ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸ್ಪಷ್ಟ ರೂಪುರೇಷೆಯಿಲ್ಲದ್ದೇ ಅನುದಾನ ಬಳಕೆಗೆ ತೊಡಕು

Last Updated 6 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಶೇ 5 ರಷ್ಟು ಅಂಗವಿಕಲ ಕಲ್ಯಾಣ ನಿಧಿ ಮೀಸಲಿಡಲಾಗುತ್ತದೆ ಎನ್ನುವುದೇ ಬಹುತೇಕರಿಗೆ ಗೊತ್ತಿಲ್ಲ. ಬಹಳಷ್ಟು ಇಲಾಖೆಗಳಲ್ಲಿ ಅನುದಾನವಿದ್ದರೂ ಸರಿಯಾಗಿ ಬಳಸುವುದಿಲ್ಲ. ಬಳಸಿದರೂ ಫಲಾನುಭವಿಗಳಿಗೆ ವೈಯಕ್ತಿಕವಾಗಿ ಅನುಕೂಲವಾಗುವಂತಹ ಸೌಲಭ್ಯಗಳು ಸಿಗುತ್ತಿಲ್ಲ.

ಸ್ಥಳೀಯ ಸಂಸ್ಥೆಗಳಲ್ಲಿ ಇದಕ್ಕೆಂದೇ ಪ್ರತ್ಯೇಕ ಬಜೆಟ್‌ ಇಲ್ಲ. ಒಂದು ವೇಳೆ ಅರ್ಜಿ ಹಾಕಿದರೂ ಇಲಾಖೆಯವರು ಅಲೆದಾಡಿಸುತ್ತಾರೆ, ಗಾಲಿಕುರ್ಚಿ, ತ್ರಿಚಕ್ರ ವಾಹನ, ಟ್ಯೂಬ್‌ಲೈಟ್‌, ಸೋಲಾರ್‌ ದೀಪ ಕೊಟ್ಟೆ ಎಂದು ಲೆಕ್ಕ ತೋರಿಸುತ್ತಾರೆ. ನಿಜವಾಗಿ ಅರ್ಹರಾಗಿರುವ ಅಂಗವಿಕಲರಿಗೆ ಏನು ಬೇಕಿದೆ ಎನ್ನುವುದನ್ನು ಯಾರೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ’

ಇವು ಅಂಗವಿಕಲರ ಕಲ್ಯಾಣ ನಿಧಿ ಬಳಕೆ ಕುರಿತಾಗಿ ವ್ಯಾಪಕವಾಗಿ ಕೇಳಿಬಂದಿರುವ ಪ್ರಮುಖ ಆಕ್ಷೇಪ ಹಾಗೂ ಅನುದಾನ ಬಳಕೆಗಿರುವ ಅಡತಡೆಯೂ ಹೌದು.

ಅಂಗವಿಕಲರ ಕಲ್ಯಾಣಕ್ಕಾಗಿ ಮಹಾನಗರ ಪಾಲಿಕೆಗಳಿಂದ– ಗ್ರಾಮ ಪಂಚಾಯ್ತಿಗಳವರೆಗೆ, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಒಟ್ಟು ಶೇ 5ರಷ್ಟು ಅನುದಾನವನ್ನು (2016ಕ್ಕೂ ಮುನ್ನ ಶೇ 3ರಷ್ಟು) ಅಂಗವಿಕಲರ ಕಲ್ಯಾಣ ನಿಧಿಯಾಗಿ ಮೀಸಲಿಡಬೇಕು ಹಾಗೂ ಆ ಅನುದಾನವನ್ನು ಆಯಾ ವರ್ಷವೇ ಬಳಸಬೇಕು ಎನ್ನುವ ನಿಯಮವಿದೆ. ಆದರೆ ಯಾವುದೇ ಇಲಾಖೆಯಲ್ಲಾಗಲಿ, ಸ್ಥಳೀಯ ಸಂಸ್ಥೆಯಲ್ಲಾಗಲಿ ಈ ಅನುದಾನ ಫಲಾನುಭವಿಗಳಿಗೆ ತಲುಪುವುದು ಕಡಿಮೆ. ಮುಖ್ಯವಾಗಿ ಕೆಡಿ‍ಪಿ ಸಭೆಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಖರ್ಚಾಗಿರುವ ಅನುದಾನಗಳ ಕುರಿತು ಚರ್ಚೆಯಾಗಬೇಕು. ಆದರೆ, ಅವೂ ನಡೆಯುವುದಿಲ್ಲ.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 13.24 ಲಕ್ಷ ಅಂಗವಿಕಲರಿದ್ದಾರೆ. 1995ರ ಅಂಗವಿಕಲರ ಕಾಯ್ದೆಯಡಿ 7 ಬಗೆಯ ಅಂಗವೈಕಲ್ಯ ಈ ಸೌಲಭ್ಯದ ವ್ಯಾಪ್ತಿಗೆ ಒಳಪಡುತ್ತಿತ್ತು. 2016ರ ಕಾಯ್ದೆ ಪ್ರಕಾರ 21 ಬಗೆಯ ಅಂಗವೈಕಲ್ಯವನ್ನು ಈ ವ್ಯಾಪ್ತಿಗೆ ಸೇರ್ಪಡೆ ಮಾಡಲಾಯಿತು. 2011ರ ಜನಗಣತಿ ಪ್ರಕಾರ ಎಷ್ಟು ಅಂಗವಿಕಲರಿದ್ದಾರೋ ಅದನ್ನೇ ಮಾನದಂಡವಾಗಿಟ್ಟುಕೊಂಡು ಈಗಲೂ ಅನುದಾನ ಹಂಚಿಕೆ ನಡೆಯುತ್ತಿದೆ. ಆದರೆ 10 ವರ್ಷಗಳಲ್ಲಿ ಅಂಗವಿಕಲರ ಸಂಖ್ಯೆ ದುಪ್ಪಟ್ಟಾಗಿದೆ.

ಮುಖ್ಯವಾಗಿ ಶಿಕ್ಷಣ, ಉದ್ಯೋಗ ಮತ್ತು ತರಬೇತಿ, ಆರ್ಥಿಕ ಸಹಾಯ, ಪುನರ್ವಸತಿ ಯೋಜನೆ ಹಾಗೂ ಸಾಮಾಜಿಕ ಭದ್ರತೆಯಡಿ ಅನುದಾನ ಬಳಕೆಗೆ ಒತ್ತು ನೀಡಬೇಕು. ಈ ಅನುದಾನ ನೀಡುವಾಗ 0–6 ವರ್ಷ, 6–18 ವರ್ಷ, 18ರಿಂದ 35 ವರ್ಷ ಹಾಗೂ 40 ಹಾಗೂ ಅದಕ್ಕೂ ಮೇಲ್ಟಟ್ಟ ವಯಸ್ಸಿನವರೆಂದು ವಿಭಾಗಿಸಿ ನೀಡಬೇಕು. ಆದರೆ ಎಲ್ಲಿಯೂ ಇವುಗಳ ಪಾಲನೆಯಾಗುತ್ತಿಲ್ಲ.

ಶೇ 5ರಷ್ಟು ಅನುದಾನ ಹೊರತಾಗಿ ಪ್ರತಿಯೊಬ್ಬ ಶಾಸಕ ಹಾಗೂ ಸಂಸದರು ತಮ್ಮ ಅನುದಾನದಲ್ಲಿ ವಾರ್ಷಿಕವಾಗಿ ₹10 ಲಕ್ಷ ಖರ್ಚು ಮಾಡಬೇಕು ಎಂಬ ನಿಯಮವಿದೆ. ಬಹುತೇಕ ಜನರು ಯಾವುದೇ ಪ್ರತ್ಯೇಕ ಕ್ರಿಯಾಯೋಜನೆ ರೂಪಿಸುವುದಿಲ್ಲ.

‘ಸರ್ಕಾರದ ಎಲ್ಲ ಇಲಾಖೆಗಳಿಗೆ ವಾರ್ಷಿಕವಾಗಿ ಸುಮಾರು ₹1,500 ಕೋಟಿಯಿಂದ ₹2,000 ಕೋಟಿ ಅನುದಾನ ಬಿಡುಗಡೆಯಾಗುತ್ತದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಅಂದಾಜು ₹50 ಲಕ್ಷದಿಂದ ಒಂದು ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗುತ್ತದೆ. ಅಂಗವಿಕಲರಿಗೆ ಏನು ಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ, ಆಸಕ್ತಿಯೂ ಇಲ್ಲ, ಪಾರದರ್ಶಕತೆಯಿಲ್ಲ. ಗಾಲಿಕುರ್ಚಿ, ಟ್ಯೂಬ್‌ಲೈಟ್‌, ಸೋಲಾರ್‌ ದೀಪಗಳನ್ನೇ ಪ್ರತಿಬಾರಿ ಹಂಚಿಕೆ ಮಾಡುತ್ತಾರೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಅಧ್ಯಕ್ಷ ಮಹೇಶ ಗೌಡ.

‘ಅಂಗವಿಕಲರಿಗೆ ಪೂರಕವಾಗುವ ನೀತಿ ನಿಯಮಾವಳಿಗಳಿಲ್ಲ. ಪ್ರತ್ಯೇಕ ಸಚಿವಾಲಯವಿಲ್ಲ, ಅನುಭವಸ್ಥ ಅಧಿಕಾರಿಗಳ ಕೊರತೆ, ಭ್ರಷ್ಟ ವ್ಯವಸ್ಥೆಯೇ ಇದನ್ನು ಆಳುತ್ತಿದೆ. ಹೀಗಾಗಿಯೇ ಅನುದಾನ ಸದ್ಬಳಕೆಯಾಗುತ್ತಿಲ್ಲ’ ಎನ್ನುತ್ತಾರೆ ಬೆಂಗಳೂರಿನ ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ.

‘ರಾಜ್ಯದಲ್ಲಿ ಅಂಗವಿಕಲರಿಗಾಗಿ ಕೆಲಸ ಮಾಡುವ 300ಕ್ಕೂ ಅಧಿಕ ಎನ್‌ಜಿಒಗಳಿವೆ. ಬುದ್ಧಿಮಾಂದ್ಯ ಮಕ್ಕಳಿಗಾಗಿ ಶಾಲೆ ತೆರೆಯುವುದನ್ನೇ ಬಹಳಷ್ಟು ಎನ್‌ಜಿಒಗಳು ದಂಧೆಯಾಗಿ ಮಾಡಿಕೊಂಡಿವೆ. ಅವುಗಳ ಅನುಕೂಲಕ್ಕಾಗಿಯೇ ಯೋಜನೆಗಳನ್ನು ರೂಪಿಸಲಾಗುತ್ತದೆ’ ಎಂದು ಅವರು ದೂರುತ್ತಾರೆ.

‘ಕಾಲೆರಡೂ ಇಲ್ಲದವರಿಗೂ ಹೊಲಿಗೆ ಮಷಿನ್‌ ಕೊಡ್ತಾರ‍್ರಿ. ಶ್ರವಣ ದೋಷವುಳ್ಳ ಮಕ್ಕಳಿಗೆ ಸೂಕ್ತ ಶ್ರವಣ ಸಾಧನ, ತಪಾಸಣೆಗಳಾಗಲಿ ಇಲ್ಲ. ಅನುದಾನ ಇಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ಅಂಗವಿಕಲ ಮಕ್ಕಳಿಗೆ ಶಾಲೆಗಳಲ್ಲಿ ರ‍್ಯಾಂಪ್‌ ಇಲ್ಲ, ರೇಲಿಂಗ್‌ ಇಲ್ಲ, ಅವರಿಗೆ ಅನುಕೂಲವಾಗುವ ಶೌಚಾಲಯಗಳೂ ಇಲ್ಲ. ಲೆಕ್ಕದಲ್ಲಿ ಮಾತ್ರ ಕಲ್ಯಾಣ ನಿಧಿ ಬಳಕೆಯಾಗಿರುವುದನ್ನು ಅಧಿಕಾರಿಗಳು ತೋರಿಸುತ್ತಾರೆ’ ಎನ್ನುತ್ತಾರೆ ಸಾಮಾಜಿಕ ಪರಿವರ್ತನಾ ಜನಾಂದೋಲನದ ಜಿಲ್ಲಾಸಂಚಾಲಕಿ ಹಾವೇರಿಯ ಹಸೀನಾ ಹೆಡಿಯಾಲ.

ಅಂಗವಿಕಲರ ಕಲ್ಯಾಣ ನಿಧಿಉದ್ದೇಶ

lಅಂಗವಿಕಲ ಮಕ್ಕಳನ್ನು ಆರಂಭದಲ್ಲಿಯೇ ಗುರುತಿಸುವುದು, ಅವರ ಶಿಕ್ಷಣವನ್ನು ಉತ್ತೇಜಿಸುವುದು, ಪ್ರಮುಖ ಶಾಲೆಗಳಲ್ಲಿ ಅಂತಹ ವಿಶೇಷ ಮಕ್ಕಳನ್ನು ದಾಖಲಿಸುವುದು.

lವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ/ ಸಾಧನ ಸಲಕರಣೆಗಳು/ ತ್ರಿಚಕ್ರ ವಾಹನ, ಗಾಲಿ ಕುರ್ಚಿ, ಇತ್ಯಾದಿ ನೀಡುವುದು

lಅರ್ಹರಿಗೆ ಮಾಸಾಶನ ನೀಡಿಕೆ.

lಸ್ವಯಂ ಉದ್ಯೋಗ ಉತ್ತೇಜಿಸುವುದು ಮತ್ತು ಅಂಗವಿಕಲ ಉದ್ಯಮದಾರಿಗೆ ವಿವಿಧ ಸರ್ಕಾರದ ಏಜೆನ್ಸಿ ಹಾಗೂ ಇಲಾಖೆಗಳಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವುದು.

lಪುನರ್ವಸತಿ ಯೋಜನೆ, ನಿವೇಶನ ಖರೀದಿ, ವಸತಿ ವ್ಯವಸ್ಥೆ, ಪಕ್ಕಾ ಮನೆಗಳ ನಿರ್ಮಾಣಕ್ಕೆ ಅನುದಾನ

lಸ್ವಯಂ ಉದ್ಯೋಗಕ್ಕೆ ನೆರವು, ಸಣ್ಣ ಉದ್ದಿಮೆದಾರರಿಗೆ ಸಹಾಯಧನ, ಚಿಲ್ಲರೆ ಅಂಗಡಿ, ಆಟೊ ನೀಡುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT