ಗುರುವಾರ , ಮೇ 13, 2021
17 °C
ಕಾನೂನು ಕ್ರಮವೂ ಬಿಗಿಯಾಗಿಲ್ಲ

ಒಳನೋಟ | ಜಲಮೂಲ ಸೇರುತ್ತಿದೆ ಶೇ. 55ರಷ್ಟು ಕೊಳಚೆ ನೀರು: ತ್ಯಾಜ್ಯವೇ ನೀರಿಗೆ ಕಂಟಕ

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ 17 ನದಿಮಾರ್ಗ ಗಳು ಹೆಚ್ಚು ಕಲುಷಿತಗೊಂಡಿವೆ. ನದಿ, ಕೆರೆ, ಸಾಗರ ಹೀಗೆ ಮಲಿನವಾಗಲು ಕಾರಣ ನಗರ ತ್ಯಾಜ್ಯ. ರಾಜ್ಯದಲ್ಲಿ ಶೇ 55ರಷ್ಟು ಕೊಳಚೆ ನೀರು ನೇರವಾಗಿ ನದಿ, ಕೆರೆಯಂಥ ಜಲಮೂಲಗಳನ್ನು ಸೇರುತ್ತಿದೆ. ಆದರೆ, ಜೀವನದಿಗಳಿಗೆ ವಿಷವುಣಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಕೈಗಳನ್ನು ದುರ್ಬಲಗೊಳಿಸಲಾಗಿದೆ.

ತ್ಯಾಜ್ಯ ನೀರು ಸಂಸ್ಕರಣಾ ಘಟಕ ಗಳನ್ನು (ಎಸ್‌ಟಿಪಿ) ಹೆಚ್ಚಾಗಿ ಸ್ಥಾಪಿಸದಿರುವುದು, ಇರುವ ಎಸ್‌ಟಿಪಿಗಳ ಅಸಮ ರ್ಪಕ ನಿರ್ವಹಣೆ, ಕೆಲವು ವರ್ಷಗಟ್ಟಲೆ ಸ್ಥಗಿತಗೊಂಡಿರುವುದು ಜನಪ್ರತಿನಿಧಿಗಳು, ಉದ್ಯಮಗಳ ಅಸಹಕಾರ– ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯ ಪರಿಣಾಮ ರಾಜ್ಯದ ‘ಜಲ ಸಂಪತ್ತು’ ಕಲುಷಿತಗೊಳ್ಳುತ್ತಿದೆ.

ನದಿ–ಕೆರೆಗಳಿಗೆ ಮಲಿನ ನೀರನ್ನು ನೇರವಾಗಿ ಹರಿಯಬಿಟ್ಟರೆ ಸಂಬಂಧಪಟ್ಟ ಇಲಾಖೆ ಅಥವಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಜಲಮಾಲಿನ್ಯ ಕಾಯ್ದೆಯ ಪ್ರಕಾರ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಅವಕಾಶವಿದೆ. ಆದರೆ, ಇದನ್ನು ಅನುಷ್ಠಾನಕ್ಕೆ ತರಬೇಕಾದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡ ಳಿಯು (ಕೆಎಸ್‌ಪಿಸಿಬಿ) ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಿದೆ.

ಈ ಬಗ್ಗೆ ಪ್ರಶ್ನಿಸಿದರೆ, ಕಾನೂನು ಅನುಷ್ಠಾನದಲ್ಲಿನ ‘ಸಂದಿಗ್ಧ’ವನ್ನು ವಿವ ರಿಸಲು ಪ್ರಾರಂಭಿಸುತ್ತಾರೆ ಮಂಡಳಿಯ ಅಧಿಕಾರಿಗಳು.

‘ಪೌರಾಯುಕ್ತರು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ ಅಥವಾ ಇಲಾಖೆಯ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಆದರೆ, ಹಲವು ಒತ್ತಡಗಳು ಮತ್ತು ಇನ್ನಿತರೆ ಕಾರಣಗಳಿಂದ ಕಾನೂನು ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಹೆದರುವಷ್ಟೂ ಜನ ನಮಗೆ ಹೆದರು ವುದಿಲ್ಲ. ನಮ್ಮ ಮಾತು ಕೇಳುವುದಿಲ್ಲ. ಇನ್ನು, ಐಎಎಸ್‌, ಐಎಫ್‌ಎಸ್‌ ದರ್ಜೆಯ ಅಧಿಕಾರಿಗಳು ಮಾತು ಕೇಳುತ್ತಾರಾ’ ಎಂದು ಕೆಎಸ್‌ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

ಪುನರ್‌ಬಳಕೆಗೆ ಸಿಗದ ಆದ್ಯತೆ: ರಾಜ್ಯವು ನೀರಿನ ಕೊರತೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ, ತ್ಯಾಜ್ಯ ನೀರಿನ ಪುನರ್‌ಬಳಕೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ, ರಾಜ್ಯದಲ್ಲಿ ಒಟ್ಟು ಎಷ್ಟು ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ ಮತ್ತು ಈವರೆಗೆ ಇದಕ್ಕೆ ‘ಸುರಿದಿರುವ’ ಹಣವೆಷ್ಟು ಎಂದು ಕೇಳಿದರೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮುಖದ ಮೇಲೆ ‘ಪ್ರಶ್ನಾರ್ಥಕ ಚಿಹ್ನೆ’ ಮೂಡಿಸಿಕೊಳ್ಳುತ್ತಾರೆ.

ನೀರಿನ ಪುನರ್‌ಬಳಕೆಯ ಕಾರ್ಯ ಏಕೆ ಸಮರ್ಪಕವಾಗಿ ನಡೆಯುತ್ತಿಲ್ಲ, ಎಸ್‌ಟಿಪಿಗಳ ನಿರ್ಮಾಣ ಅಥವಾ ನಿರ್ವಹಣೆ ಕುಂಠಿತಗೊಂಡಿರುವುದು ಏಕೆ ಎಂದು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಅಥವಾ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅನುದಾನ ಕೊರತೆಯ ನೆಪವನ್ನು ಹೇಳುತ್ತಾರೆ.


ಬೈರತಿ ಬಸವರಾಜ

735 ಸ್ಥಗಿತ ಆದೇಶ: ‘ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಒಟ್ಟು ತ್ಯಾಜ್ಯ ನೀರಿನ ಪೈಕಿ ಶೇ 60ರಷ್ಟು ಕೊಳಚೆ ನೀರು ಬೆಳ್ಳಂದೂರು ಮತ್ತು ವರ್ತೂರು ಸೇರುತ್ತದೆ. ಕೆರೆಗಳಲ್ಲಿ ನೊರೆಗಳೆದ್ದಾಗ ಸುದ್ದಿಯಾಗುತ್ತವೆ. ಈ ಕೆರೆಗಳು ಸೇರಿದಂತೆ ನಗರದ ವಿವಿಧ ಜಲಮೂಲಗಳಿಗೆ ಕೊಳಚೆ ನೀರು ಬಿಡುತ್ತಿದ್ದ 735 ವಸತಿ ಸಮುಚ್ಚಯಗಳು ಮತ್ತು ಕಾರ್ಖಾನೆಗಳಿಗೆ ನೀರು ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಆದೇಶಿಸಲಾಗಿದೆ’ ಎಂದು ಕೆಎಸ್‌ಪಿಸಿಬಿ ಹಿರಿಯ ಪರಿಸರ ಅಧಿಕಾರಿ ಸೈಯದ್‌ ಖಾಜಾ ತಿಳಿಸಿದರು.

‘ಆನೇಕಲ್‌ ಪುರಸಭೆ ಮುಖ್ಯಾಧಿಕಾರಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು.

‘ಸ್ಥಗಿತ ಆದೇಶ ಎಂದರೆ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಮಾನವೀಯ ನೆಲೆಗಟ್ಟಿನಲ್ಲಿ ನೋಡಿದರೆ ಈ ಕ್ರಮದ ಅನುಷ್ಠಾನವೂ ಕಷ್ಟವಾಗುತ್ತದೆ. ಸಾರ್ವಜನಿಕರಿಗೆ ಈ ಸೌಲಭ್ಯಗಳನ್ನು ತಡೆಯುವುದು ಮಂಡಳಿಯ ಉದ್ದೇಶವಲ್ಲ. ತ್ಯಾಜ್ಯ ನೀರನ್ನು ಸಂಸ್ಕರಿಸದೇ ಜಲಮೂಲಗಳಿಗೆ ಹರಿಸಿದರೆ ನೋಟಿಸ್‌ ನೀಡಿ, ಎಚ್ಚರಿಕೆ ನೀಡಲಾಗುತ್ತದೆ’ ಎಂದೂ ಅವರು ಹೇಳಿದರು.

ಮಿಸ್ಸಿಂಗ್ ಲಿಂಕ್‌: ನದಿ, ಕೆರೆಗಳು ಮತ್ತು ಎಸ್‌ಟಿಪಿಗಳ ನಡುವಣ ‘ಮಿಸ್ಸಿಂಗ್‌ ಲಿಂಕ್‌’ ಕೂಡ ಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳಿಂದ ಅಥವಾ ಕಾರ್ಖಾನೆಗಳಿಂದ ಹೊರಬಿಡುವ ಕೊಳಚೆ ನೀರು ಎಸ್‌ಟಿಪಿಗಳನ್ನೂ ಸೇರುತ್ತಿಲ್ಲ. ಕೊಳಚೆ ನೀರು-ಎಸ್‌ಟಿಪಿ–ನದಿಗಳ ನಡುವೆ ಸಮರ್ಪಕ ‘ಸಂಪರ್ಕ’, ಎಸ್‌ಟಿಪಿಗಳಲ್ಲಿ ಶುದ್ಧೀಕರಣ ಕಾರ್ಯ ಮತ್ತು ಅವುಗಳ ಪರಿಶೀಲನೆ ಸಮರ್ಪಕವಾಗಿ ನಡೆದರೆ ‘ಜಲ ಸಂಪತ್ತು’ ಮಲಿನಗೊಳ್ಳುವುದು ಆದಷ್ಟು ತಪ್ಪುತ್ತದೆ.

ಅಂಕಿ–ಅಂಶ
1400 ಕೋಟಿ ಲೀಟರ್‌: ರಾಜಧಾನಿಯಲ್ಲಿ ದಿನಕ್ಕೆ ಉತ್ಪಾದನೆಯಾಗುವ ತ್ಯಾಜ್ಯ ನೀರು
1182 ಕೋಟಿ ಲೀಟರ್‌: ಬೆಂಗಳೂರಿನಲ್ಲಿ ದಿನಕ್ಕೆ ಸಂಸ್ಕರಿಸಲಾಗುತ್ತಿರುವ ತ್ಯಾಜ್ಯ ನೀರು
34: ಬೆಂಗಳೂರಿನಲ್ಲಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು