ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ನಾಗರಿಕತೆಯ ಪರೀಕ್ಷೆ?

ವೈರಸ್‌ ದೂರ ಮಾಡಲು ಇಚ್ಛಾಶಕ್ತಿಯೊಂದೇ ಮದ್ದು
Last Updated 19 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಫ್ಲಾರಿಡಾದಿಂದ ಮೊನ್ನೆ ಫೋನ್ ಮಾಡಿದ ನನ್ನ ಮಾಮ ‘ಅಲ್ಲಿ ಹೇಗಿದೆ ಕೊರೊನಾ ಎಫೆಕ್ಟ್‌’ ಎಂದ. ನಾನು ‘ಇಲ್ಲಿ ಅಂತಹ ಪ್ಯಾನಿಕ್ ಏನಿಲ್ಲ, ಅಲ್ಲಿ ಹೇಗಿದೆ?’ ಅಂದೆ. ಅದಕ್ಕೆ ಅವನು ‘ಅಮೆರಿಕದಲ್ಲಿ ಹೈ ಅಲರ್ಟ್‌ ಘೋಷಿಸಿ ಆಗಿದೆ. ಇಲ್ಲಿ ಜನ ಹೊರಗೆ ತಿರುಗುತ್ತಿಲ್ಲ. ಎಲ್ಲಾ ವರ್ಕ್‌ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಮಕ್ಕಳಿಗೆ ಆನ್‍ಲೈನ್‍ನಲ್ಲಿ ತರಗತಿಗಳು ನಡೀತಿವೆ. ಮಾಲ್‍ಗಳಲ್ಲಿ ಏನೂ ಸಿಗುತ್ತಿಲ್ಲ. ಆಲ್ ಆರ್ ಎಮ್ಟಿ. ಯಾರಿಗೆ ಎಮರ್ಜೆನ್ಸಿ ನೀಡ್ ಇದೆಯೋ ಅದು ಅವರಿಗೆ ಸಿಗುವಂತೆ ಬಿಡಿ ಅಂತ ಟ್ರಂಪ್ ಹೇಳಿದ್ರೂ ಕೇಳದೆ, ಬೇಕಿದ್ದು ಬೇಡದ್ದನ್ನೆಲ್ಲ ಮನೆಯಲ್ಲಿ ತುಂಬಿಕೊಳ್ಳುತ್ತಿದ್ದಾರೆ. ಮೆಡಿಸಿನ್ ಕೂಡ ಸಿಕ್ತಾ ಇಲ್ಲ. ತುಂಬಾ ಸ್ವಾರ್ಥಿಗಳು’ ಅಂತ, ಸುಮಾರು 50 ವರ್ಷಗಳಿಂದ ಅಮೆರಿಕದಲ್ಲೇ ನೆಲೆ ಕಂಡಿರುವ ಮಾಮ ಹೇಳಿದ.

ಅವನು ಮತ್ತೊಂದು ಮಾತನ್ನು ಸೇರಿಸಿದ: ‘ನಾನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ನಡೆದ ಜಾತ್ರೆಯೊಂದರ ವಿಡಿಯೊ ನೋಡಿದೆ. ಪರಸ್ಪರ ಮೈಗೆ ಅಂಟಿಕೊಂಡು ಜನ ಸಂಭ್ರಮಪಡುತ್ತಿದ್ದುದನ್ನು ನೋಡಿ ಗಾಬರಿಯಾಯ್ತು. ಅಷ್ಟು ಮಾರಕರೋಗದ ಬಗ್ಗೆ ಅದು ಹ್ಯಾಗೆ ಭಾರತ ನಿರುಮ್ಮಳವಾಗಿದೆ ಅಂತ ಆಶ್ಚರ್ಯವಾಗುತ್ತಿದೆ’.

ನನ್ನ ಮಕ್ಕಳಿಬ್ಬರು ಸ್ವೀಡನ್ನಿನಲ್ಲಿ ನೆಲೆಸಿದ್ದಾರೆ. ಅತ್ತ ಚೀನಾದಲ್ಲಿ ಕೊರೊನಾ ಬಗ್ಗೆ ಜನ ಆತಂಕ
ಪಡುತ್ತಿದ್ದರೆ, ಯುರೋಪಿನಲ್ಲಿ ಅಂತಹ ಹೆದರಿಕೆ ಏನಿಲ್ಲ ಎಂದು ಗೊತನ್‍ಬರ್ಗ್‌ನಲ್ಲಿರುವ ಮಗಳು ಹೇಳುತ್ತಿದ್ದಳು. ಇಟಲಿಯಲ್ಲಿ ಈ ಮಾರಕ ವೈರಸ್‌ಗೆ ಅಲ್ಲಿನ ಸರ್ಕಾರ ಮೊದಲು ಅಂತಹ ಆತಂಕವನ್ನೇನೂ ವ್ಯಕ್ತಪಡಿಸಲಿಲ್ಲ. ಒಮ್ಮೆಲೇ ರೋಗಿಗಳು ಹೆಚ್ಚಾಗಿ ಸಾವಿನ ಸಂಖ್ಯೆ ಜಾಸ್ತಿಯಾದ ಮೇಲೆ ಇಟಲಿ ಎಚ್ಚೆತ್ತಿದೆ. ಅಷ್ಟರಲ್ಲಾಗಲೇ ಯುರೋಪಿನ ನಾನಾ ಭಾಗಗಳಿಗೆ ಈ ಸೋಂಕು ಹರಡಿತ್ತು. ‘ಇಲ್ಲಿಯೂ ಶಂಕಿತ ರೋಗಿಗಳ ಸಂಖ್ಯೆ ಆರು ಸಾವಿರ ಆಗಿದೆ. ಆದರೆ ಸರ್ಕಾರ ಯಾರಿಗೂ ರಜೆ ಕೊಟ್ಟಿಲ್ಲ. ನಾವೇ ನಮ್ಮ ಕಾಳಜಿ ಮಾಡಿಕೊಳ್ಳುತ್ತಿದ್ದೇವೆ’ ಎಂದಳು ಮಗಳು.

ಮತ್ತೊಬ್ಬ ಮಗಳು ಸ್ವೀಡನ್‌ ರಾಜಧಾನಿ ಸ್ಟಾಕ್‍ಹೋಮಿನಿಂದ ಫೋನಾಯಿಸಿ, ‘ನಮಗೆ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿದ್ದಾರೆ. ಪೇಶಂಟ್‌ಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಇಲ್ಲಿ ಸರಿಯಾದ ಆಸ್ಪತ್ರೆ ಇಲ್ಲ. ಇದ್ದರೂ ಇಷ್ಟು ರೋಗಿಗಳನ್ನು ನಿಭಾಯಿಸುವಷ್ಟು ವೈದ್ಯರಿಲ್ಲ. ಹಾಗಾಗಿ, ಕೊರೊನಾ ಲಕ್ಷಣ ಕಂಡುಬಂದಲ್ಲಿ ಮನೆಯಲ್ಲೇ ಇರಿ ಎಂದು ಹೇಳುತ್ತಿದ್ದಾರೆ. ಅಂತಹ ಲಕ್ಷಣ ಕಂಡುಬಂದ ರೋಗಿ ಆಸ್ಪತ್ರೆಗೆ ಹೋದಾಗ, ಯಾರು ಸೀರಿಯಸ್, ಯಾರು ಅಲ್ಲ ಎಂಬುದರ ಮೇಲೆ ಒಳರೋಗಿಗಳಾಗಿ ಅಥವಾ ಹೊರರೋಗಿಗಳಾಗಿ ದಾಖಲಿಸುತ್ತಿದ್ದಾರೆ’ ಎಂದಳು.

ಜಾಗತಿಕವಾಗಿ ಹಬ್ಬುತ್ತಿರುವ ಈ ಮಾರಕ ವೈರಸ್‌ ಅನ್ನು ಭಾರತ ಹೇಗೆ ನಿಭಾಯಿಸುತ್ತಿದೆ ಎನ್ನುವ ಕಾತರ ಉಂಟಾಗುತ್ತದೆ. ಭಾರಿ ಜನ
ಸಂಖ್ಯೆಯನ್ನು ಹೊಂದಿರುವ ಭಾರತ, ಈ ರೋಗದ ವಿರುದ್ಧ ಹೋರಾಡಲು ಸನ್ನದ್ಧವಾಗಿದೆ. ಆದರೆ ನಮ್ಮ ಜನರಿಗೇನಾಗಿದೆ? ಹೊರದೇಶದಿಂದ ಬಂದವರು ಕಾಯಿಲೆ ಹೊತ್ತು ತಂದು ಬೇರೆಯವರಿಗೆ ವರ್ಗಾಯಿಸುತ್ತಿದ್ದಾರೆ. ಕಾವಲಿರಿಸಿದರೆ ತಪ್ಪಿಸಿಕೊಂಡು ಓಡಿ ಹೋಗಿ, ಇತರರಿಗೂ ವೈರಸ್‌ ಹರಡುವಂತೆ ಮಾಡುತ್ತಿದ್ದಾರೆ. ಇವರೆಲ್ಲಾ ನಾಗರಿಕರಾ?

ಸರ್ಕಾರವು ಜಾತ್ರೆ, ಸಮಾರಂಭಗಳನ್ನು ನಿಷೇಧಿಸಿದ್ದರೂ ಜನ ಗುಂಪಾಗಿ ಸೇರಿ ದೇವರ ಮೇಲಿನ ಅಚಲ ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಮದುವೆಗಳಿಗೆ ಭಾರಿ ಸಂಖ್ಯೆಯಲ್ಲಿ ಜನ ಸೇರುವುದನ್ನು ಸರ್ಕಾರ ನಿಷೇಧಿಸಿದೆ. ಆದರೆ, ಮುಖ್ಯಮಂತ್ರಿಯವರೇ ಭಾಗವಹಿಸಿ ತಪ್ಪು ಸಂದೇಶ ರವಾನೆಯಾಗಲು ಕಾರಣರಾಗಿದ್ದಾರೆ. ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ, ಮಾಲ್, ಸಿನಿಮಾ ಹಾಲ್‍ಗಳನ್ನು ಬಂದ್ ಮಾಡುವ ಮೂಲಕ ವೈರಸ್‌ ಹರಡುವುದನ್ನು ತಡೆಯಲು ಎಚ್ಚರಿಕೆ ವಹಿಸಿದ್ದೇವೆ. ಐ.ಟಿ. ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ನಿರ್ದೇಶಿಸಿವೆ. ಆದರೆ ಅನೇಕ ಕಾರ್ಖಾನೆಗಳು ತಮ್ಮ ಕಾರ್ಮಿಕರಿಗೆ ರಜೆ ನೀಡಿಲ್ಲ. ಅವರಿಗೆ ಸಂಬಳ ಸಹಿತ ರಜೆ ನೀಡುವಂತೆ ಸರ್ಕಾರ ಆದೇಶಿಸಿಲ್ಲ ಏಕೆ?

ದೊಡ್ಡಬಳ್ಳಾಪುರದಲ್ಲಿನ ದೊಡ್ಡ ಕಂಪನಿಯೊಂದರಲ್ಲಿ ಮೂರು ಸಾವಿರಕ್ಕೂ ಅಧಿಕ ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಮಹಿಳೆಯರಿಗೆ ಮಾತ್ರ ರಜೆ ಘೋಷಿಸಲಾಗಿದೆ, ಗಂಡಸರಿಗೆ ಇಲ್ಲ. ಮಾರಕ ವೈರಸ್‌ ಗಂಡಸರು, ಹೆಂಗಸರು ಎಂದು ದಾರಿ ಕಾಯುತ್ತದೆಯೇ? ಇದನ್ನು ಪ್ರಶ್ನಿಸಿದ ನೌಕರರಿಗೆ ಅಲ್ಲಿನ ಮುಖ್ಯಸ್ಥ ‘ಇದು ಗ್ಲೋಬಲ್ ನಿರ್ಧಾರ’ ಎಂದು ಸಮಜಾಯಿಷಿ ಕೊಟ್ಟಿದ್ದಾರೆ!

ಮಾಧ್ಯಮಗಳು ಈ ರೋಗವನ್ನು ವೈಭವೀಕರಿಸುತ್ತಿವೆ ಎಂದೆಲ್ಲ ಮಾತನಾಡುವ ಮುಂಚೆ ನಾಗರಿಕರು ಇತರ ದೇಶಗಳು ಮಾಡಿದ ತಪ್ಪುಗಳನ್ನು ನೋಡಿ ಸರಿಮಾಡಿಕೊಂಡು, ಎಚ್ಚರಿಕೆಯಿಂದ ಇರುವುದು ಒಳಿತಲ್ಲವೇ? ಎಲ್ಲವನ್ನೂ ಸರ್ಕಾರವೇ ಮಾಡಬೇಕಿಲ್ಲ. ನಮ್ಮ ಜಾಗರೂಕತೆ, ಸ್ವಚ್ಛತೆ, ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವ ವಿಧಾನ, ತಮ್ಮನ್ನು ತಾವು ಏಕಾಂತದಲ್ಲಿ ಇರಿಸಿಕೊಳ್ಳುವ ಪಾಠ ಕಲಿತರೆ ನಾಗರಿಕ ಸಮಾಜದಿಂದ ಈ ವೈರಸ್‌ ದೂರ ಸಾಗುತ್ತದೆ. ಅದಕ್ಕೆ ಇಚ್ಛಾಶಕ್ತಿಯೊಂದೇ ಮದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT