ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಒತ್ತಡಕ್ಕೆ ಅರಳಿದ ಮೊಗ್ಗುಗಳು

ಕೋವಿಡ್‌ ತಂದೊಡ್ಡಿರುವ ಆರ್ಥಿಕ ಸಂಕಷ್ಟ, ಬಡ ಹೆಣ್ಣುಮಕ್ಕಳ ಬಾಲ್ಯವಿವಾಹಕ್ಕೆ ಕಾರಣವಾಗಿ, ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ
Last Updated 2 ಡಿಸೆಂಬರ್ 2020, 22:15 IST
ಅಕ್ಷರ ಗಾತ್ರ

ಲಾಕ್‍ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡು, ಕೈಯಲ್ಲಿ ಕಾಸಿಲ್ಲದಂತಾದ ಮಹೇಂದರ್ ಪಾಲ್, ಯಾರಲ್ಲೋ ಐದು ಸಾವಿರ ರೂಪಾಯಿ ಕೈಗಡ ಪಡೆದು, ಸೈಕಲ್ ಖರೀದಿಸಿ ಮುಂಬೈ ಮಹಾನಗರದಿಂದ ತನ್ನೂರಿನತ್ತ ಹೊರಟರು. 14 ದಿನಗಳ ಕಾಲ ಸೈಕಲ್ ತುಳಿದುಕೊಂಡು ಉತ್ತರಪ್ರದೇಶದ ‘ಬಸ್ತಿ’ ತಲುಪಿದರು. ಬಳಿಕ, ದೆಹಲಿಯಲ್ಲಿರುವ ನಮ್ಮ ಮನೆಗೆ ಬಣ್ಣ ಬಳಿಯುವ ಕೆಲಸಕ್ಕೆ ಅಕ್ಟೋಬರ್‌ನಲ್ಲಿ ಆತ ಬಂದಾಗ, ಅವರ ಬಾಯಿಂದಲೇ ಅವರ ಈ ವ್ಯಥೆಯ ಕಥೆಯನ್ನು ಕೇಳಿ ಕಣ್ಣುಗಳು ಹನಿಗೂಡಿದ್ದವು.

ಅತ್ತ ಮುಂಬೈಯಲ್ಲಿ ದುಡಿಸಿಕೊಂಡ ಸೇಠ್ ಹಣಕೊಟ್ಟಿರಲಿಲ್ಲ. ದಿಲ್ಲಿಯಲ್ಲಿ ತಿಂಗಳು ದುಡಿದರೂ ಗುತ್ತಿಗೆದಾರ ಹಣ ಕೊಡಲು ಸತಾಯಿಸುತ್ತಿದ್ದ. ಬಣ್ಣ ಬಳಿಯುತ್ತಲೇ ಆತ ಫೋನಿನಲ್ಲಿ ಬೇಡುತ್ತಿದ್ದರು. ಹತಾಶೆಯನ್ನು ಜೋರುದನಿಯಲ್ಲಿ ಹೊರಹಾಕುತ್ತಿದ್ದರು. ಪೇಟಿಎಂ ಮಾಡಲು ಗೋಗರೆಯುತ್ತಿದ್ದರು.

ಊರಲ್ಲಿ ತಂದೆ–ತಾಯಿಯು ಆತನ 15 ವರ್ಷದ ತಂಗಿಯ ಮದುವೆಯನ್ನು ಮಾಡಿ ಮುಗಿಸಿದ್ದರು. ಮದುವೆಯಲ್ಲಿ ವಾಲಗ ಊದಲು ಜನರಿಲ್ಲ, ನೆಂಟರಿಷ್ಟರು ಬರಲಿಲ್ಲವೆಂದು ಉಳ್ಳವರು ಗೋಳಿಟ್ಟರೆ, ಬಡವರ ಕತೆಯೇ ಬೇರೆ. ಭವಿಷ್ಯವೇ ಕತ್ತಲಕೂಪ, ಬೆಳಕಿನ ಭರವಸೆಯಿಲ್ಲ. ಮದುವೆ ಮಾಡಿ ಸಾಗಹಾಕಿದರೆ ತಿನ್ನುವ ಹೊಟ್ಟೆಯೊಂದು ಕಡಿಮೆಯಾಗುತ್ತದೆ. ‘ಮಿಡ್ ಡೇ ಮೀಲ್’ ಆಮಿಷಕ್ಕಾದರೂ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದವರಿಗೆ ಊಟವೂ ಇಲ್ಲ, ಶಾಲೆಯೂ ಇಲ್ಲ ಎಂಬಂತಹ ಸ್ಥಿತಿ.

ನಮ್ಮ ಮನೆಗೆಲಸದ ಸುನೀತಾ, ಉತ್ತರಪ್ರದೇಶದ ಕಾಸಗಂಜ್‍ಗೆ ಹೋಗಿ, 14 ವರ್ಷದ ಮಗಳು ಅಲಕಾಳ ಮದುವೆ ಮಾಡಿ ಮುಗಿಸಿದ್ದರು. ಸಂತೆಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಕುಡುಕ ಗಂಡ ಕೆಲಸವಿಲ್ಲದೇ ಕುಳಿತ, ಮಗನೂ ನಿರುದ್ಯೋಗಿ. ಇಬ್ಬರನ್ನೂ ಸಾಕುತ್ತಿರುವ ಆಕೆಗೆ ಮಗಳು ಒಬ್ಬ ಹುಡುಗನನ್ನು ಪ್ರೇಮಿಸುತ್ತಿದ್ದಾಳೆ ಎಂದು ಗೊತ್ತಾಗಿತ್ತು. ದಿನನಿತ್ಯವೂ ಕೇಳುವ ಅತ್ಯಾಚಾರಗಳ ಬಗ್ಗೆ ಅರಿವಿದ್ದ ಆಕೆ, ಮಗಳು ಪ್ರೇಮಿಸಿದವನೊಂದಿಗೆ ಸುಖವಾಗಿ ಬಾಳಲಿ ಎಂದು ಯೋಚಿಸಿದ್ದರೆ ತಪ್ಪಿಲ್ಲ. ಈಗ ಮದುವೆಯಾಗಿ ನಾಲ್ಕು ತಿಂಗಳಷ್ಟೇ ಆಗಿದೆ. ಪ್ರೇಮಿಸಿದವ ದನಕ್ಕೆ ಬಡಿದಂತೆ ಬಡಿಯುತ್ತಾನೆಂದು ಪೋರಿ ತವರಿಗೆ ಬಂದು ಕೂತಿದ್ದಾಳೆ. ಬಸುರಿ ಬೇರೆ.

ಇಂತಹ ಸಂಕಟದ ಕತೆಗಳು ಈ ದೇಶದಲ್ಲಿ ಇನ್ನೂ ಎಷ್ಟಿವೆಯೋ? ಅದೆಷ್ಟು ಹೊಟ್ಟೆಗಳು ಅರೆಹೊಟ್ಟೆ ಉಂಡು ದಿನದೂಡುತ್ತಿವೆಯೋ? ಆದರೆ ಕೋವಿಡ್‌ ಕಾಲದಲ್ಲಿ ನಡೆದಿರುವ ಬಾಲ್ಯವಿವಾಹಗಳ ಸಂಖ್ಯೆ ಮಾತ್ರ ಹೆಚ್ಚು ಆತಂಕ ಹುಟ್ಟಿಸುತ್ತದೆ.

ಜೂನ್‍ನಲ್ಲಿ ಬಿಡುಗಡೆಯಾದ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ವರದಿಯು ಈ ಪದ್ಧತಿಯನ್ನು ಕೊನೆಗೊಳಿಸುವಲ್ಲಿ ಆಗುವ ಸರಾಸರಿ ಒಂದು ವರ್ಷದ ವಿಳಂಬವು ವಿಶ್ವದಾದ್ಯಂತ ಲಕ್ಷಾಂತರ ಬಾಲ್ಯವಿವಾಹಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಅದಲ್ಲದೆ ಕೋವಿಡ್ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಕುಸಿತವು 2020 ಮತ್ತು 2030ರ ನಡುವೆ ಹೆಚ್ಚುವರಿಯಾಗಿ ಲಕ್ಷಾಂತರ ಬಾಲ್ಯವಿವಾಹಗಳಿಗೆ ಕಾರಣವಾಗಬಹುದು ಎಂದು ಅಂದಾಜು ಮಾಡಿದೆ.

‘ಸೇವ್ ದಿ ಚಿಲ್ಡ್ರನ್’ ಬ್ರಿಟನ್‌ ಘಟಕದ ಲಿಂಗತ್ವ ನೀತಿ ಸಲಹೆಗಾರರಾದ ಗೇಬ್ರಿಯಲ್ ಸ್ಯಾಬೊ, ಶಾಲೆಗಳ ಮುಚ್ಚುವಿಕೆ, ಆರ್ಥಿಕತೆಯ ಕುಸಿತ ಮತ್ತು ಬಾಲ್ಯವಿವಾಹವು ಮಕ್ಕಳ ಅಭಿವೃದ್ಧಿಯನ್ನು ಕಾಲು ಶತಮಾನದಷ್ಟು ಹಿಂದಕ್ಕೊಯ್ದಿವೆ ಎಂದು ಎಚ್ಚರಿಸಿದ್ದಾರೆ. ಬಾಲ್ಯವಿವಾಹಕ್ಕೆ ಈಡಾಗಬಹುದಾದ ದಕ್ಷಿಣ ಏಷ್ಯಾ ದೇಶಗಳ ಸುಮಾರು ಒಂದು ಕೋಟಿ ಹೆಣ್ಣುಮಕ್ಕಳು ಮತ್ತೆಂದೂ ಶಾಲೆಗೆ ಹಿಂತಿರುಗುವುದಿಲ್ಲ ಮತ್ತು 15-19 ವರ್ಷದೊಳಗಿನ ಹದಿಹರೆಯದ ಬಾಲಕಿಯರು ಗರ್ಭಧಾರಣೆಯ ಅಪಾಯಕ್ಕೆ ಮತ್ತು ಹೆರಿಗೆಯ ಸಾವಿಗೂ ಬಲಿಯಾಗಬಹುದು ಎಂದು ಸೇವ್ ದಿ ಚಿಲ್ಡ್ರನ್ ಅಂದಾಜಿಸಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಕಾರ, ಮಾರ್ಚ್‌ನಿಂದ ಜೂನ್ ‍ನಡುವೆ 5,584 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರದ ಕಬ್ಬಿನ ಗದ್ದೆಗಳಲ್ಲಿ ದುಡಿಯುವ ವಲಸೆಗಾರರಲ್ಲಿ ಬಾಲ್ಯವಿವಾಹಗಳು ಗುಟ್ಟಾಗಿ ನಡೆದ ಪ್ರಕರಣಗಳು ಬೆಳಕಿಗೆ ಬಂದಿವೆ.

ಬಾಲ್ಯವಿವಾಹ ನಿಷೇಧ ಕಾನೂನನ್ನು ಸರ್ಕಾರಗಳು ಇನ್ನಷ್ಟು ಬಿಗಿಗೊಳಿಸಬೇಕು. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಶಾಲೆಗಳನ್ನು ಮರುಪ್ರಾರಂಭಿಸುವ, ಬಾಲಕಿಯರು ಆರ್ಥಿಕವಾಗಿ ಸ್ವತಂತ್ರರಾಗುವ ಕೌಶಲ ತರಬೇತಿ ಕಲ್ಪಿಸುವ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ರೂಪಿಸಬೇಕು.

ಇದನ್ನೆಲ್ಲ ಬರೆಯುವಾಗ, ಗಂಡಾಳಿಕೆಯನ್ನು ತಿವಿದು ಪ್ರಶ್ನಿಸುವ ಆದಿವಾಸಿ ಕವಯತ್ರಿ ನಿರ್ಮಲಾ ಪುತುಲ್ ಅವರ ಕವಿತೆಯೊಂದರ ಸಾಲುಗಳು ನೆನಪಾಗುತ್ತವೆ: ‘ಅಪ್ಪಾ, ನನ್ನನ್ನು ನೋಡುವಾಸೆಗೆ ನೀನು ಕುರಿಗಳನ್ನು ಮಾರಿ ಬರುವಷ್ಟು ದೂರದೂರಿಗೆ ಲಗ್ನ ಮಾಡಿ ಕೊಡಬೇಡಪ್ಪಾ! ಆನಂತರ ಬದಲಿಸಲು ಅದೇನು ತಟ್ಟೆ, ಲೋಟವೇ? ನಾನೆಂದರೆ ಏನು? ನಿನಗೆ ಆಯಾಸವಾದಾಗ ತಲೆಯಿಟ್ಟು ಮಲಗುವ ತಲೆದಿಂಬೇ? ನಿನ್ನ ಅಂಗಿಯನ್ನು ನೇತುಹಾಕುವ ಗೂಟ, ಬಟ್ಟೆಗಳನ್ನು ಪೇರಿಸಿಡುವ ಕೋಲು, ಬೆಳಿಗ್ಗೆ ಹೋಗಿ ಸಂಜೆ ಸೇರುವ ಮನೆ ಅಥವಾ ಮೂಕ ಗೋಡೆ ಅಥವಾ ನಿನಗೆ ಬೇಕಾದಾಗ ಬೀಸಿ ಒಗೆಯುವ ಚೆಂಡು ಅಥವಾ ಹಾಸಿ ಹೊದೆಯುವ ಚಾದರ್!’

ಬಹುಶಃ ಇಂತಹ ಸಂಕಟಗಳನ್ನು ಕೇಳುತ್ತಲೇ ಇದ್ದೇವೆ, ನಾವೆಲ್ಲ ಈಗಲೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT