ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕೋವಿಡ್ ಸವಾಲು, ವೃದ್ಧಾಪ್ಯದ ಜವಾಬು

ಹಿರಿಯ ನಾಗರಿಕರನ್ನು ಕೊರೊನಾಗಿಂತ ಹೆಚ್ಚಾಗಿ ಕಾಡುತ್ತಿರುವುದು ಏಕಾಕಿತನ
Last Updated 27 ನವೆಂಬರ್ 2020, 19:46 IST
ಅಕ್ಷರ ಗಾತ್ರ
ADVERTISEMENT
""

ಕನ್ನಡದ ಹಿರಿಯ ಪೋಷಕ ನಟರೊಬ್ಬರು ಕೆಲವು ದಿವಸಗಳ ಹಿಂದೆ ವಿಧಿವಶರಾದಾಗ, ದುಃಖತಪ್ತರಾದ ಅವರ ಬಂಧುವೊಬ್ಬರು ಅವರ ಸಾವಿನ ಕಾರಣವನ್ನು ಹೀಗೆ ವಿಶ್ಲೇಷಿಸಿದ್ದರು: ಅವರು ಕೋವಿಡ್‌ನಿಂದ ತೀರಿಕೊಂಡಿದ್ದಲ್ಲ, ಕೋವಿಡ್ ತಂದಿಟ್ಟ ಒತ್ತಡ ಅವರ ಸಾವಿಗೆ ಕಾರಣವಾಯಿತು. ಜನರೊಂದಿಗೆ ನಿರಂತರವಾಗಿ ಒಡನಾಡುತ್ತಿದ್ದವರು ಇದ್ದಕ್ಕಿದ್ದಂತೆ ಮನೆಯೊಳಗೆ ಇರಬೇಕಾದಾಗ ಒಂಟಿತನವು ಒತ್ತಡ ಸೃಷ್ಟಿಸುವುದು ಸಹಜ. ಆ ಒಂಟಿತನವೇ ಅವರ ಸಾವಿಗೆ ಕಾರಣವಿರಬಹುದು.

ಕೊರೊನಾ ಸೋಂಕು ವಯಸ್ಸಾದವರಿಗೆ ಬಹು ಸುಲಭವಾಗಿ ತಗಲುವುದರಿಂದ ಅವರನ್ನು ಅತಿಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳತಕ್ಕದ್ದು, ಅವರು ಕಡ್ಡಾಯವಾಗಿ ಅಂತರ ಪಾಲಿಸತಕ್ಕದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಕೊರೊನಾ ಉಂಟು ಮಾಡಿರುವ ಸಾಮಾಜಿಕ ಬಿಕ್ಕಟ್ಟಿನ ಅಡ್ಡಪರಿಣಾಮಗಳನ್ನು ಹೆಚ್ಚಾಗಿ ಅನುಭವಿಸುತ್ತಿರುವವರು ಹಿರಿಯ ನಾಗರಿಕರೇ ಆಗಿದ್ದಾರೆ.

ಮಕ್ಕಳಿಗೇನೋ ಆನ್‌ಲೈನ್ ತರಗತಿ, ಟಿ.ವಿ. ಮೂಲಕ ತರಗತಿಗಳು ನಡೆಯುತ್ತವೆ, ಇನ್ನು ದೊಡ್ಡವರಿಗೂ ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದೆ. ಮನೆಯೊಳಗೆ ಇದ್ದುಕೊಂಡೇ ಕೆಲಸ ಮಾಡಲಾರದ ವ್ಯಾಪಾರಿಗಳು, ಉದ್ಯಮಿಗಳಿಗೆ ಮನೆಯಿಂದ ಹೊರಹೋಗಿ ದುಡಿಯಲು ಸರ್ಕಾರ ಸಹ ಕೆಲವು ಷರತ್ತು, ಮುಂಜಾಗರೂಕತೆಗಳ ಮೇರೆಗೆ ಅವಕಾಶ ಮಾಡಿಕೊಟ್ಟಿದೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ಅಬಾಧಿತವಾಗಿ ಮುಂದುವರಿಸುವ ಅವಕಾಶದಿಂದ ಪೂರ್ತಿಯಾಗಿ ವಂಚಿತರಾಗಿರುವವರು ಪ್ರಾಯಶಃ ವಯೋವೃದ್ಧರೇ ಎನಿಸುತ್ತದೆ.

ಹಿಂದೊಮ್ಮೆ ಪೂರ್ಣಚಂದ್ರ ತೇಜಸ್ವಿಯವರು ‘ನನಗೆ ಕಾಲ ಕಳೆಯುವುದು ಹೇಗೆ ಎಂಬ ಚಿಂತೆಗಿಂತಲೂ ಕಾಲ ಇಷ್ಟು ಬೇಗನೆ ಕಳೆದು ಹೋಗುತ್ತಿದೆಯಲ್ಲ ಎಂಬ ಚಿಂತೆಯೇ ಹೆಚ್ಚಾಗಿ ಕಾಡುತ್ತಿದೆ’ ಎಂದಿದ್ದರು. ಆದರೆ ಸಾಮಾನ್ಯ ಜನರಿಗೆ ತೇಜಸ್ವಿಯವರಂತೆ ವೈವಿಧ್ಯಮಯ ಆಸಕ್ತಿ, ಪರಿಶ್ರಮಗಳಿರಲು ಸಾಧ್ಯವೇ? ಒಂದು ವೇಳೆ ಕೊರೊನಾ ನಿರ್ಮಿತ ಬಿಕ್ಕಟ್ಟುಗಳ ಮಧ್ಯೆ ಬದುಕಬೇಕಾಗಿ ಬಂದಿದ್ದರೆ ತೇಜಸ್ವಿ ಸಹ ನಮ್ಮೆಲ್ಲರಂತೆಯೇ ಸಿಡಿಮಿಡಿಗೊಂಡಿರುತ್ತಿದ್ದರೇನೋ. ಕಾಲವನ್ನು ಹೇಗೆ ಕಳೆಯುವುದು ಎಂಬುದು ವೃದ್ಧಾಪ್ಯದ ಬದುಕಿನ ಬಹುಮುಖ್ಯ ತಾತ್ವಿಕ ಪ್ರಶ್ನೆಯೂ ಹೌದು.

ಈ ಕೊರೊನಾ ಕಾಲಮಾನದಲ್ಲಿ ವೃದ್ಧರು ಕಾಲಯಾಪನೆಗಾಗಿ ಸಿನಿಮಾ, ನಾಟಕ, ಗುಡಿ, ಚರ್ಚು, ಮಸೀದಿಗಳಿಗೆ ಭೇಟಿ ನೀಡುವಂತಿಲ್ಲ; ಆರೋಗ್ಯಾರ್ಥವಾಗಿ ಉದ್ಯಾನವನ, ವಾಯುವಿಹಾರಗಳಲ್ಲಿ ವಿಹರಿಸುವಂತಿಲ್ಲ. ಮದುವೆ, ಮುಂಜಿ, ಗೃಹಪ್ರವೇಶದಂತಹ ಸಮಾರಂಭಗಳಲ್ಲಿ ವೃದ್ಧರೇ ಅತ್ಯುತ್ಸಾಹದಿಂದ ಪಾಲ್ಗೊಳ್ಳುವುದು. ಇಂತಹ ವಿಶೇಷ ಸಮಾರಂಭಗಳು ನಿವೃತ್ತಿಯ ನಂತರದ ಸ್ವಾರಸ್ಯಹೀನ ದೈನಂದಿನ ನಿತ್ಯಕ್ರಮದಿಂದ ಅವರಿಗೆ ತಾತ್ಕಾಲಿಕ ಬಿಡುಗಡೆ ನೀಡುತ್ತವೆ. ಆದರೆ ಕೊರೊನಾದಿಂದಾಗಿ ಅಂತಹ ಯಾವುದೇ ಪಾಲ್ಗೊಳ್ಳುವಿಕೆಗೆ ಅವರಿಗೆ ಮೊದಲಿನಂತೆ ಆಸ್ಪದವಾಗುತ್ತಿಲ್ಲ. ಮನೆಯವರನ್ನು ಎದುರು ಹಾಕಿಕೊಂಡು ತಮ್ಮಿಚ್ಛೆಯಂತೆ ಬದುಕಲು, ಅಸಹಾಯಕರಾದ ಅವರಿಗೆ ಸಾಧ್ಯವಾಗುವುದಿಲ್ಲ.

ಇದು ಭಾರತದ ಕಥೆಯಾಯಿತು. ಇನ್ನು ಪಾಶ್ಚಿಮಾತ್ಯ ದೇಶಗಳ ವೃದ್ಧರು ಕೊರೊನಾದ ಈ ಅಡ್ಡಪರಿಣಾಮಗಳಿಂದಾಗಿ ಇನ್ನೂ ದಾರುಣವಾದ ಬದುಕನ್ನು ನಡೆಸುತ್ತಿದ್ದಾರೆ. ವಯಸ್ಸಾದವರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವುದು ಪಾಪಕೃತ್ಯವೆಂದು ಭಾರತದ ಮಧ್ಯಮವರ್ಗದವರು ಭಾವಿಸುತ್ತಾರೆ, ಹಾಗೆ ತಾಯ್ತಂದೆಯರನ್ನು ಶುಶ್ರೂಷಾ ಕೇಂದ್ರಕ್ಕೆ ಕಳುಹಿಸುವವರು ಮನದೊಳಗೆ ಪಾಪಭಾವನೆಯಿಂದ ನರಳುತ್ತಾರೆ. ಆದರೆ ಪಶ್ಚಿಮದವರು ಹೀಗೆ ಯೋಚಿಸುವುದಿಲ್ಲ. ಅಲ್ಲಿ ಹಿರಿಯ ನಾಗರಿಕರಿಗೆಂದೇ ಪ್ರತ್ಯೇಕ ವಸತಿಗೃಹಗಳಿರುತ್ತವೆ. ಅಲ್ಲಿ ವಯೋಸಹಜ ಕಾಯಿಲೆಗಳಿಗೆ ವಿಶೇಷ ಶುಶ್ರೂಷಾ ವ್ಯವಸ್ಥೆ, ಚಿಕಿತ್ಸಾ ಸೌಲಭ್ಯಗಳಿರುತ್ತವೆ. ಅಲ್ಲದೆ ಈ ಸೌಲಭ್ಯಗಳ ಮಧ್ಯೆ ಬದುಕಬೇಕೆಂದೇ ಅಲ್ಲಿನ ಹಿರಿಯರೂ ಅಪೇಕ್ಷಿಸುತ್ತಾರೆ.

ಇಂತಹ ಸೌಲಭ್ಯ ಕೇಂದ್ರಗಳಲ್ಲಿ ಒಂದೇ ಒಂದು ಸಾವು ಸಂಭವಿಸಿದರೂ ಅಲ್ಲಿ ವಾಸಿಸುವ ಪ್ರತಿಯೊಬ್ಬ ವೃದ್ಧನನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಅವರು ಸಹಬಾಳ್ವೆ, ಸಾಮಾಜಿಕ ಬದುಕಿನಿಂದ ದೂರವಾಗುವುದರ ಜೊತೆಗೆ ತಿಂಗಳಿಗೊಮ್ಮೆಯೋ ವಾರಕ್ಕೊಮ್ಮೆಯೋ ಮಕ್ಕಳು, ಮೊಮ್ಮಕ್ಕಳನ್ನು ಭೇಟಿಯಾಗುವ ಅವಕಾಶವನ್ನೂ ಕಳೆದುಕೊಳ್ಳುತ್ತಾರೆ. ಎಷ್ಟೋ ಮಂದಿ ಏಕಾಕಿತನ ಸಹಿಸಲಾಗದೆ ಅಸುನೀಗಿದ್ದಾರೆ. ಆದರೆ ಮರಣ ಪ್ರಮಾಣಪತ್ರದಲ್ಲಿ ಖಿನ್ನತೆಯೆಂದೋ ಹೃದಯಸ್ತಂಭನವೆಂದೋ ದಾಖಲಿಸಲಾಗುತ್ತದೆ ಎಂಬ ವರದಿಗಳಿವೆ. ಈ ಸಾವಿಗೆ ಕೊರೊನಾದ ಅಡ್ಡಪರಿಣಾಮವಾದ ಏಕಾಕಿತನವೇ ಕಾರಣವೆಂದು ದಾಖಲಿಸಲು ಅಗತ್ಯವಿರುವ ಸಮರ್ಥ ಪ್ರಮಾಣಗಳನ್ನು ಶೋಧಿಸಲು ವೈದ್ಯವಿಜ್ಞಾನಕ್ಕೆ ಇನ್ನೂ ಸಾಧ್ಯವಾಗಿಲ್ಲದ ಕಾರಣ ಇಂತಹ ಸಾವುಗಳು ಎಲ್ಲೂ ಸುದ್ದಿಯಾಗುವುದಿಲ್ಲ.

ಏಕಾಕಿತನ ಬದುಕಿನ ಅಸಹನೀಯ ವಾಸ್ತವವಾಗಿದೆ. ಅದು ಮನುಷ್ಯನನ್ನು ರೋಗಗ್ರಸ್ತನನ್ನಾಗಿಸುತ್ತದೆ. ವಿಪರ್ಯಾಸವೆಂದರೆ, ಬುದ್ಧ, ಮಹಾವೀರರಂತಹ ಅನುಭಾವಿಗಳು ಬದುಕಿನ ಗಹನ ಸತ್ಯಗಳನ್ನರಿಯಲು ಇದೇ ಏಕಾಕಿತನದ ಮೊರೆ ಹೋದರು. ಒಂದೇ ಏಕಾಕಿತನ ಕೆಲವರ ರೋಗಕ್ಕೂ ಮತ್ತೆ ಕೆಲವರ ಆರೋಗ್ಯಕ್ಕೂ ಕಾರಣವಾಗುವುದು ನಿಜಕ್ಕೂ ಬದುಕಿನ ವಿರೋಧಾಭಾಸವೇ ಸರಿ. ಬಂಧಮೋಕ್ಷಗಳೆರಡಕ್ಕೂ ಮನವೇ ಮೂಲವೆಂಬ ಗೀತಾವಾಕ್ಯವನ್ನು (ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ– ಗೀತೆ 6.5) ಈ ಹಿನ್ನೆಲೆಯಲ್ಲಿ ಮನನ ಮಾಡಬೇಕಾಗುತ್ತದೆ.

ಭಾರತೀಯ ವಿವೇಕವು ರಾಗಕ್ಕಿಂತಲೂ ಹೆಚ್ಚಾಗಿ ವಿರಾಗವನ್ನು, ಬದುಕಿನ ಅರ್ಥಕ್ಕಿಂತಲೂ ಹೆಚ್ಚಾಗಿ ಬದುಕಿನ ನಿರರ್ಥಕತೆಯನ್ನು ಧ್ಯಾನಿಸಲು ಕಾರಣವಿದೆ. ಬದುಕಿನ ಅತಿಮುಖ್ಯವಾದ, ಅತ್ಯಗತ್ಯವಾದ ಸಂಗತಿಗಳು ಜೀವಿತದ ಯಾವುದೋ ಒಂದು ಹಂತದಲ್ಲಿ ಅಮುಖ್ಯವಾಗಿ, ಅನಗತ್ಯ ಅಡಚಣೆಯಾಗಿ ಪರಿಣಮಿಸುತ್ತವೆ. ಉದಾಹರಣೆಗೆ, ಪುಟ್ಟ ಮಕ್ಕಳ ಮನೋದೈಹಿಕ ಬೆಳವಣಿಗೆಗೆ ರಕ್ತಸಂಬಂಧಿಗಳ ಪ್ರೀತಿ, ವ್ಯಾಮೋಹಗಳೇ ಆಹಾರವಾಗಿರುತ್ತವೆ. ಅದೇ ಮಗು ವೃದ್ಧಾಪ್ಯಕ್ಕೆ ಕಾಲಿಟ್ಟಾಗ ಈ ಪ್ರೀತಿ, ವ್ಯಾಮೋಹಗಳೇ ವೃದ್ಧಾಪ್ಯದ ವೇದನೆ, ವ್ಯಸನಗಳಿಗೆ ಮೂಲವಾಗಬಹುದು. ಈ ಪ್ರೀತಿ, ವ್ಯಾಮೋಹಗಳೇ ಬದುಕಿನ ಗಹನ ನೆಲೆಗಳನ್ನು ಅರಿಯಲು ಒಂದು ತೊಡಕಾಗಬಹುದು. ವಿರಕ್ತಿ ಅಸಲಿಗೆ ಜೀವನ ವಿರೋಧಿ ನಿಲುವಲ್ಲ, ಬದಲಾಗಿ ಜೀವನವನ್ನು ಯಥಾರ್ಥವಾಗಿ ಅರಿಯಲು ಮತ್ತು ಅನುಭವಿಸಲು ಅಗತ್ಯವಿರುವ ಒಂದು ವಿಶಿಷ್ಟ ಮನಃಸ್ಥಿತಿಯಾಗಿದೆ.

ಮನುಷ್ಯನಿಗೆ ವಯಸ್ಸಾದಂತೆ ಅವನು ಸಮಾಜಕ್ಕೆ ಅಪ್ರಸ್ತುತನಾಗುತ್ತಾ ಹೋಗುತ್ತಾನೆ. ಈ ನಿರ್ಲಕ್ಷ್ಯ ನೀಡುವ ವೇದನೆಯನ್ನು ಸಹಿಸಲಾರದ ಮನುಷ್ಯ, ವಯಸ್ಸಾದಂತೆ ಹೆಚ್ಚು ಹೆಚ್ಚು ಕ್ರಿಯಾಶೀಲನಾಗಲು ಪ್ರಯತ್ನಿಸುತ್ತಾನೆ. ತಾನು ಇಳಿವಯಸ್ಸಿನಲ್ಲೂ ಪ್ರಸ್ತುತನಾಗಿದ್ದೇನೆ ಎಂದು ಹೊರಜಗತ್ತಿಗೆ ರುಜುವಾತು ಮಾಡಲು ಹೆಣಗುತ್ತಾನೆ. ಆದರೆ ಜೀವಿತಾವಧಿಯಲ್ಲಿ ಏನನ್ನಾದರೂ ಸಾಧಿಸಿ ತೋರಿಸುವುದರಲ್ಲಲ್ಲ, ಜೀವಿತದ ವಾಸ್ತವವನ್ನು ಯಥಾರ್ಥವಾಗಿ ಮನಗಾಣುವುದರಲ್ಲಿ, ಹಾಗೆ ಮನಗಾಣುವ ಪ್ರಯತ್ನದಲ್ಲಿ ಬದುಕಿನ ಸಾರ್ಥಕತೆ ಇರುತ್ತದೆ. ನಮ್ಮ ಪುರಾತನರು ಪ್ರಾಯಶಃ ಈ ಹಿನ್ನೆಲೆಯಲ್ಲಿ ಅಭ್ಯಾಸ-ವೈರಾಗ್ಯಗಳನ್ನು ಪರಿಭಾವಿಸಿದರು ಎನಿಸುತ್ತದೆ.

ಹಲವು ದಶಕಗಳಿಂದಲೂ ಸಾಹಿತ್ಯಾಧ್ಯಯನದಲ್ಲಿ ಗಂಭೀರವಾಗಿ ತೊಡಗಿರುವ ಕನ್ನಡದ ಹಿರಿಯ ಲೇಖಕರೊಬ್ಬರು ಇತ್ತೀಚೆಗೆ ‘ಶ್ರೀ ರಾಮಾಯಣ ದರ್ಶನಂ’ ಕೃತಿಯನ್ನು ಸರಳ ಹೊಸಗನ್ನಡದಲ್ಲಿ ಮರುಸೃಷ್ಟಿಸುವ ಪ್ರಯತ್ನದಲ್ಲಿದ್ದರು. ಅವರು ಅಚಾತುರ್ಯವಶಾತ್ ಕೋವಿಡ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಕೋವಿಡ್‌ನಿಂದ ಪೂರ್ತಿ ಗುಣಮುಖರಾಗಿ ಮನೆಗೆ ಹಿಂದಿರುಗಿದ ಅವರು ತಮ್ಮ ರಾಮಾಯಣ ದರ್ಶನದ ಅಧ್ಯಯನವನ್ನು ಮುಂದುವರಿಸಿದರು. ‘ನನ್ನ ಕಾವ್ಯಾಧ್ಯಯನವೇ ನನ್ನನ್ನು ಈ ಕಾಯಿಲೆಯಿಂದ ಪಾರು ಮಾಡಿತು’ ಎಂದೇ ಅವರು ದೃಢವಾಗಿ ನಂಬಿದ್ದಾರೆ. ಕಾವ್ಯಾಧ್ಯಯನ ಕೆಡುಕನ್ನು ದೂರ ಮಾಡುತ್ತದೆ ಎಂದು ಬೋಧಿಸುವ ನಮ್ಮ ಕಾವ್ಯಮೀಮಾಂಸೆಯೂ ಅವರ ಈ ನಂಬಿಕೆಯನ್ನು ಬೆಂಬಲಿಸುತ್ತದೆ (ಕಾವ್ಯಂ ಯಶಸೇ ಅರ್ಥಕೃತೇ... ಶಿವೇತರ ಕ್ಷತಯೇ- ಮಮ್ಮಟನ ‘ಕಾವ್ಯಪ್ರಕಾಶ’).

ಟಿ.ಎನ್‌.ವಾಸುದೇವಮೂರ್ತಿ

ಕೊರೊನಾದ ಅಡ್ಡಪರಿಣಾಮಗಳನ್ನು ಎದುರಿಸುತ್ತಿರುವ ಹಿರಿಯ ನಾಗರಿಕರ ಸಂಕಟಗಳಿಗೆ ಸ್ಪಂದಿಸುವಷ್ಟು ವ್ಯವಧಾನ ಸದ್ಯಕ್ಕೆ ಸರ್ಕಾರಕ್ಕಾಗಲೀ ಸಮಾಜಕ್ಕಾಗಲೀ ಇಲ್ಲ. ಇಂತಹ ನಿದರ್ಶನಗಳೇ ಇಂದು ಕೊರೊನಾದ ನೇರ ಪರಿಣಾಮ, ಅಡ್ಡಪರಿಣಾಮಗಳಿಗೆ ಈಡಾದ ವಯೋವೃದ್ಧರಿಗೆ ದಾರಿದೀಪವಾಗಬಲ್ಲವು ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT