ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವಿದ್ಯಾರ್ಜನೆ ತಾಣ: ಬೇಕು ವ್ಯವಧಾನ

ಮಕ್ಕಳು ವಿದ್ಯೆ ಅರ್ಜಿಸುವ ತಾಣದಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುವ ಅಗತ್ಯವನ್ನು ಪೋಷಕರು ಮನಗಾಣಬೇಕು
Last Updated 23 ಮೇ 2022, 19:31 IST
ಅಕ್ಷರ ಗಾತ್ರ

ಶಾಲೆಗಳಲ್ಲಿ ಆಯಾ ಶೈಕ್ಷಣಿಕ ವರ್ಷದ ಪ್ರವೇಶಾತಿ ಬಿರುಸಾದಾಗಲೆಲ್ಲ ನನಗೆ ಆ ಸಂಗತಿ ಕಾಡುತ್ತದೆ. ಶಾಲೆಗೆ ಹೊಸದಾಗಿ ನೇಮಕಗೊಂಡ ಅಧ್ಯಾಪಕರೊಬ್ಬರು ತರಗತಿಗೆ ಅಡಿಯಿಡುತ್ತಲೇ ಬೆರಗಾಗುತ್ತಾರೆ. ಅಲ್ಲಿ ಬೆಂಚುಗಳನ್ನು ಅಲಂಕರಿಸಿದ್ದವರು ಮಕ್ಕಳಲ್ಲ, ನಲವತ್ತರ ಮೇಲಿನ ವಯೋಮಾನದವರು! ಕ್ಷಣ ಅವರು ಇದೇನು ವಯಸ್ಕರ ಶಿಕ್ಷಣ ತರಗತಿಯೋ ಅಂತ ತಬ್ಬಿಬ್ಬಾಗುವರು. ಅಷ್ಟರಲ್ಲಿ ಹಿರೀಕರೊಬ್ಬರು ‘ಸುಧಾರಿಸಿಕೊಳ್ಳಿ ಸಾರ್, ನಾವು ಮಕ್ಕಳ ಪೋಷಕರು. ನಮ್ಮ ಮಕ್ಕಳಿಗೆ ಪಾಠ ಹೇಳುವವರು ಯಾರು, ಏನು, ಎತ್ತ ಅಂತ ಪರಿಚಯಿಸಿಕೊಳ್ಳಲು ಬಂದಿದ್ದೇವೆ’ ಎಂದರು.

ಶಾಲೆಯು ಮನೆಯ ವಿಸ್ತರಣೆ ಎನ್ನುತ್ತಾರೆ. ಈ ದಿಸೆಯಲ್ಲಿ ಪಾಲಕರ ಈ ಪರಿಯ ಕಾಳಜಿ ನಿಸ್ಸಂದೇಹವಾಗಿ ಮಾದರಿ. ಮಕ್ಕಳನ್ನು ಶಾಲೆಗೆ ಸೇರಿಸಿ, ಇನ್ನು ಏನಿದ್ದರೂ ಶಾಲೆಯದೇ ಹೊಣೆ ಎನ್ನಲಾದೀತೆ? ಅಷ್ಟಕ್ಕೂ ಶಾಲೆಯು ಒಂದು ವರ್ಷದ ಅವಧಿಯಲ್ಲಿ ಒಂದು ಅಂಕಪಟ್ಟಿ ಹೆರುವ ಎಟಿಎಂ ಎಂದು ಭಾವಿಸಬೇಕೆ?

ಪೋಷಕರ ವೃತ್ತಿ ಯಾವುದೇ ಇರಲಿ, ಅವರು ನಿರಕ್ಷರರೇ ಆಗಿರಲಿ ತಮ್ಮ ಮಕ್ಕಳಿಗೆ ಶಾಲೆಯಿಂದ ಎಂತಹ ಶಿಕ್ಷಣ ಲಭಿಸುತ್ತದೆ ಎಂದು ತಿಳಿದುಕೊಳ್ಳುವುದು ಅನಿವಾರ್ಯವಾಗಬೇಕು. ಅಧ್ಯಾಪಕರ ಬೋಧನಾ ವಿಧಾನವನ್ನು, ಅವರು ಅಶಿಸ್ತು ಹತ್ತಿಕ್ಕಿ ತರಗತಿ ನಿರ್ವಹಿಸುವ ಕ್ರಮವನ್ನು ಪಾಲಕರು ವಿಚಾರಿಸಿ ಅರಿಯದೇ ಸಹಭಾಗಿತ್ವ ಯಶಸ್ವಿಯಾಗದು. ನಿಷ್ಠುರ ಸತ್ಯವೆಂದರೆ, ಶಾಲೆಗಳಿಗೆ ಪೋಷಕರು ಭೇಟಿ ನೀಡುವ ಸಂದರ್ಭಗಳೆಂದರೆ, ಅವರ ಮಕ್ಕಳಿಗೆ ಸಹಪಾಠಿಗಳಿಂದ ಏನಾದರೂ ಕೀಟಲೆ, ತಂಟೆ ಬಾಧಿಸಿದ್ದರೆ ಅಥವಾ ಅವರ ಮಕ್ಕಳೇ ದುರ್ವರ್ತನೆ ತೋರಿದ ಕಾರಣ ಶಾಲೆಯಿಂದ ಬುಲಾವು ಬಂದರೆ! ಹಾಗಾಗಿ ಪೋಷಕರ ಪಾಲಿಗೆ ತಮ್ಮ ಮಕ್ಕಳು ವಿದ್ಯೆ ಅರ್ಜಿಸುವ ತಾಣ ಬಹುತೇಕ ಅಪರಿಚಿತವಾಗಿ ಇರುವುದೇ ಹೆಚ್ಚು.

ಒಂದು ಆಭರಣ, ಜವಳಿ ಅಥವಾ ಕಾರು, ಬೈಕ್ ಖರೀದಿಸುವಾಗ ನಾವು ಏನೆಲ್ಲ ವಿಚಾರಿಸುತ್ತೇವೆ. ಮನೆ ಕಟ್ಟುವ ಗುತ್ತಿಗೆದಾರರೊಂದಿಗೆ ಪಾಯದ ಕಂಬಗಳಿಂದ ಹಿಡಿದು ಬಳಸುವ ಕಚ್ಚಾ ಸಾಮಗ್ರಿಗಳ ಕುರಿತು ಚರ್ಚಿಸುತ್ತೇವೆ. ಇದಿರಲಿ, ಹೋಟೆಲ್‌ಗೆ ಹೋಗಿ ಮೆನು ಹಿಡಿದು, ಸರಬರಾಜಾಗುವ ಪಾನೀಯ, ತಿನಿಸುಗಳ ಬಗ್ಗೆ ಅದೆಷ್ಟು ಸೂಕ್ಷ್ಮವಾಗಿ ಮನಸ್ಸಿಗೆ ತಂದುಕೊಳ್ಳುತ್ತೇವೆ. ಆದರೆ ಹೋಂವರ್ಕ್, ಕಿರು ಪರೀಕ್ಷೆಗಳ ಬಗ್ಗೆ ಕೇಳಿ ಮಾಹಿತಿ ಪಡೆಯುವ ವ್ಯವಧಾನ ಬೇಕು ತಾನೆ? ಆಯಾ ದಿನದ ಕೊನೆಯಲ್ಲಿ ಮಕ್ಕಳ ಉತ್ಸಾಹದ ಕೀಲಿ ಕೈ ಎಂದರೆ ಪೋಷಕರೇ. ಶಾಲೆಗಳೇನೊ ಕಳೆದ ವರ್ಷಗಳಲ್ಲಿ ಪರೀಕ್ಷೆಗಳಲ್ಲಿ ಇಂತಿಷ್ಟು ರ್‍ಯಾಂಕುಗಳು, ಇಷ್ಟು ‘ಉತ್ತಮ’ ಶೇಕಡಾವಾರು ಫಲಿತಾಂಶ ಬಂದಿದೆ ಎಂದು ಫೋಟೊಸಮೇತ ಭಿತ್ತಿಪತ್ರಗಳನ್ನು ಪ್ರಕಟಿಸಿರುತ್ತವೆ. ಮಕ್ಕಳ ಭವಿತವ್ಯಕ್ಕೆ ಅಂಕಪಟ್ಟಿಯೊಂದೇ ಆಧಾರವಾಗಲಾರದು.

ಪೋಷಕರೇ, ಶಾಲೆಯ ಸುತ್ತ ಒಂದೆರಡು ಸುತ್ತು ಹಾಕಿ. ಗ್ರಂಥಾಲಯ, ಪ್ರಯೋಗಾಲಯ, ಆಟೋಟಗಳಿಗಿರುವ ಅವಕಾಶ ಅವಲೋಕಿಸಿ. ಅಕ್ಷರಶಃ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳಿಂದಲೇ ಎಳೆಯರು ಹೆಚ್ಚು ಕಲಿಯುತ್ತಾರೆ. ತರಗತಿ ಸಾವಯವವಾಗಿರಲು ಬೋಧಕರ ಪಾತ್ರ ದೊಡ್ಡದೇ. ಬೋಧಿಸುವ ಅಂಶಗಳು ಬದುಕಿಗೆ ಹೇಗೆ ಹತ್ತಿರ, ಅನ್ವಯ ಎನ್ನುವುದುಮನವರಿಕೆಯಾಗದಿದ್ದರೆ ವಿದ್ಯಾರ್ಥಿಗಳು ಕಲಿಯಲು ಸಹಜವಾಗಿಯೇ ಶ್ರದ್ಧೆ ತೋರರು.

ತರಗತಿಗೆ ಹಾಜರಾಗಲು ಸಮವಸ್ತ್ರಧಾರಣೆ, ಸಮಯಪ್ರಜ್ಞೆಗೂ ಮೀರಿ ಪೂರ್ವ ಬೌದ್ಧಿಕ ತಯಾರಿ ಅತ್ಯಗತ್ಯ. ಇಲ್ಲದಿದ್ದರೆ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಷ್ಟೇ ವಿಪರ್ಯಾಸವಾಗುವುದು. ವಿದ್ಯಾರ್ಥಿಗಳನ್ನು ಪಠ್ಯದ ವಾಕ್ಯಗಳನ್ನು ಓದಲು, ಕಪ್ಪುಹಲಗೆಯ ಮೇಲೆ ಬರೆಯಲು ತೊಡಗಿಸಿ ಅವರನ್ನು ಕ್ರಿಯಾಶೀಲಗೊಳಿಸುವುದು ಉತ್ತಮ ಮಾರ್ಗ. ತಮ್ಮ ಕರ್ತವ್ಯವನ್ನು ಪ್ರೀತಿಸುವ ಶಿಕ್ಷಕರನ್ನು ವಿದ್ಯಾರ್ಥಿಗಳು ಇಷ್ಟಪಡುತ್ತಾರೆ. ತಮ್ಮಿಂದಾದ ತಪ್ಪು, ಪ್ರಮಾದಗಳನ್ನು ಒಪ್ಪಿ ತಿದ್ದಿಕೊಳ್ಳುವ ಪ್ರಾಮಾಣಿಕ ಶಿಕ್ಷಕರನ್ನು ಮೆಚ್ಚುತ್ತಾರೆ. ಬೋಧನೆ, ಕಲಿಕೆಗೆ ಅವಸರಕ್ಕಿಂತ ಕಡು ವೈರಿ ಇನ್ನೊಂದಿಲ್ಲ. ಪಠ್ಯಕ್ರಮ ತ್ವರಿತವಾಗಿ ಮುಗಿಯುವ ಭರಾಟೆಗೆ ಮಣಿದರೆ ತರಗತಿ ಕಾಟಾಚಾರಕ್ಕೆ ಸರಿಯುವುದು.

ಇದು ವಿದ್ಯುನ್ಮಾನ ಯುಗ. ತರಗತಿಯಲ್ಲಿ ಶಿಕ್ಷಕರು ಧಾರಾಳವಾಗಿಯೇ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಆಗ ಪಾಠಗಳಲ್ಲಿ ಇನ್ನಷ್ಟು ಅಚ್ಚರಿ, ಕುತೂಹಲಗಳನ್ನು ತುಂಬಬಹುದು. ತರಗತಿಯಲ್ಲಿ ಪ್ರಶ್ನೋತ್ತರ, ಚರ್ಚೆಗಳು ನಡೆದರೆ ವಿದ್ಯಾರ್ಥಿಗಳಿಗೆ ಸರಾಗವಾಗಿಯೇ ಪಾಠ ನಿಲುಕೀತು. ಗುರು– ಶಿಷ್ಯ ಇಬ್ಬರಲ್ಲೂ ಧನ್ಯತಾಭಾವ ಮೂಡುವುದು.

ವೈವಿಧ್ಯಮಯ ಬೋಧನಾಕ್ರಮ ಕಲಿಕಾರ್ಥಿ ವೃಂದಕ್ಕೆ ಇಷ್ಟವಾಗುತ್ತದೆ. ಏಕೆಂದರೆ ಒಬ್ಬೊಬ್ಬರೂ ಅರಿಯುವ ಕ್ರಮ ಭಿನ್ನ ಭಿನ್ನ. ವಿದ್ಯಾರ್ಥಿಗಳಿಗೆ ಸಮರ್ಥ ಬೋಧನೆ ತಲುಪಿದಾಗಲೇ ಬೋಧಕರು ಪಡೆದ ಬಿ.ಇಡಿ., ಎಂ.ಇಡಿ. ಪದವಿಗಳ ಸಾರ್ಥಕ್ಯ. ಬೋಧನಾ ಪರಿಕರಗಳೇ ಪ್ರಧಾನವಲ್ಲ. ಸೀಮೆಸುಣ್ಣ, ಕಪ್ಪುಹಲಗೆಯಿಂದಲೇ ಶಿಕ್ಷಕರು ಅದ್ಭುತ ಬೋಧನಾ ಕೌಶಲ ಸಾಧಿಸಬಹುದು. ನಿಂತೇ ಪಾಠ ಮಾಡಬೇಕಿಲ್ಲ. ತರಗತಿಯಲ್ಲಿ ಆಗೊಮ್ಮೆ ಈಗೊಮ್ಮೆ ಶತಪಥ ಹಾಕಿದರೆ ಎಲ್ಲ ವಿದ್ಯಾರ್ಥಿಗಳನ್ನೂ ಗಮನಿಸುವ ಅವಕಾಶವಾದೀತು.

ಶಿಕ್ಷಕರು ತಾವು ಕೂರುವ ಆಸನವನ್ನು ಎಲ್ಲ ವಿದ್ಯಾರ್ಥಿಗಳಿಗೂ ಕಾಣಿಸುವಂತೆ ಇರಿಸುವುದು ಅಗತ್ಯ. ತರಗತಿಯ ಸುತ್ತಮುತ್ತಲಿನ ವಾತಾವರಣ ಶಾಂತವಾಗಿರಬೇಕು. ಆಗ ತರಗತಿಯು ಬೋಧಕರು ಹಾಗೂ ವಿದ್ಯಾರ್ಥಿಗಳು ಇಬ್ಬರ ಪಾಲಿಗೂ ಹೊಸದು ಕಲಿಯುವ ನೆಲೆಯಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT