ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಪೌಷ್ಟಿಕತೆ ವೃದ್ಧಿಸಿತೇ ಮೊಟ್ಟೆ, ಬಾಳೆಹಣ್ಣು?

Last Updated 5 ಮಾರ್ಚ್ 2022, 23:15 IST
ಅಕ್ಷರ ಗಾತ್ರ

ಗದಗ: ಶಾಲಾ ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಬದಲಾವಣೆ ಹಾಗೂ ಆರೋಗ್ಯದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಮೊಟ್ಟೆ–ಬಾಳೆಹಣ್ಣು ವಿತರಣೆ ಕೂಡ ಈ ಗುರಿ ಸಾಧನೆಯ ಮೆಟ್ಟಿಲುಗಳೇ ಆಗಿವೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಮತ್ತು ವಿಜಯಪುರ ಜಿಲ್ಲೆ ಸೇರಿದಂತೆ ಅಲ್ಲಿನ ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸಮೀಕ್ಷೆ ಕಾರ್ಯ ಕೈಗೆತ್ತಿಕೊಂಡಿದ್ದು, ಈ ಹೊಣೆಯನ್ನು ಗದುಗಿನಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯಕ್ಕೆ ವಹಿಸಿದೆ. ಒಟ್ಟು 115 ದಿನಗಳ ಅವಧಿಯ ಸಮೀಕ್ಷೆಯು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಸಮೀಕ್ಷೆ ಹಾಗೂ ಮಧ್ಯಮ ಅವಧಿಯಲ್ಲಿ ಆದ ವ್ಯತ್ಯಾಸಗಳನ್ನು ಗುರುತಿಸುವ ಪ್ರಕ್ರಿಯೆ (ಮಿಡ್‌ ಪ್ರೊಸೆಸ್‌ ರಿವ್ಯೂ) ಕೂಡ ಮುಗಿದಿದ್ದು, ವಿಶ್ಲೇಷಣೆ ಕಾರ್ಯ ಇನ್ನಷ್ಟೇ ಆಗಬೇಕಿದೆ.

‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯವು ಗ್ರಾಮೀಣಾಭಿವೃದ್ಧಿ, ಶಾಲಾ ಶಿಕ್ಷಣ ಸೇರಿದಂತೆ ವಿವಿಧ ವಿಷಯಗಳಲ್ಲಿ ತಜ್ಞತೆ, ಅನುಭವ ಹೊಂದಿರುವುದರಿಂದ ಸರ್ಕಾರ ಈ ಕೆಲಸವನ್ನು ನಮಗೆ ವಹಿಸಿದೆ. ಆಹಾರ ವಿಜ್ಞಾನ, ಸಾರ್ವಜನಿಕ ಆರೋಗ್ಯ, ಸಾಮಾಜಿಕ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಡಾ. ಸುರೇಶ್‌ ಕೃಷ್ಣರಾವ್‌ ಮಾರ್ಗದರ್ಶನದಲ್ಲಿ ಸಮೀಕ್ಷೆಯಲ್ಲಿ ತೊಡಗಿದ್ದಾರೆ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ.

ಮಕ್ಕಳಲ್ಲಿನ ಅಪೌಷ್ಟಿಕತೆ ಮಟ್ಟ ಎಷ್ಟಿದೆ ಎಂಬುದರ ಪ್ರಾಯೋಗಿಕ ಅಧ್ಯಯನಕ್ಕೆ ಯಾದಗಿರಿ ಜಿಲ್ಲೆ ಹಾಗೂ ಅದರೊಂದಿಗೆ ಹೋಲಿಕೆ ಮಾಡಿ ನೋಡಲು ಮಕ್ಕಳಲ್ಲಿ ಪೌಷ್ಟಿಕತೆ ಮಟ್ಟ ಚೆನ್ನಾಗಿರುವ ಗದಗ ಜಿಲ್ಲೆಯನ್ನು ಆಯ್ದುಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಈ ಎರಡೂ ಜಿಲ್ಲೆಗಳಿಂದ ತಲಾ ಮೂರುವರೆ ಸಾವಿರದಂತೆ ಒಟ್ಟು ಏಳು ಸಾವಿರ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸಮೀಕ್ಷಾ ತಂಡದ ಸದಸ್ಯರು ವಿದ್ಯಾರ್ಥಿಗಳ ತೂಕ, ಎತ್ತರ, ಅವರ ಆಹಾರಕ್ರಮ, ಹಿಮೊಗ್ಲೋಬಿನ್‌ ಪ್ರಮಾಣ ಮೊದಲಾದ ಪ್ರಾಥಮಿಕ ಅಂಕಿ ಅಂಶಗಳನ್ನು ಸಂಗ್ರಹಿಸಿದ್ದಾರೆ.

‘ವಾರದಲ್ಲಿ ಮೂರು ದಿನ ಮೊಟ್ಟೆ ಅಥವಾ ಬಾಳೆಹಣ್ಣು ಕೊಡುವುದರಿಂದ 1ರಿಂದ 8ನೇ ತರಗತಿ ಅಥವಾ 5ರಿಂದ 12 ವರ್ಷದೊಳಗಿನ ವಿದ್ಯಾರ್ಥಿಗಳ ಪೌಷ್ಟಿಕತೆ ಪ್ರಮಾಣದಲ್ಲಿನ ಎಷ್ಟು ವ್ಯತ್ಯಾಸ ಕಂಡುಬರುತ್ತದೆ ಎಂಬುದನ್ನು ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರಿಂದ ಬದಲಾವಣೆ ಸಾಧ್ಯವೇ ಎಂಬುದನ್ನು ಯೋಚಿಸಲು, ಅಧ್ಯಯನ ಮಾಡಲು ಶಿಕ್ಷಣ ಇಲಾಖೆ ನಮ್ಮ ವಿಶ್ವವಿದ್ಯಾಲಯಕ್ಕೆ ಈ ಕೆಲಸ ಕೊಟ್ಟಿದೆ’ ಎನ್ನುತ್ತಾರೆ ಪ್ರೊ. ಚಟಪಲ್ಲಿ.

ಈ ಸಮೀಕ್ಷೆಯು ವೈಜ್ಞಾನಿಕವಾಗಿ ನಡೆಯುತ್ತಿರುವುದರಿಂದ ಫಲಿತಾಂಶ ಕೂಡ ಉತ್ತಮವಾಗಿರಲಿದೆ. ಮೂರು ಹಂತದಲ್ಲಿ ಸಿಕ್ಕ ಅಂಕಿ ಅಂಶಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಪೌಷ್ಟಿಕತೆ ಮಟ್ಟ ಪ್ರಾರಂಭದಲ್ಲಿ ಹೇಗಿತ್ತು, ಮಧ್ಯದಲ್ಲಿ ಏನು ವ್ಯತ್ಯಾಸ ಕಂಡು ಬಂತು ಹಾಗೂ ಮೂರನೇ ಸಮೀಕ್ಷೆ ಸಂದರ್ಭದ ವೇಳೆಗೆ ಆದ ಬದಲಾವಣೆಗಳೇನು ಎಂಬುದರ ಆಧಾರದಲ್ಲಿ ವಿಶ್ಲೇಷಣೆ ನಡೆಸಿ, ವಿಶ್ವವಿದ್ಯಾಲಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಅವರು ವಿವರಿಸುತ್ತಾರೆ.

ವ್ಯತ್ಯಾಸ ತಿಳಿಯಲು ಸಮೀಕ್ಷೆ ನೆರವು

ಮಧ್ಯಮ ಹಂತದ ವ್ಯತ್ಯಾಸಗಳ ಪರಿಶೀಲನೆಗೆ ಗದಗ ಮತ್ತು ಯಾದಗಿರಿ ಜಿಲ್ಲೆಗಳಿಂದ ತಲಾ ಆರು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಮೊದಲ ಹಂತದ ಸಮೀಕ್ಷೆಯಲ್ಲಿ ಗುರುತಿಸಿದಂತೆ ಅಪೌಷ್ಟಿಕತೆ ಪ್ರಮಾಣ ಜಾಸ್ತಿ ಇರುವ ಯಾದಗಿರಿ, ಸುರಪುರ, ಶಹಾಪುರ ತಾಲ್ಲೂಕಿನ ಆರು ಶಾಲೆಗಳು ಹಾಗೂ ಗದಗ ಜಿಲ್ಲೆಯಿಂದ ಮುಂಡರಗಿ, ಶಿರಹಟ್ಟಿ ಮತ್ತು ರೋಣ ತಾಲ್ಲೂಕಿನ ಆರು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ‌

‘ಪ್ರಾಥಮಿಕ ಸಮೀಕ್ಷೆ ವೇಳೆ ವಿದ್ಯಾರ್ಥಿಗಳ ತೂಕ, ಎತ್ತರ, ತೋಳಿನ ಸುತ್ತಳತೆ ಮೊದಲಾದ ಮಾಹಿತಿ ಕಲೆ ಹಾಕಲಾಗಿತ್ತು. ಮಧ್ಯದ ಅವಧಿಯಲ್ಲಿ ಇವುಗಳಲ್ಲಿ ಏನಾದರೂ ಪ್ರಗತಿ ಕಂಡು ಬಂದಿದೆಯೇ? ಎಂಬ ಅಂಶವನ್ನು ಅದರೊಂದಿಗೆ ಹೋಲಿಕೆ ಮಾಡಿ ನೋಡಲಾಗುವುದು. ಸಾಮಾನ್ಯವಾಗಿ ನಿಯಮಿತವಾಗಿ ಮೊಟ್ಟೆ, ಬಾಳೆಹಣ್ಣು ಕೊಡುವುದರಿಂದ ವಿದ್ಯಾರ್ಥಿಗಳ ಪೌಷ್ಟಿಕತೆ ಪ್ರಮಾಣದಲ್ಲಿ ಬದಲಾವಣೆ ಕಂಡು ಬರುತ್ತದೆ. ಈ ಅಂಕಿ ಅಂಶಗಳನ್ನು ವಿಶ್ಲೇಷಣೆ ಮಾಡುವ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ಕೊನೆ ಹಂತದ ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳ ಪೌಷ್ಟಿಕತೆ ಪ್ರಮಾಣದಲ್ಲಿ ಆಗಿರುವ ಬದಲಾವಣೆ ಕುರಿತಾದ ವರದಿ ಜತೆಗೆ ವಿದ್ಯಾರ್ಥಿಗಳ ಆರೋಗ್ಯ ಸುಧಾರಣಾ ಕ್ರಮಗಳು, ಆಹಾರ ಪದ್ಧತಿ ಬದಲಾವಣೆ ಬಗ್ಗೆ ಕೂಡ ಶಿಫಾರಸು ಮಾಡಲಾಗುವುದು’ ಎನ್ನುತ್ತಾರೆ ಪ್ರೊ.ವಿಷ್ಣುಕಾಂತ ಎಸ್. ಚಟಪಲ್ಲಿ.

‘ಯಾವುದೇ ಒಂದು ಸಮೀಕ್ಷೆ ಪ್ರಾರಂಭಕ್ಕೂ ಮುನ್ನ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಮೂಲ ವಿವರಗಳನ್ನು ಕಲೆ ಹಾಕಲಾಗುತ್ತದೆ. ಕೊನೆ ಹಂತದ ಸಮೀಕ್ಷೆಯಲ್ಲಿ ಅದರಿಂದ ಏನು ಪರಿಣಾಮ ಆಗಿದೆ ಎಂಬ ಅಂಶ ಗುರುತಿಸಲಾಗುತ್ತದೆ. ಈ ಎರಡು ಅವಧಿಗಳ ನಡುವೆ ಮಾಡುವ ಸಮೀಕ್ಷೆಯಿಂದ ನಮಗೆ ಆಗಿರುವ ವ್ಯತ್ಯಾಸದ ಬಗ್ಗೆ ತಿಳಿದುಬರುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT