ಬುಧವಾರ, ಏಪ್ರಿಲ್ 8, 2020
19 °C
ಇದು, ಸಾರ್ವಜನಿಕ ಆರೋಗ್ಯಕ್ಕೆ ಸವಾಲಿನ ಕಾಲ. ಸಾಮೂಹಿಕ ಇಚ್ಛಾಶಕ್ತಿಯಿಂದ ಮಾತ್ರ ನಾವು ಈ ವೈರಸ್ ಪ್ರವಾಹದಿಂದ ಕ್ಷೇಮವಾಗಿ ದಡ ಸೇರಬಹುದು

ಸಂಗತ | ಕೊರೊನಾ: ಸವಾಲಿನ ಕಾಲಘಟ್ಟ

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಅಂತೂ ಕೊರೊನಾ– 2 ವೈರಸ್‌ ಮತ್ತು ಕೋವಿಡ್‌– 19 ಕಾಯಿಲೆ ಭಾರತಕ್ಕೆ ಕಾಲಿಟ್ಟಿವೆ. ಅವು ಬರುವ ಮೊದಲೇ ನಮ್ಮ ದೇಶದ ಸಾಮಾಜಿಕ ಜಾಲತಾಣಗಳು, ಸುದ್ದಿಮಾಧ್ಯಮಗಳಲ್ಲಿ ಸಂಚಲನ ಎಬ್ಬಿಸಿದ್ದವು. ವಿಭಿನ್ನ ಕಾರಣಗಳಿಗೆ ಮನುಷ್ಯ ದೇಶಾಂತರಿ ಆಗಬೇಕಾದ ಈ ಕಾಲದಲ್ಲಿ, ಜಾಗೃತಿಯ ನಡುವೆಯೂ ವೈರಸ್ ತಡೆಗಟ್ಟುವುದಂತೂ ಅಸಾಧ್ಯವಾಗಿತ್ತು. ಈಗ ನಮ್ಮ ಮುಂದಿರುವ ಕೆಲಸ, ಈ ವೈರಸ್ ಸಾಂಕ್ರಾಮಿಕವಾಗದಂತೆ ಕಾರ್ಯೋನ್ಮುಖರಾಗುವುದು.

ಅಧಿಕೃತ ಮೂಲಗಳು ಹೇಳುವಂತೆ, ಚೀನಾದಲ್ಲಿ ಕೊರೊನಾ ಬಹುತೇಕ ಹತೋಟಿಗೆ ಬಂದಿದೆ. ಈ ದಿಸೆಯಲ್ಲಿ, ಚೀನಾ ಕೈಗೊಂಡ ಕ್ರಮಗಳನ್ನು ನಾವು ಪರಿಶೀಲಿಸುವ ಅಗತ್ಯವಿದೆ. ಮೇಲ್ನೋಟಕ್ಕೆ ಇವು ಮಾನವನ ಹಕ್ಕುಗಳಿಗೆ ವಿರುದ್ಧವಾಗಿವೆ ಎನಿಸಿದರೂ, ಆ ವಿಧಾನಗಳಿಂದು ಫಲ ನೀಡುತ್ತಿವೆ. ಇವುಗಳಲ್ಲಿ ವಿಶೇಷವೆನಿಸುವ ಕೆಲವು ಹೆಜ್ಜೆಗಳೆಂದರೆ, ಜನರನ್ನು ವಾರಗಟ್ಟಲೆ ಕಡ್ಡಾಯವಾಗಿ ಮನೆಯಲ್ಲಿರುವಂತೆ ನೋಡಿಕೊಂಡು ಅವರ ದೈನಂದಿನ ಅಗತ್ಯಗಳನ್ನು ಪೂರೈಸಿದ್ದು, ವಾಹನಗಳ ಓಡಾಟವನ್ನು ನಿಯಂತ್ರಿಸಿದ್ದು, ಅಂಗಡಿಗಳನ್ನು ನಿಗದಿತ ಸಮಯದಲ್ಲಿ ತೆರೆದು ಜನ ಒಂದೂವರೆ ಮೀಟರ್ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಂಡಿದ್ದು, ಮನೆಗಳಿಗೆ ಆಹಾರ ಪದಾರ್ಥ ಮತ್ತು ಆಸ್ಪತ್ರೆಗಳಿಗೆ ಔಷಧ ಪೂರೈಕೆಯ ನಿರಂತರತೆ ಕಾಯ್ದುಕೊಂಡಿದ್ದು, ಎಲ್ಲ ಶಾಲೆ– ಕಾಲೇಜುಗಳನ್ನು ಮುಚ್ಚಿಸಿ ತರಗತಿಗಳನ್ನು ಆನ್‌ಲೈನ್‌ ವ್ಯವಸ್ಥೆಗೆ ಒಳಪಡಿಸಿದ್ದು... ಇಂತಹ ಕ್ರಮಗಳಿಂದ ತನ್ನ ಆರಂಭಿಕ ಹಿನ್ನಡೆಯನ್ನು ಚೀನಾ ಮರೆಸಿದೆ.

ನಾಗರಿಕ ಸ್ವಾತಂತ್ರ್ಯವು ಸರ್ಕಾರದ ಅಧೀನದಲ್ಲಿರುವ ಚೀನಾದ ಮಾದರಿಯನ್ನು ಬೇರೆ ದೇಶಗಳು ಸಂಪೂರ್ಣವಾಗಿ ಅಳವಡಿಸಿಕೊಳ್ಳುವುದು ಅಸಾಧ್ಯ. ಚೀನಾಕ್ಕೆ ವ್ಯತಿರಿಕ್ತವಾಗಿ, ಸಿಂಗಪುರ ಮತ್ತು ದಕ್ಷಿಣ ಕೊರಿಯಾ ಸಹ ಕೊರೊನಾ ಹರಡದಂತೆ ಯಶಸ್ವಿ ಕ್ರಮಗಳನ್ನು ಕೈಗೊಂಡಿವೆ. ಇವುಗಳಲ್ಲಿ ಮುಖ್ಯವಾಗಿ, ವಿವಿಧ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸಿದ್ದು ಹಾಗೂ ಉಚಿತವಾಗಿ ಪರೀಕ್ಷಾ ಕಿಟ್ಟನ್ನು ಹಂಚಿದ್ದು ಸೇರಿವೆ.

ಈ ಬೆಳವಣಿಗೆಗಳ ಮಧ್ಯೆಯಿರುವ ಸಮಾಧಾನವೆಂದರೆ, ಎಲ್ಲ ಪ್ರಕರಣಗಳಲ್ಲೂ ಕೋವಿಡ್- 19 ಮಾರಣಾಂತಿಕ ಅಲ್ಲ ಎಂಬುದು. ಭಾರತದಲ್ಲಿ ಕೋವಿಡ್‌ನಿಂದ ಗುಣಮುಖಳಾದ ಮೊದಲ ರೋಗಿ, ಚೀನಾದಲ್ಲಿ ಓದುತ್ತಿದ್ದ ತ್ರಿಶ್ಶೂರ್ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಹೇಳುವಂತೆ, ‘ಮೊದಲ 15 ದಿನ ಆಸ್ಪತ್ರೆಯಲ್ಲಿ, ಆಮೇಲೆ 10 ದಿನ ಮನೆಯಲ್ಲಿ ಜನರ ಸಂಪರ್ಕದಿಂದ ಬೇರ್ಪಟ್ಟು ಚಿಕಿತ್ಸೆ ಪಡೆದೆ. ಜೀವನದ ಅತ್ಯಂತ ಕಠಿಣ ಸಮಯ ಅದಾಗಿತ್ತು. ಆದರೆ, ನನಗೆ ಕಾಯಿಲೆಯ ಸಂಪೂರ್ಣ ಅರಿವಿದ್ದುದರಿಂದ ಮನಃಸ್ಥೈರ್ಯ ತಂದುಕೊಂಡೆ. ಜನ ಇಚ್ಛಾಶಕ್ತಿಯನ್ನು ಪ್ರದರ್ಶಿಸುವುದು ಮುಖ್ಯ’.

ಮುಖ್ಯವಾಗಿ ವೈರಸ್ ಸೋಂಕಿನ ಲಕ್ಷಣಗಳಾದ ಜ್ವರ, ಒಣಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ತಕ್ಷಣ ತಪಾಸಣೆ ಮಾಡಿಸಿಕೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸಂಪೂರ್ಣ ಗುಣಮುಖರಾದ ಮೇಲಷ್ಟೇ ಜನರ ಸಂಪರ್ಕಕ್ಕೆ ಬಂದರೆ, ವೈರಸ್ ಹರಡುವುದನ್ನು ತಡೆಗಟ್ಟಬಹುದು. ಆದರೆ, ಸ್ವಾತಂತ್ರ್ಯ ಬಯಸುವ ಮನುಷ್ಯ, ಕಾಯಿಲೆಯನ್ನು ಮುಚ್ಚಿಟ್ಟು ಹೊರಗೆ ಓಡಾಡಿ, ತನ್ನ ಸಂಪರ್ಕಕ್ಕೆ ಬಂದವರಿಗೆಲ್ಲಾ ಸೋಂಕು ತಗುಲಿಸುತ್ತಾನೆ. ಈ ನಿಟ್ಟಿನಲ್ಲಿ, ನಾವು ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳುವುದು ಅಗತ್ಯ.

ಈ ಪರಿಸ್ಥಿತಿಯಲ್ಲಿ, ನಾವು ನಮ್ಮನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ? ವೈದ್ಯರು ಹೇಳುವಂತೆ, ನಮ್ಮ ದೇಹದಲ್ಲಿ ರೋಗ ನಿರೋಧಕಶಕ್ತಿ ಹೆಚ್ಚಿಸಲು ಚೆನ್ನಾಗಿ ನಿದ್ರೆ, ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ ಉಪಯುಕ್ತ. ಹಾಗೆಯೇ, ಆಗಾಗ್ಗೆ ಕೈತೊಳೆಯುವುದು ಅಗತ್ಯ. ನಾವು ಪದೇ ಪದೇ ಉಪಯೋಗಿಸುವ ಮೊಬೈಲ್ ಫೋನನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕು. ವೈದ್ಯರ ಪ್ರಕಾರ, ಮಾಸ್ಕ್ ಹಾಕಬೇಕಾದುದು ರೋಗಿಗಳು ಮತ್ತು ಅವರ
ಸಂಪರ್ಕದಲ್ಲಿರುವ ವೈದ್ಯರು ಮಾತ್ರ.

ಆರೋಗ್ಯ ಇಲಾಖೆ ಹೇಳುವಂತೆ, ನಾವೀಗ ಸೋಂಕಿನ ಎರಡನೇ ಹಂತದಲ್ಲಿದ್ದೇವೆ. ಹಾಗಾಗಿ, ಸಾರ್ವಜನಿಕ ವಲಯದಲ್ಲಿ ವೈರಸ್ ಹರಡದಂತೆ ಮಾಡಲು, ಮುಂದಿನ ಎರಡು ವಾರಗಳು ನಿರ್ಣಾಯಕ. ಈ ಹಂತದಲ್ಲಿಯೇ, ಇಟಲಿಯಲ್ಲಿ ಸೋಂಕಿತರ ಸಂಖ್ಯೆ ದಿಢೀರನೆ ಹಲವು ಪಟ್ಟು ಹೆಚ್ಚಿದ್ದು. ಅಲಕ್ಷ್ಯ ಮಾಡಿದರೆ, ಜನನಿಬಿಡತೆ ಹೆಚ್ಚಿರುವ ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚುವ ಅಪಾಯವಿದೆ. ಆದ್ದರಿಂದ, ನಾವು ಮನಸ್ಸನ್ನು ಹತೋಟಿಯಲ್ಲಿಟ್ಟು ಏಪ್ರಿಲ್ 15ರವರೆಗೆ ಹೊರಗೆ ಓಡಾಡುವುದನ್ನು ಕಡಿಮೆ ಮಾಡಿ, ಸಂಯಮ ತೋರುವುದು ಶ್ರೇಯಸ್ಸು. ಈಗಾಗಲೇ ಕೋವಿಡ್‌ನಿಂದ ಮೃತರಾಗಿರುವವರ ಅಂಕಿಅಂಶಗಳ ಪ್ರಕಾರ, ರೋಗನಿರೋಧಕ ಶಕ್ತಿ ಕಡಿಮೆಯಿರುವ ವಯೋವೃದ್ಧರಿಗೆ ಮತ್ತು ಇತರ ಕಾಯಿಲೆಪೀಡಿತರಿಗೆ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವುದರಿಂದ, ಅವರ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಮುಂದಿನ ಒಂದು ತಿಂಗಳು, ಭಾರತೀಯ ವೈದ್ಯ ಜಗತ್ತಿಗೆ, ಸಾರ್ವಜನಿಕ ಆರೋಗ್ಯಕ್ಕೆ ಸವಾಲಿನ ಕಾಲಘಟ್ಟ. ಸಾಮೂಹಿಕ ಇಚ್ಛಾಶಕ್ತಿಯಿಂದಷ್ಟೇ ಈ ವೈರಸ್ ಪ್ರವಾಹದಿಂದ ಕ್ಷೇಮವಾಗಿ ನಾವು ದಡ ಸೇರಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು