ಮದ್ಯಪಾನ ನಿಷೇಧ ಸದ್ಯದ ಸಂದರ್ಭದಲ್ಲಿ ಪ್ರಾಯೋಗಿಕವಲ್ಲ. ಮದ್ಯ ವ್ಯಸನದ ಅಪಾಯಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ತುರ್ತಿದೆ.

ಸುಮಾರು ನಾಲ್ಕು ದಶಕಗಳಿಂದ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಸೇವಾ ಸಂಸ್ಥೆಯೊಂದು ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರವದು. ಮದ್ಯವ್ಯಸನಿಗಳನ್ನು ವ್ಯಸನದಿಂದ ಮುಕ್ತಗೊಳಿಸುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಒಂದು ವಾರ ನಡೆಯುತ್ತದೆ. ವ್ಯಾಯಾಮ, ಯೋಗ, ಧ್ಯಾನ, ಭಜನೆ, ಸಮಾಲೋಚನೆ, ಸಲಹೆ, ಉಪನ್ಯಾಸ, ಮನರಂಜನಾ ಕಾರ್ಯಕ್ರಮಗಳ ಮೂಲಕ ಕುಡುಕರ ಮನಃಪರಿವರ್ತನೆ ಮಾಡಿ ಚಟದಿಂದ ದೂರ ಮಾಡಲಾಗುತ್ತದೆ. ಕುಡಿತದಿಂದ ಹೊರಬಂದವರನ್ನು ನಂತರದಲ್ಲಿ ಹೇಗೆ ಕಾಳಜಿಯಿಂದ ನೋಡಿಕೊಳ್ಳಬೇಕೆಂದು ಕುಟುಂಬದವರಿಗೂ ಮಾರ್ಗದರ್ಶನ ನೀಡಲಾಗುತ್ತದೆ. ಪಾನಮುಕ್ತರಾದವರ ಸಮಿತಿಗಳನ್ನು ರಚಿಸಿ ಮತ್ತೆ ದುಶ್ಚಟದ ಹಾದಿಗೆ ಮರಳದಂತೆ ನಿಗಾ ವಹಿಸುವ ವ್ಯವಸ್ಥೆಯಿಂದಾಗಿ ಈ ಶಿಬಿರಗಳ ಯಶಸ್ಸಿನ ಪ್ರಮಾಣ ಹೆಚ್ಚು.

ನಿರಂತರ ಕುಡಿತದಿಂದಾಗುವ ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ದುಷ್ಪರಿಣಾಮಗಳು ಮನವರಿಕೆಯಾದಾಗ ಶಿಬಿರಾರ್ಥಿಗಳದ್ದು ಒಂದೇ ಆಕ್ರೋಶದ ಪ್ರಶ್ನೆ. ‘ಸರ್ಕಾರವೇಕೆ ಸಂಪೂರ್ಣ ಪಾನನಿಷೇಧ ಜಾರಿ ಮಾಡಬಾರದು? ಇದರಿಂದ ಲಕ್ಷಾಂತರ ಕುಟುಂಬಗಳು ಹಾಳಾಗುವುದನ್ನು ತಪ್ಪಿಸಬಹುದಲ್ಲ’. ಇಂತಹ ಪ್ರಶ್ನೆ ಕೇವಲ ಮದ್ಯವರ್ಜನ ಶಿಬಿರಗಳಲ್ಲಷ್ಟೇ ಅಲ್ಲ, ಶಾಲಾ–ಕಾಲೇಜುಗಳಲ್ಲಿನ ಮದ್ಯ, ಮಾದಕದ್ರವ್ಯಗಳ ದುಷ್ಪರಿಣಾಮಗಳನ್ನು ಸಾರುವ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮಗಳಲ್ಲೂ ವಿದ್ಯಾರ್ಥಿಗಳು ಕೇಳುತ್ತಾರೆ. ತಂಬಾಕು, ಮದ್ಯದ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿದರೆ ಸಮಸ್ಯೆಗಳೆಲ್ಲಾ ಸುಲಭವಾಗಿ ಬಗೆಹರಿಯುತ್ತವಲ್ಲ ಎಂಬುದು ಬಹುತೇಕರ ಅಭಿಮತ. ಆದರೆ, ವಿಷಯ ಅಷ್ಟು ಸರಳವಾಗಿಲ್ಲ.

ನಿಷೇಧ ಹೇರುವುದರಿಂದ ನಕಲಿ ಮದ್ಯದ ಹಾವಳಿ ಹೆಚ್ಚುತ್ತದೆ. ವಿಷಪೂರಿತ, ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಕಲಬೆರಕೆ ಪಾನೀಯಗಳ ಸೇವನೆಯಿಂದ ಅಮಾಯಕರ ಬಲಿಯಾಗುತ್ತದೆ. ಒಂದು ಮಿತಿಯೊಳಗೆ ಮದ್ಯ ಸೇವನೆಯನ್ನು ತಮ್ಮ ಆಹಾರ ಪದ್ಧತಿ, ಸಂಸ್ಕೃತಿಯ ಭಾಗವಾಗಿಸಿಕೊಂಡವರಿಗೆ ತೊಂದರೆಯಾಗುತ್ತದೆ. ಬಹುಮುಖ್ಯ ವಿಷಯವೆಂದರೆ, ಸರ್ಕಾರಕ್ಕೆ ಇದು ಆದಾಯದ ಪ್ರಮುಖ ಮೂಲ. ನಮ್ಮ ರಾಜ್ಯ ಸರ್ಕಾರವೊಂದೇ ಅಬಕಾರಿ ಬಾಬತ್ತಿನಲ್ಲಿ ವರ್ಷವೊಂದಕ್ಕೆ ನಿರೀಕ್ಷಿಸುವ ಆದಾಯ, ಸುಮಾರು ನಲವತ್ತು ಸಾವಿರ ಕೋಟಿ ರೂಪಾಯಿ! ಇಷ್ಟು ವರಮಾನ ಕಡಿಮೆಯಾದರೆ, ಜನಕಲ್ಯಾಣ ಕಾರ್ಯಕ್ರಮಗಳು ನೆಲಕಚ್ಚುತ್ತವೆ. ಮದ್ಯಪಾನ ನಿಷೇಧ ಪ್ರವಾಸೋದ್ಯಮಕ್ಕೂ ಪೆಟ್ಟು ನೀಡುತ್ತದೆ. ಉತ್ಪಾದನೆ, ಸರಬರಾಜು, ವಿತರಣೆ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವವರ ಹೊಟ್ಟೆಪಾಡಿಗೂ ಹೊಡೆತ ಬೀಳುತ್ತದೆ.

ಸಂಪೂರ್ಣ ನಿಷೇಧ ಅಸಾಧ್ಯದ ಮಾತೂ ಅಲ್ಲ. ವರಮಾನಕ್ಕೆ ಪರ್ಯಾಯ ಮೂಲ ಹುಡುಕಿಕೊಳ್ಳಬೇಕು. ಜೀವನೋಪಾಯ ಕಳೆದುಕೊಳ್ಳುವವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು. ನಕಲಿ ಮದ್ಯ ತಯಾರಿಕೆಯಾಗದಂತೆ ನಿಗಾ ವಹಿಸಬೇಕು. ಎಲ್ಲಕ್ಕೂ ಪ್ರಮುಖವಾಗಿ, ನಿಷೇಧ ಏಕಕಾಲಕ್ಕೆ ದೇಶದಾದ್ಯಂತ ಜಾರಿಯಾಗಬೇಕು. ಇಲ್ಲದಿದ್ದರೆ ಕಳ್ಳಸಾಗಾಣಿಕೆ ಹೆಚ್ಚುತ್ತದೆ. ಇಂತಹ ದೃಢ, ಕಠಿಣ ನಿರ್ಧಾರ ಕೈಗೊಳ್ಳಲು ಪ್ರಬಲ ಇಚ್ಛಾಶಕ್ತಿ ಬೇಕು. ಜನಪ್ರಿಯ ಕಾರ್ಯಕ್ರಮಗಳ ಮೂಲಕ ಓಟು ಮತ್ತು ಅಧಿಕಾರದ ಮೇಲೆ ಕಣ್ಣಿಟ್ಟಿರುವ ಯಾವುದೇ ಆಡಳಿತ, ಮದ್ಯದ ಮೇಲೆ ಸಾರಾಸಗಟಾಗಿ ನಿಷೇಧ ಹೇರುವುದು ಸದ್ಯಕ್ಕಂತೂ ಅಸಂಭವ.

ಕುತೂಹಲ, ಪ್ರಯೋಗಾತ್ಮಕ ಮನೋಭಾವ, ಸ್ನೇಹಿತರ ಒತ್ತಾಯ, ದೈಹಿಕ ಸಾಮರ್ಥ್ಯ ವೃದ್ಧಿಯಾಗುವುದೆಂಬ ಭ್ರಮೆ ಮದ್ಯಪಾನಕ್ಕೆ ಪ್ರೇರಣೆ ಆಗಬಹುದು. ಲೈಂಗಿಕ ಪ್ರಚೋದಕ, ಸಂತೋಷದಾಯಕ, ನೋವು–ದುಃಖಗಳನ್ನೆಲ್ಲ ಮರೆಸುತ್ತದೆ, ಮುಂತಾದ ತಪ್ಪುಗ್ರಹಿಕೆ, ಮೂಢನಂಬಿಕೆ, ಅವಾಸ್ತವಿಕ ವಿಚಾರಗಳಿಂದಲೂ ಮದ್ಯದ ರುಚಿ ನೋಡಲು ಆರಂಭಿಸುವವರಿದ್ದಾರೆ. ಅದರಲ್ಲೂ ಯುವಜನರಲ್ಲಿಯೇ ಇಂತಹ ಮನೋಭಾವ ಹೆಚ್ಚು. ಇದು ಮುಂದುವರಿದಾಗ ದುರ್ಬಲ ಮನಸ್ಸಿನ ಹಲವರಲ್ಲಿ ವ್ಯಸನವಾಗುತ್ತದೆ. ಒಮ್ಮೆ ಚಟದ ಹಂತ ತಲುಪಿದರೆ ಅದರಿಂದ ಹೊರಬರುವುದು ತುಂಬಾ ಕಷ್ಟ. ಮದ್ಯ ವ್ಯಸನದಿಂದ ವ್ಯಕ್ತಿಯ ಬದುಕೇ ಕಮರಿ ಹೋಗಬಹುದು. ಬಡ ಕುಟುಂಬಗಳು ಬೀದಿಪಾಲಾಗಬಹುದು. ದುಡಿಮೆಯ ವಯಸ್ಸಿನ ಮಾನವ ಸಂಪನ್ಮೂಲ ಕಳೆದುಕೊಳ್ಳುವುದರಿಂದ ದೇಶಕ್ಕೂ ನಷ್ಟ.

ನಮ್ಮ ಸುತ್ತಮುತ್ತ ಪ್ರತಿನಿತ್ಯ ಘಟಿಸುತ್ತಿರುವ ಅತ್ಯಾಚಾರ, ಅಪಘಾತ, ಆತ್ಮಹತ್ಯೆ, ಕಲಹ, ಸುಲಿಗೆ, ಕೊಲೆ, ದರೋಡೆಗಳ ಹಿಂದಿರುವ ಪ್ರಮುಖ ಖಳರೇ ಮದ್ಯ, ಮಾದಕದ್ರವ್ಯ. ಯುವಮನಸ್ಸುಗಳನ್ನು ಆಕರ್ಷಿಸಿ, ಅವರಿಗೆ ನಶೆ ಏರಿಸಲು ವಿಧ್ವಂಸಕರು ಕಾರ್ಯೋನ್ಮುಖರಾಗಿರುವಾಗ, ಆ ಬಲೆಗೆ ಬೀಳದಂತೆ ಮಕ್ಕಳನ್ನು ಜಾಗೃತಗೊಳಿಸುವ ಕೆಲಸ ಶಾಲಾ–ಕಾಲೇಜುಗಳಲ್ಲಿ ನಡೆಯಬೇಕಿದೆ. ಮನಸ್ಸು ದೃಢವಾಗಿದ್ದಾಗ ಯಾವುದೇ ಆಮಿಷಗಳಿಗೂ ಬಗ್ಗದು. ಇಂತಹ ಗಂಭೀರ ವಿಚಾರ ನಮ್ಮ ಪಠ್ಯದ ಭಾಗವಾಗಬೇಕಿದೆ. ಈ ನಿಟ್ಟಿನಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದ ಮೂಲಕ ಹದಿಹರೆಯದವರಲ್ಲಿ ಜಾಗೃತಿ ಮೂಡಿಸುತ್ತಿರುವ ವೇದಿಕೆಗಳ ಪ್ರಯತ್ನ ಪ್ರಶಂಸಾರ್ಹ.

ದೇಶದಲ್ಲಿ ಅತ್ಯಂತ ಹೆಚ್ಚು ಮದ್ಯ ಬಳಕೆಯಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ತಮಿಳುನಾಡು, ತೆಲಂಗಾಣ ನಮ್ಮ ಜೊತೆ ಪೈಪೋಟಿಯಲ್ಲಿವೆ! ಕ್ಯಾನ್ಸರ್ ಪ್ರಕರಣಗಳು ಏರುಗತಿಯಲ್ಲಿರುವ, ಸಮಗ್ರ ಆರೋಗ್ಯ ಹದಗೆಡುತ್ತಿರುವ, ಜನರು ಅದರಲ್ಲೂ ಯುವಜನಾಂಗ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಈ ಹೊತ್ತಿನಲ್ಲಿ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸಿ, ಆರೋಗ್ಯಕರ ಜೀವನಕ್ರಮಗಳನ್ನು ಪಾಲಿಸುವಂತೆ ಮಾಡಬೇಕಿರುವುದು ಸಮಾಜದ ಹೊಣೆ. ಈ ವಿಚಾರದಲ್ಲಿ ಸರ್ಕಾರವನ್ನು ದೂಷಿಸುತ್ತಾ ಕಾಲಕಳೆಯುವುದು ಸಾಧುವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.