ಗುರುವಾರ , ಜೂನ್ 17, 2021
21 °C
ತಮ್ಮದೇ ಪಾವತಿ ಸೇವಾ ಆ್ಯಪ್‌ ಹೊಂದಿರುವ ಕಂಪನಿಗಳು ಇತರ ಆ್ಯಪ್‌ಗಳಿಗೆ ಸೇವೆ ನೀಡುವ ವಿಚಾರದಲ್ಲಿ ಪಕ್ಷಪಾತವಿಲ್ಲದೆ ನಡೆದುಕೊಳ್ಳಬಹುದೇ ಎಂಬುದು ಚಿಂತನಾರ್ಹ ಸಂಗತಿ

ಸಂಗತ: ಆ್ಯಪ್‌ ಸ್ಟೋರ್‌ಗೆ ನಿಯಂತ್ರಣ ವ್ಯವಸ್ಥೆ?

ವಿಜಯ್‌ ಜೋಷಿ Updated:

ಅಕ್ಷರ ಗಾತ್ರ : | |

Prajavani

ಹಿಂದಿನ ವರ್ಷದಲ್ಲಿ ಗೂಗಲ್‌ ಮತ್ತು ಪೇಟಿಎಂ ನಡುವಿನ ಸಂಘರ್ಷವೊಂದು ವರದಿಯಾಗಿತ್ತು. ಭಾರತದ ನವೋದ್ಯಮಗಳ ಪೈಕಿ ಬಹುದೊಡ್ಡ ಜನಪ್ರಿಯತೆ ಗಳಿಸಿಕೊಂಡಿರುವ ಪೇಟಿಎಂ ಕಂಪನಿಯ ಪಾವತಿ ಹಾಗೂ ಇತರ ಸೇವೆಗಳ ಆ್ಯಪ್‌ ಅನ್ನು ಗೂಗಲ್‌ ತನ್ನ ಪ್ಲೇಸ್ಟೋರ್‌ನಿಂದ ತೆಗೆದುಹಾಕಿತ್ತು. ಕ್ರೀಡಾ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ತಾನು ರೂಪಿಸಿದ ಕೆಲವು ನಿಯಮಗಳನ್ನು ಪೇಟಿಎಂ ಉಲ್ಲಂಘಿಸಿದೆ ಎಂಬ ಕಾರಣವನ್ನು ಗೂಗಲ್‌ ನೀಡಿತ್ತು. ಪ್ಲೇಸ್ಟೋರ್‌ನಿಂದ ಹೊರಹಾಕಿಸಿಕೊಂಡ ಕೆಲವು ತಾಸುಗಳ ನಂತರದಲ್ಲಿ ಪೇಟಿಎಂ ಮತ್ತೆ ಅಲ್ಲಿ ಸ್ಥಾನ ಪಡೆಯಿತು ಎಂಬುದು ಬೇರೆ ಮಾತು. ಆದರೆ, ಪೇಟಿಎಂ ಕಂಪನಿಯ ಸಂಸ್ಥಾಪಕ ವಿಜಯ್ ಶೇಖರ್ ಶರ್ಮ ಅವರು ಆ ಸಂದರ್ಭದಲ್ಲಿ ಆಡಿದ್ದ ಮಾತು ಮಹತ್ವದ್ದು. ‘ಗೂಗಲ್‌ ಎಂಬುದು ಈಗ ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ತೀರ್ಮಾನಿಸುವ, ತಪ್ಪಿಗೆ ಶಿಕ್ಷೆ ವಿಧಿಸುವ ಹಾಗೂ ಆ ಶಿಕ್ಷೆಯನ್ನು ಜಾರಿಗೆ ತರುವ’ ಶಕ್ತಿ ಹೊಂದಿದೆ ಎಂದು ಶರ್ಮ ಹೇಳಿದ್ದರು.

ಒಂದು ಅಂದಾಜಿನ ಪ್ರಕಾರ, ಭಾರತದ ಮೊಬೈಲ್‌ ಫೋನ್‌ ಮಾರುಕಟ್ಟೆಯಲ್ಲಿ ಆ್ಯಂಡ್ರಾಯ್ಡ್‌ನ ಪಾಲು ಶೇಕಡ 95ರಷ್ಟು. ಅಂದರೆ, ನೂರಕ್ಕೆ 95 ಮೊಬೈಲ್‌ ಫೋನ್‌ಗಳಲ್ಲಿ ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಇದೆ ಮತ್ತು ಅಷ್ಟೂ ಫೋನ್‌ಗಳಲ್ಲಿ ಗೂಗಲ್‌ ಪ್ಲೇಸ್ಟೋರ್‌ ಕೂಡ ಇದೆ. ಆ್ಯಂಡ್ರಾಯ್ಡ್‌ ನಲ್ಲಿ ಬಳಸಬಹುದಾದ ಆ್ಯಪ್‌ಗಳನ್ನು ಬೇರೆ ಕಡೆಗಳಿಂದಲೂ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶ ಇದೆಯಾದರೂ, ಹೆಚ್ಚಿನವರು ಆ್ಯಪ್‌ಗಳನ್ನು ಪಡೆದುಕೊಳ್ಳುವುದು ಪ್ಲೇಸ್ಟೋರ್‌ನಿಂದ. ಪೇಟಿಎಂ, ಫೋನ್‌ಪೆ, ಜೊಮ್ಯಾಟೊನಂತಹ ಕಂಪನಿಗಳು ತಮ್ಮ ಗ್ರಾಹಕರಿಗೆ ಸೇವೆ ಒದಗಿಸುವುದು ಮುಖ್ಯವಾಗಿ ಆ್ಯಪ್ ಮೂಲಕ. ಪ್ಲೇಸ್ಟೋರ್‌ನಿಂದ ಈ ಕಂಪನಿಗಳ ಆ್ಯಪ್‌ ಕಿತ್ತುಹಾಕಿದರೆ, ಕಂಪನಿಗಳ ಕತ್ತು ಹಿಸುಕಿದಂತೆಯೇ ಸರಿ. ಗೂಗಲ್‌ ಸೃಷ್ಟಿಸಿರುವ ಪ್ಲೇಸ್ಟೋರ್, ಹೊಸ ಕಾಲದ ಇಂತಹ ಕಂಪನಿಗಳಿಗೆ ತಮ್ಮ ಗ್ರಾಹಕರನ್ನು ತಲುಪಲು ಇರುವ ಪ್ರಧಾನ ಮಾಧ್ಯಮ ಕೂಡ ಹೌದು.

ಪ್ಲೇಸ್ಟೋರ್‌ನಿಂದ ಹೊರಹಾಕಿಸಿಕೊಂಡಿದ್ದ ಪೇಟಿಎಂ ಈಗಾಗಲೇ ತನ್ನದೇ ಆದ ಆ್ಯಪ್‌ ಸ್ಟೋರ್‌ ಆರಂಭಿಸಿದೆ. ಅದರಲ್ಲಿ ತನ್ನ ಆ್ಯಪ್‌ಗಳು ಮಾತ್ರವಲ್ಲದೆ, ಬೇರೆ ಕಂಪನಿಗಳ ಆ್ಯಪ್‌ಗಳಿಗೂ ಜಾಗ ನೀಡಿದೆ. ಈ ನಡುವೆ ಕೇಂದ್ರ ಸರ್ಕಾರ ಕೂಡ ತನ್ನದೇ ಆದ ಆ್ಯಪ್‌ ಸ್ಟೋರ್‌ ಶುರು ಮಾಡಿದೆ. ಅದರಲ್ಲಿ ಈಗ 965ಕ್ಕೂ ಹೆಚ್ಚು ಆ್ಯಪ್‌ಗಳಿಗೆ ಜಾಗ ನೀಡಲಾಗಿದೆ ಎಂದು ಈಚೆಗೆ ವರದಿಯಾಗಿದೆ. ಕೆಲವು ಮೊಬೈಲ್‌ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತಮ್ಮದೇ ಆದ ಆ್ಯಪ್‌ ಸ್ಟೋರ್‌ ಅಳವಡಿಸಿರುವುದೂ ಇದೆ.

ಸ್ಮಾರ್ಟ್‌ಫೋನ್‌ಗಳು ಭಾರತೀಯರ ಕೈಗೆ ಆಗಷ್ಟೇ ಸಿಕ್ಕಿದ್ದ ಕಾಲದಲ್ಲಿ, ಆ್ಯಪ್ ಸ್ಟೋರ್‌ಗೆ ‘ಮಾರ್ಕೆಟ್‌’ ಎಂಬ ಹೆಸರಿತ್ತು. ಆಗ ಅದು, ಇಂದಿನ ನವೋದ್ಯಮಗಳ ಪಾಲಿಗೆ ಈಗಿನಷ್ಟು ಮಹತ್ವದ್ದಾಗಿರಲಿಲ್ಲ. ಆ ಮಾರ್ಕೆಟ್‌ನಲ್ಲಿ ಸಿಗುತ್ತಿದ್ದುದು ಒಂದಿಷ್ಟು ಚಿಕ್ಕ–ಪುಟ್ಟ ಗೇಮ್‌ಗಳು, ಗೂಗಲ್ ಕಂಪನಿಯೇ ರೂಪಿಸಿದ್ದ ಕೆಲವು ಆ್ಯಪ್‌ಗಳು ಇತ್ಯಾದಿ... ಆದರೆ ಇಂದು ಆ್ಯಪ್‌ ಸ್ಟೋರ್‌ ಎಂಬುದು ಬೃಹತ್ ಮಾರುಕಟ್ಟೆ ಇದ್ದಂತೆ. ಹಣಕಾಸು ಸೇವೆಗಳನ್ನು ಒದಗಿಸುವ ಪೇಟಿಎಂ, ಫೋನ್‌ಪೆ, ಈಕ್ವಿಟಿ ಹೂಡಿಕೆ ಸೇವೆಗಳನ್ನು ಒದಗಿಸುವ ಜೆರೊದಾ, ಸಾರಿಗೆ ಸೇವೆ ಒದಗಿಸುವ ಓಲಾ, ಉಬರ್, ಮನೆ–ಮನೆಗೆ ಆಹಾರ ತಂದುಕೊಡುವ ಸೇವಾ ಕ್ಷೇತ್ರದ ಜೊಮ್ಯಾಟೊ, ಸ್ವಿಗ್ಗಿ, ನೂರಾರು ಕೋಟಿ ಹಣ ಹೂಡಿಕೆ ಮಾಡಿ ಆಕರ್ಷಕ ಗೇಮ್‌ಗಳನ್ನು ರೂಪಿಸಿರುವ ಗೇಮಿಂಗ್‌ ಉದ್ಯಮಗಳು... ಇವೆಲ್ಲವುಗಳ ಪಾಲಿಗೆ ಆ್ಯಪ್‌ ಸ್ಟೋರ್‌ಗಳೇ ಜೀವನಾಡಿಗಳು.

ಮಾರುಕಟ್ಟೆಯಲ್ಲಿ ಚಕ್ರಾಧಿಪತ್ಯ ಹೊಂದಿರುವ ಗೂಗಲ್‌ನಂತಹ ಕಂಪನಿ, ತನ್ನ ಆ್ಯಪ್‌ ಸ್ಟೋರ್‌ನಿಂದ ಯಾವುದೇ ಉದ್ಯಮದ ಆ್ಯಪ್‌ ಅನ್ನು ಹೊರಹಾಕಿದರೆ ಆ ಉದ್ಯಮಕ್ಕೆ ಆಗುವ ನಷ್ಟ ಓದುಗರ ಊಹೆಗೆ ಬಿಟ್ಟಿದ್ದು. ತಾನೂ ಒಂದು ಲಾಭದ ಉದ್ದೇಶವಿರುವ ಕಂಪನಿಯಾಗಿರುವ ಗೂಗಲ್‌, ಇತರ ಕಂಪನಿಗಳ ವಿಚಾರದಲ್ಲಿ ಸದಾಕಾಲ ಅತ್ಯಂತ ನ್ಯಾಯಸಮ್ಮತವಾಗಿ ನಡೆದುಕೊಳ್ಳುತ್ತದೆ ಎಂದು ಭಾವಿಸಬಹುದೇ? ಗೂಗಲ್ ಕಂಪನಿಯದ್ದೇ ಪಾವತಿ ಸೇವಾ ಆ್ಯಪ್‌ ಇದೆ. ಹೀಗಿರುವಾಗ ಅದೇ ಗೂಗಲ್‌ ಕಂಪನಿ ಪಾವತಿ ಸೇವೆ ಒದಗಿಸುವ ಇತರ ಆ್ಯಪ್‌ಗಳ ವಿಚಾರದಲ್ಲಿ ಪಕ್ಷಪಾತ ಧೋರಣೆಯೇ ಇಲ್ಲದೆ ನಡೆದುಕೊಳ್ಳಬಹುದೇ? ಪೇಟಿಎಂ ತನ್ನ ಆ್ಯಪ್‌ ಸ್ಟೋರ್‌ನಲ್ಲಿ ಇತರ ಪಾವತಿ ಆ್ಯಪ್‌ಗಳನ್ನು ಹೇಗೆ ನೋಡಿಕೊಳ್ಳಬಹುದು?

ಹತ್ತು ಹಲವು ಪ್ರಕರಣಗಳನ್ನು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಎದುರಿಸುತ್ತಿರುವ ಗೂಗಲ್‌ನಂತಹ ಕಂಪನಿಗೆ ಆ್ಯ‍ಪ್‌ಗಳ ವಿಚಾರದಲ್ಲಿ ‘ತನಿಖೆ ನಡೆಸುವ, ನ್ಯಾಯಾಧೀಶನಾಗುವ, ಶಿಕ್ಷೆಗೆ ಗುರಿಪಡಿಸುವ’ ಶಕ್ತಿಯನ್ನು ಕೊಟ್ಟಿರುವುದು ಉದ್ಯಮದ ಒಳಿತಿನ ದೃಷ್ಟಿಯಿಂದ ಸೂಕ್ತವಲ್ಲ. ಆ ಶಕ್ತಿಯನ್ನು ಸರ್ಕಾರಕ್ಕೂ ಕೊಡಬೇಕಿಲ್ಲ. ಆ ಕೆಲಸಕ್ಕೆ ತುರ್ತಾಗಿ ಬೇಕಿರುವುದು ಒಂದು ಶಾಸನಾತ್ಮಕ ನಿಯಂತ್ರಣ ಪ್ರಾಧಿಕಾರ. ಅಂತಹ ಪ್ರಾಧಿಕಾರ ರಚಿಸಬೇಕಿದ್ದ ಸರ್ಕಾರವು ತಾನೇ ಒಂದು ಆ್ಯಪ್‌ ಸ್ಟೋರ್‌ ಆರಂಭಿಸಿರುವುದು ತಮಾಷೆಯಂತೆ ಕಾಣುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು