ಶನಿವಾರ, ಆಗಸ್ಟ್ 13, 2022
23 °C
ಡಿಜಿಟಲ್ ವೇದಿಕೆಯಿಂದ ಅಪರಿಮಿತ ಜ್ಞಾನಾರ್ಜನೆ ಸಾಧ್ಯವಾಗಿದೆ. ಆದರೆ ಜೀವಂತಿಕೆ...?

ಸಂಗತ: ಬದಲಾಗಿದೆ ಸಂವಹನದ ಚಹರೆ

ಡಾ. ಮುರಳೀಧರ ಕಿರಣಕೆರೆ Updated:

ಅಕ್ಷರ ಗಾತ್ರ : | |

Prajavani

ಈಗ್ಗೆ ಮೂರು ತಿಂಗಳ ಹಿಂದೆ ಬೆಂಗಳೂರಿನ ಕಚೇರಿಯಿಂದ ದೂರವಾಣಿ ಕರೆ. ಹೈದರಾಬಾದಿನ ಸಂಸ್ಥೆಯೊಂದರಲ್ಲಿ ಐದು ದಿನಗಳ ಕೃಷಿ ಪತ್ರಿಕೋದ್ಯಮ ತರಬೇತಿಗೆ ನನ್ನನ್ನು ನಿಯೋಜಿಸಿರುವ ವಿಷಯ ತಿಳಿಯುತ್ತಿದ್ದಂತೆ ಗಾಬರಿಯಾಗಿದ್ದೆ. ಅಪಾಯಕಾರಿ ಪಿಡುಗಿನ ಮಧ್ಯೆ ಅಷ್ಟು ದೂರದ ಕಾರ್ಯಕ್ರಮದಲ್ಲಿ ಭಾಗವಹಿಸುವುದಾದರೂ ಹೇಗೆ? ಇದು ವರ್ಚುವಲ್ ಟ್ರೈನಿಂಗ್, ಆನ್‍ಲೈನ್‌ನಲ್ಲಿ ನಡೆಯುತ್ತದೆ ಎಂಬ ವಿವರಣೆಯು ಸಮಾಧಾನ ತಂದಿತ್ತು. ಅಂತರ್ಜಾಲದ ಮೂಲಕ ನಡೆಯುವ ತರಬೇತಿಯ ಬಗ್ಗೆ ಒಂದಿನಿತೂ ಅನುಭವ ಇಲ್ಲದಿದ್ದರೂ ಕುತೂಹಲ, ಆಸಕ್ತಿಯಿಂದ ಮುಂದುವರಿದಂತೆ, ಇದೆಷ್ಟು ಸುಲಭ ಎನಿಸಿ ಹೊಸ ವ್ಯವಸ್ಥೆಯ ಬಗ್ಗೆ ಆಕರ್ಷಣೆ ಮೂಡಿತ್ತು.

ಹೌದು, ಸಂವಹನದ ಚಹರೆಯನ್ನೇ ಕೋವಿಡ್‌ ಬದಲಾಯಿಸಿದೆ. ಈಗ ವರ್ಕ್ ಫ್ರಮ್ ಹೋಮ್, ಆನ್‍ಲೈನ್ ಕ್ಲಾಸ್‍ಗಳಷ್ಟೇ ಅಲ್ಲ ಬಹುತೇಕ ಮೀಟಿಂಗ್‍ಗಳು, ಸಂದರ್ಶನ, ತರಬೇತಿಗಳು, ಮಾಹಿತಿ ಕಾರ್ಯಾಗಾರಗಳು, ತಾಂತ್ರಿಕ ಗೋಷ್ಠಿಗಳು, ಸಮ್ಮೇಳನಗಳು ವಾಸ್ತವೋಪಮ (ವರ್ಚುವಲ್) ವಿಧಾನದಲ್ಲಿ ನಡೆಯುತ್ತಿವೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯೂ ಇತ್ತೀಚೆಗೆ ಇದೇ ನಮೂನೆಯಲ್ಲಿ ಯಶಸ್ವಿಯಾಗಿ ನಡೆಯಿತು.

ನವೀನ ತಾಂತ್ರಿಕತೆಗಳನ್ನು ಪರಿಚಯಿಸಲು, ಅರಿವನ್ನು ಆಧುನೀಕರಿಸಲು, ಹೊಸ ಆವಿಷ್ಕಾರಗಳ ಮಾಹಿತಿ ಪಡೆಯಲು, ಗ್ರಹಿಕೆ ಹೆಚ್ಚಿಸಿಕೊಳ್ಳಲು, ವೈವಿಧ್ಯಮಯ ವಿಷಯಗಳ ಕಲಿಕೆಗೆ ಆನ್‍ಲೈನ್ ವೇದಿಕೆಗಳು ನೆರವಾಗುತ್ತಿವೆ. ಸಾಂಪ್ರದಾಯಿಕ ಸೆಮಿನಾರ್, ವೆಬಿನಾರ್‌ಗೆ ರೂಪಾಂತರಗೊಂಡಿದೆ. ಈ ನ್ಯೂ ನಾರ್ಮಲ್ ಕಾಲಘಟ್ಟದಲ್ಲಿ ಅಂತರ್ಜಾಲದ ಮುಖಾಂತರ ನಡೆಯುವ ಜಾಲಗೋಷ್ಠಿಗಳೇ ಮಾಹಿತಿ ಪೂರಣ ಮಾಡುವ ಹೆಗ್ಗಾಲುವೆಗಳು.

ಗೂಗಲ್ ಮೀಟ್, ಝೂಮ್, ವೆಬ್‌ಎಕ್ಸ್, ಮೈಕ್ರೊಸಾಫ್ಟ್ ಟೀಮ್, ಅಡೋಬ್ ಕನೆಕ್ಟ್, ಗೋಟುಮೀಟಿಂಗ್, ಸ್ಕೈಪ್ ಮೀಟ್, ಫೇಸ್‍ಬುಕ್ ಲೈವ್... ಎಂದೆಲ್ಲಾ ವರ್ಚುವಲ್ ಮೀಟಿಂಗ್‍ಗೆ ವೇದಿಕೆಗಳು ಹಲವು. ಈ ಆ್ಯಪ್‍ಗಳನ್ನು ಬಳಸಿ ಸಭೆ, ಗೋಷ್ಠಿ ನಡೆಸಬಹುದು. ಸಾಮಾನ್ಯ ಕಾರ್ಯಕ್ರಮಗಳಂತೆ ಚರ್ಚೆಗಳಲ್ಲಿ ಭಾಗವಹಿಸಲು, ಕೈಯೆತ್ತಿ ಗಮನ ಸೆಳೆಯಲು, ಒಪ್ಪಿಗೆ ಸೂಚಿಸಲು, ಮತ ಹಾಕಲು, ಸಂದೇಹಗಳನ್ನು ಪರಿಹರಿಸಿಕೊಳ್ಳಲು, ಫೀಡ್‍ಬ್ಯಾಕ್ ನೀಡಲು ಅವಕಾಶವಿದೆ. ಸಾಂಪ್ರದಾಯಿಕ ವಿಚಾರ ಸಂಕಿರಣಗಳಿಗೆ ಹೋಲಿಸಿದರೆ ವೆಬಿನಾರ್‌ಗಳ ಅನುಕೂಲಗಳು ಹಲವು.

ಎಲ್ಲಿರುವೆವೋ ಅಲ್ಲಿಂದಲೇ ಭಾಗವಹಿಸುವ ಅವಕಾಶ ದೊಡ್ಡ ಅನುಕೂಲಕರ ಅಂಶ. ದೇಶ, ವಿದೇಶಗಳ ವಿಷಯ ತಜ್ಞರು, ತಂತ್ರಜ್ಞಾನ ಪರಿಣತರು, ವಿಜ್ಞಾನಿಗಳ ಮಾತು ಕೇಳುವ, ಮಾಹಿತಿ ಪಡೆದುಕೊಳ್ಳುವ ಅವಕಾಶ ಬೆರಳ ತುದಿಯಲ್ಲಿ. ಒಮ್ಮೊಮ್ಮೆ ಇತರ ಕಾರ್ಯಗಳನ್ನು ನಿರ್ವಹಿಸುತ್ತಲೇ ವೆಬಿನಾರ್‌ನಲ್ಲಿ ಪಾಲ್ಗೊಳ್ಳಬಹುದು. ಮತ್ತೊಂದೆಡೆಗೆ ಪ್ರಯಾಣಿಸುವ ಹಂಗಿಲ್ಲ. ಟ್ರಾಫಿಕ್‍ನ ಕಿರಿಕಿರಿಯಿಲ್ಲ. ಪರಸ್ಪರ ಸಂಪರ್ಕ, ಅಂತರದ ಭೀತಿಯಿಲ್ಲ. ಆಯೋಜನೆಗೂ ತುಂಬಾ ಸಣ್ಣ ಬಜೆಟ್ ಸಾಕು. ಜಾಗದ ಬಾಡಿಗೆ, ಆಸನ ವ್ಯವಸ್ಥೆ, ಧ್ವನಿವರ್ಧಕ, ಊಟ-ತಿಂಡಿ, ಆಹ್ವಾನ ಪತ್ರಿಕೆ, ಪ್ರಯಾಣ ಭತ್ಯೆ, ಪ್ರಚಾರ ಎಂದೆಲ್ಲ ಖರ್ಚುಗಳೂ ಇಲ್ಲ. ಸಂಪನ್ಮೂಲ ವ್ಯಕ್ತಿ ಮನೆಯಿಂದಲೇ ಕಂಪ್ಯೂಟರ್, ಲ್ಯಾಪ್‍ಟಾಪ್, ಟ್ಯಾಬ್ ಇಲ್ಲವೇ ಸ್ಮಾರ್ಟ್‌ಫೋನ್‌ ವೇದಿಕೆಯಿಂದ ಮಾತನಾಡಬಹುದು. ಉತ್ತಮ ಅಂತರ್ಜಾಲದ ಸಂಪರ್ಕ ಮಾತ್ರ ಕಡ್ಡಾಯ.

ಸಮಯದ ಉಳಿತಾಯ ಮತ್ತೊಂದು ಸಕಾರಾತ್ಮಕ ಅಂಶ. ಉದ್ಘಾಟನೆ, ಭಾಷಣ, ಪ್ರಸ್ತಾವನೆ, ಅತಿಥಿಗಳ ನುಡಿ ಎಂದೆಲ್ಲಾ ಸುದೀರ್ಘ ಭಾಷಣಗಳಿಗೆ ಪ್ರಾಮುಖ್ಯ ಇಲ್ಲದಿರುವುದರಿಂದ ವೃಥಾ ಕಾಲಹರಣ ತಪ್ಪಿ ಸಮಯದ ಸದುಪಯೋಗವಾಗುತ್ತದೆ. ಒಂದೊಮ್ಮೆ ಆ ಸಮಯದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ ಮುದ್ರಿತ ವಿಡಿಯೊವನ್ನು ಪುನಃ ನೋಡುವ ಅವಕಾಶವನ್ನು ಬಹುತೇಕ ಆಯೋಜಕರು ಒದಗಿಸುತ್ತಾರೆ. ಹಾಗಾಗಿ, ಸೀಮಾ ನಿರ್ಬಂಧವಿಲ್ಲದೆ ವಿಶ್ವದ ಯಾವುದೇ ಮೂಲೆಯಿಂದಲೂ ಅಗತ್ಯ ಮಾಹಿತಿಯನ್ನು ನೇರವಾಗಿ ಪಡೆಯುವ ಅವಕಾಶ ವೆಬಿನಾರ್‌ಗಳ ದೊಡ್ಡ ಕೊಡುಗೆ.

ಸಂವಹನದ ದೃಷ್ಟಿಯಲ್ಲಿ ಈ ವಿಧಾನವು ಸಾಂಪ್ರದಾಯಿಕ ಕಾರ್ಯಕ್ರಮಗಳಷ್ಟು ಪರಿಣಾಮಕಾರಿಯಲ್ಲ. ಪರಸ್ಪರ ಸಂಪರ್ಕ, ಮುಖತಃ ಚರ್ಚೆ, ಸಂವಾದ, ಹರಟೆ, ಉಪಾಹಾರ, ಭೋಜನ ವೇಳೆಯ ಮಾತುಕತೆ ಇಲ್ಲಿ ಸಾಧ್ಯವಿಲ್ಲ. ಮಾನಿಟರ್, ಡಿಜಿಟಲ್ ಪರದೆ ನೋಡಿಕೊಂಡು ಮಾತನಾಡಬೇಕಿರುವುದರಿಂದ ಎದುರಿನಲ್ಲಿ ನೋಡುಗರು ಇರುವ ಭಾವನೆ ಉಂಟಾಗದು. ಪರಿಣಾಮಕಾರಿ ಸಂವಹನದ ಪ್ರಮುಖ ಅಂಶವಾದ ದೃಷ್ಟಿ ಸಂಪರ್ಕ ಸಾಧ್ಯವಾಗದಿರುವುದು ದೊಡ್ಡ ಕೊರತೆ. ಆಂಗಿಕ ಭಾಷೆಯ ಅಭಿವ್ಯಕ್ತಿಗಿರುವ ಮಿತಿಯಿಂದಾಗಿ ಉಪನ್ಯಾಸ ನೀರಸ, ಅನಾಕರ್ಷಕ, ಯಾಂತ್ರಿಕವಾಗದಂತೆ ಉಪನ್ಯಾಸಕರು ಧ್ವನಿಯ ಏರಿಳಿತ, ಸೂಕ್ತ ಪದಗಳ ಬಳಕೆಯಂತಹ ಕೌಶಲಗಳನ್ನು ಮೈಗೂಡಿಸಿಕೊಳ್ಳುವ ಜರೂರತ್ತಿದೆ. ಆದರೂ ಸಾಂಪ್ರದಾಯಿಕ ಗೋಷ್ಠಿಯಲ್ಲಿನ ಲವಲವಿಕೆ, ಜೀವಂತಿಕೆ ಇಲ್ಲಿ ಕಾಣಿಸದು. ಪ್ರಸಾರದಲ್ಲಿ ತಾಂತ್ರಿಕ ತೊಂದರೆಯಾದಾಗ, ಭಾಗವಹಿಸುತ್ತಿರುವ ಜಾಗದಲ್ಲಿ ಅಡಚಣೆಯಿದ್ದಾಗ ಏಕಾಗ್ರತೆಗೆ ಭಂಗವಾಗಬಹುದು. ತರಬೇತಿಯ ನಂತರದ ಗುಂಪುಕೆಲಸಕ್ಕೂ (ಗ್ರೂಪ್ ಪ್ರಾಜೆಕ್ಟ್ ವರ್ಕ್) ಪರಿಮಿತಿಯಿದೆ.

ಆದರೂ ಜಾಗತಿಕ ಪಿಡುಗೊಂದು ಡಿಜಿಟಲ್ ವೇದಿಕೆ ಮೂಲಕ ಅಪರಿಮಿತ ಜ್ಞಾನಾರ್ಜನೆಗೆ ಅಪೂರ್ವ ಅವಕಾಶ ಒದಗಿಸಿರುವುದು ವರದಾನವೇ ಸರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು