ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಶಾಲಾ ತೋಟದ ‘ಹೂ’ ಬಾಡದಿರಲಿ

ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಕುರಿತಾದ ಪೋಷಕರ ಆತಂಕವನ್ನು ಒಂದು ಪ್ರಮುಖ ಅಂಶವಾಗಿ ಸರ್ಕಾರ ಪರಿಗಣಿಸಲೇಬೇಕಾಗಿದೆ
Last Updated 5 ಜೂನ್ 2020, 20:00 IST
ಅಕ್ಷರ ಗಾತ್ರ

ಶಾಲೆಗಳನ್ನು ಜುಲೈನಲ್ಲಿ ಪುನರಾರಂಭಿಸುವ ಕುರಿತ ಸರ್ಕಾರದ ಹೇಳಿಕೆಯು ಶಿಕ್ಷಕರು ಮತ್ತು ಪೋಷಕರಲ್ಲಿ ಸಂಚಲನ ಉಂಟುಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ ಹಾಗೂ ವಿರೋಧದ ಚರ್ಚೆ ನಡೆದಿದೆ.

ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳಿಗೆ ಮರುಚಾಲನೆ ನೀಡಲು ರಾಜ್ಯ ಸರ್ಕಾರ ತೋರಿರುವ ಉತ್ಸುಕತೆಯು ಅದರ ಶೈಕ್ಷಣಿಕ ಮತ್ತು ಸಾಮಾಜಿಕ ಬದ್ಧತೆಗೆ ನಿದರ್ಶನ. ಸರ್ಕಾರಿ ಶಾಲೆಗಳಲ್ಲಿನ ಶಾಲಾ ಅಭಿವೃದ್ಧಿ ಸಮಿತಿಗಳ ಸಭೆಗಳನ್ನು ಆಯೋಜಿಸಿ ಶಿಕ್ಷಕರು, ಅಧಿಕಾರಿಗಳು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸುವುದು ಅದರ ಉದ್ದೇಶವಾಗಿದೆ. ಈ ಅಭಿಪ್ರಾಯವನ್ನು ಆಧರಿಸಿ ಶಾಲೆಗಳನ್ನು ಪುನರಾರಂಭಿಸುವ ದಿನಾಂಕವನ್ನು ನಿಗದಿಪಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಮತ್ತೊಂದೆಡೆ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಜತೆ ಚರ್ಚಿಸಿದ ತರುವಾಯ, ಪರಿಸ್ಥಿತಿಯನ್ನು ನೋಡಿಕೊಂಡು ಶಾಲೆಗಳ ಪುನರಾರಂಭದ ದಿನಾಂಕವನ್ನು ತೀರ್ಮಾನಿಸುವುದಾಗಿ ತಿಳಿಸಿದೆ. ಇದು ಸ್ತುತ್ಯರ್ಹ ನಿರ್ಧಾರ. ಶಿಕ್ಷಣ ಸಂಸ್ಥೆಗಳ ಮಟ್ಟದಲ್ಲಿ ಪೋಷಕರೊಂದಿಗೆ ಸಭೆ ಆಯೋಜಿಸಿ, ಚಿಂತನ-ಮಂಥನ ನಡೆಸಿ ಅಭಿಪ್ರಾಯ ಸಂಗ್ರಹಿಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ನೀಡಿರುವ ಸೂಚನೆಯು ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ. ಅದರಂತೆ ಜೂನ್ 10ರಿಂದ 12ರವರೆಗೆ ಶಾಲೆಗಳ ಅಂಗಳದಲ್ಲಿ ನಡೆಯಲಿರುವ ಪೋಷಕರ ಸಭೆಗಳಲ್ಲಿ ಈ ಸಂಬಂಧ ವಾದ-ವಿವಾದಗಳು ನಡೆಯುವುದಂತೂ ನಿಶ್ಚಿತ.

ಶಾಲೆಗಳಲ್ಲಿ ‘ಅಂತರ’ ಕಾಪಾಡಿ ಎಂದು ಚಿಕ್ಕಮಕ್ಕಳಿಗೆ ತಿಳಿ ಹೇಳುವುದು ಶಿಕ್ಷಕರಿಗೆ ಕಷ್ಟವಾಗಬಹುದು. ಮಕ್ಕಳ ವಯಸ್ಸಿಗೆ ಅಥವಾ ಅವರ ಬುದ್ಧಿಮತ್ತೆಗೆ ‘ಅಂತರ’ ಎಂಬುದು ಇರುವುದಿಲ್ಲ. ಸರ್ಕಾರಿ ಶಾಲೆಗಳ ಭೌತಿಕ ಸ್ಥಿತಿಗತಿಯು ಕೊರೊನಾ ಉಪದ್ರವದಿಂದ ಮಕ್ಕಳನ್ನು ರಕ್ಷಿಸುವಷ್ಟು ಸುರಕ್ಷಿತವಾಗಿಲ್ಲ ಎಂಬುದು ಅನೇಕರ ವಾದ. ಶಾಲಾ ಕೊಠಡಿಗಳು ಇಕ್ಕಟ್ಟಾಗಿದ್ದರೆ ಮಕ್ಕಳ ನಡುವೆ ಅಂತರ ಇರುವಂತೆ ಕೂರಿಸುವುದು, ಶೌಚಾಲಯದಲ್ಲಿ, ಆಟದ ಬಯಲಿನಲ್ಲಿ ಅಥವಾ ಊಟದ ಸಮಯದಲ್ಲಿ ಅಂತರ ಕಾಪಾಡಿಕೊಳ್ಳಿ ಎಂದು ತಿಳಿಹೇಳುವುದು ಸುಲಭವಲ್ಲ. ಕಿರಿದಾದ ನಡೆಯುವ ಹಾದಿಗಳು, ಸೋರುವ ಮೇಲ್ಚಾವಣಿಗಳು ಸಹ ಸೋಂಕಿನ ಆತಂಕ ಹುಟ್ಟಿಸುತ್ತವೆ.

ಶಾಲೆಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಮಾಸ್ಕ್ ಹಾಕಿಕೊಳ್ಳುವುದು ಮಕ್ಕಳಿಗೆ ಕಷ್ಟವಾಗಲಿದೆ ಎಂಬುದು ಪೋಷಕರ ಅಳಲು. ಲಾಕ್‍ಡೌನ್ ನಂತರ ಫ್ರಾನ್ಸ್‌ನಲ್ಲಿ ಶಾಲೆಗಳು ಪುನರಾರಂಭವಾದಾಗ, ಅನೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ನಿರಾಕರಿಸಿದ್ದರತ್ತಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿನ ಅನೇಕರು ಬೊಟ್ಟು ಮಾಡಿದ್ದಾರೆ. ಇಂತಹ ಆತಂಕದ ನಡುವೆಯೇ ಯುರೋಪಿನ ಉಳಿದ ರಾಷ್ಟ್ರಗಳಲ್ಲಿ ಶಾಲೆಗಳು ಪುನರಾರಂಭವಾಗಿದ್ದು, ಮಕ್ಕಳು ದೈಹಿಕ ಅಂತರ, ಸುರಕ್ಷಾ ಕವಚ, ಗ್ಲೌಸುಗಳು ಮತ್ತು ಮಾಸ್ಕ್‌ಗಳೊಂದಿಗೆ ಹೂವಿನ ತೋಟಗಳನ್ನು ಪುನರ್‌ನಿರ್ಮಿಸಿರುವ ಆಸಕ್ತಿದಾಯಕದ ಬೆಳವಣಿಗೆಯೂ ನಡೆದಿದೆ.

ಈ ಎಲ್ಲ ಕಾರಣಗಳಿಂದ, ಮಕ್ಕಳ ಸುರಕ್ಷತೆ ಕುರಿತಾದ ಪೋಷಕರ ಆತಂಕವನ್ನು ಒಂದು ಪ್ರಮುಖ ಅಂಶವಾಗಿ ಪರಿಗಣಿಸಲೇಬೇಕಾಗಿದೆ. ಅನೇಕ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಶಾಲೆಗಳನ್ನು ಮೂರು ಪಾಳಿಗಳಾಗಿ ವಿಂಗಡಿಸುವ ಸಾಧ್ಯತೆ ಇದೆ. ದಿನ ಬಿಟ್ಟು ದಿನ ತರಗತಿಗಳನ್ನು ನಡೆಸುವುದು ಮತ್ತೊಂದು ಪರ್ಯಾಯ ಮಾರ್ಗ. ಇದು ಶಾಲೆಯನ್ನು ಮಕ್ಕಳು ಲಘುವಾಗಿ ಪರಿಗಣಿಸುವಂತೆ ಮಾಡಬಹುದು. ಶಾಲೆಗಳನ್ನು ತೆರೆಯುವುದೇ ಆದಲ್ಲಿ ಪಠ್ಯಕ್ರಮ ಕಡಿತಗೊಳಿಸುವುದು ಅವಶ್ಯ.

ಪ್ಲೇಗು, ಕಾಲರಾ, ಸೋಂಕು ಮತ್ತಿತರ ಉಪದ್ರವಗಳ ಕಾಲದಲ್ಲಿ ನಾವು ಅನುಸರಿಸಬಹುದಾದ ಸುರಕ್ಷಾ ಕ್ರಮಗಳನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಿ, ಮಕ್ಕಳಿಗೆ ತಿಳಿಸಿ ಹೇಳುವುದು ಶಿಕ್ಷಕರ ಸಾಮಾಜಿಕ ಜವಾಬ್ದಾರಿ ಆಗಬೇಕಾಗಿದೆ. ತರಗತಿಗಳ ಅವಧಿಯನ್ನು ಇಳಿಸುವುದು ಸೂಕ್ತ. ನಲಿ-ಕಲಿ ಸದ್ಯಕ್ಕೆ ಬೇಡ ಎನ್ನಿಸುತ್ತದೆ. ಸಾಂಕ್ರಾಮಿಕಗಳ ಕುರಿತು ಶಿಕ್ಷಕ ಸಮುದಾಯವು ಮಕ್ಕಳಲ್ಲಿ ಸಕಾರಾತ್ಮಕ ಪರಿಹಾರದ ಚಿಂತನೆಯನ್ನು ಬೆಳೆಸಬೇಕಾಗಿದೆ.

ಶಾಲೆಗಳಲ್ಲಿ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲು ಸರ್ಕಾರ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಿ, ಅಭಿವೃದ್ಧಿ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಸಾಮಾನ್ಯವಾಗಿ ಮಕ್ಕಳು ಮತ್ತು ವಯಸ್ಸಾದವರು ಕೊರೊನಾ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಇದು ಈಗಿನ ಕೊರೊನಾ ಸೋಂಕಿನ ಪ್ರಕರಣಗಳಿಂದ ದೃಢಪಟ್ಟಿದೆ. ಹೀಗಾಗಿ ಮಕ್ಕಳನ್ನು ಜೋಪಾನ ಮಾಡುವುದು ಸರ್ಕಾರದ ಕರ್ತವ್ಯವೂ ಹೌದು.

ಶಾಲಾ ಮಟ್ಟದ ಸಭೆಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಕ್ರೋಡೀಕರಿಸಿ ಶಿಕ್ಷಣ ತಜ್ಞರು, ವೈದ್ಯರು ಮತ್ತು ಸೋಂಕುರೋಗ ತಜ್ಞರನ್ನು ಒಳಗೊಂಡ ಸಮಿತಿಯ ಮುಂದಿರಿಸಿ, ಅವರ ಅಭಿಪ್ರಾಯಗಳನ್ನು ಪಡೆದುಕೊಂಡು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂಬುದು ಅನೇಕ ಪೋಷಕರ ಒತ್ತಾಸೆ. ಏಕೆಂದರೆ ಮಕ್ಕಳ ಪ್ರಪಂಚವೇ ಬೇರೆ. ಅವರಿದ್ದೆಡೆ ಹೂತೋಟ. ಹೂಗಳು ಬಾಡದಿರಲಿ.

ಲೇಖಕ: ಸಹಪ್ರಾಧ್ಯಾಪಕ ಮತ್ತು ಮುಖ್ಯಸ್ಥ, ಇತಿಹಾಸ ವಿಭಾಗ, ಜೆಎಸ್ಎಸ್ ಮಹಿಳಾ ಕಾಲೇಜು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT