ಬುಧವಾರ, ಜುಲೈ 28, 2021
23 °C

ಸಂಗತ | ‘ಕೈವಶ’ವಾಗಲಿ ನಮ್ಮ ಕೌಶಲ

ಸಂತೋಷ ಕೌಲಗಿ Updated:

ಅಕ್ಷರ ಗಾತ್ರ : | |

Prajavani

ದೇಶವು ಕೊರೊನಾ ಸೋಂಕು ನಿಯಂತ್ರಣದಲ್ಲಿ ತೊಡಗಿದ್ದಾಗ, ಚೀನಾವು ಗಡಿಯಲ್ಲಿ ಕ್ಯಾತೆ ತೆಗೆಯಿತು. ಅಂತಹ ಅಲ್ಲೋಲ– ಕಲ್ಲೋಲ ಪರಿಸ್ಥಿತಿಯಲ್ಲಿ, ಸಮುದ್ರ ಮಂಥನದಲ್ಲಿ ಹುಟ್ಟಿದಂತೆ ‘ಆತ್ಮನಿರ್ಭರ’ ಎಂಬ ಶಬ್ದ ಹುಟ್ಟಿ ಬಂತು. ಆ ಶಬ್ದದ ಅರ್ಥಕ್ಕಾಗಿ ನಿಘಂಟನ್ನು ತೆರೆದಾಗ, ಸ್ವಾವಲಂಬನೆಗೆ ಇದೊಂದು ಪರ್ಯಾಯ ಶಬ್ದ ಎಂಬುದು ತಿಳಿಯಿತು. ಸ್ವಾವಲಂಬನೆ ಎಂಬ ಪದ ಗರಿಷ್ಠ ಬಳಕೆಯಾಗಿ, ಪೂರ್ತಿ ಸವೆದು ಹೋಗಿ ತೆಳ್ಳಗಾಗಿ ನಿಂತಿದೆ. ಕನ್ನಡಿಯೊಳಗಿನ ಗಂಟಿನಂತೆ ಅದನ್ನು ಕಾಯ್ದಿಟ್ಟುಕೊಂಡು ಬಂದಿರುವ ನಮ್ಮ ನಾಯಕರು, ಮುಂದಿನ ತಲೆಮಾರಿಗೆ ರವಾನಿಸುವುದು ತಮ್ಮ ಜವಾಬ್ದಾರಿ ಎಂದು ಭಾವಿಸಿ, ಹೊಸ ಬಾಟಲಿಯಲ್ಲಿ ಆತ್ಮನಿರ್ಭರ ಎಂಬ ಹೆಸರಿನಲ್ಲಿ ನೀಡುತ್ತಿದ್ದಾರೆ.

ಕೆಲವರಿಗೆ ಯಾವುದೇ ವಸ್ತು ಈ ದೇಶದೊಳಗೆ ತಯಾರಾಗಿಬಿಟ್ಟರೆ ಅದು ಆತ್ಮನಿರ್ಭರತೆ ಎನಿಸಬಹುದು. ಹಾಗಾಗಿ, ಚೀನಾದ ವಸ್ತುಗಳನ್ನು ಬಹಿಷ್ಕರಿಸುವುದು ಅಂತಹವರಿಗೆ ದೊಡ್ಡ ಸಾಧನೆಯಾಗಿ ಕಾಣುತ್ತದೆ. ಆದರೆ ಜಾಗತೀಕರಣಗೊಂಡಿರುವ ಇಂದಿನ ವ್ಯಾವಹಾರಿಕ ಪ್ರಪಂಚದಲ್ಲಿ ಇಂತಹ ಮಾತುಗಳು ಅವಾಸ್ತವಿಕವಾದವು. ಇಂದು ಯಾವುದೇ ದೇಶವನ್ನು ಯಾವುದೇ ದೇಶ ಬಹಿಷ್ಕರಿಸುವ ಸ್ಥಿತಿಯಲ್ಲಿ ಇಲ್ಲ. ಎಲ್ಲರೂ ಪರಸ್ಪರ ಅವಲಂಬಿಸಿ, ಇಲ್ಲವೇ ಶೋಷಿಸಿ, ಇಲ್ಲವೇ ಶೋಷಣೆಗೆ ಒಳಗಾಗಿ ಬದುಕುವ ಸ್ಥಿತಿಯನ್ನು ಆಧುನಿಕ ಅರ್ಥವ್ಯವಸ್ಥೆ ನಿರ್ಮಿಸಿದೆ. ಇಂತಹ ಸ್ಥಿತಿಯಲ್ಲಿ ಭಾವಾವೇಶಕ್ಕೆ ಒಳಗಾಗಿ, ನಾಳೆ ಬೆಳಗಾಗುವುದರೊಳಗೆ ನಾವು ಸ್ವಾವಲಂಬಿಗಳಾಗಿ ಬಿಡುತ್ತೇವೆ ಎಂದು ಹೇಳುವುದು ಬಾಲಿಶವಾಗಿ ತೋರುತ್ತದೆ.

ನಿಜ ಅರ್ಥದ ಸ್ವಾವಲಂಬನೆಯು ದೇಶ ಮಟ್ಟದಿಂದ ವ್ಯಕ್ತಿಯ ಮಟ್ಟದ ಕಡೆಗೆ ಚಲಿಸುವಂತಾಗಬೇಕು. ಯಂತ್ರ ನಾಗರಿಕತೆ ನಮ್ಮನ್ನು ಹೆಚ್ಚು ಪರಾವಲಂಬಿ ಮಾಡಿದೆ. ಸ್ವಾವಲಂಬನೆ ಎಂಬುದು ನಾವು ಊಟ ಮಾಡಿದ ತಟ್ಟೆಯನ್ನು, ತೊಟ್ಟ ಬಟ್ಟೆಯನ್ನು, ನಮ್ಮ ಶೌಚಾಲಯವನ್ನು ನಾವೇ ಸ್ವಚ್ಛಗೊಳಿಸುವ ಕಾರ್ಯದಿಂದ ಪ್ರಾರಂಭವಾಗಬೇಕು. ವ್ಯಕ್ತಿ ಮಟ್ಟದ ಸ್ವಾವಲಂಬನೆಯ ಕೆಲಸಗಳು ಒಂದು ಸಮುದಾಯವು ಸ್ವಾವಲಂಬನೆಯ ದಿಕ್ಕಿನ ಕಡೆಗೆ ಚಲಿಸಲು ಬೇಕಾದ ದೈಹಿಕ ಮತ್ತು ಮಾನಸಿಕ ತಯಾರಿಯನ್ನು ನೀಡುತ್ತಾ ಹೋಗುತ್ತದೆ.

ನಮಗಿರುವ ಕೌಶಲವಷ್ಟೇ ನಮಗೆ ಸ್ವಾವಲಂಬನೆಯತ್ತ ಹೆಜ್ಜೆ ಹಾಕಲು ಆತ್ಮಸ್ಥೈರ್ಯವನ್ನು ನೀಡಬಲ್ಲದು. ಆಧುನಿಕ ಶಿಕ್ಷಣವು ಅನೇಕ ಕೌಶಲಗಳನ್ನು ನಮ್ಮಿಂದ ಕಿತ್ತುಕೊಂಡು ಬಿಟ್ಟಿದೆ. ಆ ಕೌಶಲಗಳನ್ನು ನಾವು ಮತ್ತೆ ಪಡೆಯುವಂತೆ ಮಾಡುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು.

‘ಕೆಟ್ಟು ಪಟ್ಟಣ ಸೇರು’ ಎಂದರೆ, ವ್ಯಕ್ತಿಯೊಬ್ಬ ಬದುಕಿನಲ್ಲಿ ಸೋತು, ಅವಮಾನ ತಡೆಯಲಾರದೆ ಪಟ್ಟಣ ಸೇರುವುದು ಎಂದು ಭಾವಿಸಿದ್ದೆ. ವಾಸ್ತವದಲ್ಲಿ ಅದು ಹಾಗಲ್ಲ. ಗ್ರಾಮೀಣ ಬದುಕು ಎಂಬುದು ಸ್ವಾವಲಂಬಿಯಾದ ಪರಿಸರಾವಲಂಬಿ ಬದುಕು. ಅದು ಕೌಶಲಾಧಾರಿತ ಬದುಕು. ಆಧುನಿಕ ಸಮಾಜವು ಕನಿಷ್ಠವಾದುದು ಎಂದು ಭಾವಿಸಿರುವ ಕೌಶಲಗಳಾದ ಮರ ಹತ್ತುವುದು, ಸೌದೆ ಸೀಳುವುದು, ಉಳುಮೆ ಮಾಡುವುದು, ನೀರು ಸೇದುವುದು, ಪಶುಪಾಲನೆ ಮುಂತಾದವು ಅಲ್ಲಿಯ ಬದುಕಿಗೆ ಅನಿವಾರ್ಯ. ಈ ಕೌಶಲಗಳು ಇಲ್ಲದವರಿಗೆ ಅಲ್ಲಿ ಬದುಕು ಕಷ್ಟ. ಹಾಗಾಗಿ ಅವರು ಪಟ್ಟಣಕ್ಕೆ ಹೋಗಿ, ಕೌಶಲ ಬೇಕಿಲ್ಲದ ಕೆಲಸವನ್ನು ಹುಡುಕಬೇಕಾಗುತ್ತದೆ. ನಮ್ಮ ಆಧುನಿಕ ಶಿಕ್ಷಣ ಮಾಡಿದ್ದೇ ಅದನ್ನು. ಕೌಶಲವನ್ನು ಕರಗತಗೊಳಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಮಕ್ಕಳನ್ನು ಸುಮಾರು 15 ವರ್ಷಗಳ ಕಾಲ ಶಿಕ್ಷಣದ ಹೆಸರಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಂದಿ ಮಾಡಿಬಿಡುತ್ತದೆ. ಆ ಗೋಡೆಗಳಿಂದ ಬಿಡಿಸಿಕೊಂಡು ಹೊರಬರುವ ಹೊತ್ತಿಗೆ ಅವರಲ್ಲಿ ಯಾವ ಕೌಶಲವೂ ಇರುವುದಿಲ್ಲ. ಹಾಗಾಗಿ, ದಿನನಿತ್ಯದ ಬದುಕಿಗೆ ಕೌಶಲವನ್ನು ಅಷ್ಟಾಗಿ ಕೇಳದ ನಗರದ ಜೀವನಕ್ಕಷ್ಟೇ ಅವರು ಸಲ್ಲಬಲ್ಲವರು.

ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಿರುವ ಇಂದಿನ ಸ್ಥಿತಿಯಲ್ಲಿ, ಗ್ರಾಮೀಣ ಭಾರತ ತತ್‍ಕ್ಷಣದಲ್ಲಿ ಉದ್ಯೋಗವನ್ನು ಸೃಷ್ಟಿಸುವ ಸ್ಥಿತಿಯಲ್ಲಿ ಖಂಡಿತಾ ಇಲ್ಲ. ಉದ್ಯೋಗ ಖಾತರಿಯಂತಹ ಯೋಜನೆಗಳ ಮೂಲಕ ಸರ್ಕಾರ ಕೃತಕವಾಗಿ ಒಂದಿಷ್ಟು ಉದ್ಯೋಗಗಳನ್ನು ಸೃಷ್ಟಿಸಬಹುದು. ಸರ್ಕಾರದ ನೀತಿಯು ಗ್ರಾಮ ಕೇಂದ್ರಿತವಾಗದಿದ್ದರೆ ಅದು ಕೈಗೊಳ್ಳುವ ಮಿಕ್ಕೆಲ್ಲ ಯೋಜನೆಗಳು ತಾತ್ಕಾಲಿಕ ಶಮನ ಮಾತ್ರ.

ಇಂತಹ ಸ್ಥಿತಿಯಲ್ಲಿ ಪ್ರಜ್ಞಾವಂತ ನಾಗರಿಕರು ಮತ್ತು ಉತ್ಪಾದಕರು ಕ್ರಿಯಾಶೀಲರಾಗುವುದು ಇರುವ ಏಕೈಕ ಮಾರ್ಗ. ಇಂದು ಹಳ್ಳಿಗಳಲ್ಲಿ ಜನ ಉಳಿದುಕೊಳ್ಳಬೇಕೆಂದರೆ ನಗರದಲ್ಲಿರುವ ಗ್ರಾಹಕರು ಅವರೊಂದಿಗೆ ನೇರವಾಗಿ ಕೈ ಜೋಡಿಸಬೇಕು. ನಗರದಲ್ಲಿರುವ ಎಂಟು– ಹತ್ತು ಗ್ರಾಹಕರು ಒಬ್ಬ ರೈತನಿಂದ ಉತ್ಪನ್ನಗಳನ್ನು ನೇರವಾಗಿ ಖರೀದಿಸುವಂತೆ ಮಾಡಿಕೊಳ್ಳಬೇಕು. ಅದೇ ರೀತಿ ಇತರ ಕುಶಲಕರ್ಮಿಗಳೊಂದಿಗೂ ಅನೇಕ ಕೆಲಸಗಳನ್ನು ಮಾಡಬಹುದು. ಇಂದಿನ ಸರ್ಕಾರಗಳಿಗೆ ಸುಸ್ಥಿರತೆ, ಪರಿಸರ ಸಂರಕ್ಷಣೆ, ಆರೋಗ್ಯ ಯಾವುದೂ ಆದ್ಯತೆಯಾಗಿ ಉಳಿದಿಲ್ಲ. ಏನೇನು ಸಾಧ್ಯವೋ ಅದನ್ನೆಲ್ಲ ಮಾರಿ ಹಾಕುವುದೇ ಅವುಗಳ ಏಕೈಕ ಮಂತ್ರವಾದಂತಿದೆ. ಸರ್ಕಾರ ವ್ಯವಸ್ಥಿತವಾಗಿ ಎಲ್ಲಾ ಜನಪರ ದನಿಗಳನ್ನು ಮಟ್ಟ ಹಾಕುತ್ತಿರುವಾಗ, ಮಧ್ಯಮವರ್ಗ ತನ್ನೆಲ್ಲ ವಿವೇಕವನ್ನು ಕಳೆದುಕೊಂಡಿರುವಾಗ, ಪ್ರಜ್ಞಾವಂತರು ಕ್ರಿಯಾಶೀಲರಾಗಿದ್ದು ವಿವೇಕದ ದೀಪ ಆರಿಹೋಗದಂತೆ ನೋಡಿಕೊಳ್ಳುವುದಷ್ಟೇ ಇಂದು ಮಾಡಬಹುದಾದ ಕೆಲಸ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು