ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಭಾರತ ಕ್ರಿಕೆಟ್ ತಂಡದ ಆತ್ಮಬಲ ವೃದ್ಧಿಸಿದ ಏಷ್ಯಾ ಕಪ್ ವಿಜಯ

ಸಂಪಾದಕೀಯ: ಭಾರತ ಕ್ರಿಕೆಟ್ ತಂಡದ ಆತ್ಮಬಲ ವೃದ್ಧಿಸಿದ ಏಷ್ಯಾ ಕಪ್ ವಿಜಯ
Published 19 ಸೆಪ್ಟೆಂಬರ್ 2023, 20:08 IST
Last Updated 19 ಸೆಪ್ಟೆಂಬರ್ 2023, 20:08 IST
ಅಕ್ಷರ ಗಾತ್ರ

ಭಾರತದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಲು ಇನ್ನು ಹದಿನೈದು ದಿನಗಳು ಮಾತ್ರ ಬಾಕಿಯಿವೆ. ಇದೇ ಹೊತ್ತಿನಲ್ಲಿ, ರೋಹಿತ್ ಶರ್ಮಾ ನಾಯಕತ್ವದ ತಂಡವು ಏಷ್ಯಾ ಕಪ್ ಜಯಿಸಿರುವುದು ಹೊಸ ಭರವಸೆ ಮೂಡಿಸಿದೆ.

ಐದು ವರ್ಷಗಳ ನಂತರ ಮಾಡಿರುವ ಈ ಸಾಧನೆಯು ಚೇತೋಹಾರಿಯಾಗಿದೆ. ಭಾರತಕ್ಕೆ ಒಲಿದ ಎಂಟನೇ ಏಷ್ಯಾ ಕಪ್ ಇದಾಗಿದೆ. 2013ರ ನಂತರ ಐಸಿಸಿಯ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಯಾವುದೇ ಪ್ರಮುಖ ಟೂರ್ನಿಗಳಲ್ಲಿಯೂ ಭಾರತ ಪ್ರಶಸ್ತಿ ಗೆದ್ದಿಲ್ಲ. ಆದ್ದರಿಂದ ಏಷ್ಯಾ ಮಟ್ಟದ ಕಪ್ ಗೆದ್ದಿರುವುದು ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ತಂಡದಲ್ಲಿ ಆತ್ಮವಿಶ್ವಾಸ ವೃದ್ಧಿಗೆ ಕಾರಣವಾಗಿದೆ. ಏಕೆಂದರೆ, ಕಳೆದೊಂದು ವರ್ಷದಿಂದ ರೋಹಿತ್ ಬಳಗ ಮಾಡುತ್ತಿದ್ದ ಕೆಲವು ಪ್ರಯೋಗಗಳ ಫಲ ಈ ಟೂರ್ನಿಯಲ್ಲಿ ಬಹುತೇಕ ಲಭಿಸಿದೆ.

ಆರಂಭಿಕ ಆಟಗಾರ ಶುಭಮನ್ ಗಿಲ್, ವಿಕೆಟ್‌ಕೀಪರ್– ಬ್ಯಾಟರ್ ಇಶಾನ್ ಕಿಶನ್, ಸ್ಪಿನ್ನರ್ ಕುಲದೀಪ್ ಯಾದವ್, ಗಾಯದಿಂದಾಗಿ ದೀರ್ಘಕಾಲ ಕ್ರಿಕೆಟ್‌ನಿಂದ ದೂರವಿದ್ದ ವೇಗಿ ಜಸ್‌ಪ್ರೀತ್ ಬೂಮ್ರಾ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಇಲ್ಲಿ ಗೆಲುವಿನ ರೂವಾರಿಗಳಾದರು. ಫೈನಲ್ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಆರು ವಿಕೆಟ್ ಗಳಿಸಿ ದಾಖಲೆ ನಿರ್ಮಿಸಿದರು. ಅನುಭವಿ ವಿರಾಟ್ ಕೊಹ್ಲಿ ಕೂಡ ಅಮೋಘ ಲಯದಲ್ಲಿದ್ದಾರೆ.

ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ಅಸ್ಥಿರತೆ ಇದ್ದರೂ ಒಂದೆರಡು ಪಂದ್ಯಗಳಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಇದರಿಂದಾಗಿ ತಂಡದಲ್ಲಿ ಹುಮ್ಮಸ್ಸು ಮೂಡಿದೆ. ಇದೆಲ್ಲದರಾಚೆ ಈ ಟೂರ್ನಿಯು ಕೆಲವು ವಿವಾದಗಳನ್ನೂ ಹುಟ್ಟುಹಾಕಿತು. ಏಷ್ಯಾ ಕಪ್ ಆತಿಥ್ಯವನ್ನು ಈ ಸಲ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಹಿಸಿಕೊಂಡಿತ್ತು. ಆದರೆ ರಾಜತಾಂತ್ರಿಕ ಕಾರಣಗಳಿಂದ ಭಾರತವು ಪಾಕಿಸ್ತಾನ
ದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸಿತು.

ಇದಕ್ಕೆ ಪ್ರತಿಯಾಗಿ ವಿಶ್ವಕಪ್ ಟೂರ್ನಿಗೆ ತಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂಬ ಪಿಸಿಬಿ ಬೆದರಿಕೆಗೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಣಿಯಲಿಲ್ಲ. ಇದರಿಂದ ಅನಿವಾರ್ಯವಾಗಿ ಏಷ್ಯಾ ಕಪ್ ಟೂರ್ನಿಯನ್ನು ತಟಸ್ಥ ತಾಣವಾದ ಶ್ರೀಲಂಕಾದಲ್ಲಿ ಆಯೋಜಿಸಲು ಪಿಸಿಬಿ ಸಮ್ಮತಿಸಿತು. ಪಾಕಿಸ್ತಾನದ ಮೈದಾನಗಳಲ್ಲಿ ನಾಲ್ಕು ಪಂದ್ಯಗಳು ಮಾತ್ರ ನಡೆದವು. ಉಳಿದವೆಲ್ಲವೂ ಶ್ರೀಲಂಕಾದಲ್ಲಿ ನಡೆದವು. ಆದರೆ ಲಂಕಾದ ಕ್ರೀಡಾಂಗಣಗಳಲ್ಲಿ ನಡೆದ ಪ್ರತಿಯೊಂದು ಪಂದ್ಯದ ವೇಳೆಯೂ ಮಳೆ ಸುರಿಯಿತು. ಇದರಿಂದಾಗಿ ಆಟಕ್ಕೆ ಅಡಚಣೆಯಾಯಿತು.

ಗುಂಪು ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಣ ಪಂದ್ಯವೇ ಅಪೂರ್ಣವಾಯಿತು. ಸೂಪರ್‌ ಫೋರ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾದಾಗಲೂ ಮಳೆ ಸುರಿಯಿತು. ಅರ್ಧಕ್ಕೆ ನಿಂತ ಪಂದ್ಯವನ್ನು ಮೀಸಲು ದಿನವಾದ ಮರುದಿನ ನಡೆಸಲಾಯಿತು. ಇದೊಂದೇ ಪಂದ್ಯಕ್ಕೆ ಮೀಸಲು ದಿನ ನಿಗದಿಪಡಿಸಿದ್ದಕ್ಕೆ ಇನ್ನುಳಿದ ತಂಡಗಳು ಆಕ್ಷೇಪ ವ್ಯಕ್ತಪಡಿಸಿದವು. ಆದರೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರೂ ಆಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಮಾತ್ರ ತಮ್ಮ ನಿರ್ಣಯವನ್ನು ಸಮರ್ಥಿಸಿಕೊಂಡರು. ಕ್ರಿಕೆಟ್ ಕ್ಷೇತ್ರದಲ್ಲಿ ಆರ್ಥಿಕವಾಗಿ
ಬಲಾಢ್ಯವಾಗಿರುವ ಭಾರತದ ಮಂಡಳಿ ಏನು ಬೇಕಾದರೂ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಿ
ಕೊಟ್ಟಂತಿತ್ತು ಅವರ ಧೋರಣೆ. ಇದೆಲ್ಲದರ ನಡುವೆಯೂ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ನೇತೃತ್ವದ ನಿಯೋಗವು ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಪಂದ್ಯವೊಂದಕ್ಕೆ ತೆರಳಿ ಆತಿಥ್ಯ ಸ್ವೀಕರಿಸಿತು.

ಇತ್ತ ಉಭಯ ದೇಶಗಳ ಪಂದ್ಯದ ನಂತರ ಭಾರತದ ವಿರಾಟ್ ಕೊಹ್ಲಿ ಮತ್ತು ಇನ್ನು ಕೆಲವು ಆಟಗಾರರು ಪಾಕಿಸ್ತಾನದ ಆಟಗಾರರೊಂದಿಗಿನ ಸ್ನೇಹಪೂರ್ವಕ ವರ್ತನೆಯಿಂದ ಗಮನ ಸೆಳೆದರು. ಉಭಯ ದೇಶಗಳ ಕ್ರಿಕೆಟ್ ಸಂಬಂಧದ ಸುಧಾರಣೆಗೆ ಈ ನಡವಳಿಕೆಗಳು ಮುನ್ನುಡಿಯಾಗಬಹುದೇ ಎಂಬುದನ್ನು ಕಾದು ನೋಡಬೇಕು. ಇನ್ನೊಂದೆಡೆ, ಪ್ರತಿಯೊಂದು ಪಂದ್ಯದಲ್ಲಿಯೂ ಮಳೆ ಕಾಡಿದಾಗ ಕ್ರೀಡಾಂಗಣ ಸಿಬ್ಬಂದಿ ತೋರಿದ ಕಾರ್ಯದಕ್ಷತೆ ಮೆಚ್ಚುಗೆಗೆ ಪಾತ್ರವಾಯಿತು. ಎಸಿಸಿ ಮತ್ತು ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದವು. ಭಾರತದ ಆಟಗಾರ ಸಿರಾಜ್ ತಮ್ಮ ಪಂದ್ಯಶ್ರೇಷ್ಠ ಸಾಧನೆಗೆ ಲಭಿಸಿದ ನಗದು ಬಹುಮಾನವನ್ನು ಕ್ರೀಡಾಂಗಣ ಸಿಬ್ಬಂದಿಗೆ ಸಮರ್ಪಿಸಿದರು. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅರ್ಹತೆ ಗಳಿಸಿದ್ದ ನೇಪಾಳ ತಂಡವೂ ಗಮನ ಸೆಳೆಯಿತು. ಭಾರತದ ವಿರುದ್ಧವೇ ಇನ್ನೂರಕ್ಕೂ ಹೆಚ್ಚು ಮೊತ್ತ ಗಳಿಸಿದ್ದು ಆ ತಂಡದ ಹೆಗ್ಗಳಿಕೆ. ನೇಪಾಳದ ಆಟವು ಏಷ್ಯಾದ ಇನ್ನುಳಿದ ಪುಟ್ಟ ದೇಶಗಳ ಉದಯೋನ್ಮುಖ ಕ್ರಿಕೆಟ್‌ ತಂಡಗಳಿಗೆ ಪ್ರೇರಣೆಯಾಗುವುದು ಖಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT