ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹೋಲಿಕೆ ಸಲ್ಲ... ಅದು ನಿಮ್ಮದೇ ಮಗು!

‘ಕೈ ಕಟ್ಟು, ಬಾಯಿ ಮುಚ್ಚು’ ಎನ್ನುವುದೇ ಶಿಸ್ತಾದರೆ ಮಕ್ಕಳ ಜ್ಞಾನಾರ್ಜನೆಯ ರಾಜಬೀದಿಗಳನ್ನು ಹಿರಿಯರೇ ಬಂದ್ ಮಾಡಿದಂತಾಗುತ್ತದೆ
Last Updated 12 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಅಮ್ಮ, ಅಪ್ಪನೊಂದಿಗೆ ಆ ಪೋರ ಕಡಲ ತೀರದಲ್ಲಿ ಸೂರ್ಯಾಸ್ತದ ದೃಶ್ಯ ಕಣ್ತುಂಬಿಕೊಂಡ. ‘ನಡಿ ಹೊರಡೋಣ’ ಎಂದಾಗ ‘ಸೂರ್ಯನನ್ನೂ ಮನೆಗೆ ಕರೆದೊಯ್ಯೋಣ’ ಅಂತ ಅವನ ಹಟ. ದಂಪತಿ ತಳಮಳಿಸಲಿಲ್ಲ. ‘ಪುಟ್ಟ, ನಾಳೆಯೂ ನಮ್ಮ ಹಾಗೆ ಜನ ಇಲ್ಲಿಗೆ ಬಂದು ನೋಡಿ ಆನಂದಿಸಬೇಕು ತಾನೆ? ಸೂರ್ಯ ಇಲ್ಲೇ ಇರಲಿ’ ಎಂದು ಮಗನಿಗೆ ಮನವರಿಕೆ ಮಾಡುತ್ತಾರೆ! ಮಕ್ಕಳನ್ನು ಸಾಮಾಜಿಕವಾಗಿ, ಭಾವನಾತ್ಮಕವಾಗಿ ಬೆಳಸುವ ಪರಿಯೆಂದರೆ ಇದೇ ಅಲ್ಲವೆ?

ನಮಗೆ ವಿಶ್ವದ ಏಳು ಅದ್ಭುತಗಳು ಕಂಡರೆ, ಮಕ್ಕಳಿಗೆ ಕಂಡಿದ್ದೆಲ್ಲ ಅದ್ಭುತಗಳೇ. ಮಗುವಿನ ಕಣ್ಣಿನಿಂದ ಜಗತ್ತನ್ನು ನೋಡಿದರೆ ಅದು ಮತ್ತಷ್ಟು ಸುಂದರ. ಮಕ್ಕಳು ಕಾರಣವಿಲ್ಲದೆಯೆ ನಗಬಲ್ಲರು, ಸರ್ವದಾ ಯಾವುದರಲ್ಲಾದರೂ ತನ್ಮಯರಾಗಿರಬಲ್ಲರು. ಚಿಣ್ಣರ ಪ್ರಶ್ನೆಗಳು ಸ್ವಾಭಾವಿಕವಾಗಿರುವ ಕಾರಣ ತೋರಿಕೆಗೆ ಅತೀತ, ಪ್ರಾಮಾಣಿಕ. ಅವರು ಹಿರಿಯರಿಂದಲೂ ಅಷ್ಟೇ ಮುಗ್ಧತೆ, ಪಾರದರ್ಶಕತೆ ನಿರೀಕ್ಷಿಸುತ್ತಾರೆ. ನೀನು ರೊಟ್ಟಿಗೆ ಹಿಟ್ಟು ಕಲೆಸಲಾರೆ ಎನ್ನುವ ನಿರುತ್ತೇಜನ ಮಗುವಿನ ಮನಸ್ಸಿನಲ್ಲಿ ದಾಖಲಾಗಿರುತ್ತದೆ. ಮತ್ತೊಂದು ಸನ್ನಿವೇಶದಲ್ಲಿ ‘ನೀನೇ ಲೆಕ್ಕ ಹಾಕಬಹುದು, ಯತ್ನಿಸು’ ಎನ್ನುತ್ತಲೇ ಮಗು ‘ನೀನು ಹೇಳುವುದು ಸುಳ್ಳು’ ಅಂತ ತಿರುಗೇಟು ನೀಡುವ ಸಾಧ್ಯತೆಯುಂಟು!

ಮಕ್ಕಳು ಎಡೆಬಿಡದೆ ಮಾರ್ಗದರ್ಶನ ಬಯಸು ತ್ತಾರೆ. ಅವರ ತಾಕೀತು, ವಿಚಾರಣೆಗಳನ್ನು ಅಬದ್ಧ ವೆಂದು ಕಡೆಗಣಿಸದೆ ಗೌರವಿಸಿ ಹಿರಿಯರು ಸಕಾರಾ ತ್ಮಕವಾಗಿ ಪ್ರತಿಕ್ರಿಯಿಸಬೇಕು. ತಾಯಿ, ತಂದೆ ಅತಿ ಮುಖ್ಯವಾಗಿ ತಮ್ಮ ಮಕ್ಕಳ ಪರ ತೊಡಗಿಸಬೇಕಾದ ಬಂಡವಾಳವೆಂದರೆ ತಮ್ಮ ಗುಣಮಟ್ಟದ ಸಮಯವನ್ನು ಅವರಿಗಾಗಿ ಮೀಸಲಿಡುವುದು. ಮಕ್ಕಳೊಂದಿಗೆ ಕಳೆದ ಸಂದರ್ಭಗಳು ಅವರಿಗೂ ತಮ್ಮ ಜೀವಿತದಪರ್ಯಂತ ಹಸಿರಾಗಿರುತ್ತವೆ. ಮಾತೃತ್ವ, ಪಿತೃತ್ವದ ಹೊಣೆಗಾರಿಕೆ ಬಹು ಸೂಕ್ಷ್ಮ, ಸಂಕೀರ್ಣ. ಮಗುವಿನತ್ತ ಸೂಕ್ತ ನಿಗಾ ವಹಿಸದ ಪೋಷಕರ ತಾತ್ಸಾರವನ್ನು ಜನಪದರು ‘ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು’ ಅಂತ ಕೆಣಕುತ್ತಾರೆ.

ತಮ್ಮ ತಾಯಿ, ತಂದೆ ತಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿಸಿದಾಗ ಮಕ್ಕಳಿಗೆ ಆಗುವ ಹಿಗ್ಗಿಗೆ ಪಾರವಿಲ್ಲ. ಅದು ಇಂದು ಶಾಲೆಯಲ್ಲಿ ಕಲಿತಿದ್ದೇನು, ಪರೀಕ್ಷೆಯಲ್ಲಿ ಬಂದ ಗ್ರೇಡ್ ಯಾವುದು, ಹೋಂವರ್ಕ್ ಏನು ಕೊಟ್ಟಿದ್ದಾರೆ... ಇತ್ಯಾದಿ ಕುಶಲೋಪರಿಗೂ ಮೀರಿದ್ದು. ಮಗು ಮಾತನಾಡಲು ಹಂಬಲಿಸುತ್ತದೆನ್ನಿ. ಪೋಷಕರು ತಾವು ಎಂಥದ್ದೇ ಕೆಲಸದಲ್ಲಿರಲಿ, ಅದನ್ನು ಬಿಟ್ಟು ಮಗುವಿನೊಡನೆ ಒಂದಾಗಬೇಕು. ಶಾಲೆಯಲ್ಲಾಗಲಿ, ಮನೆಯಲ್ಲಾಗಲಿ ‘ಕೈ ಕಟ್ಟು, ಬಾಯಿ ಮುಚ್ಚು’ ಎನ್ನುವುದೇ ಶಿಸ್ತಾದರೆ ಮಕ್ಕಳು ಕುತೂಹಲ, ಅಚ್ಚರಿಗಳಿಂದ ವಂಚಿತರಾಗುವರು. ಜ್ಞಾನಾರ್ಜನೆಯ ರಾಜಬೀದಿಗಳನ್ನು ಹಿರಿಯರೇ ಬಂದ್ ಮಾಡಿದಂತಾಗುತ್ತದೆ.

ಒಂದು ವರ್ಷ ವಯಸ್ಸಿನ ಯಾವುದೇ ಮಗು ಎಡವಿಬಿದ್ದ ಕಾರಣಕ್ಕೆ ನಡಿಗೆ ಬಿಡುವುದೇ? ಎಷ್ಟೇ ಬಾರಿ ಬಿದ್ದರೂ ಅದು ನಡೆಯುವುದನ್ನು ಮುಂದು ವರಿಸುವುದು. ವೈಫಲ್ಯಕ್ಕೆ ಅದು ಅಂಜದು. ‘ಮಗು ಮನುಷ್ಯನ ತಂದೆ’ ಎಂಬ ನುಡಿಯಲ್ಲಿ ಏನೆಲ್ಲ ಸತ್ಯ ಅಡಗಿದೆ.

ಪೋಷಕತ್ವ ಎಂಬುದು ಸಂಬಂಧಕ್ಕಿಂತಲೂ ಹೆಚ್ಚಾಗಿ ಗುರುತರ ಹೊಣೆಗಾರಿಕೆ. ಮಕ್ಕಳು ಕಲಿಯುವ ಶೈಲಿ ಅರಿಯದೆ ಅವರಿಗೆ ಕಲಿಸಲಾಗದು. ಮಾತನಾಡು ವುದಕ್ಕಿಂತ ದುಪ್ಪಟ್ಟು ಆಲಿಸುವ ಕೌಶಲವನ್ನು ಹಿರಿಯರು ಅವರಲ್ಲಿ ಬೇರೂರಿಸುವ ಅಗತ್ಯವಿದೆ.

ಪ್ರೀತಿಯ ಅಪ್ಪುಗೆಗೆ ಪರ್ಯಾಯವಿಲ್ಲ. ಹಿರಿಯರ ಕೋಪದಿಂದ ವ್ಯತಿರಿಕ್ತ ಪರಿಣಾಮ. ‘ಹುರಿದ ಕಾಳನ್ನು ಬಿತ್ತಿದರೆ ಮೊಳಕೆಯೊಡೆಯವುದೇ?’ ಎಂದು ಪ್ರಶ್ನಿಸುತ್ತಾರೆ ಅಲ್ಲಮರು. ಅಂದಹಾಗೆ ಇತರ ಮಕ್ಕಳೊಡನೆ ನಿಮ್ಮ ಮಗುವಿನ ಹೋಲಿಕೆ ಏಕೆ ಸಲ್ಲದು ಎನ್ನುವುದಕ್ಕೆ ಉತ್ತರ ಸ್ಪಷ್ಟವಿದೆ: ‘ಅದು ನಿಮ್ಮದೇ ಮಗು’. ಅಚ್ಚು ಕಟ್ಟು, ರೀತಿ, ನೀತಿಗಳ ಹಿನ್ನೆಲೆ ವಿವರಿಸಿದರೆ ಮಕ್ಕಳನ್ನು ಶಿಸ್ತಿಗೊಳಪಡಿಸುವುದು ಸರಾಗ. ಒಬ್ಬರಂತೆ ಇನ್ನೊಬ್ಬರಿಲ್ಲ ಎನ್ನುವುದೇ ಪ್ರಕೃತಿಯ ಸೊಬಗು, ಹಿರಿಮೆ.

ಚಿಣ್ಣರು ಕೇಳುವ ಎಲ್ಲ ಪ್ರಶ್ನೆ, ಅನುಮಾನಗಳಿಗೆ ಉತ್ತರಿಸಬೇಕೆಂದೇನಿಲ್ಲ. ಮತ್ತೆ ಮತ್ತೆ ಏನು, ಎತ್ತ ಎಂದು ಕೇಳಲಾದ ಸಂದೇಹಗಳ ಸ್ಪಷ್ಟೀಕರಣವನ್ನು ಹಿರಿಯರು ಬಯಸಬೇಕು. ಆಗ ಮಕ್ಕಳಿಗೆ ಪರಿಹಾರಗಳ ಹಾದಿ ಸುಗಮವಾಗುವುದಿದೆ.

ತಂತ್ರಜ್ಞಾನವು ಚಿಣ್ಣರ ಕಲಿಕೆಯನ್ನು ಸರಾಗ ವಾಗಿಸಿದೆ. ಆದರೆ ಸಣ್ಣ ಪುಟ್ಟ ಲೆಕ್ಕಾಚಾರಗಳಿಗೆಲ್ಲ ಅವರು ಪರಿಕರಗಳನ್ನು ಅವಲಂಬಿಸಿದರೆ ಎಡವಟ್ಟೇ. ಸ್ಮಾರ್ಟ್ ಫೋನ್ ಅಲ್ಲದೆ ಕೈಗಳಿಗೆ ಅಪರೂಪಕ್ಕಾದರೂ ಸ್ಲೇಟು, ಬಳಪ ಹಿಡಿಯುವ ಬಿಡುವು ಸಿಗಲಿ!

ಮಕ್ಕಳು ಸಮಾಜದ ನಿಜವಾದ ಸಂಪತ್ತು. ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತ ರಾದರೇನೆ ದೇಶಕ್ಕೆ ಭವಿತವ್ಯ ಎಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಒತ್ತಿ ಹೇಳಿದರು. ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು ‘ಚಾಚಾ ನೆಹರೂ’ ಆದರು. ತಮ್ಮ ಜನ್ಮದಿನ ವನ್ನು (ನ. 14) ‘ಮಕ್ಕಳ ದಿನಾಚರಣೆ’ ಎಂದು ಆಚರಿಸಲು ಆಶಿಸಿದರು.

ಮಕ್ಕಳಲ್ಲಿ ದಯೆ, ಅನುಕಂಪ, ಪರ ರೊಂದಿಗೆ ಗೌರವಯುತ ನಡೆ, ಧಾರಾಳತನ ಮೈದಳೆಯ ಬೇಕು. ತಮ್ಮ ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ಗ್ರೇಡ್ ಪಡೆಯಬೇಕು, ಪಠ್ಯೇತರ ಚಟುವಟಿಕೆ ಗಳಲ್ಲಿ ಬಹುಮಾನ ಗಳಿಸಬೇಕು ಎಂದು ಹಂಬಲಿಸದ ಪೋಷಕರಿಲ್ಲ. ಇದು ಸರಿಯೆ, ಮಕ್ಕಳು ಯಶೋವಂತ ಮನುಜರಾಗಿ ರೂಪುಗೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT