ಮಂಗಳವಾರ, ಫೆಬ್ರವರಿ 25, 2020
19 °C
ಸೋಂಕು ಹರಡದಂತೆ ತೀವ್ರ ನಿಗಾ ವಹಿಸಬೇಕಾದ ಸವಾಲು ಜಗತ್ತಿನ ಮುಂದಿದೆ

ಸಂಗತ | ಕೊರೊನಾ: ಕಟ್ಟೆಚ್ಚರವೇ ಪರಿಹಾರ

ಡಾ. ಎಂ.ವೆಂಕಟಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿ ಫೆಬ್ರುವರಿ 4ರವರೆಗೆ 425 ಜನ ಪ್ರಾಣ ಕಳೆದುಕೊಂಡಿದ್ದಾರೆ. 20 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಈ ವೈರಸ್ ಮೊದಲಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡು, ಆನಂತರ ಎರಡು ತಿಂಗಳ ಅಂತರದಲ್ಲಿ ಜಗತ್ತಿನಾದ್ಯಂತ ಹರಡುತ್ತಿದೆ. ತೈವಾನ್, ಬೆಲ್ಜಿಯಂ, ಥಾಯ್ಲೆಂಡ್‌, ಕೆನಡಾ, ಅಮೆರಿಕ ಹಾಗೂ ಇತರ ಹಲವು ದೇಶಗಳು ತಮ್ಮ ನಾಗರಿಕರನ್ನು ಚೀನಾದಿಂದ ಹಿಂದಕ್ಕೆ ಕರೆಸಿಕೊಳ್ಳುತ್ತಿವೆ. ಶ್ರೀಲಂಕಾವು ಚೀನಾದಲ್ಲಿರುವ ತನ್ನ ವಿದ್ಯಾರ್ಥಿಗಳನ್ನು ವಾಪಸ್‌ ಕರೆಸಿಕೊಂಡಿದೆ. ವುಹಾನ್‍ನಲ್ಲಿದ್ದ ಭಾರತದ 324 ವಿದ್ಯಾರ್ಥಿಗಳನ್ನು ದೆಹಲಿಗೆ ರವಾನಿಸಿ, ನಿಗಾ ಘಟಕದಲ್ಲಿ ಇಡಲಾಗಿದೆ.

ಈ ಸೋಂಕು ರಷ್ಯಾ, ಫ್ರಾನ್ಸ್, ಪಾಕಿಸ್ತಾನ, ಭಾರತ, ಜಪಾನ್, ಆಸ್ಟ್ರೇಲಿಯಾ, ಯುರೋಪ್‌... ಹೀಗೆ ಎಲ್ಲೆಡೆ ಹರಡುತ್ತಿದೆ. ವುಹಾನ್ ನಗರದಲ್ಲಿ ಮೊದಲಿಗೆ ನ್ಯುಮೋನಿಯಾ ರೀತಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು ಮೀನು, ಸಿಗಡಿಯಂತಹ ಆಹಾರ ಪದಾರ್ಥದ ಸಗಟು ವ್ಯಾಪಾರಿಗಳ ಮಧ್ಯೆ. ಇಲ್ಲಿನ ಸಾವಿರಾರು ಅಂಗಡಿಗಳಲ್ಲಿ ಮೀನು, ಕೋಳಿ, ಬಾವಲಿ, ಅಳಿಲು, ಹಾವು, ಮಚ್ಚೆಜಿಂಕೆ, ಮೊಲ ಮತ್ತು ಇತರ ಪ್ರಾಣಿಗಳನ್ನು ಮಾರಲಾಗುತ್ತದೆ. ಕೊರೊನಾ ವೈರಸ್ ಪ್ರಾಣಿಗಳ ಮೂಲದಿಂದ ಬಂದಿರಬಹುದೆಂದು ಊಹಿಸಲಾಗಿದೆ. ಈ ವೈರಸ್ ಮುಖ್ಯವಾಗಿ ಪ್ರಾಣಿಗಳ ಮಧ್ಯೆ ಹರಡುತ್ತದೆ. ಸಾಮಾನ್ಯ ಶೀತವನ್ನು ಹೋಲುವ ಉಸಿರಾಟದ ರೋಗಲಕ್ಷಣಗಳನ್ನು ಉಂಟುಮಾಡುವ ನಾಲ್ಕು ರೀತಿಯ ಕೊರೊನಾ ವೈರಸ್‍ಗಳು ಜನರ ನಡುವೆ ಹರಡುತ್ತವೆ. ಇವುಗಳ ಸಾಮಾನ್ಯ ಲಕ್ಷಣಗಳೆಂದರೆ ಶೀತ, ಸ್ನಾಯುಗಳ ನೋವು, ಆಯಾಸ ಮತ್ತು ಉಸಿರಾಟಕ್ಕೆ ತೊಂದರೆ.

2002ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಸಾರ್ಸ್‌ ಎಂಬ ವೈರಸ್‌ನಿಂದ ಜಗತ್ತಿನಾದ್ಯಂತ 700 ಜನ ಸಾವಿಗೀಡಾಗಿದ್ದರು. ಈ ವೈರಸ್ ಮೊದಲಿಗೆ ಕುದುರೆಗಳು, ಬಾವಲಿಗಳಲ್ಲಿ ಕಾಣಿಸಿಕೊಂಡು, ಅಂಗಡಿಗಳಲ್ಲಿ ಮಾರುತ್ತಿದ್ದ ಪುನುಗು ಬೆಕ್ಕುಗಳ ಮೂಲಕ ಮನುಷ್ಯನಿಗೆ, ಅಲ್ಲಿಂದ ಅಂತರರಾಷ್ಟ್ರೀಯ ಪ್ರಯಾಣಿಕರ ಮೂಲಕ ಪ್ರಪಂಚವನ್ನು ಸುತ್ತಿಕೊಂಡಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಇಂತಹ ರೋಗಗಳನ್ನು ತಹಬಂದಿಯಲ್ಲಿ ಇಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಈಗ ಕೊರೊನಾ ಸಹ ಸಾರ್ಸ್‌ನಂತೆ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.‌

‌ಫೈಲೊಜೆನಿಟಿಕ್ ಎಂದರೆ, ಸಸ್ಯಮೂಲದ ಆನುವಂಶಿಕ ವೈರಸ್‍ನ ವಿಕಸನ ಇತಿಹಾಸ ಮತ್ತು ಇತರ ಜೀವಿಗಳೊಂದಿಗಿನ ಸಂಬಂಧಗಳ ಬಗ್ಗೆ ಅಧ್ಯಯನ  ನಡೆಸುವುದು. ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಕಾಲಕಾಲಕ್ಕೆ ವಿಕಾಸ ಹೊಂದುತ್ತ ಹಳೆ ಔಷಧಿಗಳಿಗೆ ಜಗ್ಗದೆ ಸಡ್ಡು ಹೊಡೆದು ನಿಲ್ಲುತ್ತವೆ. ಆಗ ವೈದ್ಯಕೀಯ ಜಗತ್ತು ಹೊಸ ಔಷಧಿಗಳನ್ನು ಆವಿಷ್ಕರಿಸಬೇಕಾಗುತ್ತದೆ. ಈಗ ಕೊರೊನಾ ವೈರಸ್‌ಗೆ ಮುಖ್ಯವಾಗಿ ಅಮೆರಿಕವು ಔಷಧಿಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ.

ವುಹಾನ್‌ನಲ್ಲಿ ಕಾಣಿಸಿಕೊಂಡ ಸೋಂಕನ್ನು ನ್ಯುಮೋನಿಯಾ ಎಂದು ತಿಳಿಯಲಾಗಿತ್ತು. ಅದಕ್ಕೆ ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಹೋದಾಗ ಪರೀಕ್ಷಿಸಿ ನೋಡಲಾಯಿತು. ಆಗ ಅದು ಕೊರೊನಾ ಎಂಬ ಹೊಸ ವೈರಸ್ ಆಗಿದ್ದು, ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂಬುದು ತಿಳಿಯಿತು. ಇದೇ ವೈರಸ್ ಬೇರೆ ದೇಶಗಳಲ್ಲೂ ಏಕಕಾಲಕ್ಕೆ ಕಾಣಿಸಿಕೊಂಡಿತು. ಈ ವೈರಸ್‌, 2ರಿಂದ 14 ದಿನಗಳಲ್ಲಿ ಮನುಷ್ಯನ ದೇಹವನ್ನು ಆಕ್ರಮಿಸಿಕೊಳ್ಳುತ್ತದೆ.

ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ವುಹಾನ್ ನಗರವು ಚೀನಾ ದೇಶದ ಮಹಾನಗರಗಳಿಗೆ ಸಂಪರ್ಕ ಹೊಂದಿದೆ. ಲಂಡನ್, ಪ್ಯಾರಿಸ್, ರೋಮ್ ಮುಂತಾದ ಮಹಾನಗರಗಳಿಗೂ ವಿಮಾನ ಸಂಪರ್ಕವನ್ನು ಹೊಂದಿದೆ. ಹೂಬೈ ಪ್ರಾಂತ್ಯದ ವ್ಯಾಪ್ತಿಗೆ ಒಳಪಡುವ ವುಹಾನ್‌ ನಗರವನ್ನು ಜನವರಿ 23ರಿಂದ ಸಂಪೂರ್ಣವಾಗಿ ನಿಗಾದಲ್ಲಿ ಇಡಲಾಗಿದೆ. ವುಹಾನ್‌ ಮಾತ್ರವಲ್ಲದೆ ಈ ಪ್ರಾಂತ್ಯದ 15 ನಗರಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ. ಚೀನಾ ಕಡೆಗೆ ಹೋಗಿ ಬರುವ ಅನೇಕ ದೇಶಗಳ ವಿಮಾನಗಳನ್ನು ರದ್ದು ಮಾಡಲಾಗಿದೆ. ಹಾಂಗ್‍ಕಾಂಗ್‍ನಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಿಸಲಾಗಿದೆ. ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಚೀನಾದಿಂದ ಹೊರಕ್ಕೆ ಮತ್ತು ಒಳಕ್ಕೆ ಬಂದು ಹೋಗುವವರನ್ನು ವಿಮಾನ ನಿಲ್ದಾಣಗಳಲ್ಲಿ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ವೈರಸ್‌ ನಿಯಂತ್ರಣದಲ್ಲಿ ನೆರವಾಗುವಂತೆ ಕೊನೆಗೂ ಚೀನಾವು ಯುರೋಪ್ ಒಕ್ಕೂಟದ ದೇಶಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯನ್ನು ಕೋರಿದೆ.

ಕೊರೊನಾ ವೈರಸ್‌ನ ಮೂರು ಪ್ರಕರಣಗಳು ಕೇರಳದಲ್ಲಿ ಬೆಳಕಿಗೆ ಬಂದಿರುವುದರಿಂದ,
ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಈಗ ‘ಜಗತ್ತು ಒಂದು ಗ್ರಾಮ’ದಂತೆ ಎಂಬ ಮಾತು ಬರೀ ವ್ಯಾಪಾರ– ವ್ಯವಹಾರಗಳಿಗಷ್ಟೇ ಸೀಮಿತವಾಗದೆ, ಸೋಂಕು ಹರಡುವಿಕೆಗೂ ಅನ್ವಯ ಆಗುತ್ತಿರುವುದರಿಂದ, ಈ ಸೋಂಕು ಹರಡದಂತೆ ತೀವ್ರ ನಿಗಾ ವಹಿಸಬೇಕಾದ ಸವಾಲು ಈಗ ಜಗತ್ತಿನ ಮುಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು