ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ನದಿ ತಿರುವು – ಹಣದ ಹರಿವು?

Last Updated 9 ಏಪ್ರಿಲ್ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು:ನದಿ ಹರಿವಿನ ಸಹಜ ದಿಕ್ಕನ್ನೇ ಬದಲಾಯಿಸಿ, ಗುರುತ್ವಾಕರ್ಷಣೆಗೆ ವಿರುದ್ಧವಾಗಿ ನೀರು ಹರಿಸುವ ಯೋಜನೆಗಳಿಂದ ಹಣದ ಹೊಳೆ ಹರಿದಿದೆಯೇ ವಿನಃ, ನೀರು ಹರಿದ ಉದಾಹರಣೆಗಳಿಲ್ಲ. ಇಂತಹ ಯೋಜನೆಗಳ ಆರಂಭದ ಅಂದಾಜು ವೆಚ್ಚದ ಲೆಕ್ಕಾಚಾರಗಳಿಗೂ ಹಾಗೂ ವಾಸ್ತವದಲ್ಲಿ ಆಗುವ ವೆಚ್ಚಗಳಿಗೂ ಅಜಗಜಾಂತರ! ನದಿ ತಿರುವಿನಿಂದ ಪರಿಸರ ವ್ಯವಸ್ಥೆ ಹಾಗೂ ಜನಜೀವನದ ಮೇಲಾದ ಅನಾಹುತಗಳ ಕರುಣಾಜನಕ ಚಿತ್ರಣಗಳು ಕಣ್ಣಮುಂದಿದ್ದರೂ ಇಂತಹ ಕಣ್ಕಟ್ಟಿನ ಯೋಜನೆಗಳನ್ನು ರೂಪಿಸುವ ಪರಿಪಾಟಕ್ಕೆ ಕಡಿವಾಣ ಬಿದ್ದಿಲ್ಲ.

ವರ್ಷದಲ್ಲಿ ಸರಾಸರಿ 1,355 ಮಿ.ಮೀ. ಮಳೆಯಾಗುವ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ಎದುರಾದಾಗಲೆಲ್ಲಾ ಸರ್ಕಾರಕ್ಕೆ ಮೊದಲು ನೆನಪಿಗೆ ಬರುವುದು ನದಿ ತಿರುವು ಯೋಜನೆಗಳು. ಬೇಡ್ತಿ–ವರದಾ ಯೋಜನೆ, ಲಿಂಗನಮಕ್ಕಿ ಜಲಾಶಯದ ನೀರನ್ನು ಬೆಂಗಳೂರಿಗೆ ಹರಿಸುವ ಶರಾವತಿ ತಿರುವು ಯೋಜನೆ, ಬಯಲುಸೀಮೆಯ ಜಿಲ್ಲೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ, ಕಾಳಿ ನದಿ... ಇಂತಹ ನದಿ ತಿರುವು ಪ್ರಸ್ತಾವಗಳು ರಾಜ್ಯ ಸರ್ಕಾರದ ಮುಂದಿವೆ.

ಕಡಿಮೆ ದೂರಕ್ಕೆ ನೀರು ಹರಿಸಬೇ ಕಾಗುವ ನದಿ ಜೋಡಣೆ ಅಷ್ಟಾಗಿ ಅಪಾಯಕಾರಿಯೇನಲ್ಲ. ಭೌಗೋಳಿಕ ಪರಿಸ್ಥಿತಿ ಆಧರಿಸಿ ನೂರಿನ್ನೂರು ಕಿ.ಮೀ ದೂರಕ್ಕೆ ನೀರು ಪಂಪ್‌ ಮಾಡುವುದಕ್ಕೆ ದುಬಾರಿ ವೆಚ್ಚವಾಗುತ್ತದೆ. ಅಚ್ಚರಿ ಎಂದರೆ, ಈ ದುಬಾರಿ ವೆಚ್ಚದ ಕಾರಣಕ್ಕಾಗಿಯೇ ನದಿ ತಿರುವು ಯೋಜನೆಗಳು ಆಳುವವರ ಪಾಲಿಗೆ ‘ಕಾಮಧೇನು’ವಿನಂತಾಗುತ್ತವೆ.

ಈಗ ಅನುಷ್ಠಾನಗೊಳ್ಳುತ್ತಿರುವ ಎತ್ತಿನಹೊಳೆ ಯೋಜನೆಯನ್ನೇ ಗಮನಿಸೋಣ. ಪಶ್ಚಿಮಾಭಿಮುಖವಾಗಿ ಹರಿಯುವ ಎತ್ತಿನಹೊಳೆಯ 24.01 ಟಿಎಂಸಿ ಅಡಿ ನೀರನ್ನು ಬಯಲುಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ 29 ತಾಲ್ಲೂಕುಗಳ 38 ಪಟ್ಟಣ ಪ್ರದೇಶಗಳು ಮತ್ತು 6,657 ಗ್ರಾಮಗಳಿಗೆ ಪೂರೈಸುವ ಯೋಜನೆ ಇದು.

ಬಿಜೆಪಿ ನೇತೃತ್ವದ ಸರ್ಕಾರ 2012ರಲ್ಲಿ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಿದಾಗ ಇದರ ಅಂದಾಜು ವೆಚ್ಚ
₹ 8,323 ಕೋಟಿ. ಕಾಂಗ್ರೆಸ್‌ ನೇತೃತ್ವದ ಸರ್ಕಾರ 2014ರಲ್ಲಿ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿದಾಗ ಯೊಜನಾ ವೆಚ್ಚ ₹ 12,912 ಕೋಟಿಗೆ ಏರಿಕೆಯಾಗಿತ್ತು.

ಎರಡು ಹಂತಗಳಲ್ಲಿ 43 ಸ್ಥಳಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. 3 ವರ್ಷಗಳಲ್ಲಿ ಮುಗಿಯಬೇಕಾದ ಕಾಮಗಾರಿ ಗಳು 9 ವರ್ಷಗಳ ಬಳಿಕವೂ ಪೂರ್ಣಗೊಂಡಿಲ್ಲ. ಈಗಾಗಲೇ ₹ 9 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ. ಇದರ ಅಂದಾಜು ವೆಚ್ಚವನ್ನು ₹ 25,125 ಕೋಟಿಗೆ ಪರಿಷ್ಕರಿಸುವಂತೆ ವಿಶ್ವೇಶ್ವರಯ್ಯ ಜಲನಿಗಮವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಎತ್ತಿನಹೊಳೆ ಯೋಜನೆಯಿಂದ 7 ಜಿಲ್ಲೆಗಳ ಕುಡಿಯುವ ನೀರಿನ ಬೇಡಿಕೆ ಈಡೇರಿಸಲು 15.029 ಟಿಎಂಸಿ ಅಡಿ ಹಾಗೂ ಒಟ್ಟು 527 ಕೆರೆಗಳನ್ನು ತುಂಬಿಸಲು 8.967 ಟಿಎಂಸಿ ಅಡಿಗಳು ಸೇರಿ ಒಟ್ಟು 24.01ಟಿಎಂಸಿ ಅಡಿಗಳಷ್ಟು ನೀರನ್ನು ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಕೊಳವೆಗಳ ಮೂಲಕ ಹರಿಸಲು ಉದ್ದೇಶಿಸಲಾಗಿದೆ. ಆದರೆ, ನೀರಿನ ಸಂಗ್ರಹಾಗರಗಳ ನಿರ್ಮಾಣ ನೋಡಿದಾಗ, ಇಷ್ಟೊಂದು ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗುವುದೇ ಅನುಮಾನ ಎನ್ನುತ್ತಾರೆ ವಿಜ್ಞಾನಿಗಳು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಹರಿಸುವ ಯೋಜನೆಯ ಕುರಿತು ರಾಜ್ಯ ಸರ್ಕಾರವು 2022–23ನೇ ಸಾಲಿನ ಬಜೆಟ್‌ನಲ್ಲಿ ಪ‍್ರಸ್ತಾಪಿಸಿದೆ. ಈ ಯೋಜನೆಯ ಅಂದಾಜು ವೆಚ್ಚದ ವಿವರಗಳನ್ನು ಸರ್ಕಾರಇನ್ನೂ ಬಹಿರಂ ಗಪಡಿಸಿಲ್ಲ. ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಬೆಂಗಳೂರಿಗೆ ಹರಿಸುವುದಕ್ಕೂ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಡಿಪಿಆರ್‌ ತಯಾರಿಸಲು ಸೂಚಿಸಿತ್ತು. ಅಂದಾಜು ₹ 12,500 ಕೋಟಿಗೂ ಅಧಿಕ ಬಂಡವಾಳ ಬಯಸುವ ಈ ಯೋಜನೆ ಸದ್ಯಕ್ಕೆ ಸುಪ್ತಾವಸ್ಥೆಯಲ್ಲಿದೆ. ಬೇಡ್ತಿ–ವರದಾ ಜೋಡಣೆ ಯೋಜನೆಯು ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಗಳ ಪಟ್ಟಿಯಲ್ಲಿದ್ದು, ಇದರ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ.

‘ನದಿ ತಿರುಗಿಸಿ ಕೈಸುಟ್ಟುಕೊಂಡ ಬಹಳಷ್ಟು ನಿದರ್ಶನಗಳು ಜಗತ್ತಿನಲ್ಲಿ ಸಿಗುತ್ತವೆ. ರಷ್ಯಾದ ಅರಾಲ್‌ ಸಮುದ್ರ ಸೇರುವ ನದಿಗಳನ್ನು ತಿರುಗಿಸಿದ್ದರಿಂದ 1980ರ ದಶಕದ ಕೊನೆಯಲ್ಲಿ ಅಲ್ಲಿನ ಪರಿಸರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತು. ಸಮುದ್ರದಲ್ಲಿ ತಟದುದ್ದಕೂ ಮೀನುಗಾರಿಕೆ ಉದ್ಯಮ ನೆಲಕಚ್ಚಿತು. ನೀರಿನಲ್ಲಿ ಲವಣಾಂಶ ಮತ್ತು ಖನಿಜಾಂಶಗಳ ಪ್ರಮಾಣ ಜಾಸ್ತಿಯಾಯಿತು. ಗುಜರಾತ್‌ನ ನದಿ ತಿರುವು ಯೋಜನೆಗಳಿಂದ ಮೀನುಗಾರರ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ’ ಎನ್ನುತ್ತಾರೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ.

‘ನೀರಿನ ಬಿಕ್ಕಟ್ಟು ಎದುರಾದಾಗಲೆಲ್ಲಾ ನದಿ ತಿರುವು ಯೋಜನೆಗಳು ಧುತ್ತೆಂದು ಪ್ರತ್ಯಕ್ಷವಾಗುತ್ತವೆ. ಮಳೆ ನೀರನ್ನೇ ಬಳಸುವ ಮಿತವ್ಯಯದ ಪರಿಹಾರಗಳು ಆಳುವವರಿಗೆ ಪಥ್ಯವಾಗುವುದಿಲ್ಲ. ಹಣದ ಹೊಳೆಯನ್ನೇ ಹರಿಸುವ ನದಿ ತಿರುವು ಯೋಜನೆಗಳ ಹಿಂದಿನ ನೈಜ ಉದ್ದೇಶ ನೀರಿನ ಕೊರತೆ ನೀಗಿಸುವುದಂತೂ ಅಲ್ಲವೇ ಅಲ್ಲ. ಸಾರ್ವಜನಿಕರ ಹಣವನ್ನು ಲೂಟಿ ಮಾಡುವುದೇ ಇಂತಹ ಯೋಜನೆಗಳ ಗುಪ್ತ ಕಾರ್ಯಸೂಚಿ’ ಎಂದು ಅವರು ಟೀಕಿಸುತ್ತಾರೆ.

‘ಕಾಡು ಕಳೆದುಕೊಂಡರೆ ನದಿಯೂ ಉಳಿಯದು’

‘ಕಾಡನ್ನು ಉಳಿಸಿಕೊಂಡರೆ ಮಳೆಯೂ ಆಗುತ್ತದೆ. ನದಿಯೂ ಉಳಿಯುತ್ತದೆ ಎಂಬುದು ನಮ್ಮ ಸಂಸ್ಥೆಯ ಅಧ್ಯಯನದಿಂದಲೂ ಸಾಬೀತಾಗಿದೆ’ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ.

‘ಲಿಂಗನಮಕ್ಕಿ ಜಲಾಶಯ ಪ್ರದೇಶದಲ್ಲಿ 1901ರಿಂದ 1965ರವರೆಗೂ ವರ್ಷದಲ್ಲಿ ಸರಾಸರಿ 3,500 ಮಿ.ಮೀ.ಗಳಿಂದ 4,500 ಮಿ.ಮೀ.ಗಳಷ್ಟು ಮಳೆಯಗುತ್ತಿತ್ತು. ಅಣೆಕಟ್ಟು ಕಟ್ಟಿದ ಬಳಿಕ ಜಲಾನಯನ ಪ್ರದೇಶದ ಪೂರ್ವ ಭಾಗದಲ್ಲಿ ಶೇ 50ರಷ್ಟು ಕಾಡು ನಾಶವಾಯಿತು. ಕಾಡು ಉಳಿದುಕೊಂಡಿರುವ ಪ್ರದೇಶದಲ್ಲಿ ಈಗಲೂ ಅಷ್ಟೇ ಮಳೆಯಾಗುತ್ತಿದೆ. ಕಾಡನ್ನು ಕಳೆದುಕೊಂಡ ಪ್ರದೇಶದಲ್ಲಿ ವಾರ್ಷಿಕ ಮಳೆ ಸರಾಸರಿ 1,900 ಮಿ.ಮೀ.ಗೆ ಇಳಿದಿದೆ’ ಎಂದರು.

ಡಾ.ಟಿ.ವಿ.ರಾಮಚಂದ್ರ
ಡಾ.ಟಿ.ವಿ.ರಾಮಚಂದ್ರ

‘ಸ್ಥಳೀಯ ಪ್ರಭೇದಗಳ ಸಸ್ಯವರ್ಗ ಜಾಸ್ತಿ ಇರುವ ನದಿಗಳ ಜಲಾನಯನ ಪ್ರದೇಶದ ಬಾವಿಗಳಲ್ಲಿ ಹಾಗೂ ಝರಿಗಳಲ್ಲಿ ವರ್ಷವಿಡೀ ನೀರಿನ ಒರತೆ ಇರುತ್ತದೆ. ನೆಡುತೋಪುಗಳನ್ನು ಬೆಳೆಸಿದ ಕಡೆ ಬಾವಿಗಳಲ್ಲಿ ವರ್ಷದಲ್ಲಿ ಆರರಿಂದ ಎಂಟು ತಿಂಗಳು ನೀರು ಲಭ್ಯ. ಕಾಡಿನ ಪ್ರಮಾಣ ಶೇ 30ಕ್ಕಿಂತಲೂ ಕಡಿಮೆಯಾದ ಕಡೆ ಮಳೆಗಾಲದಲ್ಲಿ ಮಾತ್ರ ನೀರು ಸಿಗುತ್ತದೆ. ನದಿ ತಿರುವು ಯೋಜನೆಗಳಿಗೆ ದುಡ್ಡು ಪೋಲು ಮಾಡುವ ಬದಲು ಸರ್ಕಾರ ಜಲಾನಯನ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಕೇವಲ ಚೆಕ್‌ಡ್ಯಾಮ್‌ ನಿರ್ಮಿಸಿದರೆ ಸಾಲದು, ಸ್ಥಳೀಯ ಪ್ರಭೇದದ ಗಿಡ ಮರಗಳನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಮೇಕೆದಾಟು ಯೋಜನೆಗೆ 5 ಸಾವಿರ ಹೆಕ್ಟೇರ್‌ಗಳಷ್ಟು ಕಾಡು ಮುಳುಗಡೆ ಆಗುತ್ತದೆ. ಇಷ್ಟೊಂದು ಕಾಡು ವರ್ಷದಲ್ಲಿ 100 ಟಿಎಂಸಿ ಅಡಿಗಳಷ್ಟು ನೀರನ್ನು ಹಿಡಿದಿಟ್ಟುಕೊಳ್ಳಬಲ್ಲುದು. 65 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಿಸಲು 100 ಟಿಎಂಸಿ ಅಡಿಗಳಷ್ಟು ನೀರು ಹಿಡಿದಿಟ್ಟುಕೊಳ್ಳುವ ಕಾಡನ್ನು ಕಳೆದುಕೊಳ್ಳುವುದು ಮೂರ್ಖತನದ ಪರಮಾವಧಿ’ ಎಂದರು.

‘ಗಂಗಾ– ಕಾವೇರಿ: ವಿನಾಶಕ್ಕೆ ದಾರಿ’

ಗಂಗಾ– ಕಾವೇರಿ ಜೋಡಣೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದು. ಗಂಗೆಯ ನೀರನ್ನು ಸುವರ್ಣರೇಖಾ, ಮಹಾನದಿ, ಗೋದಾವರಿ, ಕೃಷ್ಣಾ, ಪೆನ್ನಾರ್‌, ಪಾಲಾರ್‌ ನದಿಗಳ ಮೂಲಕ ಕಾವೇರಿ ನದಿಗೆ ಹರಿಸುವ ಈ ಯೋಜನೆಯಿಂದ ಪರ್ಯಾಯ ದ್ವೀಪದ ನೀರಿನ ಕೊರತೆಯಾಗಲಿದೆ ಎಂಬುದು ಕೇಂದ್ರದ ವಾದ.

ಈ ಯೋಜನೆಯ ಕುರಿತು ಅಧ್ಯಯನ ನಡೆಸಿರುವ ನಿವೃತ್ತ ಮೇಜರ್‌ ಜನರಲ್‌ ಸುಧೀರ್‌ ಒಂಬತ್ಕೆರೆ ಅವರು ಈ ಯೋಜನೆ ಸೃಷ್ಟಿಸುವ ಅಪಾಯಗಳನ್ನು ಎಳೆಎಳೆಯಾಗಿ ವಿವರಿಸುತ್ತಾರೆ. ‘ರಾಜಕಾರಣಿಗಳು, ಅಧಿಕಾರಿಗಳು, ಕಾರ್ಪೊರೇಟ್‌ ಕಂಪನಿಗಳು ಹಾಗೂ ಗುತ್ತಿಗೆದಾರರ ಕಪಟ ಕೂಟವು 2002ರಿಂದಲೂ ನದಿ ಜೋಡಣೆ ಯೋಜನೆ ಜಾರಿಗೆ ಒತ್ತಾಯಿಸುತ್ತಿದೆ. ಅಕ್ರಮ ಕೂಸಾಗಿರುವ ಈ ಯೋಜನೆ ದುಬಾರಿ ಮಾತ್ರವಲ್ಲ; ತಾಂತ್ರಿಕವಾಗಿಯೂ ಅಸಂಬದ್ಧ. ಪರಿಸರದ ಪಾಲಿಗೆ ವಿಧ್ವಂಸಕಾರಿಯಾದ ಹಾಗೂ ಸಾಮಾಜಿಕವಾಗಿಯೂ ಹಾನಿಕಾರಕವಾದ ಈ ಯೋಜನೆ ಈಗಾಗಲೇ ಹದಗೆಟ್ಟಿರುವ ಸಾಮಾಜಿಕ, ಪರಿಸರಾತ್ಮಕ, ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಮತ್ತಷ್ಟು ಕೆಡಿಸಲಿದೆ’ ಎಂದು ಅವರು ಎಚ್ಚರಿಸಿದರು.

ಸುಧೀರ್‌
ಸುಧೀರ್‌

‘ಗಂಗಾನದಿಯು ಬಿಹಾರದಲ್ಲಿ ಸಮುದ್ರಮಟ್ಟಕ್ಕಿಂತ 65 ಮೀ ಎತ್ತರದಲ್ಲಿ ಹರಿಯುತ್ತದೆ. ಗೋದಾವರಿ, ಕೃಷ್ಣಾ, ಪೆನ್ನಾರ್‌, ಪಾಲಾರ್‌, ಕಾವೇರಿ ನದಿಗಳನ್ನು ಜೋಡಿಸುವ ಕಾಲುವೆಗಳೆಲ್ಲವೂ ಇದಕ್ಕಿಂತ ತಗ್ಗು ಪ್ರದೇಶದಲ್ಲಿರಲಿವೆ. ತಮಿಳುನಾಡಿನಲ್ಲಿ ಕಾವೇರಿಯನ್ನು ಸಂಪರ್ಕಿಸುವ ಕಾಲುವೆ ಸಮುದ್ರ ಮಟ್ಟಕ್ಕಿಂತ 50 ಮೀ ಎತ್ತರದಲ್ಲಿರಲಿದೆ. ಕರ್ನಾಟಕವೂ ಸೇರಿದಂತೆ ಪರ್ಯಾಯ ದ್ವೀಪ ಪ್ರದೇಶಗಳಲ್ಲಿ ನೀರಿನ ಕೊರತೆ ತೀವ್ರವಾಗಿ ಇರುವುದು ಸಮುದ್ರ ಮಟ್ಟಕ್ಕಿಂತ 800 ಮೀ ಎತ್ತರದ ಪ್ರದೇಶಗಳಲ್ಲಿ. ಗಂಗಾ ನದಿ ನೀರನ್ನು 60 ಮೀ ಎತ್ತರದ ಸುವರ್ಣರೇಖಾ ನದಿಗೆ, ಅದರಿಂದ 48 ಮೀ ಎತ್ತರದ ಮಹಾನದಿಗೆ, ಅದರಿಂದ 116 ಮೀ ಎತ್ತರದ ಗೋದಾವರಿ ಮತ್ತು ಕೃಷ್ಣಾ ನದಿಗಳಿಗೆ ನೀರು ಪಂಪ್‌ ಮಾಡಬೇಕು. ಇದಕ್ಕೆ ನಿರಂತರವಾಗಿ ಭಾರಿ ಪ್ರಮಾಣದ ವಿದ್ಯುತ್‌ ಪೂರೈಕೆಯ ಅಗತ್ಯವಿದೆ’ ಎಂದು ವಿವರಿಸಿದರು.

‘ಗಂಗೆಯ ನೀರು ಕಾವೇರಿಯನ್ನು ತಲುಪಬೇಕಾದರೆ ನದಿಗಳನ್ನು ಜೋಡಿಸುವ ಪ್ರತಿಯೊಂದು ಕಾಲುವೆಯಲ್ಲೂ ನಿರಂತರವಾಗಿ ನೀರು ಹರಿಯುವುದೂ ಮುಖ್ಯ. ತಳಮಳಕ್ಕೊಳಗಾಗುವ ರೈತರನ್ನು ಸಾಂತ್ವನಪಡಿಸಲೆಂದೋ, ಸ್ಥಳೀಯ ರಾಜಕೀಯದ ಕಾರಣಕ್ಕೋ, ವಿದ್ಯುತ್‌ ವ್ಯತ್ಯಯದಿಂದಲೋ, ಕಾಲುವೆಗಳು ಒಡೆದು ಹೋಗಿಯೋ ಅಥವಾ ಪ್ರಾಕೃತಿಕ ವಿಕೋಪದಿಂದಾಗಿಯೋ ನೀರಿನ ನಿರಂತರ ಹರಿವಿಗೆ ಅಡ್ಡಿ ಉಂಟಾದರೆ ಅದು ಅಂತರರಾಜ್ಯ ವಿವಾದಗಳಿಗೆ ಕಾರಣವಾಗಲಿದೆ. ಸುಪ್ರಿಂ ಕೋರ್ಟ್‌ ಮಧ್ಯಪ್ರವೇಶದ ಹೊರತಾಗಿಯೂ ಈಗಿನ ಅಂತರರಾಜ್ಯ ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿಗಳಿಗೆ ಸಾಧ್ಯವಾಗಿಲ್ಲ. ನದಿ ಜೋಡಣೆ ಇಂತಹ ವಿವಾದಗಳನ್ನು ಮತ್ತಷ್ಟು ಹೆಚ್ಚಿಸಲಿದೆ’ ಎಂದು ಸುಧೀರ್‌ ಕಳವಳ ವ್ಯಕ್ತಪಡಿಸಿದರು.

‘ನದಿ ಜೋಡಣೆಗೆ ಅಗತ್ಯವಿರುವ ಅಣೆಕಟ್ಟು, ಕಾಲುವೆಗಳ ನಿರ್ಮಾಣಕ್ಕೆ ಜನರ ಆಸ್ತಿಪಾಸ್ತಿ ನಷ್ಟವಾಗುತ್ತದೆ. 1950ರಿಂದ ನೀರಾವರಿ ಯೋಜನೆಗಳಿಗಾಗಿ 5 ಕೋಟಿಗೂ ಹೆಚ್ಚು ಮಂದಿ ನಿರ್ವಸಿತರಾಗಿದ್ದಾರೆ. ಕುಟುಂಬಗಳು ವಲಸೆ ಹೋದ ಪ್ರದೇಶದ ಸಾಮಾಜಿಕ ವ್ಯವಸ್ಥೆಯೂ ಅಸ್ತವ್ಯಸ್ತವಾಗುತ್ತದೆ. ನದಿ ಜೋಡಣೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳು ಅಗಾಧ. ಕಾಡುಗಳ ಮುಳುಗಡೆ ಇನ್ನೊಂದು ಕರಾಳ ವಿಷಯ’ ಎಂದು ಅವರು ಎಚ್ಚರಿಸಿದರು.

2002ರಲ್ಲಿ ಅಂದಾಜು ಮಾಡಿದ ಪ್ರಕಾರ ನದಿಗಳ ಜೋಡಣೆ ಯೋಜನೆಗೆ ₹ 5.60 ಲಕ್ಷ ಕೋಟಿ ಬಂಡವಾಳದ ಅಗತ್ಯವಿತ್ತು. ಇದರ ಪರಿಷ್ಕೃತ ಮೊತ್ತದ ಖಚಿತ ಮಾಹಿತಿ ಲಭ್ಯ ಇಲ್ಲ. ಯುಪಿಎ ಸರ್ಕಾರ ಈ ಯೋಜನೆ ಅನುಷ್ಠಾನದ ಬಗ್ಗೆ ಆಸಕ್ತಿ ವಹಿಸಿರಲಿಲ್ಲ. ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನದಿ ಜೋಡಣೆಯ ಪಟ್ಟಿಯಲ್ಲಿರುವ ಅನೇಕ ಯೋಜನೆಗಳ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ.

‘ನದಿ ತಿರುವು ಅಲ್ಲ, ನಿಧಿ ತಿರುವು’

ನದಿ ತಿರುವು ಯೋಜನೆಗಳೆಲ್ಲವೂ ನಿಧಿ ತಿರುವು ಯೋಜನೆಗಳು. ಎತ್ತಿನಹೊಳೆ ಯೋಜನೆಗೆ ಆರಂಭದಲ್ಲಿ 8 ಸಾವಿರ ಕೋಟಿ ಅನುದಾನ ಹಂಚಿಕೆ ಮಾಡಿದರು. ಇದುಪೂರ್ಣಗೊಳ್ಳುವಾಗ ವೆಚ್ಚ ₹ 30 ಸಾವಿರ ಕೋಟಿ ದಾಟಲಿದೆ. ಇದರಿಂದ ಹನಿ ನೀರೂ ಹರಿಯುವುದಿಲ್ಲ. ರಾಜ್ಯದಲ್ಲಿ ನದಿ ತಿರುವು ಮಾಡುವು ದರಿಂದ ಭಾರಿ ದುಷ್ಪರಿಣಾಮ ಎದುರಿಸುವುದು ಪಶ್ಚಿಮ ಘಟ್ಟ ಮತ್ತು ಅರಬ್ಬೀ ಸಮುದ್ರ. ಮಳೆ ನೀರು ಪಶ್ಚಿಮಘಟ್ಟದಲ್ಲಿ ಸಂಗ್ರಹವಾಗಿ, ಮುಂದಿನ ಮಳೆಗಾಲದವರೆಗೆ ಕಂತಿನ ರೂಪದಲ್ಲಿ ನದಿಗಳಿಗೆ ನೀರು ಹರಿಸುತ್ತದೆ. ಆ ರೀತಿ ಸಮುದ್ರ ಸೇರುವ ಸಿಹಿನೀರೇ ಆವಿಯಾಗಿ, ಮೋಡವಾಗಿ ‍ಪರಿವರ್ತನೆಗೊಂಡು ಮಳೆ ತರುತ್ತದೆ. ನದಿ ತಿರುವು ಮಾಡುವುದು ಮಿದುಳು ಮತ್ತು ಹೃದಯದ ನಡುವಿನ ಸಂಪರ್ಕವನ್ನು ಕಡಿತಗೊಳಿಸಿದಂತೆ. ಹೊಳೆ ಹರಿವಿಗೆ ಅದರದ್ದೇ ದಾರಿ ಇದೆ. ಅದನ್ನು ತಿರುಗಿಸುವುದು ನದಿಯ ಪಾಲಿಗೆ ಮರಣಶಾಸನದಂತೆ.

ದಿನೇಶ್‌ ಹೊಳ್ಳ,ಪರಿಸರ ಕಾರ್ಯಕರ್ತ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT