ಗುರುವಾರ , ಆಗಸ್ಟ್ 5, 2021
29 °C
ವರ್ಣ ವ್ಯವಸ್ಥೆಯ ಜಾತಿನೀತಿ ಕುರಿತು ಆಗಬೇಕಿದೆ ಆತ್ಮವಿಮರ್ಶೆ

ಸಂಗತ | ಬ್ರಾಹ್ಮಣ್ಯ: ವಾಸ್ತವದ ಅರಿವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈ ದೇಶದಲ್ಲಿ ಜಾತಿಯು ವಾಸ್ತವ ಅಷ್ಟೇ ಅಲ್ಲ, ಅದು ಒಂದು ಶಾಪ. ಇಂದು ಅದು ಮೇಲುಕೀಳು, ಶ್ರೇಷ್ಠ, ಕನಿಷ್ಠತೆಯ ಪ್ರಮಾಣುವಿನಲ್ಲಿ ಮಾತ್ರ ಉಳಿದಿಲ್ಲ. ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಡಿದ ದೊಡ್ಡ ಕುಟ್ಟೆ ರೋಗ. ಈ ಜಾತಿ ವ್ಯವಸ್ಥೆಯನ್ನು ಭದ್ರಗೊಳಿಸಲು ಮಠ, ಪೀಠಗಳು ಬೆಳೆದಿವೆ. ಇವುಗಳನ್ನು ಯಾರಿಂದಲೂ ನಿಯಂತ್ರಿಸಲಾಗುತ್ತಿಲ್ಲ. ಬದಲಾಗಿ ಅವೇ ಪ್ರಜಾಪ್ರಭುತ್ವ ಶಕ್ತಿಯನ್ನು ನಿಯಂತ್ರಿಸುತ್ತಿವೆ.

ಈ ಜಾತಿ ವ್ಯವಸ್ಥೆಯು ಚಾತುರ್ವರ್ಣ ಪದ್ಧತಿಯ ಕೊಡುಗೆ. ಇದು ಹಗಲು ಸತ್ಯ. ಇದಕ್ಕೆ ಯಾವ ವಿದ್ವಾಂಸರ ಸಂಶೋಧನೆಯ ಆಕರಗಳ ಅಗತ್ಯವೂ ಬೇಕಿಲ್ಲ. ಇಂಥ ಚಾತುರ್ವರ್ಣ ಪದ್ಧತಿಯ ವಿರುದ್ಧವಾಗಿಯೇ ಆಜೀವಕರಿಂದ ಮೊದಲ್ಗೊಂಡು ಬುದ್ಧ, ಚಾರ್ವಾಕರೆಲ್ಲರೂ ಹೋರಾಡಿದರು. ಆದರೆ ಅವರ ಹೋರಾಟಗಳ ವೈಫಲ್ಯಕ್ಕೆ ಕಾರಣ ಚಾತುರ್ವರ್ಣ ವ್ಯವಸ್ಥೆಯನ್ನು ನಿಯಂತ್ರಿಸುವ ಪುರೋಹಿತ ವರ್ಣ ಎಂಬುದು ಚಾರಿತ್ರಿಕ ಸತ್ಯವಷ್ಟೇ ಅಲ್ಲ, ಇಂದಿಗೂ ಅದು ಕ್ರೂರ ವಾಸ್ತವ.

ಅಂದು ಜಾತಿಗಾಗಿ ಒಡೆದಿದ್ದ ಸಮಾಜವನ್ನು ಇಂದು ರಾಜಕೀಯ ಕಾರಣಕ್ಕಾಗಿ ‘ಹಿಂದೂ ಒಂದು’ ಎಂಬ ಹುಸಿ ಘೋಷದೊಂದಿಗೆ ಕರೆಯಲಾಗುತ್ತಿದೆ. ಹಿಂದೂ ಎಂಬುದು ಮಧ್ಯಯುಗೀನ ಕಾಲದಲ್ಲಿ ಮುಸ್ಲಿಮೇತರರನ್ನು ಸಂಬೋಧಿಸಲು ಪ್ರಯೋಗಿಸಿದ ಪದವಾಗಿದ್ದು, ಬೈಗುಳದ ರೀತಿಯ ಆ ಪದವೇ ಇಂದು ಧರ್ಮ ನಿರ್ದೇಶನದ ಪದವಾಗಿ ಬಳಕೆಗೆ ಬಂದಿದೆ. ಆದರೆ ಆ ಧರ್ಮದಲ್ಲಿ ಸರ್ವರೂ ಸಮಾನರಲ್ಲ. ಅದು ಅಸಮಾನತೆಯ ಆಗರ. ಭ್ರಾತೃತ್ವ, ಸಹಿಷ್ಣುತೆ, ಸಮನ್ವಯತೆ ಎಂಬುದೆಲ್ಲ ಅಲ್ಲಿ ಇಲ್ಲದ ಭ್ರಮಾತ್ಮಕ ಪದಪ್ರಯೋಗಗಳು.

ಹಿಂದೂ ಸಮಾಜದಲ್ಲಿ ಎಂದೂ ಸಮಾನತೆ ಎಂಬುದು ಇರಲಿಲ್ಲ. ಈಗಲೂ ಇಲ್ಲ. ಮೇಲುವರ್ಣದ ಸಾಂಸ್ಕೃತಿಕ ದಬ್ಬಾಳಿಕೆ ಇಂದು ಕೇವಲ ಸಾಂಸ್ಕೃತಿಕ ವಲಯದಲ್ಲಿ ಉಳಿಯದೆ ರಾಜಕೀಯದಲ್ಲೂ ಮೇಲುಗೈ ಸಾಧಿಸುತ್ತಿರುವುದು ಕಟುಸತ್ಯ.

ಬ್ರಾಹ್ಮಣ್ಯ ಎಂಬುದು ಗಳಿಸುವುದು ಎಂಬುದನ್ನು ಪದೇ ಪದೇ ಕೆಲವು ಋಷಿಗಳ, ಕವಿಗಳ, ರಾಜರುಗಳ ಹೆಸರು ಹೇಳಿ ಕ್ರೂರ ವಾಸ್ತವವನ್ನು ಮರೆಮಾಚುವ ಹುನ್ನಾರ ನಡೆಯುತ್ತಿದೆ. ಅವರೆಲ್ಲರೂ ವಿದ್ವಾಂಸರು, ಕವಿಗಳು, ವೇದವಿದ್ಯಾ ಪಾರಂಗತರು. ಆದರೆ ಹುಟ್ಟಿನಿಂದ ಬ್ರಾಹ್ಮಣ ಜಾತಿಯವರಲ್ಲ. ಅವರನ್ನು ತಮ್ಮ ವರ್ಣದ ವರ್ಚಸ್ಸಿಗಾಗಿ ಕೇವಲ ಉದಾಹರಣೆಗಾಗಿ ಬಳಸಿಕೊಳ್ಳಲಾಗುತ್ತಿದೆಯೇ ವಿನಾ ಹುಟ್ಟಿನಿಂದ ಬ್ರಾಹ್ಮಣರಾಗಿರುವವರು ವಿದ್ಯಾವಂತರಾಗಿರದಿದ್ದರೆ ಯಾರೂ ಅವರನ್ನು ಅಸ್ಪೃಶ್ಯ, ಕುರುಬ, ಗೊಲ್ಲ, ಕುಂಚಿಟಿಗ ಇತ್ಯಾದಿ ಶೂದ್ರ ಜಾತಿಗಳ ಮೂಲದಲ್ಲಿ ಗುರುತಿಸಿ ಕರೆಯುವುದಿಲ್ಲ. ಇದು ಸಾಂಸ್ಕೃತಿಕ ಅಧಿಕಾರ ರಾಜಕಾರಣದ ಒಳಸೂಕ್ಷ್ಮ.

ಕನಕದಾಸರಿಗೆ ದೇವಾಲಯ ಪ್ರವೇಶ ನಿರಾಕರಿ ಸಿದ್ದು ಏನು ಹೇಳುತ್ತದೆ? ಸಾವಿರಾರು ವರ್ಷಗಳಿಂದ ಸಂಸ್ಕೃತ ಭಾಷೆಯಿಂದ ಈ ವರ್ಣಗಳನ್ನು ದೂರ ಇಟ್ಟಿದ್ದು ಏನು ಹೇಳುತ್ತದೆ? ಗ.ನಾ.ಭಟ್ಟರು ಈ ದೇಶದ ಕ್ರೂರ ವಾಸ್ತವವನ್ನು ಕೇವಲ ಕೆಲವು ಉದಾಹರಣೆಗಳ ಮುಖೇನ ತಿಪ್ಪೆ ಸಾರಿಸಲು ಹೊರಟಿದ್ದಾರೆ (ಚರ್ಚೆ, ಜೂನ್‌ 22). ವರ್ಣ ವ್ಯವಸ್ಥೆಯ ಜಾತಿನೀತಿ ಯಾವ ಯಾವ ರೂಪದಲ್ಲಿ ವ್ಯವಹರಿಸುತ್ತಿದೆ ಎಂಬುದರ ಆತ್ಮವಿಮರ್ಶೆ ಮಾಡಿಕೊಂಡು ಮಾತಿಗೆ ತೊಡಗುವುದು ಉತ್ತಮ.

–ಎಸ್‌.ಜಿ. ಸಿದ್ದರಾಮಯ್ಯ, ಬೆಂಗಳೂರು

ಗ್ರಹಿಸದ ಆಶಯ

ಬ್ರಾಹ್ಮಣ್ಯ ಕುರಿತ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಅಭಿಪ್ರಾಯಗಳಿಗೆ ಗ.ನಾ.ಭಟ್ಟ ಅವರ ಪ್ರತಿಕ್ರಿಯೆ ಗಮನಿಸಿದೆ. ಅವರು ‘ಬ್ರಾಹ್ಮಣ ಅನ್ನುವುದು ಜಾತಿವಾಚಕ ಅಲ್ಲ, ಅದೊಂದು ವರ್ಣವಾಚಕ’ ಎಂದು ಹೇಳಿ ‘ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಕೂಡಾ ಒಂದನ್ನೊಂದು ಬಿಟ್ಟಿರಲಾರವು’ ಎಂಬ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಅಲ್ಲದೆ ‘ಮೂಡ್ನಾಕೂಡು ಅವರಿಗೆ ಈ ಒಂದು ಪ್ರಾಥಮಿಕ ತಿಳಿವಳಿಕೆಯೂ ಇಲ್ಲದಿದ್ದುದು ಒಂದು ಚೋದ್ಯವೆನಿಸುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.

ಗ.ನಾ.ಭಟ್ಟ ಅವರು ಮೂಡ್ನಾಕೂಡು ಅವರ ಅಭಿಪ್ರಾಯಗಳನ್ನು, ಅದರ ಹಿಂದಿನ ಆಶಯಗಳನ್ನು ಸರಿಯಾಗಿ ಗ್ರಹಿಸದೇ ಬ್ರಾಹ್ಮಣ, ಬ್ರಾಹ್ಮಣ್ಯ ಎರಡನ್ನೂ ಸಮರ್ಥಿಸಿಕೊಂಡಿರುವುದು ವಿಪರ್ಯಾಸ. ಮೂಡ್ನಾಕೂಡು ಅವರು ಸ್ಪಷ್ಟವಾಗಿ ‘ಬ್ರಾಹ್ಮಣ್ಯವು ವೈರಾಣುವಿನ ರೀತಿ ಎಲ್ಲ ಕ್ಷೇತ್ರಗಳನ್ನೂ ಆವರಿಸಿದೆ. ಇದೊಂದು ವ್ಯಸನ. ಜಾತಿ ಆಧಾರಿತ ತಾರತಮ್ಯಗಳನ್ನು ಜೀವಂತವಾಗಿಡುವುದೇ ಬ್ರಾಹ್ಮಣ್ಯ... ದಲಿತರಲ್ಲೂ ಬ್ರಾಹ್ಮಣ್ಯವಿದೆ. ಅದಕ್ಕೆ ಅವರ ಅಜ್ಞಾನವೇ ಕಾರಣ’ ಎಂದಿದ್ದಾರೆ. ಜಾತಿವ್ಯವಸ್ಥೆಯ ದುಷ್ಪರಿಣಾಮಗಳನ್ನು ಬರೀ ಬ್ರಾಹ್ಮಣರ ತಲೆಗೆ ಕಟ್ಟದೆ, ಆ ಮನೋಧರ್ಮವು ದಲಿತರನ್ನು ಒಳಗೊಂಡಂತೆ ಎಲ್ಲಾ ಬ್ರಾಹ್ಮಣೇತರ ಜಾತಿಗಳಲ್ಲಿಯೂ ಬೆಳೆಯುತ್ತಿರುವುದರ ಅಪಾಯದ ಕುರಿತು ಗಮನ ಸೆಳೆದಿದ್ದಾರೆ.

ಸಮಾಜದಲ್ಲಿ ವರ್ಣ ವ್ಯವಸ್ಥೆಗೆ ಬದಲಾಗಿ ಜಾತಿ ವ್ಯವಸ್ಥೆ ಚಾಲ್ತಿಗೆ ಬಂದು ಹಲವು ಶತಮಾನಗಳಾಗಿವೆ. ‘ಯಾವುದೇ ವರ್ಣದವರು ಬ್ರಾಹ್ಮಣರಾಗಬಹುದಿತ್ತು’ ಎಂಬುದು ಹಳೆಯದಾದ ಕ್ಲೀಷೆಯ ಮಾತು. ನಮಗೆ ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಜಾತಿ ವ್ಯವಸ್ಥೆಯ ಕಂದಾಚಾರಗಳು ಈಗಲೂ ಜೀವಂತವಾಗಿವೆ. ಹನ್ನೆರಡನೇ ಶತಮಾನದ ಶಿವಶರಣರೆಲ್ಲ ವಿರೋಧ ವ್ಯಕ್ತಮಾಡಿದ್ದು ಬ್ರಾಹ್ಮಣ್ಯದ ಬಗ್ಗೆಯೇ. ಸ್ವತಃ ಬಸವಣ್ಣ ತಾನು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ್ದರೂ ‘ನಾನು ಹಾರುವನೆಂದೊಡೆ ಕೂಡಲ ಸಂಗಮ ನಗುವನಯ್ಯಾ’ ಎಂದದ್ದು ಈ ಹಿನ್ನೆಲೆಯಲ್ಲಿಯೇ. ಜಾತಿ ಆಧಾರಿತ ತರತಮಗಳನ್ನು ಒಪ್ಪದ ಪ್ರಜ್ಞಾವಂತ ಜನ ಎಲ್ಲಾ ಜಾತಿಗಳಲ್ಲಿ ಇದ್ದಾರೆಂಬುದು ಕೊಂಚ ನೆಮ್ಮದಿಯ ಸಂಗತಿ.

ಡಾ. ಕೆ.ಆರ್.ದುರ್ಗಾದಾಸ್, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.