ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮನದುಂಬುವ ಮಡಿಲಿಗೆ ನಾನಾ ಮಗ್ಗುಲು: ಮನೆಯ ಮಹತ್ವ ಈಗ ಅರ್ಥವಾಯಿತು

ನಮ್ಮ ‘ಮನೆ’ಯ ಮಹತ್ವ ನಮಗೀಗ ಮನದಟ್ಟಾಗುತ್ತಿದೆ!
Last Updated 12 ಮೇ 2020, 1:10 IST
ಅಕ್ಷರ ಗಾತ್ರ

‘ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ’ ಎನ್ನುವುದು ಕೋವಿಡ್-19 ಬಿಕ್ಕಟ್ಟಿನ ಈ ದಿನಮಾನಗಳಲ್ಲಿ ಮೂಲಮಂತ್ರವಾಗಿದೆ. ಮನೆಗಳಲ್ಲಿ ಬಂದಿಯಾಗಿರುವವರ ಅನುಭವ ಒಂದು ಬಗೆಯದಾದರೆ, ಮನೆ ಸೇರಬೇಕೆನ್ನುವ ವಲಸೆ ಕಾರ್ಮಿಕರ ಅತೀವ ಹಂಬಲ ಇನ್ನೊಂದು ತರಹದ್ದು. ಒಟ್ಟಾರೆಯಾಗಿ ಸಂಕಷ್ಟದ ಈ ಕಾಲದಲ್ಲಿ ‘ಮನೆ’ ಎಂಬ ಪರಿಕಲ್ಪನೆ ನಮ್ಮ ಸಾಮೂಹಿಕ ಮನಸ್ಸನ್ನು ಆವರಿಸಿದೆ. ಮನೆ ಎನ್ನುವುದರ ಅರ್ಥವೇನು, ಅದರ ತಾತ್ವಿಕ ನೆಲೆಗಳಾವುವು ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳುವಂತೆ ಮಾಡಿದೆ.

ಹೊರಹೋಗಿ ದುಡಿಯುತ್ತಿದ್ದ ಗಂಡಸರಿಗೆ, ಮನೆಯಲ್ಲಿ ಕಸ ಗುಡಿಸುವ, ಪಾತ್ರೆ ತೊಳೆಯುವ, ನೆಲ ಒರೆಸುವಂತಹ ಸಂಗತಿಗಳ ಮಹತ್ವವಷ್ಟೇ ಅಲ್ಲ, ಅವು ಒದಗಿಸುವ ಖುಷಿ, ಶಿಸ್ತು, ಮಾನಸಿಕ ನೆಮ್ಮದಿಯೂ ಅನುಭವಕ್ಕೆ ಬರುತ್ತಿದೆ. ನಾವು ಹೀಗೆ ಮನೆಯಲ್ಲಿ ಬಂದಿಯಾಗಿರುವುದು ಜೈಲುವಾಸದ ಅನುಭವ ಹೇಗಿರಬಹುದೆಂದು ಊಹಿಸಿಕೊಳ್ಳುವಂತೆ ಮಾಡಿದೆ. ‘ಕೌಟುಂಬಿಕ ಹಿಂಸೆ’ ಎಂಬ ಮನೆಯ ಇನ್ನೊಂದು ಮಗ್ಗುಲು ಕೂಡಾ ನಮ್ಮ ಅನುಭವಕ್ಕೆ ಬರುತ್ತಿದೆ.

ಕೊರೊನಾಪೂರ್ವ ಜಗತ್ತಿನಲ್ಲಿ ನಮ್ಮ ಊರುಗಳನ್ನು ಬಿಟ್ಟು ಮಹಾನಗರಗಳನ್ನು ಸೇರುವ ಉತ್ಕಟ ಬಯಕೆ ನಮ್ಮಲ್ಲಿತ್ತು. ‘ಕೆಟ್ಟು ಪಟ್ಟಣ ಸೇರು’ ಎಂಬಂತೆ ಸಿರಿತನ ಹುಡುಕಿಕೊಂಡು ನಗರಗಳತ್ತ ಮುಖ ಮಾಡುವುದು ಸಾಮಾನ್ಯವಾಗಿತ್ತು. ಇನ್ನು ಅಮೆರಿಕಕ್ಕೆ ಹೋಗಿ, ಶ್ರೀಮಂತ ಬದುಕನ್ನು ಕಟ್ಟಿಕೊಳ್ಳುವ ಕನಸು ಜನ್ಮಸಿದ್ಧ ಹಕ್ಕು ಎಂಬಂತಾಗಿತ್ತು. ಈ ಬದುಕಿನ ವಿನ್ಯಾಸ ಹೇಗಿತ್ತೆಂದರೆ, ಹಳ್ಳಿಗಳು ದಿಲ್ಲಿ ಕಡೆ ಮುಖ ಮಾಡಿದರೆ, ಇಡೀ ದೇಶವು ಪಶ್ಚಿಮ ಜಗತ್ತಿನತ್ತ ಮುಖ ಮಾಡಿತ್ತು. ಒಟ್ಟಾರೆ ಜೀವನದ ಗತಿಯು ‘ಮನೆ’ ಬಿಟ್ಟು ‘ಮನೆ’ ಅಲ್ಲದ ಕಡೆ ಮನಸ್ಸು ಮಾಡಿತ್ತು! ಆದರೆ ಕೊರೊನಾ ಈ ವಿನ್ಯಾಸವನ್ನು ಅದಲು ಬದಲು ಮಾಡುತ್ತಿದೆ.

ವಿದೇಶಗಳಲ್ಲಿರುವ ಲಕ್ಷಾಂತರ ಭಾರತೀಯರನ್ನು ಹೊತ್ತ ವಿಮಾನಗಳು, ಹಡಗುಗಳು ತಾಯ್ನಾಡಿಗೆ ಮರಳುತ್ತಿವೆ. ಇವರಲ್ಲಿ ವಿದ್ಯಾರ್ಥಿಗಳಿದ್ದಾರೆ, ಪ್ರವಾಸ ತೆರಳಿದ್ದವರಿದ್ದಾರೆ ಹಾಗೂ ಕೆಲಸವನ್ನು ಅರಸಿ ಹೋದವರು ಇದ್ದಾರೆ. ಇದನ್ನು ಮನುಕುಲದ ಮಹಾ ಸ್ಥಳಾಂತರೀಕರಣ ಎಂದು ಬಣ್ಣಿಸಲಾಗಿದೆ. ಈ ವಿದ್ಯಮಾನ ಏನನ್ನು ಸೂಚಿಸುತ್ತದೆ?

ಉದ್ವಿಗ್ನ ಕಾಲದಲ್ಲಿ ಮನೆಯೇ ಮಂತ್ರಾಲಯ. ಹೀಗೆ ಮನೆ ಎಂಬುದು ವಿಶಾಲವಾದ ಅರ್ಥದಲ್ಲಿ ‘ತಾಯ್ನಾಡು’. ಬ್ರಿಟಿಷರನ್ನು ಅವರ ಮನೆಗೆ ಕಳಿಸಿ, ನಾವು ಸ್ವಾತಂತ್ರ್ಯ ಗಿಟ್ಟಿಸಿಕೊಂಡಿದ್ದರ ಅರ್ಥ, ನಾವು ನಮ್ಮ ಮನೆಯನ್ನು ಕಟ್ಟಿಕೊಳ್ಳುವುದು ಎಂದಾಗಿತ್ತು. ನಮ್ಮ ಮನೆ ಎಂದರೆ ನಮಗೆ ಸ್ವಾತಂತ್ರ್ಯ, ನಮ್ಮ ಮನಸ್ಸಿಗೆ ಮುಕ್ತ ವಾತಾವರಣವನ್ನು ತಂದುಕೊಡುವ ಜಾಗ.

ನಾನು ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಜೊತೆಗಿದ್ದ ನನ್ನ ಅನಕ್ಷರಸ್ಥ ತಾಯಿ, ‘ಈ ದೇಶ ಬೇಡ, ನಮ್ಮ ಊರಿಗೆ ಹೋಗೋಣ’ ಎನ್ನುತ್ತಿದ್ದರು. ಇಂಗ್ಲಿಷ್‌ ಶಿಕ್ಷಣ ಪಡೆದ ನಾನು ಅವರ ಸಾಮಾನ್ಯ ಜ್ಞಾನದ ಕೊರತೆಯನ್ನು ತಿದ್ದಲು ‘ಇದೂ ನಮ್ಮ ದೇಶವೆ’ ಎಂದು ಹೇಳುತ್ತಿದ್ದೆ. ಈಗ ಗೊತ್ತಾಗುತ್ತಿದೆ, ನನ್ನ ತಾಯಿಯ ನುಡಿಗಟ್ಟಿನಲ್ಲಿ, ದೇಶವೆಂದರೆ ನಮ್ಮ ಮನೆಯೇ ಹೊರತು ರಾಷ್ಟ್ರವಲ್ಲ. ಹಾಗಾದರೆ ತಾಯ್ನಾಡು ಎಂದರೆ ತಾಯಿಯ ಮಡಿಲು, ರಾಷ್ಟ್ರವಲ್ಲ!

ರವೀಂದ್ರನಾಥ ಟ್ಯಾಗೋರರ ಕಾದಂಬರಿ ‘ಹೋಮ್ ಅಂಡ್ ದ ವರ್ಲ್ಡ್‌’ ರಾಷ್ಟ್ರೀಯತೆಯನ್ನುಪರಾಮರ್ಶಿಸುತ್ತ, ಮನೆ ಎನ್ನುವ ಪರಿಕಲ್ಪನೆಯ ಮಹತ್ವವನ್ನು ಚಿತ್ರಿಸುತ್ತದೆ. ಟ್ಯಾಗೋರರ ಎಷ್ಟೋ ಬರಹಗಳಲ್ಲಿ ‘ಮನೆ’ ಎನ್ನುವ ಪರಿಕಲ್ಪನೆ ಹಿಗ್ಗುತ್ತಾ ಹೋಗುವುದನ್ನು ಕಾಣಬಹುದು. ಯುಲಿಸಿಸ್ ಮತ್ತು ಸಂಗಡಿಗರು ಮನೆಗಾಗಿ ಹಂಬಲಿಸುವ ಕತೆ ಹೇಳುವ ಹೋಮರನ ‘...ದಿ ಒಡಿಸ್ಸಿ’ಯಾಗಲಿ, ಮನೆ ಬಿಟ್ಟು ವನವಾಸ ಅನುಭವಿಸುವ ಮಹಾಭಾರತ, ರಾಮಾಯಣದ ಕತೆಗಳಾಗಲಿ ಮನೆಗೆ ಮರಳು
ವುದೆಂದರೇನು ಎನ್ನುವ ಅರ್ಥವನ್ನು ನಿರೂಪಿಸುತ್ತವೆ.

ಭರತಖಂಡ ಇಬ್ಭಾಗವಾಗಿ, ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳು ಒಮ್ಮೆಲೇ ಉದ್ಭವವಾದಾಗ, ಸಾವಿರಾರು ಜನ ನಿರಾಶ್ರಿತರಾದರು. ಹಲವು ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ತೊರೆದು ಹೊಸ ರಾಷ್ಟ್ರದಲ್ಲಿ ಮತ್ತೊಂದು ಮನೆ ಕಟ್ಟಿಕೊಳ್ಳುವ ಸಾಹಸ ಹಿಂಸಾತ್ಮಕ ಅನುಭವವಾಗಿತ್ತು. ಈ ಮಾನಸಿಕ ಯಾತನೆಯನ್ನು ದೇಶ ವಿಭಜನೆಯ ಕಥನಗಳು ವಿವರವಾಗಿ ನಿರೂಪಿಸುತ್ತವೆ.

ಇನ್ನು ಲಕ್ಷಾಂತರ ವಲಸೆ ಕಾರ್ಮಿಕರು ಮನೆಗಳಿಗೆ ಹಿಂದಿರುಗುತ್ತಿರುವ ಈಗಿನ ಮಹಾಸಂಗ್ರಾಮವು ‘ಮನೆ’ ಎನ್ನುವುದು ಹೊಟ್ಟೆಪಾಡಿಗಿಂತ ದೊಡ್ಡದೆಂದು ತೋರಿಸುತ್ತದೆ. ಮಹಾನಗರಗಳಿಂದ ನೂರಾರು ಕಿಲೊಮೀಟರುಗಳ ಹಾದಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಊರು ತಲುಪಲು ಹಂಬಲಿಸುವುದು ‘ಮನೆ’ಯ ಮಹತ್ವವನ್ನು ನಮ್ಮ ಪ್ರಜ್ಞೆಗೆ ದಾಟಿಸುತ್ತದೆ. ‘ಊರಲ್ಲಿ ಕೆಲಸವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ’ ಎಂದರೂ ‘ಸಾಯುವುದಾದರೆ ನಮ್ಮೂರಲ್ಲೇ, ನಮ್ಮ ಮನೆಯಲ್ಲೇ’ ಎಂದು ಹೇಳುವ ಕೆಲಸಗಾರರ ಮಾತು ‘ಮನೆ’ಯ ಮಹತ್ವವನ್ನು ಮನದಟ್ಟು ಮಾಡಿಸುತ್ತದೆ.

‘ಫೀಲ್ ಅಟ್‌ ಹೋಮ್’ ಎಂದರೆ ಆರಾಮಾಗಿರು ಎನ್ನುವ ಅರ್ಥವಿದೆ. ಸದ್ಯ ಕೊರೊನಾ ಬಿಕ್ಕಟ್ಟು, ಮನೆಯಿಂದ ದೂರವಿದ್ದು ಪರಕೀಯ ಪ್ರಜ್ಞೆ ಅನುಭವಿಸುವ ಸಂಕಟ ಏನೆಂದು ಅರ್ಥ ಮಾಡಿಸಿದೆ. ಮನೆ ಎಂದರೆ ನೆಮ್ಮದಿ, ಸುಖ, ಸ್ವಾತಂತ್ರ್ಯ, ರಕ್ತಸಂಬಂಧ, ಪಾಲನೆ ಪೋಷಣೆ, ನಮ್ಮತನ... ಎಂಬೆಲ್ಲ ಅರ್ಥಗಳು ಅನುರಣಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT