ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಫಲಿತಾಂಶ ಪರೀಕ್ಷೆಯದು, ಬದುಕಿನದಲ್ಲ

ವಿದ್ಯಾರ್ಥಿಯ ಸಾಮರ್ಥ್ಯದ ಮಾಪನಕ್ಕೆ ಅಂಕಗಳ ಶೇಕಡಾವಾರು ಮೀರಿ ಪರಿಗಣಿಸಬೇಕಾದ ನಾನಾ ಅಂಶಗಳು ಇರುತ್ತವೆ
ಬಿ.ಎಸ್‌.ಭಗವಾನ್‌
Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಆ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯರೊಬ್ಬರು ಮುಖ್ಯ ಅತಿಥಿ ಯಾಗಿದ್ದರು. ತಮ್ಮ ಭಾಷಣದ ಕೊನೆಯಲ್ಲಿ ಅವರು ‘ಮಕ್ಕಳೇ, ನೀವು ಮುಂದೆ ಏನಾಗಬಯಸಿದ್ದೀರಿ?’ ಎಂದರು. ಭಾವಿ ಪ್ರಜೆಗಳ ಉತ್ಸಾಹದ ಕೇಕೆಯ ನಡುವೆ ‘ಡಾಕ್ಟರ್’, ‘ಎಂಜಿನಿಯರ್’, ‘ಪೈಲಟ್’, ‘ಎಕ್ಸ್‌ಪರ್ಟ್ ಆ್ಯನಿಮೇಟರ್’... ಆಶಯಗಳು ಕೇಳಿಬಂದವು. ಆದರೆ ಅತಿಥಿವರ್ಯರು ಕಡ್ಡಿ ಎರಡು ತುಂಡು ಮಾಡಿದಂತೆ ‘ಸದ್ಯಕ್ಕೆ ಅವರ ಕೊರತೆ ಇಲ್ಲ. ನೀವು ಮನುಷ್ಯರಾಗುವ ಗುರಿಯಿಟ್ಟುಕೊಳ್ಳಿ’ ಎಂದರು. ಸಭೆ ಕ್ಷಣ ತಳಮಳಿಸಿತಾದರೂ ಜೋರು ಕರತಾಡನದ ಮೂಲಕ ಹಿತನುಡಿಗೆ ತಲೆದೂಗಿತ್ತು.

‘ನಾಳೆ ನನ್ನ ಪರೀಕ್ಷೆಯಿದೆ. ಒಂದು ಹಾಳೆ ನನ್ನ ಭವಿಷ್ಯವನ್ನೇನೂ ನಿರ್ಧರಿಸದ ಕಾರಣ ನನಗೆ ಗಾಬರಿಯೇನಿಲ್ಲ’- ಥಾಮಸ್ ಆಲ್ವ ಎಡಿಸನ್ ಅವರು ಶೈಕ್ಷಣಿಕ ಪರೀಕ್ಷೆ ಕುರಿತು ಹೇಳಿದ ಈ ನುಡಿಯ ಧ್ವನ್ಯಾರ್ಥ ಗಾಢವಾದದ್ದು. ಅತಿರೇಕ, ಹೋಲಿಕೆ, ನಿರಾಸೆಗೆ ಆಸ್ಪದ ನೀಡದೆ ಫಲಿತಾಂಶವನ್ನು ಸಂಯಮದಿಂದ ಅನುಸಂಧಾನಿಸುವುದೂ ಒಂದು ಪರೀಕ್ಷೆಯೆ. ಯಾವುದೇ ಪರೀಕ್ಷಾ ಫಲಿತಾಂಶ, ಅದರಲ್ಲಿ ಗಳಿಸಿದ ಗ್ರೇಡ್, ಅಂಕ, ದರ್ಜೆ ವಿದ್ಯಾರ್ಥಿಗಳ ಜೀವನಗತಿಯನ್ನು ನಿರ್ಧರಿಸದು. ತಮ್ಮ ಭವಿಷ್ಯ ನಿರ್ಮಿಸಿಕೊಳ್ಳುವವರು ಸ್ವತಃ ವಿದ್ಯಾರ್ಥಿಗಳೇ ವಿನಾ ಅವರು ಹಿಡಿದ ಅಂಕಪಟ್ಟಿ ಅಥವಾ ‘ಅರ್ಹತಾ ಪತ್ರ’ ಅಲ್ಲ.

ಪರೀಕ್ಷೆ ಎನ್ನುವುದು ಕೇಳಿರುವ ಪ್ರಶ್ನೆಗಳಿಗೆ ಎರಡು ಅಥವಾ ಮೂರು ತಾಸುಗಳ ಅವಧಿಯಲ್ಲಿ ವಿದ್ಯಾರ್ಥಿಯ ಪ್ರಸ್ತುತಿಯಷ್ಟೆ. ವಿದ್ಯಾರ್ಥಿಯ ಸಾಮರ್ಥ್ಯದ ಮಾಪನಕ್ಕೆ ಅಂಕಗಳ ಶೇಕಡಾವಾರು ಮೀರಿ ಪರಿಗಣಿಸಬೇಕಾದ ನಾನಾ ಅಂಶಗಳಿವೆ. ಒಬ್ಬರಿಗೆ ಭಾಷಾ ವಿಷಯದಲ್ಲಿ ಹೆಚ್ಚಿನ ಅಂಕಗಳು, ಆದರೆ ಗಣಿತದಲ್ಲಿ ಕಳಪೆ ಅಂಕಗಳು. ಇದು ಅವರ ಮನಃಸ್ಥಿತಿಗೆ ಸಂಬಂಧಿಸಿದ್ದೇ ವಿನಾ ನ್ಯೂನತೆಯಲ್ಲ. ನಾವು ಯಾವುದನ್ನು ಒಳ್ಳೆಯ ಗ್ರೇಡ್ ಎನ್ನುತ್ತೇವೋ ಅದು ಅಭ್ಯಾಸದ ಆಯ್ಕೆಯನ್ನು ಅವಲಂಬಿಸಿದೆ. ಪಠ್ಯದಲ್ಲಿ ಒಂದೆರಡು ಅಧ್ಯಾಯಗಳನ್ನು ಬಿಟ್ಟೂ ಅಧಿಕ ಅಂಕಗಳನ್ನು ಪಡೆಯುವವರಿದ್ದಾರೆ. ಎದುರಾಗುವ ಪ್ರಶ್ನೆಗಳನ್ನು ಊಹಿಸಿ ಪರೀಕ್ಷೆಯಲ್ಲಿ ‘ಜಾಣತನ’ ತೋರುವವರಿದ್ದಾರೆ. ಪಠ್ಯದ ಅಂಶಗಳು ಪಕ್ವವಾಗಿ ಮನನವಾಗದೆ ‘ಜ್ಞಾಪಕಶಕ್ತಿ’ ತುಸು ಹರಿತವಿದ್ದರಾಯಿತು, ಪರೀಕ್ಷೆಯನ್ನು ಗೆಲ್ಲಿಸಿರುತ್ತದೆ!

ಪರೀಕ್ಷಾ ಒತ್ತಡದಿಂದ ಭಾರತವೊಂದರಲ್ಲೇ ವರ್ಷಕ್ಕೆ ಸರಾಸರಿ 370 ವಿದ್ಯಾರ್ಥಿಗಳು ತಮ್ಮ ಬದುಕಿಗೆ ವಿದಾಯ ಹೇಳುತ್ತಿದ್ದಾರೆ ಎಂಬ ಮಾಹಿತಿ ಆತಂಕಕಾರಿ. ಯಶಸ್ಸಿಗಿಂತ ಪ್ರಯತ್ನವೇ ಮೌಲಿಕ ಎಂಬ ವಾಸ್ತವವನ್ನು ಹಿರಿಯರು ಮಕ್ಕಳಲ್ಲಿ ಬಿತ್ತಿದರೆ ಅನಾಹುತಗಳು ಗಣನೀಯವಾಗಿ ತಪ್ಪುತ್ತವೆ.

ಫಲಿತಾಂಶದ ಪಟ್ಟಿ ನಡುಕ ಹುಟ್ಟಿಸಬೇಕಾದ್ದಿಲ್ಲ. ವಿದ್ಯಾಸಂಸ್ಥೆಗೆ ಇಗೋ ನೋಡಿ, ಇವರೇ ನಮ್ಮ ಸಾಹಸಿಗಳೆಂದು ‘ರ್‍ಯಾಂಕ್‌’ ಪಡೆದವರ ಸಾಲು ಫೋಟೊಗಳನ್ನು ಪ್ರದರ್ಶಿಸುವ ಅತಿಶಯ ಬೇಕಿಲ್ಲ. ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು ಇಂಟರ್‌ಮೀಡಿಯಟ್‌ ಪರೀಕ್ಷೆಗಳಲ್ಲಿ ನಾಲ್ಕು ಬಾರಿ ಫೇಲಾಗಿದ್ದರು. ಗಣಿತದ ಹೊರತಾಗಿ ಯಾವ ವಿಷಯದಲ್ಲೂ ಅವರಿಗೆ ತೇರ್ಗಡೆಯ ಕನಿಷ್ಠ ಅಂಕ ಬಂದಿರಲಿಲ್ಲ. ಮುಂದೆ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಎಫ್.ಎ. ಪರೀಕ್ಷೆಯಲ್ಲಿ ಮತ್ತೆ ಸೋಲು. ಆದರೆ ಕೇಂಬ್ರಿಜ್‌ ವಿಶ್ವವಿದ್ಯಾಲಯ ಅವರ ಅಸಾಧಾರಣ ಗಣಿತ ಪ್ರತಿಭೆಯನ್ನು ಪರಿಗಣಿಸಿ ಅವರಿಗೆ ಬಿ.ಎ., ಎಫ್.ಆರ್.ಎಸ್.ನಂತಹ ಪದವಿಗಳನ್ನಿತ್ತು ತನ್ನನ್ನು ತಾನೇ ಗೌರವಿಸಿಕೊಂಡಿತು.

ಆಲ್ಬರ್ಟ್ ಐನ್‍ಸ್ಟೀನ್ ಒಂದೆಡೆ ಹೀಗೆ ಹೇಳಿದ್ದಾರೆ: ‘ಮೀನನ್ನು ಮರವೇರುವ ಪರೀಕ್ಷೆಗೊಡ್ಡಿದರು ಅನ್ನಿ. ಆಗ ಅದಕ್ಕೆ ತನ್ನ ಜೀವನಪರ್ಯಂತ ಮೂರ್ಖತನದ ಪಟ್ಟವೇ ಗತಿ!’ ಮೀನಿಗೆ ಕುದುರೆ ಅಥವಾ ಚಿರತೆಯೊಂದಿಗೆ ಓಡಲು ಹೇಳಿ ಅದರ ವಿಜಯ ನಿರೀಕ್ಷಿಸಬಹುದೇ? ವಿದ್ಯಾಲಯದ ಮುಖ್ಯಸ್ಥರು, ಶಿಕ್ಷಕರು ಮತ್ತು ಪೋಷಕರ ಒತ್ತಡಕ್ಕೆ ಮಣಿದು ಅಂಕಪಟ್ಟಿಯಲ್ಲಿ ಬರೀ ‘ಸ್ಪೆಷಲ್ ಗ್ರೇಡ್’, ‘ಡಿಸ್ಟಿಂಕ್ಷನ್’, ‘ಫಸ್ಟ್ ಕ್ಲಾಸ್’ನಂತಹ ನಮೂದಿಗೆ ಮಕ್ಕಳು ಹಪಹಪಿಸುತ್ತಾರೆ. ನಿಜವಾದ ಪ್ರಾಪಂಚಿಕ ಅರಿವನ್ನು ಆಸ್ವಾದಿಸಲಾಗದೆ ಅವರು ಜ್ಞಾನವಂಚಿತರಾಗುತ್ತಾರೆ. ಉತ್ತಮ ಫಲಿತಾಂಶ ಬಂದರಾಯಿತು, ಜಗತ್ತನ್ನು ಕಟ್ಟಿಕೊಂಡು ಆಗಬೇಕಾದ್ದೇನು ಎನ್ನಲಾಗದು. ಏಕೆಂದರೆ ಕಲಿಕಾರ್ಥಿ ಜಗತ್ತಿನ ಒಂದು ಭಾಗವೇ.

ವಿಶ್ವದ ಅತಿಶ್ರೇಷ್ಠ ವಿಜ್ಞಾನಿಗಳು, ತಂತ್ರಜ್ಞರು ತಮ್ಮ ಸಂಶೋಧನೆಗಳ ಫಲಿತಾಂಶ, ಪ್ರತಿಫಲಗಳ ಬಗ್ಗೆ ಚಿಂತಿಸಿದ್ದಿಲ್ಲ. ಅವರ ಗಮನವೆಲ್ಲ ಪ್ರಯೋಗ, ಮರಳಿಯತ್ನ, ಚಿಂತನ ಮಂಥನಗಳಿಗೆ ಮೀಸಲಿತ್ತು. ವಾಸ್ತವವಾಗಿ ನಿಜ ಜ್ಞಾನ, ನಿಜ ಅಧ್ಯಯನ ನಮ್ಮನ್ನು ಕಿರಿಯರನ್ನಾಗಿಸುತ್ತವೆ, ಮತ್ತಷ್ಟು ತಿಳಿಯಬೇಕೆಂಬ ಹಂಬಲವನ್ನು ಸೃಜಿಸುತ್ತವೆ.

ಸ್ವಾರಸ್ಯ ಗೊತ್ತೇ? ಕಡಿಮೆ ಅಂಕ ಗಳಿಸಿದ್ದಕ್ಕೆ ಮಕ್ಕಳಿಗೆ ಆತಂಕವಿಲ್ಲ. ಅವರ ಭಯವೇನಿದ್ದರೂ ತಮ್ಮ ಪೋಷಕರು ಹೇಗೆ ಪ್ರತಿಕ್ರಿಯಿಸುವರೋ ಎಂದು! ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಅವರವರ ಪ್ರತಿಭೆಗೆ ತಕ್ಕಂತೆ ಉದ್ಯೋಗ ಲಭ್ಯ. ಅಭಿನಯ, ಹಾಡುಗಾರಿಕೆ, ಅಡುಗೆ, ಪ್ರಾಣಿ ಪೋಷಣೆ, ನಲ್ಲಿ ದುರಸ್ತಿ, ಕೇಶ ವಿನ್ಯಾಸ... ಒಂದೆರಡಲ್ಲ. ಶುಚಿರುಚಿ ಮೃದು ದೋಸೆ ತಯಾರಿಕೆ ವೈರಲ್ ಆಗಿ ನೆರೆಹೊರೆಯ ಪಟ್ಟಣಗಳಿಂದ ಜನ ಬಂದು ಸರದಿ ನಿಲ್ಲುವ ಉದಾಹರಣೆಗಳಿಲ್ಲವೇ? ಅಂತೆಯೇ ಜನ ಮುಗಿಬೀಳುವ ಹೊಲಿಗೆಯಂತ್ರ ರಿಪೇರಿ ಮಳಿಗೆಗಳು ಅವೆಷ್ಟೋ? ದುರ್ದೈವವೆಂದರೆ, ಇಂಥ ವೃತ್ತಿಗಳು ಪರ್ಯಾಯವೆಂದು
ಸೂಚಿಸಲ್ಪಡುವುದೇ ಇಲ್ಲ! ಅದು ಹಾಗಿರಲಿ, ಒಬ್ಬ ಬೈಕ್ ಮೆಕ್ಯಾನಿಕ್ ‘ನನ್ನ ತಲೆಮಾರಿಗೇ ಇದು ಸಾಕು, ಮುಂದೆ ನನ್ನ ಮಕ್ಕಳಿಗೆ ಬೇಡ’ ಎನ್ನುವುದು ಎಂಥ ಹಿನ್ನಡೆ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT