ಸೋಮವಾರ, ಜನವರಿ 20, 2020
19 °C
ಈ ಕಾಯ್ದೆ ಬಗ್ಗೆ ತಕರಾರು ಇದ್ದರೆ ದೇಶದ ನ್ಯಾಯಾಂಗ ಅಂತಹವರ ನೆರವಿಗಾಗಿ ಇದ್ದೇಇದೆ

ಪೌರತ್ವ ಕಾಯ್ದೆ: ವಾಸ್ತವ ಮತ್ತು ಭ್ರಮೆ

ಮಲ್ಲಿಕಾರ್ಜುನ ಗುಮ್ಮಗೋಳ Updated:

ಅಕ್ಷರ ಗಾತ್ರ : | |

ಈ ದೇಶದ ಕಾಯ್ದೆಗಳು ಸಾಮಾನ್ಯನ ಗ್ರಹಿಕೆಗೆ ಸುಲಭಕ್ಕೆ ನಿಲುಕಲಾರವು. ಈ ಅರ್ಥವಾಗದಿರುವಿಕೆಯೇ ಹಲವಾರು ಸಲ ಭಯ, ತಪ್ಪು ತಿಳಿವಳಿಕೆ ಮತ್ತು ಕಾನೂನು ಉಲ್ಲಂಘನೆಗೆ ಕಾರಣವಾಗುತ್ತದೆ. ಅಪೂರ್ಣ ಅಥವಾ ಅರ್ಧಸತ್ಯದ ಮಾಹಿತಿಯನ್ನು ಕೆಲವರು ನಿಜವೆಂದು ನಂಬುತ್ತಾರೆ. ಕಾಯ್ದೆ– ಕಾನೂನುಗಳ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ತಿಳಿವಳಿಕೆ ಉಂಟಾದ ಸಂದರ್ಭದಲ್ಲಿ ಸರ್ಕಾರವೇ ಖುದ್ದಾಗಿ ಇಂತಹ ತಪ್ಪುಗಳನ್ನು, ಸಂಶಯಗಳನ್ನು ನಿವಾರಿಸುವ ಕೆಲಸವನ್ನು ಮಾಡಬೇಕು. ಆದರೆ, ಇದು ಸರ್ಕಾರವೊಂದೇ ಮಾಡಬೇಕಾದ ಕೆಲಸವಲ್ಲ. ತಿಳಿವಳಿಕೆ ಇರುವ ಎಲ್ಲ ಪ್ರಾಜ್ಞರೂ ಮಾಡಬೇಕಾದ ಕರ್ತವ್ಯವಾಗಿದೆ.

ರಾಜಕೀಯ ನೇತಾರರಲ್ಲಿ ಹೆಚ್ಚಿನವರು ತಮ್ಮ ಹಿತಾಸಕ್ತಿ ಮುಖ್ಯ ಎಂದು ಭಾವಿಸುತ್ತಾರೆ. ಒಂದು ವಿಷಯ ತಮ್ಮ ರಾಜಕೀಯ ಹಿತಾಸಕ್ತಿಗೆ ಪೂರಕವಾಗಿಲ್ಲದಿದ್ದರೆ, ಅದರಲ್ಲಿ ಎಷ್ಟೇ ಒಳ್ಳೆಯ ಅಂಶಗಳು ಅಡಕವಾಗಿದ್ದರೂ ದೋಷಗಳನ್ನು ಹುಡುಕುವ ಕೆಲಸ ಮಾಡುತ್ತಾರೆ. ಆದರೆ ರಾಜನೀತಿ ತಜ್ಞರು, ಕಾನೂನು ಪರಿಣತರು, ಸಾಹಿತಿಗಳು, ಇತಿಹಾಸಕಾರರು ಸತ್ಯವನ್ನು ಮರೆಮಾಚಲು ಅವಕಾಶ ಕೊಡಬಾರದು. ಅದನ್ನು ಬಿಡಿಸಿ ಹೇಳಬೇಕು. ಇಂತಹವರ ಮಾತನ್ನು ಜನ ನಂಬುತ್ತಾರೆ. ಪೌರತ್ವ (ತಿದ್ದುಪಡಿ) ಕಾಯ್ದೆಗೆ (ಸಿಎಎ) ಸಂಬಂಧಿಸಿ ಪರ–ವಿರೋಧದ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾತು ಹೇಳಬೇಕಾಯಿತು. ಈ ಕಾಯ್ದೆ ಕುರಿತಾಗಿಯೂ ಹಲವು ತಪ್ಪು ಕಲ್ಪನೆಗಳು ಜನರ ಮನಸ್ಸಿನಲ್ಲಿ ಸುಳಿದಾಡುತ್ತಿವೆ.

ನನ್ನ ಸ್ನೇಹಿತ, ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತ ಹುಬ್ಬಳ್ಳಿಯಲ್ಲಿ ಈ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಕಾರಣ ಬಂಧನಕ್ಕೊಳಗಾಗಿದ್ದರು. ನಾನು, ‘ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದೀರಿ’ ಎಂದು ಅವರನ್ನು ಕೇಳಿದೆ. ‘ಈ ದೇಶದಲ್ಲಿರುವ ಮುಸ್ಲಿಮರು ಭಾರತದ ನಾಗರಿಕರು ಎಂಬುದನ್ನು ಸಾಬೀತುಪಡಿಸಲು ಜನನ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಕಾಯ್ದೆಯಲ್ಲಿ ಹೇಳಿದೆಯಂತೆ. ಹೀಗೆ ಜನನ ಪ್ರಮಾಣಪತ್ರ ಸಲ್ಲಿಸದವರನ್ನು ಮೊದಲು ಅಕ್ರಮ ನುಸುಳುಕೋರರ ಕ್ಯಾಂಪ್‌ನಲ್ಲಿ ಇಡುತ್ತಾರೆ, ನಂತರ ಅವರನ್ನು ಪಾಕಿಸ್ತಾನ, ಅಫ್ಗಾನಿಸ್ತಾನ, ಬಾಂಗ್ಲಾದೇಶ ಈ ಯಾವುದಾದರೂ ದೇಶಕ್ಕೆ ಗಡಿಪಾರು ಮಾಡುವ ಉದ್ದೇಶ ಇದೆಯಂತೆ’ ಎಂದರು.

ನಾನು, ‘ಈ ಕಾಯ್ದೆ ಕುರಿತ ಮಾಹಿತಿ ಸರ್ಕಾರದ ವೆಬ್‍ಸೈಟ್‍ನಲ್ಲಿ ಲಭ್ಯವಿದೆ, ಓದಿದ್ದೀರಾ’ ಎಂದು ಕೇಳಿದೆ. ‘ಇಲ್ಲ ನಮ್ಮ ನಾಯಕರು ಅದರ ಬಗ್ಗೆ ಮಾಹಿತಿ ಕೊಟ್ಟರು ಮತ್ತು ನಿಮ್ಮ ಕ್ಷೇತ್ರದಲ್ಲಿ ಪ್ರತಿಭಟನೆ ಮಾಡಿ ಎಂದು ತಿಳಿಸಿದ್ದಾರೆ. ಅದರಂತೆ ಮಾಡುತ್ತಿದ್ದೇವೆ...’ ಎಂದು ಹೇಳಿದರು. ಇದು ನಮ್ಮ ಜನರ ತಿಳಿವಳಿಕೆಯ ಮಟ್ಟ. ಹಾಗಂತ, ಪ್ರತಿಭಟನೆಗಳಲ್ಲಿ ಭಾಗವಹಿಸಿದ ಎಲ್ಲರೂ ಅದೇ ರೀತಿ ಇರುತ್ತಾರೆ ಎಂದು ಸಾಮಾನ್ಯೀಕರಿಸುವುದು ನನ್ನ ಉದ್ದೇಶವಲ್ಲ. ಕೆಲವರಲ್ಲಾದರೂ ತಿಳಿವಳಿಕೆಯ ಕೊರತೆ ಇದೆ ಎಂಬುದು ಇಲ್ಲಿ ಮುಖ್ಯ. 

ಪೌರತ್ವ (ತಿದ್ದುಪಡಿ) ಕಾಯ್ದೆಯ ಪ್ರಕಾರ, ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಯಾಗಿ, ಆಗ ಯಾವುದೇ ವ್ಯಕ್ತಿ ಭಾರತೀಯನಲ್ಲ ಎಂದು ಸರ್ಕಾರಕ್ಕೆ ಸಂಶಯ ಬಂದರೆ ಅಂಥವರಿಗೆ ರಹವಾಸಿ ದಾಖಲೆಯನ್ನು ಸಲ್ಲಿಸುವಂತೆ ಕೇಳಲಾಗು
ತ್ತದೆ. ಭಾರತದಲ್ಲಿ ಇರುವ ಮುಸ್ಲಿಮರ ಹತ್ತಿರ ರೇಷನ್ ಕಾರ್ಡ್, ಅಡುಗೆ ಅನಿಲ ಸಂಪರ್ಕ ದಾಖಲೆ, ಆಧಾರ್‌ ಕಾರ್ಡ್, ವೋಟರ್‌ ಐ.ಡಿ, ಬ್ಯಾಂಕ್ ಪಾಸ್‍ಬುಕ್, ಕರೆಂಟ್ ಬಿಲ್, ಮನೆ–ನಿವೇಶನ ತೆರಿಗೆ ಪಾವತಿ ರಸೀದಿ, ಶಾಲಾ ದಾಖಲಾತಿ, ಚಾಲನಾ ಪತ್ರ, ಆರ್‌.ಸಿ ಬುಕ್, ವಿಮೆ ಪಾಲಿಸಿ ಬಾಂಡ್‌ನಂತಹ ಒಂದಾದರೂ ದಾಖಲೆ ಇದ್ದೇ ಇರುತ್ತದೆ. ಹಾಗಿದ್ದ ಮೇಲೆ ಹೆದರಿಕೆ ಏಕೆ? ಈ ಮೇಲಿನ ಯಾವುದಾದರೂ ದಾಖಲೆ ಕೊಟ್ಟರೂ ಸಾಕು, ಅವರ ಪೌರತ್ವಕ್ಕೆ ಧಕ್ಕೆ ಉಂಟಾಗದು.

ಒಂದು ವೇಳೆ ಜನನ ಪ್ರಮಾಣಪತ್ರವೇ ಬೇಕೆಂದರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅವರು ಜನಿಸಿದ ಸ್ಥಳದ ವ್ಯಾಪ್ತಿಯಲ್ಲಿ ಬರುವ ಜನನ– ಮರಣ ನೋಂದಣಿ ಇಲಾಖೆಯಿಂದ ಇದನ್ನು ಪಡೆಯಬಹುದು. ಒಂದುವೇಳೆ ಜನನ ದಾಖಲೆ ಲಭ್ಯವಾಗದಿದ್ದರೆ, ಅಲಭ್ಯ ಪ್ರಮಾಣ ಪತ್ರ ನೀಡುತ್ತಾರೆ. ಈ ಅಲಭ್ಯ ಪತ್ರವನ್ನು ಲಗತ್ತಿಸಿ ನ್ಯಾಯಾಲಯದಲ್ಲಿ ಜನನ– ಮರಣ ನೋಂದಣಿ ಕಾಯ್ದೆ 1969ರ ಅಧಿನಿಯಮ 13(3)ರ ಪ್ರಕಾರ ಕ್ರಿಮಿನಲ್ ಮಿಸಲೇನಿಯಸ್ ಪ್ರಕರಣ ದಾಖಲಿಸಿ, ಜನನ ಪ್ರಮಾಣಪತ್ರ ಪಡೆಯಬಹುದು.

ಈ ಕಾಯ್ದೆ ಬಗ್ಗೆ ಯಾವುದೇ ಸಂಶಯ ಮತ್ತು ತಕರಾರು ಇದ್ದರೆ ದೇಶದ ನ್ಯಾಯಾಂಗವು ಅಂತಹವರ ನೆರವಿಗಾಗಿ ಇದ್ದೇ ಇದೆ. ಈ ಕಾಯ್ದೆಯನ್ನು ಪ್ರಶ್ನಿಸಿ ಈಗಾಗಲೇ ಸುಮಾರು 60 ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿವೆ. ಕೋರ್ಟ್‌ ಏನು ಹೇಳುತ್ತದೋ ನೋಡೋಣ. ಅಷ್ಟರೊಳಗೆ ಬಡವರ ಬದುಕು, ಬುದ್ಧಿ, ಭಾವಕ್ಕೆ ಕಿಡಿ ಹಚ್ಚುವ ಕೆಲಸ ಆಗಬಾರದು. ಈ ಬಗ್ಗೆ ಸಂವಾದ, ಚರ್ಚೆಗಳು ಮುಕ್ತವಾಗಿ ನಡೆದು, ಸಂಶಯಗಳನ್ನು ನಿವಾರಿಸುವ ಕೆಲಸ ಆಗಬೇಕಾಗಿದೆ. 

ಲೇಖಕ: ನ್ಯಾಯಾಂಗ ಇಲಾಖೆ ಅಧಿಕಾರಿ

ಪ್ರತಿಕ್ರಿಯಿಸಿ (+)