ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮುಂಚೂಣಿಯಲ್ಲಿ ‘ಮುಧೋಳ ಯೋಧರು’

Last Updated 15 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಮುಧೋಳ ಎಂದೊಡನೆ ಥಟ್ಟನೆ ನೆನಪಾಗುವುದು ಆದಿಕವಿ ರನ್ನ. ಬಾಗಲಕೋಟೆ ಜಿಲ್ಲೆಯ ಮುಧೋಳ ಈ ಕವಿರತ್ನನ ತವರು. ಇತ್ತೀಚಿನ ವರ್ಷಗಳಲ್ಲಿ ಈ ತಾಣ ಮತ್ತೊಂದು ಕಾರಣಕ್ಕೂ ಪ್ರಸಿದ್ಧವಾಗಿದೆ. ಕರುನಾಡಿನ ಹೆಮ್ಮೆಯ ಶ್ವಾನ ತಳಿ ‘ಮುಧೋಳ ಹೌಂಡ್’ ಇದೇ ನೆಲದ್ದು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಳೆದ ವಾರ ನಾಲ್ಕು ಮುಧೋಳ ಶ್ವಾನಮರಿಗಳನ್ನು ಭಾರತೀಯ ವಾಯುಪಡೆಯ ಅಧಿಕಾರಿಗಳಿಗೆಹಸ್ತಾಂತರಿಸುವುದರೊಂದಿಗೆ ಮತ್ತೊಂದು ಹಿರಿಮೆಯ ಗರಿ ಮುಡಿಗೇರಿದೆ. ಈ ಹಿಂದೆ ಭಾರತೀಯ ಭೂದಳವೂ ತನ್ನ ಸೈನ್ಯಕ್ಕೆ ಮುಧೋಳದ ಈ ವಿಶೇಷ ಯೋಧರನ್ನು ಸೇರ್ಪಡೆ ಮಾಡಿಕೊಂಡಿದ್ದೂ ದೊಡ್ಡ ಸುದ್ದಿಯಾಗಿತ್ತು. ತನ್ನ ವಿಶಿಷ್ಟ ಗುಣಲಕ್ಷಣಗಳು, ಅಪರಿಮಿತ ಕಾರ್ಯಕ್ಷಮತೆಯಿಂದ ಹಲವು ರಾಜ್ಯಗಳ ಪೊಲೀಸ್ ಇಲಾಖೆಗಳು, ಇಂಡೊ- ಟಿಬೆಟನ್ ಗಡಿ ಭದ್ರತಾ ಪಡೆಯಲ್ಲಿ ಸ್ಥಾನ ಪಡೆದಿರುವ ಈ ಶ್ವಾನಗಳು ಈಗ ಎಲ್ಲೆಡೆ ಹೆಜ್ಜೆ ಗುರುತು ಮೂಡಿಸುತ್ತಿವೆ.

ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಅರಣ್ಯದಲ್ಲಿ ಪ್ರಾಣಿಬೇಟೆ, ಕಳ್ಳಸಾಗಾಣಿಕೆ ತಡೆಯುವ ದಿಸೆಯಲ್ಲೂ ಈ ತಳಿಯ ಬಳಕೆ ಶುರುವಾಗಿದೆ. ದೂರಸಂಪರ್ಕ ಇಲಾಖೆಯು ಭಾರತೀಯ ಶ್ವಾನ ಪರಂಪರೆಯನ್ನು ಸಂಭ್ರಮಿಸಲು ಹದಿನೈದು ವರ್ಷಗಳ ಹಿಂದೆಯೇ ನಾಲ್ಕು ದೇಶಿ ಶ್ವಾನ ತಳಿಗಳ ಅಂಚೆ ಚೀಟಿಗಳನ್ನು ಹೊರತಂದಿದ್ದು, ಇದರಲ್ಲಿ ಮುಧೋಳ ತಳಿಯೂ ಒಂದು.

ಭಾರತೀಯ ರಾಷ್ಟ್ರೀಯ ಶ್ವಾನ ಸಂಸ್ಥೆಯಿಂದ ಮುಧೋಳ ಹೌಂಡ್ ಎಂದು ತಳಿ ಮನ್ನಣೆ ಪಡೆದಿರುವ ಈ ಶ್ವಾನಗಳದ್ದು ನೂರಾರು ವರ್ಷಗಳ ಇತಿಹಾಸ. ಛತ್ರಪತಿ ಶಿವಾಜಿ ಮಹಾರಾಜ ಯುದ್ಧರಂಗದಲ್ಲಿ ಇವುಗಳನ್ನು ಬಳಸಿದ್ದಕ್ಕೆ ಉಲ್ಲೇಖವಿದೆ. ಮುಧೋಳ ಸಂಸ್ಥಾನದ ಘೋರ್ಪಡೆ ಮಹಾರಾಜರ ವಿಶೇಷ ಆಸಕ್ತಿಯ ಫಲವಾಗಿ ಇವು, ಮುಂಬೈ ಪ್ರಾಂತ್ಯದಾದ್ಯಂತ ಹರಡಿದವು. ಕ್ಯಾರವಾನ್ ಹೌಂಡ್, ಪಾಶ್ಮಿ ಹೌಂಡ್, ಮರಾಠ ಹೌಂಡ್, ಕಾಥೇವರ್ ನಾಯಿ ಎಂಬುವೆಲ್ಲಾ ಈ ಶ್ವಾನದ ಬೇರೆ ಬೇರೆ ಹೆಸರುಗಳು.

ಮುಧೋಳ ಹೌಂಡ್ ಮೂಲತಃ ಬೇಟೆ ನಾಯಿ. ಜೋತಾಡುವ ಕಿವಿಗಳ ಶಿಕಾರಿ ನಾಯಿಗಳನ್ನು ‘ಹೌಂಡ್’ ಎಂದು ಕರೆಯುವುದು ವಾಡಿಕೆ. ಸಪೂರ ಶರೀರದ, ಉದ್ದುದ್ದ ಕಾಲುಗಳ ಇವುಗಳ ಎತ್ತರ ಎರಡರಿಂದ ಎರಡೂವರೆ ಅಡಿ. ವಯಸ್ಕ ಶ್ವಾನಗಳ ದೇಹತೂಕ 22ರಿಂದ 28 ಕೆ.ಜಿ. ಬಾಲವೋ ಚಾಟಿಯಂತೆ. ಈ ವಿಶಿಷ್ಟ ದೈಹಿಕ ರಚನೆಯ ಕಾರಣ ಗಂಟೆಗೆ ಐವತ್ತು ಕಿ.ಮೀ. ವೇಗದಲ್ಲಿ ಓಡಬಲ್ಲವು. ಉದ್ದನೆಯ ಮೂತಿಯಲ್ಲಿ ತಿವಿಯುವಂತಹ ಚುರುಕು ಕಂಗಳು. ಕಣ್ಣುಗಳ ಆಕಾರ ಮತ್ತು ಸ್ಥಾನದ ಕಾರಣ 270 ಡಿಗ್ರಿವರೆಗಿನ ದೃಷ್ಟಿಕೋನ ಹೊಂದಿರುವುದು ಈ ಶ್ವಾನಗಳ ವಿಶೇಷ. ಇದು ನಮ್ಮ ದೃಷ್ಟಿವ್ಯಾಪ್ತಿಗಿಂತಲೂ ಎರಡು ಪಟ್ಟು ಅಧಿಕ!

ಮಾಲೀಕನಿಗೆ ತುಂಬಾ ವಿಧೇಯವಾಗಿರುವ ಇವು ಅಪರಿಚಿತರನ್ನು ಗದರಿಸುತ್ತವೆ. ಜೀವಿತಾವಧಿ ಸರಾಸರಿ 13-14 ವರ್ಷಗಳು. ವರ್ಣ ವೈವಿಧ್ಯವೂ ಅಪಾರ. ಬಿಳಿ, ಕಪ್ಪು, ಕಂದು, ಕೆಂಪು, ಹಳದಿಯ ಜೊತೆಗೆ ಮಿಶ್ರ ಬಣ್ಣದ ನಾಯಿಗಳೂ ಇವೆ.

ಬೇಟೆಯ ಜೊತೆಯಲ್ಲಿ ಮುಧೋಳ ಹೌಂಡ್ ಕಾವಲು, ರಕ್ಷಣೆಯ ಕೆಲಸಕ್ಕೂ ಸೈ. ಕಾಡುಮೃಗಗಳಿಂದ ಬೆಳೆ ರಕ್ಷಿಸಿಕೊಳ್ಳಲು, ಮನೆಗಾವಲಿಗಾಗಿ ರೈತರ ಒಲವು ಹೆಚ್ಚು. ಹಾಗಾಗಿಯೇ ಇವು ತುಂಬಾ ಜನಪ್ರಿಯ. ಕಳೆದ ಆಗಸ್ಟ್‌ನ ತಮ್ಮ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ,ದೇ‌ಶಿ ಶ್ವಾನಗಳು ಅದರಲ್ಲೂ ಮುಧೋಳ ಶ್ವಾನಗಳ ಗುಣಗಾನ ಮಾಡಿದ ಮೇಲಂತೂ ಈ ತಳಿಯ ಜನಪ್ರಿಯತೆಯ ಗ್ರಾಫ್ ಮತ್ತಷ್ಟು ಮೇಲೇರಿದೆ! ವಿದೇಶಿ ನಾಯಿಗಳ ಬದಲಿಗೆ ದೇಶಿ ನಾಯಿಗಳನ್ನು ಸಾಕಿ ಸಲಹಬೇಕೆಂಬ ಅವರ ಕರೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ಮುಧೋಳ ಶ್ವಾನಗಳಿಗೆ ಬೇಡಿಕೆ ಏರುತ್ತಲೇ ಇದೆ. ಹಿಮಾಲಯನ್ ಶೀಪ್‍ಡಾಗ್, ರಾಜಪಾಳಯಂ, ರಾಂಪುರ್ ಗ್ರೇಹೌಂಡ್, ಕಣ್ಣಿಯಂತಹ ಹಲವು ದೇಶಿ ತಳಿಗಳು ತಮ್ಮ ವಿಶಿಷ್ಟ ಗುಣಲಕ್ಷಣಗಳಿಂದ ಗಮನ ಸೆಳೆದರೂ ಮುಧೋಳದ ಆಕರ್ಷಣೆ ಒಂದು ತೂಕ ಹೆಚ್ಚೆ!

ಈ ತಳಿಯ ಸಂರಕ್ಷಣೆ, ಅಭಿವೃದ್ಧಿ, ಸಂಶೋಧನೆ, ಸಾಕಾಣಿಕೆ ಮತ್ತು ತರಬೇತಿಗಾಗಿ ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಅಧೀನದಲ್ಲಿ ಮುಧೋಳ ಸಮೀಪದ ತಿಮ್ಮಾಪುರದಲ್ಲಿ 2009ರಲ್ಲಿ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಸ್ಥಾಪನೆಯಾಗಿದೆ. ಇಲ್ಲಿ ಮಾರಾಟವಾಗುವ ಒಂದು ಜೊತೆ ಮುಧೋಳ ಮರಿಗಳ ಬೆಲೆ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿ.

ಸೈನ್ಯದಲ್ಲಿ ಸ್ಫೋಟಕಗಳು, ರಹಸ್ಯ ಸುರಂಗಗಳ ಪತ್ತೆ, ಕಾವಲು, ವೈರಿಗಳ ಜಾಡು ಹಿಡಿಯಲು, ಪ್ರಾಕೃತಿಕ ವಿಕೋಪಗಳಲ್ಲಿ ಸಂತ್ರಸ್ತರ ಸುಳಿವಿಗಾಗಿ, ಮೃತದೇಹಗಳನ್ನು ಹುಡುಕಲು ಅಂತೆಲ್ಲಾ ವಿವಿಧಕಾರ್ಯಾಚರಣೆಗಳಿಗೆ ಶ್ವಾನಗಳನ್ನು ಬಳಸುತ್ತಾರೆ. ಎಂಥದ್ದೇ ವಿಷಮ ಪರಿಸ್ಥಿತಿಗೂ ಹೊಂದಿಕೊಳ್ಳುವ, ಅದ್ಭುತ ರೋಗನಿರೋಧಕ ಶಕ್ತಿಯಿರುವ, ವೇಗವಾಗಿ ಓಡುವ, ಉತ್ತಮ ವಾಸನಾಗ್ರಹಣ ಸಾಮರ್ಥ್ಯ ಹೊಂದಿರುವ, ಬುದ್ಧಿವಂತಿಕೆ ಮತ್ತು ಧೈರ್ಯದಲ್ಲಿ ಮುಂಚೂಣಿಯಲ್ಲಿರುವ ಮುಧೋಳದ ಈ ಯೋಧರು ಭವಿಷ್ಯದಲ್ಲಿ ನಮ್ಮ ಮಿಲಿಟರಿ, ಪೊಲೀಸ್ ಪಡೆಯ ಸಾಮರ್ಥ್ಯ ವೃದ್ಧಿಸುವುದಂತೂ ದಿಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT