಪನ್ಯಾಸಕಿ, ಕಲಬುರ್ಗಿ

₹100 ಕೋಟಿ ಬಿಡುಗಡೆ

ಸಂಘಕ್ಕೆ ರಾಜ್ಯ ಸರ್ಕಾರ ₹ 300 ಕೋಟಿ ಘೋಷಿಸಿದ್ದು, ಈವರೆಗೆ ₹ 100 ಕೋಟಿ ಬಿಡುಗಡೆ ಮಾಡಿದೆ. ಯುಪಿಎಸ್‌ಸಿ ಪರೀಕ್ಷೆ, ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ.80 ಕಡೆಗಳಲ್ಲಿ ತಲಾ ಗರಿಷ್ಠ ₹ 22 ಲಕ್ಷ ವೆಚ್ಚದಲ್ಲಿ ಸಾಂಸ್ಕೃತಿಕ ಭವನವನ್ನು ನಿರ್ಮಿಸಲಾಗುತ್ತಿದೆ

- ಬಸವರಾಜ ಪಾಟೀಲ ಸೇಡಂ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ, ಸಾಂಸ್ಕೃತಿಕ ಸಂಘದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು