ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಗ್ರಂಥಾಲಯ: ಯಾರ ಹಿತಕ್ಕಾಗಿ?

ತೀರಾ ಕಳಪೆ ಪುಸ್ತಕಗಳನ್ನೆಲ್ಲ ಖರೀದಿಸಿ ಗ್ರಂಥಾಲಯಗಳಲ್ಲಿ ಒಟ್ಟುವ ಬದಲಿಗೆ, ಗುಣಮಟ್ಟದ ಪುಸ್ತಕಗಳನ್ನು ಓದುಗರಿಗೆ ಲಭ್ಯವಾಗಿಸುವುದು ಆದ್ಯತೆಯಾಗಬೇಕು
Published : 16 ಆಗಸ್ಟ್ 2022, 19:32 IST
ಫಾಲೋ ಮಾಡಿ
Comments

ಸಾರ್ವಜನಿಕ ಗ್ರಂಥಾಲಯಗಳಿಗೆ ಯಾರ ಹಿತ ಕಾಯುವುದು ಆದ್ಯತೆಯಾಗಬೇಕು? ಓದುಗರು, ಉದ್ಯೋಗ ದಕ್ಕಿಸಿಕೊಳ್ಳುವ ಸಲುವಾಗಿ ಅಧ್ಯಯನ ನಡೆಸುವ ಯುವಜನರು, ಪುಸ್ತಕಗಳನ್ನು ಬರೆಯುವವರು ಹಾಗೂ ಪ್ರಕಟಿಸುವವರ ಪೈಕಿ ಯಾರ ಹಿತ ಕಾಯುವ ಸಲುವಾಗಿ ಸಾರ್ವಜನಿಕ ಗ್ರಂಥಾಲಯಗಳನ್ನು ರೂಪಿಸಲಾಯಿತು?

ಸಾರ್ವಜನಿಕ ಗ್ರಂಥಾಲಯಕ್ಕೆ ಸಂಬಂಧಿಸಿದ ಚರ್ಚೆ ಬಹುತೇಕ ಸಂದರ್ಭಗಳಲ್ಲಿ ಗ್ರಂಥಾಲಯ ಇಲಾಖೆ ನಡೆಸುವ ಪುಸ್ತಕಗಳ ಸಗಟು ಖರೀದಿಯ ಸುತ್ತಲೇ ಗಿರಕಿ ಹೊಡೆಯುವುದೇ ವಿನಾ ಗ್ರಂಥಾಲಯಗಳನ್ನುಸಾಮಾನ್ಯ ಓದುಗಸ್ನೇಹಿಯಾಗಿಸುವ ಇಚ್ಛಾಶಕ್ತಿ ಯಾರಲ್ಲೂ ಇರುವಂತೆ ತೋರುತ್ತಿಲ್ಲ.

ಕನ್ನಡದ ಹಲವು ಬರಹಗಾರರು ಹಾಗೂ ಪ್ರಕಾಶಕರು, ‘ಗ್ರಂಥಾಲಯ ಇಲಾಖೆಯು ಸಗಟು ಖರೀದಿಯನ್ನು ಸಕಾಲದಲ್ಲಿ ನಡೆಸಬೇಕು, ಖರೀದಿಸುವ ಪ್ರತಿಗಳ ಸಂಖ್ಯೆಯನ್ನು 300ರಿಂದ 500ಕ್ಕೆ ಏರಿಸಬೇಕು, ಪುಸ್ತಕಗಳ ಖರೀದಿ ದರ ನಿಗದಿಯನ್ನು ಮುದ್ರಣ ವೆಚ್ಚದಲ್ಲಿ ಆಗಿರುವ ಬೆಲೆ ಏರಿಕೆ ಪರಿಗಣಿಸಿ ಪರಿಷ್ಕರಿಸಬೇಕು’ ಎಂದು ಆಗಾಗ ಆಗ್ರಹಿಸುತ್ತಿರುತ್ತಾರೆ. ಆದರೆ, ಓದುಗರಿಗೆ ಮತ್ತಷ್ಟು ಹತ್ತಿರವಾಗಿಸುವ ದಿಸೆಯಲ್ಲಿ ಗ್ರಂಥಾಲಯಗಳನ್ನು ಅಣಿಗೊಳಿಸುವ ಅಗತ್ಯದ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲು, ಸರ್ಕಾರದ ಮೇಲೆ ಒತ್ತಡ ಹೇರಲು ಅಷ್ಟೇನೂ ಉತ್ಸಾಹ ತೋರುವುದಿಲ್ಲ.

ಗ್ರಂಥಾಲಯಗಳು ಇರುವುದು ಸಗಟು ಖರೀದಿಯ ಮೂಲಕ ಬರಹಗಾರರು ಹಾಗೂ ಪ್ರಕಾಶಕರನ್ನು ಪ್ರೋತ್ಸಾಹಿಸುವ ಸಲುವಾಗಿಯೋ ಅಥವಾ ಓದುಗರ ಅಗತ್ಯಗಳನ್ನು ಪೂರೈಸುತ್ತಾ ಸಾರ್ವಜನಿಕರಲ್ಲಿ ಓದುವ ಅಭಿರುಚಿ ಬೆಳೆಸಲೋ? ಓದುಗರ ಅಭಿರುಚಿಯನ್ನು ಬೆಳೆಸುವುದು, ಅವರ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳನ್ನು ಒದಗಿಸುವುದು ಕೂಡ ಗ್ರಂಥಾಲಯ ಇಲಾಖೆಯ ಆದ್ಯತೆಯಾಗಬೇಕಲ್ಲವೇ?

ಪುಸ್ತಕಗಳ ಗುಣಮಟ್ಟ ಅಳೆಯಲು ಗ್ರಂಥಾಲಯ ಇಲಾಖೆ ಅಳವಡಿಸಿಕೊಂಡಿರುವ ಮಾನದಂಡವನ್ನು ಗಮನಿಸಿದರೆ ಸಾಕು, ಸಗಟು ಪುಸ್ತಕ ಖರೀದಿಯ ವ್ಯವಸ್ಥೆ ಅದೆಷ್ಟು ಯಾಂತ್ರಿಕವಾಗಿದೆ ಎಂಬುದರ ಅರಿವಾಗಲಿದೆ. ಪುಸ್ತಕವೊಂದರ ಗುಣಮಟ್ಟವನ್ನು ಕೇವಲ ಅದರ ಮುದ್ರಣದ ಗುಣಮಟ್ಟ ಆಧರಿಸಿ ಅಳೆಯಲಾಗುತ್ತಿದೆ. ಸಾದಾ ಪ್ರತಿಗೆ (ಪೇಪರ್ ಬ್ಯಾಕ್) ಒಂದು ರೀತಿಯ ಬೆಲೆ ನಿಗದಿ ಮಾಡಿದರೆ, ಹಾರ್ಡ್‌ಬೌಂಡ್‌ ಪುಸ್ತಕಗಳಿಗೆ ಸ್ವಲ್ಪ ಹೆಚ್ಚು ಬೆಲೆ ನಿಗದಿ ಮಾಡಲಾಗುತ್ತಿದೆ. ಪುಸ್ತಕದ ಪ್ರಕಾರ ಯಾವುದೇ ಇರಲಿ, ಪುಸ್ತಕವೊಂದು ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಅದೆಷ್ಟೇ ಹಣ ವ್ಯಯವಾಗಿರಲಿ, ಅದ್ಯಾವುದೂ ಇಲ್ಲಿ ಪರಿಗಣನೆಗೆ ಬರುವುದೇ ಇಲ್ಲ. ಪುಟಕ್ಕೆ ಇಷ್ಟು ಎಂದು ಬೆಲೆ ನಿಗದಿಪಡಿಸಲಾಗುತ್ತಿದೆ.

ಸಗಟು ಖರೀದಿ ಸರಿಯಾಗಿ ನಡೆಯುತ್ತಿಲ್ಲವೆಂದು ದೂರುವ ಬರಹಗಾರರು, ಈ ಹಿಂದೆ ಖರೀದಿಸಲಾದ ತಮ್ಮ ಪುಸ್ತಕಗಳು ಗ್ರಂಥಾಲಯಗಳ ಮೂಲಕ ಅದೆಷ್ಟು ಓದುಗರನ್ನು ತಲುಪುತ್ತಿವೆ ಎಂಬ ಕುರಿತು ಎಂದಾದರೂ ಚಿಂತಿಸಿದ್ದಾರೆಯೇ? ಪ್ರತಿವರ್ಷ ಸಾವಿರಾರು ಹೊಸ ಪುಸ್ತಕಗಳ 300ಕ್ಕೂ ಹೆಚ್ಚು ಪ್ರತಿಗಳನ್ನು ಖರೀದಿಸುತ್ತ ಬಂದಿರುವ ಗ್ರಂಥಾಲಯ ಇಲಾಖೆಯು ಅವುಗಳನ್ನು ವ್ಯವಸ್ಥಿತವಾಗಿ ಓದುಗರಿಗೆ ತಲುಪಿಸಲು ಮುತುವರ್ಜಿ ತೋರುತ್ತಿದೆಯೇ? ಹೊಸ ಪುಸ್ತಕಗಳನ್ನುಜೋಡಿಸಿಡಲು ಗ್ರಂಥಾಲಯಗಳಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆಯೇ? ಸಗಟು ಖರೀದಿಗೂ ಓದುಗರ ಆಸಕ್ತಿ, ಅಭಿರುಚಿಗೂ ಹೊಂದಾಣಿಕೆ ಆಗುತ್ತಿದೆಯೇ? ಎಷ್ಟೋ ವರ್ಷಗಳಿಂದ ಗ್ರಂಥಾಲಯದ ಕಪಾಟುಗಳಲ್ಲಿದ್ದರೂ ಒಮ್ಮೆಯೂ ಓದುಗರು ಎರವಲು ಪಡೆಯದ ಪುಸ್ತಕಗಳು ಎಷ್ಟಿರಬಹುದು?

ಸಾರ್ವಜನಿಕ ಗ್ರಂಥಾಲಯವೆಂಬ ಅರಿವಿನ ಹೆದ್ದಾರಿಯಲ್ಲಿ ಪಯಣಿಸುವ ಸಾಮಾನ್ಯ ಓದುಗರ ಕುರಿತು ಕೂಡ ಬರಹಗಾರರು, ಪ್ರಕಾಶಕರು ಚಿಂತಿಸಬೇಕಲ್ಲವೇ? ಹೊಸ ಓದುಗರಾದ ವಿದ್ಯಾರ್ಥಿಗಳಿಗೆ ಪರಿಚಯಿಸಲು ಹೆಚ್ಚು ಮುತುವರ್ಜಿ ತೋರುವ ಅಗತ್ಯವಿಲ್ಲವೇ? ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಯುವಜನರೇ ಹೆಚ್ಚಾಗಿ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಾಣಸಿಗುತ್ತಾರೆ.

ಗ್ರಂಥಾಲಯಗಳಿಗೆ ಹೊಸ ಓದುಗರನ್ನು ಸೆಳೆಯುವ ಹಾಗೂ ಸದ್ಯ ಇರುವ ಓದುಗರ ಅಗತ್ಯಗಳನ್ನು ಪೂರೈಸುವಲ್ಲಿ ಗಮನಾರ್ಹ ಕೆಲಸಗಳು ಆಗುತ್ತಿಲ್ಲ. ಎಷ್ಟೋ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದಂತಹ ಮೂಲ ಸೌಕರ್ಯಗಳೂ ಇಲ್ಲ. ಈ ಸೌಲಭ್ಯಗಳಿರುವ ಹಲವೆಡೆ, ಅಸಮರ್ಪಕ ನಿರ್ವಹಣೆ ಹಾಗೂ ದುರ್ಬಳಕೆಯಿಂದ ಬಹುತೇಕ ವೇಳೆಯಲ್ಲಿ ಅವು ಬಳಸುವ ಸ್ಥಿತಿಯಲ್ಲಿ ಇರುವುದಿಲ್ಲ.

ಬೇಡಿಕೆಗೆ ತಕ್ಕಷ್ಟು ಮುದ್ರಿಸುವ (ಪ್ರಿಂಟ್‌ ಆನ್‌ ಡಿಮ್ಯಾಂಡ್‌) ಸೌಲಭ್ಯ ಬಳಸಿಕೊಂಡು ಬೇಡಿಕೆ ಮತ್ತು ಅಗತ್ಯಕ್ಕೆ ತಕ್ಕಷ್ಟು ಪುಸ್ತಕಗಳನ್ನು ಮುದ್ರಿಸುವ ಸಾಧ್ಯತೆ ತೆರೆದುಕೊಂಡಿರುವ ಪ್ರಸ್ತುತ ಸಂದರ್ಭದಲ್ಲಿ, ಲೇಖಕರು ಸಗಟು ಖರೀದಿಯ ಮೇಲೆ ಅವಲಂಬಿತರಾಗಬೇಕಾದ ಅನಿವಾರ್ಯ ಇಲ್ಲ. ಲೇಖಕರು ಹಾಗೂ ಪ್ರಕಾಶಕರ ಹಿತ ಕಾಯುವ ಹೆಸರಿನಲ್ಲಿ ತೀರಾ ಕಳಪೆ ಪುಸ್ತಕಗಳನ್ನೆಲ್ಲ ಖರೀದಿಸಿ ಗ್ರಂಥಾಲಯಗಳಲ್ಲಿ ಒಟ್ಟುವ ಬದಲಿಗೆ, ಗುಣಮಟ್ಟದ ಪುಸ್ತಕಗಳನ್ನು ಓದುಗರಿಗೆ ಲಭ್ಯವಾಗಿಸುವುದು ಆದ್ಯತೆಯಾಗಬೇಕು.

ಸಗಟು ಖರೀದಿಗೆ ಸಲ್ಲಿಸದ, ಆಯ್ಕೆ ಸಮಿತಿಯ ರಾಜಕೀಯ ಒಲವು ನಿಲುವಿನ ಕಾರಣಕ್ಕೆ ಆಯ್ಕೆ ಪಟ್ಟಿ ಯಿಂದ ಹೊರಗಿಡಲಾಗುವ ಉತ್ತಮ ಪುಸ್ತಕಗಳೂ ಓದುಗರಿಗೆ ಲಭ್ಯವಾಗಬೇಕಲ್ಲವೇ? ಕನ್ನಡ ಪುಸ್ತಕ ಲೋಕಕ್ಕೆ ಗ್ರಂಥಾಲಯಗಳು ಸಗಟು ಖರೀದಿಗಷ್ಟೇ ಇದ್ದರೆ ಸಾಕೆ? ಓದುವ ಅಭಿರುಚಿ ಬೆಳೆಸಲು ಗ್ರಂಥಾಲಯಗಳ ಸದ್ಬಳಕೆ ಆಗುವುದು ಬೇಡವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT