ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಆರ್ಥಿಕ ಪುನಶ್ಚೇತನ: ಮುಂದಿದೆ ಸವಾಲು

ವ್ಯವಸ್ಥಿತ ಕ್ರಮಗಳಷ್ಟೇ ಬಿಕ್ಕಟ್ಟಿನಿಂದ ನಮ್ಮನ್ನು ಪಾರು ಮಾಡಬಲ್ಲವು
Last Updated 7 ಮೇ 2020, 20:25 IST
ಅಕ್ಷರ ಗಾತ್ರ

ಲಾಕ್‌ಡೌನ್‌ನಿಂದ ಸ್ಥಗಿತಗೊಂಡ ಆರ್ಥಿಕ ಚಟುವಟಿಕೆಗಳು ಮೊದಲಿನ ಸ್ಥಿತಿಗೆ ಬರಲು ಎಷ್ಟು ದಿನ ಬೇಕಾಗಬಹುದು ಎನ್ನುವುದು ಈಗ ನಮ್ಮ ಮುಂದಿರುವ ಪ್ರಶ್ನೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಬೃಹತ್ ಕೈಗಾರಿಕೆಗಳು, ಸೇವಾ ಕ್ಷೇತ್ರದಲ್ಲಿನ ಕಾರ್ಯಗಳು, ಕಟ್ಟಡ ನಿರ್ಮಾಣ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗ ತುಂಡರಿಸಿ ಹೋಗಿರುವ ಸರಬರಾಜು ಸರಪಳಿಯು ಸಹಜ ಸ್ಥಿತಿಗೆ ಮರಳುವುದೆಂದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ವಲಸೆ ಕಾರ್ಮಿಕರು ತಂಡೋಪತಂಡವಾಗಿ ಊರುಗಳಿಗೆ ತೆರಳುತ್ತಿದ್ದಾರೆ. ಅಲ್ಲಿ ಅವರಿಗೆ ಉದ್ಯೋಗವನ್ನು ಒದಗಿಸುವುದು ಸುಲಭದ ಕೆಲಸವಲ್ಲ. ಅವರಿಗೆ ಪುನರ್ವಸತಿ ಕಲ್ಪಿಸುವುದಕ್ಕೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಇಚ್ಛಾಶಕ್ತಿ ಬೇಕು. ಅದಕ್ಕೆ ಬೇಕಾದ ಕ್ರಿಯಾಯೋಜನೆಯನ್ನು ಸಿದ್ಧಪಡಿಸುವ ಕೆಲಸವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು.

ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ, ಕಟ್ಟಡ ನಿರ್ಮಾಣ ಕಾರ್ಯಗಳು ಇಲ್ಲವೇ ಸೇವಾ ಕ್ಷೇತ್ರಗಳು, ರೆಸ್ಟೊರೆಂಟ್‌ಗಳು ಎಲ್ಲವೂ ಯಥಾಸ್ಥಿತಿಗೆ ಮರಳಲು ಅನುವಾಗುವಂತಹ ಕ್ರಮಗಳ ಬಗ್ಗೆ ತ್ವರಿತಗತಿಯಲ್ಲಿ ಯೋಚಿಸಲೇಬೇಕಾಗಿದೆ. ಇವುಗಳನ್ನು ನಡೆಸುವವರಿಗೆ ದೊರೆಯುವ ಬ್ಯಾಂಕಿನ ಸೌಲಭ್ಯಗಳು, ಬಂಡವಾಳ ಮತ್ತು ಅನೇಕ ಸ್ತರಗಳಲ್ಲಿನ ಏರುಪೇರಿನ ಕಾರಣಗಳಿಂದ ಈ ಕಾರ್ಯಚಟುವಟಿಕೆಗಳ ಪುನರಾರಂಭಕ್ಕೆ ಅನೇಕ ಎಡರುತೊಡರುಗಳಿವೆ. ಇಂತಹ ಸಂದರ್ಭದಲ್ಲಿ ಅವುಗಳ ಪುನಶ್ಚೇತನಕ್ಕೆ ಪೂರಕವಾಗುವಂತಹ ಚಟುವಟಿಕೆಗಳಿಗೆ ಸರ್ಕಾರದ ನೆರವಿನ ಅಗತ್ಯ ಇದ್ದೇ ಇದೆ.

ತಿರುಗಾಟ, ಪ್ರವಾಸ, ಖರ್ಚು–ವೆಚ್ಚಗಳು ಸುಮಾರು ಎರಡು ತಿಂಗಳುಗಳಿಂದ ಸ್ಥಗಿತಗೊಂಡಿವೆ. ಅವುಗಳೆಲ್ಲವೂ ಹಿಂದಿನಂತೆ ಪುನಃ ಗರಿಗೆದರಲು ಸಮಯ ಹಿಡಿಯುತ್ತದೆ. ಲಾಕ್‌ಡೌನ್ ಪೂರ್ತಿ ಸಡಿಲಿಸಿದರೂ ಕೊರೊನಾ ಸೋಂಕಿನ ಭಯ ಒಮ್ಮೆಗೇ ಹೊರಟು ಹೋಗುವುದಿಲ್ಲ. ಅಂದರೆ ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿನ ವ್ಯಾಪಾರ ವೃದ್ಧಿಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಸಣ್ಣ, ಮಧ್ಯಮ ಉದ್ಯಮಗಳಿಗೆ ಸಾಲ ಸೌಲಭ್ಯ ಸಲೀಸಾಗಿ ಸಿಗದೇ ಹೋದರೆ ಅವುಗಳ ಚಟುವಟಿಕೆ ಕುಂಠಿತಗೊಳ್ಳಬಹುದು. ಕೊರೊನಾ ಭೀತಿ ಆವರಿಸಿಕೊಳ್ಳುವುದಕ್ಕಿಂತ ಮುಂಚೆಯೇ ದೇಶದಲ್ಲಿನ ಆರ್ಥಿಕ ಹಿನ್ನಡೆಯಿಂದಾಗಿ ಈ ಉದ್ಯಮಗಳಿಂದ ತಯಾರಾಗುತ್ತಿದ್ದ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಕೊರೊನಾ ಬಿಕ್ಕಟ್ಟಿನಿಂದಾಗಿ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಚೇತರಿಕೆಗೆ ದೃಢ ಹೆಜ್ಜೆ ಇರಿಸದಿದ್ದರೆ ದೇಶದಲ್ಲಿ ಹಿಂದೆಂದೂ ಕಾಣದಿದ್ದಂತಹ ಆರ್ಥಿಕ ಹಿನ್ನಡೆ, ನಿರುದ್ಯೋಗ ಸಮಸ್ಯೆ ತಲೆದೋರಬಹುದು. ಹಸಿವು ತಾಂಡವವಾಡಬಹುದು. ಬಡವರಿಗೆ ಒಂದಷ್ಟು ಧನಸಹಾಯ ಮಾಡಿದರೂ ಅದು ತಕ್ಷಣದ ಅಗತ್ಯಗಳನ್ನಷ್ಟೇ ಪೂರೈಸಬಲ್ಲದು. ದುಡಿಯುವ ಕೈಗಳಿಗೆ ಕೆಲಸ ಒದಗಿಸುವುದರಿಂದ ಮಾತ್ರ ಅವರ ಕುಟುಂಬಗಳ ನೆಲೆ ಭದ್ರಪಡಿಸಲು ಸಾಧ್ಯ.

ಬ್ರಿಟನ್ನಿನ ಜೆ.ಎಂ.ಕೀನ್ಸ್ ಎಂಬ ಆರ್ಥಿಕ ತಜ್ಞ ಇಂತಹ ಬಿಕ್ಕಟ್ಟಿನ ಸಂದರ್ಭಗಳನ್ನು ಎದುರಿಸುವುದಕ್ಕೆ ಪೂರಕವಾಗಿ ತನ್ನದೇ ಆದ ವಿಧಾನವೊಂದನ್ನು ಮಂಡಿಸಿದ್ದರು. ಸರ್ಕಾರವು ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಅಧಿಕ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕು. ಆ ಮೂಲಕ ಉದ್ಯೋಗ ಅವಕಾಶ ಸೃಷ್ಟಿಸಬೇಕು ಮತ್ತು ಬೇಡಿಕೆಯನ್ನು ಹೆಚ್ಚಿಸಬೇಕು. ಹೆಚ್ಚು ನೋಟುಗಳನ್ನು ಮುದ್ರಿಸುವ ಮೂಲಕಅದಕ್ಕೆ ತಗಲುವ ಖರ್ಚನ್ನು ಭರಿಸಬೇಕು ಎಂಬುದು ಆತನ ನಿಲುವಾಗಿತ್ತು. ಆರ್ಥಿಕ ಸ್ಥಿರತೆ ಸಾಧಿಸಿ ಪರಿಸ್ಥಿತಿಯನ್ನುಉತ್ತಮಗೊಳಿಸುವ ದಿಸೆಯಲ್ಲಿ ಅವರ ಕೆಲವು ಸಲಹೆಗಳು ಈಗಲೂ ಪ್ರಸ್ತುತ ಅನ್ನಿಸುತ್ತದೆ. ಇದಲ್ಲದೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೂ ಹೆಚ್ಚು ಅನುದಾನವನ್ನು ಒದಗಿಸಬೇಕು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೂಡ ಹಿನ್ನಡೆಯಾಗುವ ಸಂಭವವಿದೆ. ದೇಶಕ್ಕೆ ಕೊರೊನಾ ವೈರಾಣು ಕಾಲಿಡುವ ಮೊದಲೇ ನಮ್ಮ ಅರ್ಥ ವ್ಯವಸ್ಥೆಯ ಆರೋಗ್ಯ ತುಸು ಕೆಟ್ಟಿತ್ತು. ಬ್ಯಾಂಕುಗಳ ಸ್ಥಿತಿ ಕೂಡ ಸರಿ ಇರಲಿಲ್ಲ. ಸರ್ಕಾರ ಹಾಗೂ ರಿಸರ್ವ್‌ ಬ್ಯಾಂಕ್‌ ನೆರವಿಗೆ ಬಂದಿದ್ದವು. ಆದರೆ ಆ ಸಮಯದಲ್ಲಿ ಅಮೆರಿಕದ ಆರ್ಥಿಕ ಪರಿಸ್ಥಿತಿ ಸದೃಢವಾಗಿತ್ತು. ಅಲ್ಲಿನ ಬ್ಯಾಂಕುಗಳ ಆಲ್‌ಲೈನ್ ವಹಿವಾಟು, ಭಾರತದಲ್ಲಿನ ಕಾಲ್‌ಸೆಂಟರ್‌ಗಳ ಮೂಲಕವೇ ನಡೆಯಬೇಕು. ಆದರೆ ಈಗ ಅಮೆರಿಕವೂ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವುದರಿಂದ, ಇದೇ ಪರಿಸ್ಥಿತಿ ಇನ್ನೂ ಒಂದೆರಡು ತಿಂಗಳು ಮುಂದುವರಿದರೆ ಈ ಕಾಲ್‌ಸೆಂಟರ್‌ಗಳ ಭವಿಷ್ಯ ಕೂಡ ಡೋಲಾಯಮಾನ ಆಗಬಹುದು.

ಕೊರೊನಾ ಪಿಡುಗನ್ನು ಹತ್ತಿಕ್ಕಲು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಹಣ ತೊಡಗಿಸಬೇಕಾಗಿದೆ. ಹೀಗಾಗಿ, ಅನಗತ್ಯ ಖರ್ಚುಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಸರ್ಕಾರಗಳಿಗೆ ಅನಿವಾರ್ಯ ಆಗಬಹುದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚು ಹಣ ಒದಗಿಸಲು ಪ್ರತ್ಯೇಕ ವ್ಯವಸ್ಥೆಯನ್ನೇ ರೂಪಿಸಬೇಕಾದ ಅಗತ್ಯವಿದೆ. ಈ ಕಾರ್ಯಕ್ಕೆ ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌ ಅನ್ನು ಬಳಸಿಕೊಳ್ಳಬಹುದು.

ಬೃಹತ್ ಕೈಗಾರಿಕಾ ಸಂಸ್ಥೆಗಳ ಕಾರ್ಯವಿಧಾನ ಕೂಡ ಬದಲಾಗುವ ಸಾಧ್ಯತೆ ಇದೆ. ಇದನ್ನೆಲ್ಲ ಗಮನದಲ್ಲಿ ಇರಿಸಿಕೊಂಡು, ಹೆಚ್ಚಿನ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಸಣ್ಣ ಕೈಗಾರಿಕಗಳನ್ನು ಬಲಪಡಿಸುವ ಸಾಧ್ಯತೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ವ್ಯವಸ್ಥಿತ ಕ್ರಮಗಳಿಗೆ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT