ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ‘ನಾಪತ್ತೆ’ ವರದಿ ಯಾವುದು?

ಹಿಂದುಳಿದ ವರ್ಗಗಳ ಆಯೋಗ ಯಾವುದೇ ಪೂರ್ವಗ್ರಹಗಳಿಲ್ಲದೆ ವೈಜ್ಞಾನಿಕವಾಗಿ ನಡೆಸಿದ ಸಮೀಕ್ಷಾ ವರದಿಗೆ ಕೆಲವರ ಪೂರ್ವಗ್ರಹಗಳಿಂದಾಗಿ ಗ್ರಹಣ ಬಡಿದಿದೆ
ಕೆ.ಎನ್.ಲಿಂಗಪ್ಪ
Published 25 ನವೆಂಬರ್ 2023, 0:30 IST
Last Updated 25 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಎಚ್‌.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ದತ್ತಾಂಶ ಆಧರಿಸಿ ಸಿದ್ಧಪಡಿಸಿದ್ದ ವರದಿಯ ಮೂಲಪ್ರತಿಯು (ಹಸ್ತಪ್ರತಿ) ಆಯೋಗದ ಕಚೇರಿಯಿಂದಲೇ ನಾಪತ್ತೆ ಯಾಗಿದೆ ಎಂಬ ವರದಿಗಳನ್ನು ರಾಜ್ಯದ ಜನ ಗಮನಿಸಿ
ದ್ದಾರೆ. ಇಂತಹ ಸುದ್ದಿಗಳಿಂದ ನಾಗರಿಕರಲ್ಲಿ ಗೊಂದಲ ಮೂಡುವುದು ಸಹಜ.

ಈ ಬಗೆಯ ಪುಕಾರುಗಳಿಗೆ ಮೂಲ ಕಾರಣ, ಹಿಂದುಳಿದ ವರ್ಗಗಳ ಆಯೋಗದ ಪ್ರಸ್ತುತ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರು 2021ರ  ಅಕ್ಟೋಬರ್‌ನಲ್ಲಿ ಸರ್ಕಾರಕ್ಕೆ ಪತ್ರ ಬರೆದಿರುವುದು. ಕಾಂತರಾಜ ಅವರ ನೇತೃತ್ವದಲ್ಲಿ ನಡೆದಿದ್ದ ಸಮೀಕ್ಷೆಯ ಅಂಕಿ ಅಂಶಗಳಿಗೆ ಸಂಬಂಧಿಸಿದ ಎಲ್ಲ ಸಂಪುಟಗಳು ಮತ್ತು ಅಂಕಿಅಂಶಗಳನ್ನು ಬಳಸಿಕೊಂಡು ತಯಾರಿಸಿದ್ದ ಹಿಂದುಳಿದ ವರ್ಗಗಳ ಹೊಸ ಪಟ್ಟಿಯ ಒಂದು ಚಿಕ್ಕ ಪುಸ್ತಕ ಹಾಗೂ ಅದಕ್ಕೆ ಸಂಬಂಧಿಸಿದ ಕೆಲವು ಅಂಕಿ ಅಂಶಗಳ ದಾಖಲೆಗಳನ್ನು 2019ರ ಆಗಸ್ಟ್‌ನಲ್ಲಿ ಆಯೋಗದ ಕಚೇರಿಯ ಒಂದು ಕೊಠಡಿಯಲ್ಲಿಟ್ಟು, ಅದನ್ನು ಸೀಲ್ ಮಾಡಿ, ಬೀಗದ ಕೈಯನ್ನು ಸದಸ್ಯ ಕಾರ್ಯದರ್ಶಿಗೆ ಹಸ್ತಾಂತರಿಸಲಾಗಿತ್ತು.

ದಾಖಲೆಗಳಿಟ್ಟಿದ್ದ ಕೊಠಡಿಯನ್ನು ಆಯೋಗದ ಸಿಬ್ಬಂದಿ ಯಾರ ಆಜ್ಞೆಯ ಮೇರೆಗೆ ತೆರೆದರು ಎಂಬುದು ತಿಳಿದುಬಂದಿಲ್ಲ. ಸರ್ಕಾರಕ್ಕೆ ಬರೆದ ಪತ್ರದಲ್ಲಿಯೂ ಆ ಕುರಿತು ಉಲ್ಲೇಖ ಇಲ್ಲ. ‘ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೆ ಇರುವುದನ್ನು ಆಯೋಗವು ಗಮನಿಸಿರುತ್ತದೆ. ಇದರೊಂದಿಗೆ ಇದಕ್ಕೆ ಸಂಬಂಧಿಸಿದ ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಡ್ ಬಾಕ್ಸ್‌ನಲ್ಲಿ ಲಭ್ಯವಿಲ್ಲದೇ ಇರುವುದರಿಂದ ಸದರಿ ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಚೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿದೆ’ ಎಂದು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.

ಮುಖ್ಯ ವರದಿಯೇ ಸೀಲ್ಡ್ ಬಾಕ್ಸ್‌ನಲ್ಲಿ ಲಭ್ಯವಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ ‘ಯಾವ ಮುಖ್ಯ ವರದಿ’ಯನ್ನು ನೋಡಿ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲ ಎಂದು ಹೇಳಿದ್ದಾರೆ ಎಂಬುದು ತಿಳಿದು
ಬರುವುದಿಲ್ಲ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಒಳ ಪಡಿಸುವ ದೃಷ್ಟಿಯಿಂದ ಕೈಪಿಡಿಯಲ್ಲಿ 1,351 ಜಾತಿ- ಉಪಜಾತಿಗಳನ್ನು ಅಕಾರಾದಿಯಾಗಿ ಪಟ್ಟಿ ಮಾಡಲಾ ಗಿತ್ತು. ಅಷ್ಟೂ ಜಾತಿ, ಉಪಜಾತಿಗಳಲ್ಲಿ ಬರೀ ಎರಡೇ ಜಾತಿಗಳು ಸಮೀಕ್ಷೆ ಕುರಿತು ಗಾಳಿಮಾತು ಆಧರಿಸಿದ ಅಂಶಗಳನ್ನು ನಂಬಿ ಆಯೋಗದ ಅಧ್ಯಕ್ಷರಿಗೂ ಮುಖ್ಯಮಂತ್ರಿಗೂ ಮನವಿ ಸಲ್ಲಿಸಿವೆ.

ಸಮೀಕ್ಷೆಯನ್ನು ರಾಷ್ಟ್ರೀಯ ಜನಗಣತಿ ಮಾದರಿ ಯಲ್ಲಿಯೇ ನಡೆಸಲಾಗಿದೆ. ಜಿಲ್ಲಾಧಿಕಾರಿ, ಉಪವಿಭಾ ಗಾಧಿಕಾರಿ ಮತ್ತು ತಹಶೀಲ್ದಾರ್ ಮುಖ್ಯವಾಗಿ ಸಮೀಕ್ಷೆ ಯಲ್ಲಿ ತೊಡಗಿಸಿಕೊಂಡವರು. ಈ ಅಧಿಕಾರಿಗ
ಳ್ಯಾರೂ ಆಯೋಗದ ನಿಯಂತ್ರಣದಲ್ಲಿ ಇರದೆ ಸರ್ಕಾರದ ನೇರ ನಿಯಂತ್ರಣದಲ್ಲಿ ಇರುವವರು ಎಂಬುದೂ ಸತ್ಯ ಸಂಗತಿ.

ಒಟ್ಟು 1,33,140 ಗಣತಿದಾರರು ಮತ್ತು ಗಣತಿದಾರರ ಮೇಲ್ವಿಚಾರಣೆಗಾಗಿ 22,190 ಮಂದಿಯನ್ನು ನೇಮಿಸಲಾಗಿತ್ತು. ಪ್ರತಿ ಗಣತಿದಾರನಿಗೆ 150– 175 ಮನೆಗಳನ್ನು ಸಮೀಕ್ಷೆಗಾಗಿ ಹಂಚಿಕೆ ಮಾಡಿ, ಈ ಕಾರ್ಯಕ್ಕೆ ಒಂದು ತಿಂಗಳ ಅವಧಿಯನ್ನು ನಿಗದಿ ಮಾಡಲಾಗಿತ್ತು. ಗಣತಿದಾರರೆಲ್ಲರೂ ಶಾಲಾ ಉಪಾಧ್ಯಾಯರಾಗಿದ್ದರು. 2015ರ ಬೇಸಿಗೆ ರಜೆಯ ಅವಧಿಯಲ್ಲಿ ಗಣತಿ ಕಾರ್ಯವನ್ನು ಕೈಗೊಂಡಿದ್ದರು. ಕುಟುಂಬದ ಅನುಸೂಚಿಯನ್ನೂ (ನಮೂನೆ 3) ಅವರೇ ಭರ್ತಿ ಮಾಡಿದ್ದಾರೆ. ಅವರ ಮೇಲ್ವಿಚಾರಕರು, ತಾಲ್ಲೂಕಿನ ಹಿರಿಯ ಅಧಿಕಾರಿಗಳು ಹಾಗೂ ಆಯೋಗದ ಸದಸ್ಯರು ಸಮೀಕ್ಷಾ ಅವಧಿಯಲ್ಲಿ ಅಲ್ಲೊಂದು ಇಲ್ಲೊಂದು ಪ್ರಕರಣವನ್ನು ಪರಿಶೀಲನೆ ಮಾಡಿದ್ದಾರೆ.

ಆಯೋಗವು ಮುಖ್ಯವಾಗಿ ಸಮಾಜ ವಿಜ್ಞಾನಿಗಳು, ಪರಿಣತ ಅಧಿಕಾರಿಗಳು ಮತ್ತು ತಂತ್ರಜ್ಞರ ಪೂರ್ವಭಾವಿ ಸಭೆಗಳನ್ನು ನಡೆಸಿ, ಅವರು ನೀಡಿದ ಸಲಹೆಗಳನ್ನು ಪಡೆದುಕೊಂಡಿದೆ. ಬಿಇಎಲ್ ಸಂಸ್ಥೆಯ ನೇರ ನಿಯಂತ್ರಣದಲ್ಲಿ ರಾಜ್ಯದ ಜನರಿಗೆ ಅಗತ್ಯ ಮಾಹಿತಿಯನ್ನು ಮಾಧ್ಯಮಗಳ ಮೂಲಕ ನೀಡಿ, ಮನೆ ಮನೆಗೂ ಭೇಟಿ ಕೊಟ್ಟು ಅಂಕಿ ಅಂಶಗಳನ್ನು ಸಂಗ್ರಹಿಸಲಾಗಿದೆ. ಮಾಹಿತಿಯನ್ನು ಸಂಕೇತಾಕ್ಷರಗಳಲ್ಲಿ ಬರೆದುಕೊಳ್ಳಲಾಗಿದೆ. ಹೀಗೆ ಸಂಗ್ರಹಿಸಿದ ಅಂಕಿ ಅಂಶಗಳು ಮತ್ತು ಸಂಗ್ರಹಿಸಿದ ವಿಧಾನವನ್ನು ತಜ್ಞರ ಸಮಿತಿ ಹಾಗೂ ಐಐಎಂ ದೃಢೀಕರಿಸಿವೆ.

ಈ ನಡುವೆ ಕೆಲವು ಸುದ್ದಿ ಮಾಧ್ಯಮಗಳು ಜಾತಿ ಜನಗಣತಿ ವರದಿ ಸೋರಿಕೆಯಾಗಿದೆ ಎಂದು, ತಪ್ಪು ಮಾಹಿತಿ ಆಧರಿಸಿ ವರದಿ ಮಾಡಿದವು. ಪ್ರಮುಖ ಜಾತಿಗಳ ಕಪೋಲಕಲ್ಪಿತ ಅಂಕಿ ಅಂಶಗಳನ್ನು ‘ಬಹಿರಂಗ’ ಪಡಿಸಿದವು. ಯಾವುದೇ ಅಂಕಿ ಅಂಶಗಳು ಸೋರಿಕೆ ಆಗಿಲ್ಲವೆಂದು ಆಯೋಗವು ತಕ್ಷಣದಲ್ಲಿ ಸ್ಪಷ್ಟಪಡಿಸಿತು. ಆದರೆ ಕೆಲ ವ್ಯಕ್ತಿಗಳು ಮತ್ತು ಸಂಘ–ಸಂಸ್ಥೆಗಳು ಕೆಲವು ಮಾಧ್ಯಮಗಳಲ್ಲಿ ಪ‍್ರಕಟವಾದ ಅಂಕಿ ಅಂಶಗಳೇ ನಿಜ ಎಂದು ನಂಬಿಕೊಂಡಿದ್ದಾರೆ.ಆದಕಾರಣ, ಆಯೋಗವು ಯಾವುದೇ ಪೂರ್ವಗ್ರಹ ಇಲ್ಲದೆ ವೈಜ್ಞಾನಿಕವಾಗಿ ನಡೆಸಿದ ಸಮೀಕ್ಷೆಗೆ ಗ್ರಹಣ ಬಡಿದಿದೆ.

ಕೆಲವರ ರಾಜಕೀಯ ಹಿತಾಸಕ್ತಿಗೆ ಮಾರಕವಾಗ ಬಹುದು ಎಂಬ ಕಾರಣಕ್ಕೆ, ಎರಡು ಪ್ರಬಲ ಸಮುದಾಯಗಳ ರಾಜಕಾರಣಿಗಳು ಜಾತಿ ಜನಗಣತಿಯ ಅಂಕಿ ಅಂಶಗಳು ಬಹಿರಂಗಗೊಳ್ಳ
ಬಾರದು ಎಂಬ ನಿಲುವಿಗೆ ಬಂದಿರುವಂತೆ ಕಾಣಿಸುತ್ತದೆ.

ಲೇಖಕ: ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT