ಶುಕ್ರವಾರ, ಜುಲೈ 1, 2022
27 °C
ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ಅವ್ಯಾಹತ

ಒಳನೋಟ | ವಿದ್ಯುತ್ ಸಮಸ್ಯೆ; 12 ಗಂಟೆ ‘ತ್ರೀ ಫೇಸ್’ ಅರೆಬರೆ ಕಾರ್ಯಗತ

ಬಿ.ಜೆ. ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ಕಾಫಿ ತೋಟ ಪ್ರದೇಶಗಳಲ್ಲಿ ನಿತ್ಯ 12 ಗಂಟೆ ತ್ರೀ ಫೇಸ್ ವಿದ್ಯುತ್‌ ಪೂರೈಸುವಂತೆ ಇಂಧನ ಸಚಿವರು ಸೂಚನೆ ನೀಡಿದ್ದರೂ ಅದು ಪೂರ್ಣವಾಗಿ ಅನುಷ್ಠಾನವಾಗಿಲ್ಲ.

ಪಟ್ಟಣಗಳ ಭಾಗದ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ತಗ್ಗಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ವಿದ್ಯುತ್‌ ಬಳಕೆ ಬೇಸಿಗೆ ಕಾಲದಲ್ಲಿ ಮಳೆಗಾಲಕ್ಕಿಂತ ಐದಾರು ಪಟ್ಟು ಜಾಸ್ತಿ ಇರುತ್ತದೆ. ಬೆಳೆಗಾರರು ತೋಟಗಳಿಗೆ ನೀರುಣಿಸಲು 25 ಎಚ್‌.ಪಿ.ವರೆಗಿನ ಮೋಟರ್‌ಗಳನ್ನು ಅಳವಡಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ದಿನದಲ್ಲಿ 6ರಿಂದ 8 ಗಂಟೆ ತ್ರೀ ಫೇಸ್‌ ವಿದ್ಯುತ್‌ ಪೂರೈಸಲಾಗುತ್ತಿದೆ. ಆದರೆ ವೋಲ್ಟೇಜ್‌ ಕೊರತೆ ಮಾಮೂಲಿ ಎಂಬಂತಾಗಿದೆ. ಬಹಳಷ್ಟು ಕಡೆ ಟ್ರಾನ್ಸ್‌ಫಾರ್ಮರ್‌ಗಳ ಸಮಸ್ಯೆ ವಿಪರೀತ ಇದೆ. ಹೊಸ ಟ್ರಾನ್ಸ್‌ಫಾರ್ಮರ್‌ಗಳ ಅಳವಡಿಕೆ ಗಗನಕುಸುಮವಾಗಿದೆ. ಲಂಚ ಕೊಟ್ಟರೆ ಮಾತ್ರ ‘ಎಸ್ಟಿಮೇಟ್‌’ ಮಾಡಿ ಅಳವಡಿಸುತ್ತಾರೆ, ಇಲ್ಲದಿದ್ದರೆ ‘ಎಸ್ಟಿಮೇಟ್‌ ಕಳಿಸಿದ್ದೇವೆ, ಅನುಮೋದನೆ ಬಾಕಿ ಇದೆ’ ಎಂಬ ಸಿದ್ಧ ಉತ್ತರ ನೀಡುತ್ತಾರೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

‘ಪ್ರವಾಸಿ ಕ್ಷೇತ್ರಗಳಾದ ಕಳಸ–ಹೊರನಾಡಿಗೆ ಎಕ್ಸ್‌ಪ್ರೆಸ್‌ ಲಿಂಕ್‌ ಲೈನ್‌ ಇದೆ. ಈ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ಕಡಿಮೆ. ಬಾಳೆಹೊಳೆ, ಹಿರೇಬೈಲು, ಸಂಸೆ, ಜಾವಳಿ ಫೀಡರ್‌ಗಳ ವ್ಯಾಪ್ತಿಯಲ್ಲಿ ಸಮಸ್ಯೆ ತಪ್ಪಿಲ್ಲ. ಮಲೆನಾಡು ಭಾಗದ ಬಹಳಷ್ಟು ಕಡೆ ವಿದ್ಯುತ್‌ ಮಾರ್ಗಗಳಲ್ಲಿ ಕಬ್ಬಿಣದ ಹಳೆಯ ಕಂಬಗಳು ಇವೆ. ಕಂಡಕ್ಟರ್‌ಗಳು (ತಂತಿ, ಕಂಬಗಳು) ಕ್ಷಮತೆ ಇಲ್ಲ’ ಎಂದು ಕಳಸದ ಕಾಫಿ ಬೆಳೆಗಾರ ರವಿ ಹೇಳುತ್ತಾರೆ.

ಕಾಫಿ ಗಿಡಗಳಲ್ಲಿ ಹೂ ಕಟ್ಟುವ ಹಂತದಲ್ಲಿ (ಫೆಬ್ರುವರಿಯಿಂದ ಜೂನ್‌ವರೆಗೆ) ನೀರು ನೀಡದಿದ್ದರೆ ಬೆಳೆ ಒಣಗುತ್ತದೆ. ಬೆಳೆಗಾರರು ‘ಸ್ಪ್ರಿಂಕ್ಲರ್‌ ’ ಬಳಸಿ ಗಿಡಗಳಿಗೆ ನೀರುಣಿಸುತ್ತಾರೆ. ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಕಾಫಿ ಬೆಳೆಗೆ ಅನುಕೂಲ ಕಲ್ಪಿಸಲು ನಿತ್ಯ 12 ಗಂಟೆ ತ್ರೀಫೇಸ್ ವಿದ್ಯುತ್‌ ಪೂರೈಸಬೇಕೆಂದು ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌ ಅವರು ಇಂಧನ ಸಚಿವ ಸುನೀಲ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದ್ದರು.

‘ಬಾಳೂರು, ಬಣಕಲ್, ಗೋಣಿಬೀಡು ಸಹಿತ ಕೆಲವೆಡೆ ‘ಪವರ್‌ ಗ್ರಿಡ್‌’ ಇಲ್ಲ. ಈ ಭಾಗದಲ್ಲಿ ವಿದ್ಯುತ್‌ ಸಮಸ್ಯೆಗೆ ಇದೂ ಒಂದು ಕಾರಣ. 12 ಗಂಟೆ ‘ತ್ರೀ ಫೇಸ್‌’ ವಿದ್ಯುತ್‌ ಪೂರೈಸಲು ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ’ ಎಂದು ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೇಳಿಕೆಗೆ ಸೀಮಿತವಾದ ಸೂಚನೆ’
‘ಇಂಧನ ಸಚಿವರ ಸೂಚನೆ ಬಾಯಿಮಾತಿಗೆ ಸೀಮಿತವಾಗಿದೆ. 12 ಗಂಟೆ ‘ತ್ರೀ ಫೇಸ್’ ವಿದ್ಯುತ್‌ ಪೂರೈಸುತ್ತಿಲ್ಲ. ಸಚಿವರಿಗೆ ಫೋನ್‌ ಮಾಡಿದರೆ ಕರೆ ಸ್ವೀಕರಿಸಲ್ಲ’ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್‌) ಅಧ್ಯಕ್ಷ ಡಾ.ಎಚ್‌.ಟಿ. ಮೋಹನ್‌ಕುಮಾರ್‌ ದೂರಿದರು.

‘ಮನವಿ ಸಲ್ಲಿಸಿ ಸುಸ್ತಾಗಿದ್ದೇವೆ. ಗ್ರಾಹಕರ ಕೋರ್ಟ್‌ ಮೆಟ್ಟಿಲು ಏರುವ ಚಿಂತನೆ ನಡೆಸಿದ್ದೇವೆ. ವಕೀಲರ ಸಲಹೆ ಪಡೆದು, ಸಭೆಯಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ’ ಎಂದು ತಿಳಿಸಿದರು.

ಇವನ್ನೂ ಓದಿ


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು