ಮಂಗಳವಾರ, ಅಕ್ಟೋಬರ್ 19, 2021
24 °C

ಒಳನೋಟ: ಆಡುವ ಕೂಸಿಗೆ ಕಾಡುವ ಸಮಸ್ಯೆ ನೂರು

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Getty Images

ಹುಬ್ಬಳ್ಳಿ: ಬಾಲ್ಯವಿವಾಹ ಆಗುವ ಹದಿಹರೆಯದ ಹುಡುಗಿ ಹಾಗೂ ಅವಳಿಗೆ ಜನಿಸುವ ಮಗು ಇಬ್ಬರ ಆರೋಗ್ಯದ ಮೇಲೂ ದುಷ್ಪರಿಣಾಮಗಳ ಸಂಖ್ಯೆಯೇ ಹೆಚ್ಚು. ದೈಹಿಕ ದುಷ್ಪರಿಣಾಮಗಳ ಜೊತೆಗೆ ಈ ಪುಟ್ತಾಯಂದಿರು ಹಾಗೂ ಮಗು ಮಾನಸಿಕವಾಗಿಯೂ ಜರ್ಜರಿತರಾಗುತ್ತಾರೆ.

ತಾಯಿ–ಮಗು ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವರು. ಮಾನಸಿಕ ದೌರ್ಬಲ್ಯ, ಖಿನ್ನತೆಗೆ ಒಳಗಾಗುತ್ತಾರೆ. ಕೊಪ್ಪಳದ ಸ್ತ್ರೀರೋಗ ತಜ್ಞೆ ಚಂದ್ರಕಲಾ ಸಿ.ನರಹಟ್ಟಿ, ಬಾಲ್ಯ ವಿವಾಹದಿಂದಾಗುವ ಆರೋಗ್ಯದ ತೊಂದರೆಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ: 

ಬಾಲಕಿ ಮೇಲೆ ವಯಸ್ಸಿಗೆ ಮೀರಿದ ಜವಾಬ್ದಾರಿ ಹೇರಿದಂತಾಗುತ್ತದೆ. ಲೈಂಗಿಕತೆಗೆ ಮಾನಸಿಕ, ದೈಹಿಕವಾಗಿಯೂ ಸಿದ್ಧರಾಗಿರದ ಕಾರಣ ನಾನಾ ರೀತಿಯಲ್ಲಿ ಆಘಾತಕ್ಕೆ ಒಳಗಾಗುತ್ತಾರೆ. ಸುರಕ್ಷಿತ ಲೈಂಗಿಕತೆಯ ಅರಿವಿಲ್ಲದೆ ಲೈಂಗಿಕ ಕಾಯಿಲೆಗಳಿಗೂ ಗುರಿಯಾಗುವ ಸಾಧ್ಯತೆ ಇರುತ್ತದೆ. 

ಹೆರಿಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ. ಗರ್ಭಾವಸ್ಥೆಯಲ್ಲಿ ಮೂರ್ಛೆ ರೋಗಕ್ಕೆ ಬಲಿಯಾಗಬಹುದು. ರಕ್ತಹೀನತೆ ಉಂಟಾಗುತ್ತದೆ. ಗರ್ಭಪಾತ ಹೆಚ್ಚಾಗುತ್ತವೆ. ಬಿಳಿಮುಟ್ಟು, ಬೆನ್ನುನೋವಿನಂಥ ಸಮಸ್ಯೆಗಳಿಗೆ ತುತ್ತಾಗುವರು.

ಪತಿ–ಪತ್ನಿಯರಲ್ಲಿ ಆಕರ್ಷಣೆ ಕುಂಠಿತವಾಗಿ, ವಿವಾಹೇತರ ಸಂಬಂಧಗಳಿಗೆ ಕಾರಣವಾಗುತ್ತವೆ. ಜಗಳಗಳು ಹೆಚ್ಚಿ ಸಂಸಾರದಲ್ಲಿ ಬಿರುಕು ಮೂಡುತ್ತವೆ. 

ಮಕ್ಕಳ ಆರೋಗ್ಯದ ಕುರಿತು ಬಾಗಲಕೋಟೆಯ ಮಕ್ಕಳ ತಜ್ಞ ಆರ್‌.ಟಿ.ಪಾಟೀಲ ಹೀಗೆ ಹೇಳುತ್ತಾರೆ:

ಬಾಲ್ಯವಿವಾಹಗಳು ಹೆಚ್ಚಾಗಿ ರಕ್ತ ಸಂಬಂಧದಲ್ಲೇ ನಡೆಯುವುದರಿಂದ ಅಂಗವಿಕಲ ಇಲ್ಲವೆ ಬುದ್ಧಿಮಾಂದ್ಯ ಮಕ್ಕಳ ಜನನದ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ದೃಷ್ಟಿದೋಷ, ಶ್ರವಣದೋಷ ಇರುವ ಮಕ್ಕಳು ಹುಟ್ಟಬಹುದು. ವಾಕ್‌– ಶ್ರವಣ ದೋಷವಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿರುತ್ತದೆ.  ಗರ್ಭಿಣಿಯಲ್ಲಿ ರಕ್ತಹೀನತೆ ಇದ್ದಲ್ಲಿ, ಕಡಿಮೆ ತೂಕದ ಮಗು ಜನಿಸುತ್ತವೆ. ಶಿಶುವಿನ ಪೂರ್ಣ ಬೆಳವಣಿಗೆಯಾಗಿರುವುದಿಲ್ಲ. ಶಿಶು ಮರಣ ಅಪ್ಪುವ ಸಾಧ್ಯತೆ ಹೆಚ್ಚು. ತಾಯಿಗೆ ಲೈಂಗಿಕ ಕಾಯಿಲೆಗಳಿದ್ದರೆ, ಮಗುವಿಗೆ ತೊಂದರೆಯಾಗುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಗರ್ಭಸ್ರಾವ ಆಗುತ್ತವೆ. ಅವಧಿಪೂರ್ವ ಪ್ರಸವದಿಂದ ಶಿಶುವಿನ ಆರೋಗ್ಯದ ಮೇಲೆ ಬಹುವಿಧದ ದುಷ್ಪರಿಣಾಮ ಬೀರಬಹುದು.

ಕೋವಿಡ್‌: ಹೆಚ್ಚಿದ ಬಾಲ್ಯವಿವಾಹ ಪ್ರಕರಣ

ಕೋವಿಡ್‌ ಲಾಕ್‌ಡೌನ್‌ ಆರಂಭವಾದ ಮೇಲೆ ಬಾಲ್ಯ ವಿವಾಹಗಳ ಪ್ರಕರಣಗಳು ಹೆಚ್ಚಲು ಶಾಲೆಗಳು ಬಂದ್‌ ಆಗಿರುವುದು ಮೂಲ ಕಾರಣವಾಗಿದೆ. ಮಕ್ಕಳು ಗೈರಾದಾಗ ಶಿಕ್ಷಕರು ಪರಿಶೀಲಿಸುತ್ತಿದ್ದರು. ಮಕ್ಕಳ ಮದುವೆ ಹಮ್ಮಿಕೊಂಡಲ್ಲಿ ತಕ್ಷಣ ನಮ್ಮ ಗಮನಕ್ಕೆ ತರುತ್ತಿದ್ದರು. ಬಾಲ್ಯವಿವಾಹ ತಡೆಯಲು ಸಾಧ್ಯವಾಗುತ್ತಿತ್ತು. ಈಗ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿಲ್ಲ. ಬಾಲ್ಯವಿವಾಹ ತಡೆಯಲು ಪಾಲಕರ ಮನೋಭಾವ ಬದಲಾಗಬೇಕಿದೆ.  

ಅಂಥೋನಿ ಸೆಬಾಸ್ಟಿಯನ್‌, ಅಧ್ಯಕ್ಷರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಪ್ರತ್ಯೇಕ ಆಯೋಗ ರಚನೆಯಾಗಲಿ

ಸಂಬಂಧಿಸಿದ ಎಲ್ಲ ಇಲಾಖೆಗಳ ಬೇಜವಾಬ್ದಾರಿಯಿಂದ ಬಾಲ್ಯವಿವಾಹ ತಡೆಯುವಲ್ಲಿ ಹಿನ್ನೆಡೆಯಾಗುತ್ತಿದೆ. ಜನಪ್ರತಿನಿಧಿಗಳು, ಪ್ರತಿಷ್ಠಿತರು, ಕುಟುಂಬದವರು, ಜಾತಿ ಬಾಂಧವರ ಬೆಂಬಲವಿರುವುದರಿಂದ, ಅವರು ವಿಭಿನ್ನ ಒತ್ತಡ ತರುತ್ತಾರೆ. ಇಂಥವರೆಲ್ಲರೂ ಈ ಬಾಲ್ಯವಿವಾಹವೆಂಬ ‘ಸಾಮಾಜಿಕ ಅತ್ಯಾಚಾರ’ದ ಹೊಣೆಗಾರರು.

ಕೆಲ ಬಾರಿ ಬಾಲ್ಯವಿವಾಹ ನಡೆದಿದ್ದು ಗೊತ್ತಾಗುವ ಹೊತ್ತಿಗೆ ಹುಡುಗಿ ಗರ್ಭಿಣಿ ಆಗಿರುತ್ತಾಳೆ. ಅವಳ ಮತ್ತು ಹುಟ್ಟಲಿರುವ ಮಗುವಿನ ಭವಿಷ್ಯದ ದೃಷ್ಟಿಯಿಂದ ಪ್ರಕರಣ ದಾಖಲಾಗುವುದಿಲ್ಲ. ವಯಸ್ಸಿನ ಸುಳ್ಳು ದಾಖಲೆಗಳೂ ಸೃಷ್ಟಿಯಾಗುತ್ತವೆ. ಬಾಲ್ಯವಿವಾಹ ತಡೆಗೆ ಹಲವು ಇಲಾಖೆಗಳಿಗೆ ಜವಾಬ್ದಾರಿ ನೀಡಿರುವುದರಿಂದ, ಪರಸ್ಪರ ಸಹಕಾರ, ಹೊಂದಾಣಿಕೆ, ಸಮನ್ವಯದ ಕೊರತೆ ಇದೆ. ಪ್ರತಿ ಇಲಾಖೆಯೂ ಇನ್ನೊಂದರ ಮೇಲೆ ಆರೋಪ ಹೊರಿಸಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತವೆ.

ಇದನ್ನು ತಳಮಟ್ಟದಿಂದ ನಿಯಂತ್ರಿಸಲು ಒಂದು ಪ್ರತ್ಯೇಕ ಸಶಕ್ತ ಆಯೋಗದ ಅವಶ್ಯಕತೆ ಇದೆ. ಮಕ್ಕಳ ಹಕ್ಕುಗಳು ಮತ್ತು ಉಲ್ಲಂಘನೆಯ ಶಿಕ್ಷೆಯ ಕುರಿತು ಸಮಾಜದಲ್ಲಿ ಆಮೂಲಾಗ್ರ ಜಾಗೃತಿ ಮೂಡಿಸಬೇಕು. ಜೊತೆಗೆ, ಲೋಪವಿಲ್ಲದಂತೆ ಕಾನೂನು ಅನುಷ್ಠಾನವಾಗಬೇಕು. 

‘18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣಿನ ಜೊತೆಗೆ ನಡೆಸುವ ಲೈಂಗಿಕ ಕ್ರಿಯೆ, ಮದುವೆಯಾಗಿದ್ದರೂ ಆಗದಿದ್ದರೂ ಅತ್ಯಾಚಾರವೇ’ ಎಂದು ಸುಪ್ರೀಂ ಕೋರ್ಟ್‌ ಪ್ರಬಲವಾಗಿ ಕಾನೂನು ತಿದ್ದುಪಡಿ ಮಾಡಿದೆ. ಆದರೆ ಇದನ್ನು ಅನುಷ್ಠಾನಗೊಳಿಸುವಲ್ಲಿ ಮುಖ್ಯವಾಗಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. 

ರೂಪ ಹಾಸನ, ಸಾಮಾಜಿಕ ಕಾರ್ಯಕರ್ತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು