ಗುರುವಾರ , ಫೆಬ್ರವರಿ 20, 2020
31 °C

ಒಳನೋಟ ‌| ವಿಶೇಷ ಸ್ಥಾನಮಾನ, ಕೆಲವರಿಗಷ್ಟೇ ಇಲ್ಲಿ 'ಕಲ್ಯಾಣ'

ಗಣೇಶ ಡಿ.ಚಂದನಶಿವ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತಂದು ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಆರು ವರ್ಷಗಳು ಉರುಳಿವೆ. ಹೆಸರು ‘ಕಲ್ಯಾಣ ಕರ್ನಾಟಕ’ ಎಂದು ಬದಲಾಗಿದ್ದರೂ ‘ಸಮಗ್ರ ಅಭಿವೃದ್ಧಿಯ ಮೂಲಕ ಜನಕಲ್ಯಾಣ’ ಎಂಬ ಪರಿಕಲ್ಪನೆ ಇನ್ನೂ ಅಂಬೆಗಾಲಿಡುತ್ತಿದೆ.

ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ಕಾಯ್ದೆ ರೂಪಿಸಿದೆ. ಅದರಲ್ಲಿ ಬಹುಮುಖ್ಯ ಕೊಡುಗೆ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ. ಶೈಕ್ಷಣಿಕ ಮೀಸಲಾತಿಯು ಈ ಪ್ರದೇಶದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದ ಹೆಬ್ಬಾಗಿಲನ್ನೇ ತೆರೆದಿದೆ. ಉದ್ಯೋಗಾವಕಾಶ ಸಿಗುತ್ತಿದ್ದರೂ ಕೆಲ ‘ಅಡೆ–ತಡೆ’ ನಿವಾರಣೆಯಾಗಿಲ್ಲ. 

ವಿಶೇಷ ಸ್ಥಾನಮಾನ ನೀಡಿರುವ ಕೇಂದ್ರ ಸರ್ಕಾರ ಈ ವರೆಗೂ ವಿಶೇಷ ಅನುದಾನ ಕೊಟ್ಟಿಲ್ಲ. ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ಗೆ (ಕೆಕೆಆರ್‌ಡಿಬಿ) ರಾಜ್ಯ ಸರ್ಕಾರ ಪ್ರತಿ ವರ್ಷ ₹1500 ಕೋಟಿ ವಿಶೇಷ ಅನುದಾನ ಮೀಸಲಿಡುತ್ತಿದೆ. ಮಂಡಳಿಯ ಆಡಳಿತವನ್ನು ಬಲಗೊಳಿಸಿ ಅನುದಾನ ವ್ಯಯಿಸುವ ಸಾಮರ್ಥ್ಯವನ್ನು ವೃದ್ಧಿಸುವ ಕೆಲಸವಾಗಿಲ್ಲ. ಪ್ರಾದೇಶಿಕ ಆಯುಕ್ತರಿಗೇ ಮಂಡಳಿಯ ಕಾರ್ಯದರ್ಶಿಯ ಪ್ರಭಾರ ಹುದ್ದೆ ನೀಡುವುದು ಸಂಪ್ರದಾಯದಂತೆ ಪಾಲನೆಯಾಗುತ್ತಿದೆ. ಮಂಡಳಿಗೆ ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ ಬೇಕು ಎಂಬ ಬೇಡಿಕೆ ಈಡೇರಿಲ್ಲ. ಈ ಪ್ರದೇಶಕ್ಕೆ ಮಂಜೂರಾದ ಹುದ್ದೆಗಳಲ್ಲಿ ಶೇ 28ರಷ್ಟು ಖಾಲಿ ಉಳಿದಿದ್ದು, ಮಂಡಳಿಯ ಯೋಜನೆಗಳು ಮಾತ್ರವಲ್ಲದೆ, ಇತರೆ ಇಲಾಖೆಗಳ ಯೋಜನೆಗಳ ಅನುಷ್ಠಾನದ ವೇಗ ಹೆಚ್ಚುತ್ತಿಲ್ಲ. 

ಮೀಸಲಿಟ್ಟ ಹಣ ಆಯಾ ವರ್ಷವೇ ಖರ್ಚಾದ ಉದಾಹರಣೆ ಇಲ್ಲ. ಆದರೆ, ಮಂಡಳಿಗೆ ಬಿಡುಗಡೆ ಮಾಡುವ ಅನುದಾನ ‘ಲ್ಯಾಪ್ಸ್‌’ ಆಗುವುದಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಯೋಜನೆಗಳ ಅನುಷ್ಠಾನ ತುಸು ವೇಗ ಪಡೆದುಕೊಂಡಿದ್ದು, ಹೆಚ್ಚಿನ ಹಣ ವೆಚ್ಚವಾಗಿದೆ.

2014ರ ಅಂತ್ಯಕ್ಕೆ ಈ ಭಾಗದಲ್ಲಿ 30,174 ಹುದ್ದೆಗಳು ಖಾಲಿ ಇವೆ ಎಂದು ರಾಜ್ಯ ಸರ್ಕಾರ ಗುರುತಿಸಿತ್ತು. ಇವುಗಳ ಭರ್ತಿಗೆ ಹಣಕಾಸು ಇಲಾಖೆಯ ಒಪ್ಪಿಗೆಯ ಅಗತ್ಯವಿಲ್ಲ ಎಂಬ ನಿರ್ಣಯ ಕೈಗೊಂಡು, ಹುದ್ದೆಗಳ ತ್ವರಿತ ಭರ್ತಿಗೆ ನಿರ್ಧರಿಸಿತ್ತು. ಆದರೆ, ಎಲ್ಲ ಹುದ್ದೆಗಳೂ ಭರ್ತಿಯಾಗಿಲ್ಲ. ಇನ್ನೊಂದೆಡೆ ಅರ್ಹ ಪದವೀಧರ ವಿಜ್ಞಾನ ಶಿಕ್ಷಕರೇ ಸಿಗುತ್ತಿಲ್ಲ ಎಂಬ ಕಾರಣಕ್ಕೆ 1500ಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಭರ್ತಿಯಾಗದೆ ಉಳಿದಿವೆ.

ಇದನ್ನೂ ಓದಿ... ಒಳನೋಟ | ಉನ್ನತ ಹುದ್ದೆ ಗಿಟ್ಟಿಸಲು ನೆರವಾದ ಮೀಸಲಾತಿ

ಇನ್ನು ರಸ್ತೆ–ಕಟ್ಟಡ ಎಂಬ ‘ತ್ವರಿತ ಅಭಿವೃದ್ಧಿ’ಯ ಹಿಂದೆ ಬಿದ್ದಿರುವ ಜನಪ್ರತಿನಿಧಿಗಳು ಈ ಭಾಗದಲ್ಲಿ ಹೇರಳವಾಗಿರುವ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ. ಇದರಿಂದಾಗಿ ನಿರುದ್ಯೋಗ–ಗುಳೆ ಸಮಸ್ಯೆ ನೀಗಿಲ್ಲ. ಶಾಲಾ–ಕಾಲೇಜುಗಳ ಕಟ್ಟಡಗಳು ದುರಸ್ತಿಯಾಗಿವೆ. ಕಲಿಕಾ ಉಪಕರಣಗಳನ್ನು ನೀಡಲಾಗಿದೆ. ಹಳ್ಳಿ ಶಾಲೆಗಳಿಗೂ ಸ್ಮಾರ್ಟ್‌ ಬೋರ್ಡ್‌, ಕಂಪ್ಯೂಟರ್‌ಗಳು ಬಂದಿವೆ. ಶಿಕ್ಷಕರ ಕೊರತೆ ನೀಗಿಲ್ಲ. ಇರುವ ಶಿಕ್ಷಕರ ಸಾಮರ್ಥ್ಯ ವೃದ್ಧಿಯ ಕಾರ್ಯ ನಡೆದಿಲ್ಲ. ಪ್ರಾಥಮಿಕದಿಂದ ವಿಶ್ವವಿದ್ಯಾಲಯವರೆಗೂ ಇದೇ ಸ್ಥಿತಿ. ಸಾಕ್ಷರತೆಯ ಮಟ್ಟ ಹೆಚ್ಚಾಗಿಲ್ಲ. ಈ ಭಾಗದ ಜಿಲ್ಲೆಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕದಲ್ಲಿ ಕೆಳಮಟ್ಟದಲ್ಲಿವೆ.

ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಕಾಲಕ್ಕೆ ವೈದ್ಯಕೀಯ ಸೇವೆ ದೊರೆಯದೆ ತಾಯಿ ಮತ್ತು ಶಿಶು ಮರಣ ಪ್ರಮಾಣ ಹೆಚ್ಚಿರುವುದು ಈ ಭಾಗದ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಬಾಲ್ಯ ವಿವಾಹದ ಪಿಡುಗು ಅವ್ಯಾಹತವಾಗಿದೆ.

ಆಸ್ಪತ್ರೆಗಳ ಕಟ್ಟಡ ರಿಪೇರಿ–ಉಪಕರಣಗಳ ಖರೀದಿಗೆ ಆದ್ಯತೆ ನೀಡಿದ್ದರೂ ವೈದ್ಯರ ಮತ್ತು ತಂತ್ರಜ್ಞರ ಕೊರತೆ ಹೆಚ್ಚಿದೆ. ಹೀಗಾಗಿ ಗ್ರಾಮೀಣ ಪ್ರದೇಶದ ಜನ ಈಗಲೂ ಉತ್ತಮ ಆರೋಗ್ಯ ಸೇವೆಯಿಂದ ವಂಚಿತ. ಬಹುಪಾಲು ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಫ್ಲೋರೈಡ್‌ ಹಾಗೂ ಕಲುಷಿತ ನೀರಿನ ಹಾವಳಿ ಕಡಿಮೆ ಆಗಿಲ್ಲ. 

ಉಷ್ಣ ವಿದ್ಯುತ್‌ ಸ್ಥಾವರಗಳು, ಸಿಮೆಂಟ್‌ ಮತ್ತು ಉಕ್ಕಿನ ಕಾರ್ಖಾನೆಗಳೇನೋ ಇಲ್ಲಿವೆ. ಹೇರಳ ಮಾನವ ಸಂಪನ್ಮೂಲ, ಜಮೀನು ಹಾಗೂ ನೀರು ಇದ್ದರೂ ಇತರೆ ಕೈಗಾರಿಕೆಗಳ ಸ್ಥಾಪನೆ ಆಗಿಲ್ಲ. ಕೇಂದ್ರ ಸರ್ಕಾರ, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನಿಮ್ಜ್‌) ಮಂಜೂರು ಮಾಡಿದೆ. ತುಮಕೂರಿನಲ್ಲಿ ಇದು ಆರಂಭಗೊಂಡಿದೆ. ಆದರೆ, ಕಲಬುರ್ಗಿ ಯೋಜನೆ ಇನ್ನೂ ಕಾಗದದ ಮೇಲೆ ಇದೆ!

ಸುಮಾರು 18 ವರ್ಷಗಳ ಹಿಂದೆ ಸಿದ್ಧಪಡಿಸಿರುವ ಡಾ.ಡಿ.ಎಂ.ನಂಜುಂಡಪ್ಪ ವರದಿಯ ಮಾನದಂಡಗಳನ್ನು ಆಧರಿಸಿ ಈ ಪ್ರದೇಶದ ಹಿಂದುಳಿದ ತಾಲ್ಲೂಕುಗಳಿಗೆ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಇದರ ಬದಲು ಇನ್ನೊಮ್ಮೆ ಸಮೀಕ್ಷೆ ನಡೆಸಿ ಆಯಾ ತಾಲ್ಲೂಕು/ಗ್ರಾಮಗಳಿಗೆ ಅವಶ್ಯವಿರುವ ಅಭಿವೃದ್ಧಿ ಯೋಜನೆ ರೂಪಿಸಬೇಕು ಎಂಬ ಧ್ವನಿ ಶಕ್ತಿ ಪಡೆದುಕೊಳ್ಳುತ್ತಿದೆ.

ರಸ್ತೆ ಸಂಪರ್ಕ ಜಾಲ ಸುಧಾರಣೆಯಾಗುತ್ತಿದೆ. ಕಲಬುರ್ಗಿಯಿಂದ ಈಗಷ್ಟೇ ವಿಮಾನಯಾನ ಸೇವೆ ಆರಂಭಗೊಂಡಿದೆ. ರೈಲ್ವೆ ಸೇವೆಯೂ ಉತ್ತಮಗೊಳ್ಳುತ್ತಿದೆ. ಇದು ವಾಣಿಜ್ಯೋದ್ಯಮ ಅಭಿವೃದ್ಧಿಯ ಆಶಾಭಾವ ಹೆಚ್ಚುವಂತೆ ಮಾಡಿದೆ.

ಇದನ್ನೂ ಓದಿ... ಒಳನೋಟ | ಕಲ್ಯಾಣ ಕರ್ನಾಟಕ, ಶಿಕ್ಷಣ ಸೌಲಭ್ಯಕ್ಕೆ ವರದಾನ

ಮಂಡಳಿಯ ಅಧ್ಯಕ್ಷ ಸ್ಥಾನ ‘ಕೆಳದರ್ಜೆ’ಗೆ
ಕೆಕೆಆರ್‌ಡಿಬಿಗೆ ಆರು ತಿಂಗಳಿನಿಂದ ಅಧ್ಯಕ್ಷರು–ಆಡಳಿತ ಮಂಡಳಿಯ ಸದಸ್ಯರನ್ನು ನೇಮಿಸಿಲ್ಲ. ಈ ಭಾಗದ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಸರದಿಯಂತೆ ಎರಡು ವರ್ಷದ ಅವಧಿಗೆ ಮಂಡಳಿಯ ಅಧ್ಯಕ್ಷರಾಗಲು ಅವಕಾಶ ಇತ್ತು. ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿರುವ ಸರ್ಕಾರ ನಿಯಮಗಳಿಗೆ ತಿದ್ದುಪಡಿ ತರುತ್ತಿದೆ. ‘ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಮಂಡಳಿಯ ಮೂಲ ಉದ್ದೇಶವೇ ಬುಡಮೇಲಾಗುತ್ತದೆ’ ಎಂಬ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ... ಒಳನೋಟ | ಕಲ್ಯಾಣ ಕರ್ನಾಟಕದಲ್ಲಿ ಕೊರತೆ ನೂರು, ಸಿಕ್ಕಿದ್ದು ಚೂರು

ಸಿ.ಎಂ ಭರವಸೆಯೂ ಹುಸಿ
‘ಕಲ್ಯಾಣ ಕರ್ನಾಟಕ’ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಭರವಸೆ ನೀಡಿದ್ದರು. ನಾಲ್ಕು ತಿಂಗಳಾದರೂ ಅದು ಈಡೇರಿಲ್ಲ. ಬೆಂಗಳೂರಿನಲ್ಲಿರುವ 371 (ಜೆ) ಕೋಶದ ಕಚೇರಿಯನ್ನು ಕಲಬುರ್ಗಿಗೆ ಸ್ಥಳಾಂತರಿಸುವ ಕೆಲಸವೂ ಆಗಿಲ್ಲ. ಅಧಿಕಾರದಲ್ಲಿದ್ದವರು ಕಲ್ಯಾಣ ಕರ್ನಾಟಕದಲ್ಲಿ ‘ಭರವಸೆಗಳ ಹೊಳೆ’ ಹರಿಸಿದ್ದೇ ಹೆಚ್ಚು ಎನ್ನುತ್ತಾರೆ ಜನ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು