ಗುರುವಾರ , ಜೂನ್ 4, 2020
27 °C

ಸೋಂಕಿನ ಭೀತಿ ಮತ್ತು ಸ್ವಸ್ಥ ಮನಸ್ಸು

ಡಾ. ಕೆ.ಎಸ್. ಪವಿತ್ರ Updated:

ಅಕ್ಷರ ಗಾತ್ರ : | |

Prajavani

ಕೊರೊನಾ–2 ಸೋಂಕು ಎಲ್ಲೆಡೆ ಹರಡುತ್ತಿರುವುದರ ಹಿನ್ನೆಲೆಯಲ್ಲಿ ಭಯ- ಆತಂಕಗಳ ‘ಪಿಡುಗು’ ಎಲ್ಲರನ್ನೂ ಆವರಿಸುತ್ತಿದೆ. ವಿವಿಧ ಕಾರಣಗಳಿಗಾಗಿ ಅಲ್ಲಲ್ಲಿ ಆತ್ಮಹತ್ಯೆಗಳು ವರದಿಯಾಗುತ್ತಿವೆ. ರೋಗದ ಭಯ, ಸಾವಿನ ಭೀತಿ, ಎದುರಿಸಬೇಕಾದ ಕಷ್ಟಗಳು ಇವೆಲ್ಲವೂ ಸೇರಿ– ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದರೂ– ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಸವಾಲುಗಳನ್ನು ವೈದ್ಯಕೀಯ ಕ್ಷೇತ್ರದ ಮುಂದೆ ತಂದಿಡುವುದು ನಿಶ್ಚಿತ.

ಪಕ್ಕದ ಕೇರಳದಲ್ಲಿ ಈಗಾಗಲೇ ಮದ್ಯದ ‘ಪ್ರಿಸ್ಕ್ರಿಪ್ಷನ್’ ಆರಂಭವಾಗಿದೆ! ಅಲ್ಲಿಯ ರಾಜ್ಯ ಮನೋವೈದ್ಯಕೀಯ ಸಂಘ ತಾನು ಸಹಾಯವಾಣಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಿಕೊಡುವುದಾಗಿ, ತತ್‍ಕ್ಷಣದ ಚಿಕಿತ್ಸೆ ಕೊಡುವ ತರಬೇತಿಯನ್ನು ಎಲ್ಲಾ ವೈದ್ಯರಿಗೆ ಕೊಡುವ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದೆ. ನಮ್ಮ ರಾಜ್ಯದಲ್ಲಿಯೂ ಅಲ್ಲಲ್ಲಿ ಮದ್ಯದ ಬಗೆಗಿನ ತುಡಿತ ತಡೆಯಲಾರದೆ ಖಿನ್ನತೆಗೆ ಒಳಗಾಗುತ್ತಿರುವುದು ವರದಿಯಾಗಿದೆ.

ಮದ್ಯ ಒದಗಿಸಿ, ಅಂಥವರನ್ನು ಉಳಿಸಬೇಕೆನ್ನುವ ಮಾತುಗಳು ನಮ್ಮಲ್ಲೂ ವ್ಯಕ್ತವಾಗುತ್ತಿವೆ. ಇಂಥ ಸಂದರ್ಭಗಳಲ್ಲಿ ಮನೋವೈದ್ಯಕೀಯವನ್ನು ‘ವೈದ್ಯಕೀಯ’ ಎಂಬ ವಿಜ್ಞಾನವಾಗಿ ಪರಿಗಣಿಸಿ, ಹೆಚ್ಚು ಹೆಚ್ಚು ಸಹಾಯವಾಣಿಗಳನ್ನು ಆರಂಭಿಸಿ, ಪರಿಣತರೊಡನೆ ಸಲಹೆ ಪಡೆದು ಕ್ರಮ ಕೈಗೊಳ್ಳುವುದು ಹೆಚ್ಚು ಸಮಂಜಸ ಎನಿಸುತ್ತದೆ.

ಇವು ಮದ್ಯವ್ಯಸನದಂತಹ ಮಾದಕದ್ರವ್ಯಗಳಿಗೆ ಸಂಬಂಧಿಸಿದ ಮಾತಾದರೆ, ಇನ್ನುಳಿದವು ನಮ್ಮೆಲ್ಲರಲ್ಲೂ ಕಂಡುಬರುತ್ತಿರುವ ಒಂದು ರೀತಿಯ ‘ತೊಳಲಾಟ’ದ ಮನಃಸ್ಥಿತಿ. ಯಾರಿಗೂ ಯಾವುದರ ಬಗೆಗೂ ನಿರ್ದಿಷ್ಟ ಮಾಹಿತಿಯಿಲ್ಲ. ಕೊರೊನಾಕ್ಕೆ ಹೆದರಿದರೂ ಮನೆಯೊಳಗಿರಲು ನಮಗೆ ಮನಸ್ಸಿಲ್ಲ! ಪೊಲೀಸರ ಹೊಡೆತಕ್ಕೆ ಹೆದರಿ ಹೊರಗೆ ಹೋಗದಿರಬಹುದೇ ಹೊರತು, ನಮಗೆ, ಇತರರಿಗೆ ಬಂದೆರಗಬಹುದಾದ ಕಾಯಿಲೆಗೆ ಹೆದರದಿರುವ ಭಂಡ ಧೈರ್ಯ ನಮ್ಮದು! ಇಂಥ ಸಂದರ್ಭದಲ್ಲಿಯೂ ನಾವು ಕೆಲವು ಮನೋವೈಜ್ಞಾನಿಕ ಸಲಹೆಗಳನ್ನು ಪಾಲಿಸಿ ಮನೆಯಲ್ಲೇ ‘ಗುಣಮಟ್ಟ’ದ ಕಾಲ ಕಳೆಯುವುದು ಮುಖ್ಯವಾಗುತ್ತದೆ.

ಮನೋರೋಗಗಳಿಂದ ಈಗಾಗಲೇ ನರಳುತ್ತಿರುವ ವ್ಯಕ್ತಿಗಳ ಮೇಲೆ ಕೊರೊನಾ ಪರಿಣಾಮವು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಜಗತ್ತಿನಾದ್ಯಂತ ಮನೋವೈದ್ಯರು ಗಾಬರಿಗೀಡಾಗಿದ್ದಾರೆ. ಔಷಧಿಗಳು ಎಲ್ಲೆಡೆ ಸಿಕ್ಕುತ್ತಿಲ್ಲ. ‘ಟೆಲಿಮೆಡಿಸಿನ್’ಗೆ ಇನ್ನೂ ನಮ್ಮ ಜನ ಪೂರ್ತಿ ತಯಾರಾಗಿಲ್ಲ. ಮನೋವೈದ್ಯಕೀಯ ಚಿಕಿತ್ಸಾಲಯಗಳನ್ನೂ ಒಳಗೊಂಡಂತೆ ಎಲ್ಲ ಆಸ್ಪತ್ರೆಗಳನ್ನು ಕಡ್ಡಾಯವಾಗಿ ತೆರೆಯಬೇಕೆಂದು ಸರ್ಕಾರವೇನೋ ಆದೇಶಿಸಿದೆ. ಆದರೆ ‘ಸೋಂಕಿನ ಭಯದಿಂದ ಪ್ರತಿಯೊಬ್ಬ ರೋಗಿಯ ಜೊತೆ ಒಬ್ಬರು ಮಾತ್ರ ಬರಬೇಕು, ಇಷ್ಟೇ ದೂರ ನಿಲ್ಲಬೇಕು, ಇಷ್ಟು ಅಂತರವಿರಬೇಕು’ ಎಂಬೆಲ್ಲ ಸುರಕ್ಷಾ ಕ್ರಮಗಳನ್ನು ಕಾಯ್ದುಕೊಂಡು, ವೈದ್ಯರು ತಾವೂ ಅದನ್ನು ಪಾಲಿಸಿ ಚಿಕಿತ್ಸೆ ನೀಡುವುದು ಸುಲಭವಲ್ಲ.

ಮನೋರೋಗಗಳು ಮೇಲ್ನೋಟಕ್ಕೆ ‘ತುರ್ತುಪರಿಸ್ಥಿತಿ’ ಎನಿಸಲಿಕ್ಕಿಲ್ಲ. ಆದರೆ ಅವು ತರಬಹುದಾದ ಅಪಾರ ನೋವು, ದೀರ್ಘಕಾಲಿಕ ಸಮಸ್ಯೆಗಳು ಗಮನಾರ್ಹ. ಹಾಗಾಗಿಯೇ ನಿಮ್ಹಾನ್ಸ್ ಸಂಸ್ಥೆಯು ಬಾಣಂತಿಯರ ಮಾನಸಿಕ ಆರೋಗ್ಯ ಸಹಾಯವಾಣಿ, ಕೋವಿಡ್-19 ಮಾನಸಿಕ ಆರೋಗ್ಯ ಸಮಸ್ಯೆಗಳ ಸಹಾಯವಾಣಿಗಳನ್ನು ಆರಂಭಿಸಿ ನಿರಂತರವಾಗಿ ಕಾರ್ಯನಿರತವಾಗಿದೆ. ಮನೋವೈದ್ಯಕೀಯ ಸಂಸ್ಥೆಗಳು, ವಿವಿಧ ಮನೋವೈದ್ಯರು ತಮ್ಮ ನೆಲೆಯಲ್ಲಿ ವೈಯಕ್ತಿಕವಾಗಿ, ಸಂಘಟನೆಯ ಮುಖಾಂತರ, ಪ್ರಸ್ತುತ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ಸಮಸ್ಯೆಗಳನ್ನು ಎದುರಿಸುವವರಿಗೆ ಸಹಾಯಹಸ್ತ ನೀಡುತ್ತಿದ್ದಾರೆ.

ಸಮಾಜದ ಎಲ್ಲರಿಗೂ ಇಂತಹ ಸಮಯದಲ್ಲಿ ಬೇಕಾದ ಮನೋವೈಜ್ಞಾನಿಕ ಪ್ರಥಮ ಚಿಕಿತ್ಸೆಯ ಕುರಿತು ನಮ್ಮ ಆಡಳಿತ ವ್ಯವಸ್ಥೆ ಗಂಭೀರವಾಗಿ ಯೋಚಿಸಬೇಕಿದೆ. ವೈದ್ಯರ ವಾಟ್ಸ್ಆ್ಯಪ್ ಗುಂಪುಗಳಲ್ಲಿ ಬರುತ್ತಿರುವ ಮಾಹಿತಿ, ವೈದ್ಯರು ಇತರ ದೇಶಗಳಲ್ಲಿರುವ (ವಿಶೇಷವಾಗಿ ಅಮೆರಿಕ ಮತ್ತು ಇಂಗ್ಲೆಂಡ್) ವೈದ್ಯಮಿತ್ರರಿಂದ ತಿಳಿಯುತ್ತಿರುವ ಪ್ರತಿದಿನದ ಮಾಹಿತಿ, ಯಾವ ಇತರ ಕಾಯಿಲೆಗಳಿಗೂ (ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಇತ್ಯಾದಿ) ಚಿಕಿತ್ಸೆಯ ಅವಕಾಶವಿಲ್ಲದಂತೆ ವೈದ್ಯರು ಕೊರೊನಾ ಬಗ್ಗೆ ಶ್ರಮಿಸಬೇಕಾದ ಪರಿಸ್ಥಿತಿ ತಂದೊಡ್ಡಿದೆ.

ಮನೋವೈದ್ಯಕೀಯ ಸಮಸ್ಯೆಗಳಂತೂ ಕೊರೊನಾ ಪರ್ವ ಮುಗಿದ ನಂತರ ಮತ್ತಷ್ಟು ದೀರ್ಘಕಾಲ ಇಡೀ ಸಮಾಜವನ್ನು ಕಾಡಲಿವೆ. ಮನೋವೈದ್ಯರ ಮೇಲೆ ಈಗಾಗಲೇ ಇರುವ ಹೊರೆ ಹೆಚ್ಚಿಸಲಿವೆ. ಖಿನ್ನತೆ- ಆತಂಕ ಹೆಚ್ಚಳ, ದೀರ್ಘ ರಜೆಯ ಹೆಚ್ಚಳದಿಂದ ಕೆಲ ಜನರಲ್ಲಿ ಏರಬಹುದಾದ ವ್ಯಸನಗಳು, ನರಳುವ ಆರ್ಥಿಕತೆಯ ಪರಿಣಾಮಕ್ಕೆ ಪ್ರತಿಕ್ರಿಯೆಯಾಗಿ ಹೆಚ್ಚುವ ಖಿನ್ನತೆ, ಆತ್ಮಹತ್ಯೆಗಳು, ಮಕ್ಕಳಲ್ಲಿ ವಿವಿಧ ರೀತಿಯ ಸಮಸ್ಯೆಗಳು... ಇವು ಕೆಲವಷ್ಟೆ.

ಮನೋವೈದ್ಯಕೀಯ ವಿಜ್ಞಾನವನ್ನು ಒಂದು ‘ಚಿಕಿತ್ಸಾ’ ವಿಜ್ಞಾನವಾಗಿ ನೋಡುವುದೇ ರೂಢಿ. ಅಂದರೆ ಮಾನಸಿಕ ಕಾಯಿಲೆ ಬಂದು, ಅದು ಇನ್ನಾವ ರೀತಿಯಲ್ಲೂ ಕಡಿಮೆಯಾಗದಿದ್ದಾಗ ಮನೋವೈದ್ಯಕೀಯದ ನೆರವು ಪಡೆಯಲು ನಾವು ಓಡುತ್ತೇವೆ. ಆದರೆ ಅದನ್ನು ಸಮಾಜ- ಆಡಳಿತ ವ್ಯವಸ್ಥೆ ನೋಡಬೇಕಿರುವುದು ಒಂದು ‘ಅಪಾಯ ತಡೆಯುವ’ ತಂತ್ರವಾಗಿ. ಮನೋವೈದ್ಯಕೀಯ ಜಗತ್ತಿನೊಂದಿಗೆ ಇಡೀ ಸಮಾಜ ಮತ್ತು ಆಡಳಿತ ವ್ಯವಸ್ಥೆಯು ದೇಶದಲ್ಲಿ ‘ಸ್ವಸ್ಥ’ ಮನಸ್ಸುಗಳನ್ನು ಉಳಿಸಲು ಶ್ರಮಿಸಲೇಬೇಕಾಗಿದೆ.

ಲೇಖಕಿ: ಮನೋವೈದ್ಯೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು