ಶುಕ್ರವಾರ, ಜುಲೈ 1, 2022
25 °C
ಉತ್ತರಪ್ರದೇಶದಲ್ಲಿ ಮಾಯಾವತಿ ಒಮ್ಮೆ ಬ್ರಾಹ್ಮಣರ ಮನ ಗೆದ್ದು ಅಧಿಕಾರ ಹಿಡಿದರೆ, ಬಿಜೆಪಿ ದಲಿತರ ಮನ ಗೆದ್ದು ನಾಲ್ಕು ಸಲ ಅಧಿಕಾರದ ಗದ್ದುಗೆ ಏರಿದೆ

ಸಂಗತ | ದಲಿತ ರಾಜಕಾರಣ: ಆಳದಲ್ಲಿ ಪಲ್ಲಟ

ವಾದಿರಾಜ್ Updated:

ಅಕ್ಷರ ಗಾತ್ರ : | |

Prajavani

ಶೇಕಡ 21.1ರಷ್ಟು ಪರಿಶಿಷ್ಟ ಜಾತಿಗಳ ಮತಸಾಂದ್ರತೆ ಇರುವ ಉತ್ತರಪ್ರದೇಶವು ದಲಿತ ರಾಜಕಾರಣದ ತವರುನೆಲ. ಅಲ್ಲಿನ ಎಸ್‌.ಸಿ. ಪಟ್ಟಿಯಲ್ಲಿ 66 ಜಾತಿಗಳು ಬರುತ್ತವೆ. ಪರಿಶಿಷ್ಟರೊಳಗೆ ಮಾಯಾವತಿ ಅವರು ಪ್ರತಿನಿಧಿಸುವ ಜಾಟವರದ್ದೇ (ಶೇ 53.3) ಜನಸಂಖ್ಯೆ ಯಲ್ಲಿ ಸಿಂಹಪಾಲು. ವಾಲ್ಮೀಕಿ, ಕಟಿಕ್, ಕೋರಿ, ಮುಷಹರ್, ಪಾಸಿ, ದೋಭಿ ಇತ್ಯಾದಿ ಜಾತಿಗಳು ರಾಜಕೀಯವಾಗಿ ಅಷ್ಟುಇಷ್ಟು ನೆಲೆ ಕಂಡಿವೆ.

2007ರಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಶೇ 30ರಷ್ಟು ಮತ ಗಳಿಸಿ 206 ಶಾಸಕರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿತ್ತು. 15 ವರ್ಷಗಳ ತರುವಾಯ ಅದೇ ಬಿಎಸ್‌ಪಿಯ ಮತ ಗಳಿಕೆ ಪ್ರಮಾಣ ಶೇ 12ಕ್ಕೆ ಇಳಿದು, ಬರೀ ಒಬ್ಬ ಶಾಸಕ ಗೆಲುವು ಕಂಡಿರುವುದು ದೇಶದಾದ್ಯಂತ ಹರಡಿರುವ ಬಿಎಸ್‌ಪಿ ಬೆಂಬಲಿಗರಿಗೆ ಆಘಾತ ತಂದಿದೆ. 86 ಮೀಸಲು ಕ್ಷೇತ್ರಗಳಿರುವ ರಾಜ್ಯದಲ್ಲಿ ಬಿಎಸ್‌ಪಿ ಎಲ್ಲಿಯೂ ಗೆಲ್ಲಲಿಲ್ಲ ಮಾತ್ರವಲ್ಲ, ನಾಲ್ಕು ಕಡೆಗಳಲ್ಲಷ್ಟೇ ಎರಡನೇ ಸ್ಥಾನದಲ್ಲಿರುವುದು ಸೋಲಿನ ತೀವ್ರತೆಯನ್ನು ಬಿಂಬಿಸುತ್ತದೆ.

‘ಎಲ್ಲೆಡೆ ಮುಸ್ಲಿಂ ಮತಗಳು ಸಾರಾಸಗಟು ಸಮಾಜ ವಾದಿ ಪಕ್ಷದತ್ತ ಹೊರಳಿದ್ದು ದಲಿತ ಮತದಾರರನ್ನು ವಿಚಲಿತರನ್ನಾಗಿಸಿತು. ಸಮಾಜವಾದಿ ಪಕ್ಷದ ಆಳ್ವಿಕೆ ಯೊಂದಿಗೆ ಬರಬಹುದಾದ ಜಂಗಲ್ ರಾಜ್‌ಗೆ ಹೆದರಿದ ದಲಿತರು, ಒಬಿಸಿಯವರು ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರಕ್ಕೆ ಬಂದರು’ ಎಂದು ಫಲಿತಾಂಶವನ್ನು ಮಾಯಾವತಿ ವಿಶ್ಲೇಷಿಸಿದ್ದಾರೆ.

2012ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಧಿಕಾರ ಕಳೆದುಕೊಂಡರೂ ದಲಿತ ಮತಗಳ ಮೇಲಿನ ಹಿಡಿತ ಬಿಗಿಯಾಗಿಯೇ ಇತ್ತು. ಸಡಿಲಗೊಳ್ಳಲು ಆರಂಭ ವಾದದ್ದು 2014ರ ಲೋಕಸಭಾ ಚುನಾವಣೆಯಲ್ಲಿ. ಜಾಟವೇತರ ದಲಿತ ಜಾತಿಗಳ ಮೇಲೆ ಹಿಡಿತ ಸಾಧಿಸಿದ ಬಿಜೆಪಿ, 80 ಲೋಕಸಭಾ ಕ್ಷೇತ್ರಗಳಲ್ಲಿ 73ರಲ್ಲಿ ಜಯ ಸಾಧಿಸಿತು. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿಡಿತ ಮತ್ತಷ್ಟು ಬಿಗಿಯಾಯಿತು. 86 ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ 76 ಸ್ಥಾನ ಗಳಿಸಿದರೆ, ಬಿಎಸ್‌ಪಿ ಬಲ 2ಕ್ಕೆ ಇಳಿಯಿತು. 2019ರ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ತೀವ್ರವಾಗಿ ವಿರೋಧಿಸುವ ಎಸ್‌ಪಿ- ಬಿಎಸ್‌ಪಿ ಒಂದಾಗಿ ಆರ್‌ಎಲ್‌ಡಿಯನ್ನು ಸೇರಿಸಿಕೊಂಡು ಬಿಜೆಪಿಯನ್ನು ಎದುರಿಸಲು ನಿರ್ಧರಿಸಿದವು. ಬಿಜೆಪಿಯ ವೇಗ ಕೊಂಚ ತಗ್ಗಿತು. ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯ ಪ್ರಾಬಲ್ಯ 61ಕ್ಕೆ ಇಳಿದರೆ, ಬಿಎಸ್‌ಪಿ 26, ಎಸ್‌ಪಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸ್ಥಾಪಿಸಿದವು. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ, ಬಿಎಸ್‌ಪಿ ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದವು. ಬಿಜೆಪಿ ಮತ್ತೆ 65 ಮೀಸಲು ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರೆ, ಎಸ್‌ಪಿ ಮಿತ್ರಪಕ್ಷಗಳು 20, ಒಂದು ಸ್ಥಾನ ಪಕ್ಷೇತರರ ಪಾಲಾಗಿವೆ.

2014ರಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಉತ್ತರಪ್ರದೇಶದ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯ ಹಿಡಿತ ಬಿಗಿಯಾಗಿಯೇ ಉಳಿದಿರುವುದು ಹೇಗೆ? 2007ರಲ್ಲಿ ಬಿಎಸ್‌ಪಿ ಗೆದ್ದಿದ್ದ ಅತ್ಯಧಿಕ 62 ಮೀಸಲು ಕ್ಷೇತ್ರಗಳ ದಾಖಲೆಯನ್ನು ಸತತ ನಾಲ್ಕು ಸಲವೂ ಬಿಜೆಪಿ ಸರಿಗಟ್ಟಿದೆ, ಹಿಂದಿಕ್ಕಿದೆ. ಈ ಸರಣಿ ಗೆಲುವು ಬಿಜೆಪಿಯಲ್ಲಿ ಹಲವು ಜಾತಿಗಳಿಂದ ಬಂದ ನೂರಾರು ಚುನಾಯಿತ ದಲಿತ ನಾಯಕರನ್ನು ರೂಪಿಸಿದೆ. ನೆಲಮಟ್ಟದ ಈ ನೇತೃತ್ವ ಗಟ್ಟಿಯಾಗುತ್ತಿರುವುದನ್ನು ಈ ಗೆಲುವು ಹೇಳುತ್ತದೆ. ಉದಾಹರಣೆಗೆ, ಆಗ್ರಾ ಗ್ರಾಮೀಣ ಮೀಸಲು ಕ್ಷೇತ್ರದಿಂದ ಗೆದ್ದುಬಂದಿರುವ ಬೇಬಿ ರಾಣಿ ಮೌರ್ಯ ಜಾಟವ ಸಮುದಾಯದಿಂದ ಬಂದ ನಾಯಕಿ. ಆಗ್ರಾ ಮಹಾನಗರ ಪಾಲಿಕೆಯ ಮೇಯರ್, ಆನಂತರ ಉತ್ತರಾಖಂಡದ ರಾಜ್ಯಪಾಲೆ ಆಗಿದ್ದವರು. ಈಗವರು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ. ಚುನಾವಣೆಯಲ್ಲಿ ನೂರಾರು ಸಭೆಗಳನ್ನು ನಡೆಸಿ ‘ಹೊಸ ಮಾಯಾವತಿ’ ಎಂದು ಕರೆಸಿಕೊಂಡವರು. ಈ ಸಲ ಆಗ್ರಾ ಜಿಲ್ಲೆಯ ಅಷ್ಟೂ ಕ್ಷೇತ್ರಗಳು ಬಿಜೆಪಿಯ ಪಾಲಾಗಿವೆ. ಜಾಟವ ಸಮುದಾಯದ ಗಣನೀಯ ಪ್ರಮಾಣದ ಮತಗಳು ಬಿಜೆಪಿಗೆ ಒಲಿದಿರುವುದು ಈ ಕಾರಣದಿಂದ.

ತಳ ಸಮುದಾಯಗಳ ಒಂದಿಷ್ಟಾದರೂ ನಿರೀಕ್ಷೆ ಗಳನ್ನು ಆಡಳಿತ ಪಕ್ಷ ಈಡೇರಿಸದೇ ಹೋದರೆ ಸತತ ನಾಲ್ಕು ಸಲ ಗೆಲ್ಲಲು ಸಾಧ್ಯವೇ? ಅಂಚಿನ ಮನೆಗಳವರೆಗೆ ಉಜ್ವಲಾ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ದಕ್ಕಿರುವುದು, ವ್ಯವಸ್ಥಿತ ರೇಷನ್ ಹಂಚಿಕೆ ಸಹಜ ಪರಿಣಾಮ ಬೀರಿವೆ. ಮಾಯಾವತಿಯವರೇ ಗುರುತಿಸಿರುವಂತೆ, ಹಿಂದಿದ್ದ ಜಂಗಲ್ ರಾಜ್‌ಗೆ ಈ ಸರ್ಕಾರ ಗತಿ ಕಾಣಿಸಿರುವುದು ತಳವರ್ಗಗಳಿಗೆ ಸುರಕ್ಷತೆಯ ಭಾವ ಮೂಡಿಸಿದೆ. ಉತ್ತರಪ್ರದೇಶದ ಸರ್ಕಾರ ಬಡ್ತಿ ಮೀಸಲಾತಿ ವಿಷಯದಲ್ಲಿ ಸ್ವ ಆಸಕ್ತಿ ಯಿಂದ ಕಾರ್ಯನಿರ್ವಹಿಸಿದ್ದನ್ನು ದಲಿತರು ಸಣ್ಣ ಉಪ ಕ್ರಮ ಎಂದು ಭಾವಿಸುವುದಿಲ್ಲ.

ಮಾಯಾವತಿ ಅವರು ದಲಿತರೊಂದಿಗೆ ಬ್ರಾಹ್ಮಣರ ಮನ ಗೆದ್ದು ಅಧಿಕಾರ ಹಿಡಿದಂತೆಯೇ ಬಿಜೆಪಿಯು ದಲಿತರೂ ಸೇರಿದಂತೆ ತಳವರ್ಗಗಳ ಮನ ಗೆದ್ದು ಅಧಿಕಾರದ ಗದ್ದುಗೆ ಏರಿದೆ. ವ್ಯತ್ಯಾಸ ಇಷ್ಟೆ. ಮಾಯಾವತಿ ಅವರಿಗದು ಒಮ್ಮೆಯಷ್ಟೇ ಸಾಧ್ಯವಾಯಿತು. ಬಿಜೆಪಿ ಸತತ ನಾಲ್ಕು ಸಲ ಗೆದ್ದು ತೋರಿಸಿದೆಯಾದರೆ, ದಲಿತ ರಾಜಕಾರಣದೊಳಗಿನ ಪಲ್ಲಟ ಆಳದಲ್ಲಿ ಆಗುತ್ತಿದೆ ಎಂಬುದನ್ನು ಅರ್ಥ ಮಾಡಿ ಕೊಳ್ಳಬೇಕು.

ಲೇಖಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು