ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕ್ಷೇತ್ರದಲ್ಲಿ ನಾಪತ್ತೆ; ಜಾಲತಾಣದಲ್ಲಿ ಪ್ರತ್ಯಕ್ಷ!

ಕೋವಿಡ್‌ ಕಾಲದಲ್ಲಿ ಜನರಿಂದ ದೂರವಾಗಿರುವ ಶಾಸಕರು–ಸಂಸದರು l ಕೆಲವರಷ್ಟೇ ಸಕ್ರಿಯ
Last Updated 1 ಮೇ 2021, 22:02 IST
ಅಕ್ಷರ ಗಾತ್ರ

ಬೆಂಗಳೂರು ಗ್ರಾಮಾಂತರ: ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮತ್ತು ರಾಮನಗರ ಜಿಲ್ಲೆಯ ಬೆರಳೆಣಿಕೆಯ ಜನಪ್ರತಿನಿಧಿಗಳು ಕೋವಿಡ್‌ ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದು, ಉಳಿದವರು ನಿಷ್ಕ್ರಿಯರಾಗಿದ್ದಾರೆ. ಕೆಲವು ಜನಪ್ರತಿನಿಧಿಗಳು ಸಭೆ, ಸಮಾರಂಭ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗುತ್ತಿದ್ದು, ಆಸ್ಪತ್ರೆಯಲ್ಲಿನ ಸೋಂಕಿತರನ್ನು ಸಂತೈಸುವ ಕೆಲಸ ಮಾಡುತ್ತಿಲ್ಲ.

ತುಮಕೂರು ಜಿಲ್ಲೆಯ ಶಿರಾ ಶಾಸಕ ಸಿ.ಎಂ. ರಾಜೇಶ್‌ಗೌಡ ಅವರ ಪ್ರಯತ್ನದ ಫಲವಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು 50ರಿಂದ 100ಕ್ಕೆ ಹೆಚ್ಚಿಸಲಾಗಿದೆ. ಸ್ವಂತ ಹಣದಿಂದ 40 ಹಾಸಿಗೆ ಖರೀದಿಸಿ ಕೊಟ್ಟಿದ್ದಾರೆ. ಕುಣಿಗಲ್ ಶಾಸಕ ಡಾ.ಎಚ್.ಡಿ. ರಂಗನಾಥ್ ಪ್ರತಿದಿನವೂ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸುತ್ತಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್ ಸ್ವಂತ ಹಣದಿಂದ 4 ಆಂಬುಲೆನ್ಸ್ ಕೊಡಿಸಿದ್ದಾರೆ. ತುರುವೇಕೆರೆ ಶಾಸಕ ಮಸಾಲ ಜಯರಾಮ್ ತಾಲ್ಲೂಕು ಆಸ್ಪತ್ರೆಗೆ ಸ್ವಂತ ಹಣದಲ್ಲಿ ಆಮ್ಲಜನಕದ 10 ಸಿಲಿಂಡರ್‌ಗಳನ್ನು ಕೊಡಿಸಿದ್ದಾರೆ. ಜಿಲ್ಲೆಯ ಉಳಿದ ಶಾಸಕರು ಮನೆ ಬಿಟ್ಟು ಹೊರಗೆ ಬರುತ್ತಿಲ್ಲ.

ಚನ್ನಪಟ್ಟಣ ಶಾಸಕ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಗಡಿ ಶಾಸಕ ಎ. ಮಂಜುನಾಥ್‌ ಸೋಂಕಿಗೆ ಒಳಗಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಹೋಮ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಕನಕಪುರ ಶಾಸಕ ಡಿ.ಕೆ. ಶಿವಕುಮಾರ್ ರಾಜ್ಯ ರಾಜಕಾರಣದಲ್ಲಿ ಕ್ರಿಯಾಶೀಲರಾಗಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಅವರನ್ನು ಹೊರತುಪಡಿಸಿದರೆ ಉಳಿದ ಶಾಸಕರು ಜನಸಂಪರ್ಕದಿಂದ ದೂರವೇ ಉಳಿದಿದ್ದಾರೆ. ಆದರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷರಾಗಿ ಜನರಿಗೆ ಸಲಹೆ ನೀಡುತ್ತಿದ್ದಾರೆ.

‌ಸುಧಾಕರ್ ಎರಡನೇ ಅಲೆಯ ಆರಂಭದಲ್ಲಿಯೇ ಅಧಿಕಾರಿಗಳ ಸಭೆ ನಡೆಸಿದ್ದರು. ತಮ್ಮ ಸಾಯಿಕೃಷ್ಣ ಟ್ರಸ್ಟ್ ಮೂಲಕ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 15 ಆಟೊಗಳನ್ನು ಬಿಡುವ ಮೂಲಕ 45 ವರ್ಷ ಮೇಲ್ಪಟ್ಟವರನ್ನು ಲಸಿಕೆ ಕೇಂದ್ರಕ್ಕೆ ಕರೆತರುವ ವ್ಯವಸ್ಥೆ ಮಾಡಿಸಿದ್ದರು. ಎರಡನೇ ಅಲೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅವರು ರಾಜ್ಯಮಟ್ಟದ ಕಾರ್ಯಭಾರಕ್ಕೆ ಸಿಲುಕಿದರು.

ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ಎರಡನೇ ಅಲೆಯ ಆರಂಭದಲ್ಲಿ ಅಪರೂಪಕ್ಕೆ ಒಮ್ಮೆ ಕಾಣಿಸಿಕೊಳ್ಳುತ್ತಿದ್ದರು. ಈಗ ಮನೆ ಸೇರಿದ್ದಾರೆ. ಗೌರಿಬಿದನೂರಿನ ಶಾಸಕ ಎನ್‌.ಎಚ್‌. ಶಿವಶಂಕರೆಡ್ಡಿ ಅವರದ್ದೂ ಇದೇ ಹಾದಿ. ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಕೋವಿಡ್ ಪೀಡಿತರಾಗಿದ್ದಾರೆ. ಚಿಂತಾಮಣಿ ಶಾಸಕ ಎಂ. ಕೃಷ್ಣಾರೆಡ್ಡಿ ಒಂದು ಸಭೆಯನ್ನಷ್ಟೇ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ, ನೆಲಮಂಗಲ ಶಾಸಕ ಡಾ.ಶ್ರೀನಿವಾಸ್ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ತಮ್ಮ ಒಡೆತನದ ಕಲ್ಯಾಣ ಮಂಟಪಗಳನ್ನು ಸೋಂಕಿತರ ಚಿಕಿತ್ಸೆಗೆ ನೀಡುವುದಾಗಿ ಘೋಷಿಸಿದ್ದಾರೆ. ಬಂಗಾರಪೇಟೆಯ ಶ್ಯಾಮ್‌ ಆಸ್ಪತ್ರೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಕೆಜಿಎಫ್ ಶಾಸಕಿ ಎಂ. ರೂಪಕಲಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವಾಗುತ್ತಿದ್ದಾರೆ. ಮುಳಬಾಗಿಲು ಶಾಸಕ ಎಚ್‌. ನಾಗೇಶ್‌, ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಮತ್ತು ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರು ಕೋವಿಡ್‌ ಸಂಬಂಧಿತ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಮನೆಯಲ್ಲೇ ಸಂಸದರ ವಾಸ್ತವ್ಯ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್‌. ಬಚ್ಚೇಗೌಡ ಒಮ್ಮೆಯೂ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿಲ್ಲ. ಇದು ಮತದಾರರ ಸಿಟ್ಟಿಗೆ ಕಾರಣವಾಗಿದೆ.

ಕೋಲಾರ ಕ್ಷೇತ್ರದ ಸಂಸದ ಎಸ್‌. ಮುನಿಸ್ವಾಮಿ ಅವರು ಎರಡು ದಶಕದಿಂದ ಬಂದ್‌ ಆಗಿರುವ ಕೆಜಿಎಫ್‌ನ ಚಿನ್ನದ ಗಣಿ (ಬಿಜಿಎಂಎಲ್‌) ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿವಹಿಸಿದ್ದಾರೆ.

ತುಮಕೂರು ಸಂಸದ ಜಿ.ಎಸ್‌. ಬಸವರಾಜ್‌ ಪತ್ರಿಕಾ ಹೇಳಿಕೆಗಷ್ಟೇ ಸೀಮಿತಗೊಂಡಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ. ಸಂಸದ ಎ. ನಾರಾಯಣಸ್ವಾಮಿ ಎರಡನೇ ಅಲೆಯ ಬಳಿಕ ಈ ಎರಡೂ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ.

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಅವರು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನೊಂದವರಿಗೆ ನೆರವಾಗುವಂತೆ ಮುಖ್ಯಮಂತ್ರಿಗೆ ಪತ್ರವನ್ನೂ ಬರೆದಿದ್ದಾರೆ.

ಮಾದರಿಯಾದ ಗೋಪಾಲಯ್ಯ
ಅಬಕಾರಿ ಸಚಿವ ಕೆ. ಗೋಪಾಲಯ್ಯ ತಾವು ಪ್ರತಿನಿಧಿಸುವ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಜನರಿಗೆ ನೆರವಾಗಲು ತಮ್ಮ ಕಚೇರಿಯಲ್ಲೇ ವಾರ್‌ ರೂಮ್‌ ತೆರೆದಿದ್ದಾರೆ. ಅಲ್ಲಿ ವೈದ್ಯರನ್ನು ನಿಯೋಜಿಸಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ನೆರವು ಒದಗಿಸುತ್ತಿದ್ದಾರೆ.

ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೂ ವಾರ್‌ ರೂಮ್‌ನಲ್ಲಿ ವೈದ್ಯರ ಸೇವೆ ಲಭ್ಯ. ಮನೆಯಲ್ಲೇ ಪ್ರತ್ಯೇಕವಾಸದಲ್ಲಿರುವ ಕೋವಿಡ್‌ ರೋಗಿಗಳಿಗೆ ಈ ವೈದ್ಯರು ಮಾರ್ಗದರ್ಶನ ನೀಡುತ್ತಾರೆ. ಶಾಸಕರ ಕಚೇರಿಯಿಂದಲೇ ಸೋಂಕಿತರ ಮನೆಗಳಿಗೆ ಔಷಧಿ ಕಿಟ್‌ ತಲುಪಿಸಲಾಗುತ್ತಿದೆ. ಅಗತ್ಯ ವಸ್ತುಗಳ ಪೂರೈಕೆಗೂ ವ್ಯವಸ್ಥೆ ಮಾಡಿದ್ದಾರೆ.

ಮನೆಯಲ್ಲಿ ಪ್ರತ್ಯೇಕವಾಸಕ್ಕೆ ಅಗತ್ಯ ಸೌಲಭ್ಯ ಹೊಂದಿರದವರಿಗಾಗಿ ನಂದಿನಿ ಬಡಾವಣೆಯ ಕೆಂಪೇಗೌಡ ಸಮುದಾಯ ಭವನದಲ್ಲಿ 80 ಹಾಸಿಗೆಗಳ ಕೋವಿಡ್‌ ಆರೈಕೆ ಕೇಂದ್ರವನ್ನು ಸಜ್ಜುಗೊಳಿಸುತ್ತಿದ್ದಾರೆ. ತುರ್ತಾಗಿ ಅಗತ್ಯವಿರುವ ಸೋಂಕಿತರಿಗೆ ಆಮ್ಲಜನಕ ಒದಗಿಸುವುದಕ್ಕೂ ತಯಾರಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT