ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿ ನೀಡದೆ ‘ಆಶಾ’ ಕಾರ್ಯಕರ್ತೆಯರನ್ನು ‘ಯುದ್ಧಭೂಮಿ’ಗೆ ಬಿಡುವುದು ಎಷ್ಟು ಸರಿ?

Last Updated 13 ಏಪ್ರಿಲ್ 2020, 1:01 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಭೀತಿ ಜಗತ್ತನ್ನೇ ಅಲ್ಲೋಲ ಕಲ್ಲೋಲಗೊಳಿಸಿದೆ. ನಮ್ಮಲ್ಲಿ ಅನೇಕರು ಮನೆಗಳಲ್ಲಿ ಬಂದಿಗಳಾಗಿ ದೈಹಿಕ, ಮಾನಸಿಕ ಮತ್ತು ಆರ್ಥಿಕ ಒತ್ತಡ ಅನುಭವಿಸುತ್ತಿದ್ದರೆ, ಇನ್ನು ಕೆಲವರು ಮನೆಯ ಹೊರಗೆ ಈ ಮಹಾಮಾರಿಯ ತೀವ್ರ ಅಪಾಯಗಳಿಗೆ ತಮ್ಮನ್ನು ಒಡ್ಡಿಕೊಂಡು, ಅಗತ್ಯ ಸೇವೆಗಳನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗೆ ಜೀವದ ಹಂಗು ತೊರೆದು ದುಡಿಯುತ್ತಿರುವವರಲ್ಲಿ ‘ಆಶಾ’ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದಾರೆ.

ದೇಶದಾದ್ಯಂತ 7 ಲಕ್ಷ ಮತ್ತು ಕರ್ನಾಟಕದಲ್ಲಿ 41 ಸಾವಿರ ಆಶಾ ಕಾರ್ಯಕರ್ತೆಯರು, ಕೊರೊನಾ ಸೋಂಕಿನ ಲಕ್ಷಣಗಳನ್ನು ಗುರುತಿಸುವ ಅತೀ ಸವಾಲಿನ ಕೆಲಸದಲ್ಲಿ ತೊಡಗಿದ್ದಾರೆ. ಅನೇಕ ವರ್ಷಗಳಿಂದ ಆಶಾ ಕಾರ್ಯಕರ್ತೆಯರೊಂದಿಗೆ ಕೆಲಸ ಮಾಡುತ್ತಿರುವ‘ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್’, ಅವರಿಗೆ ಎದುರಾಗಿರುವ ಆಪತ್ತು ಹಾಗೂ ಅವರ ಮೂಲಭೂತ ಅಗತ್ಯಗಳನ್ನು ಸರ್ಕಾರದ ಗಮನಕ್ಕೆ ತರಬಯಸುತ್ತದೆ.

ಮೊದಲನೆಯದಾಗಿ, ಮನೆಮನೆಗೆ ಭೇಟಿ ಕೊಡುವ ಇವರಿಗೆ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳು ಕಡ್ಡಾಯ. ಇಂಥವರಿಗೆ ಬೇಕಾಗಿರುವುದು ಎನ್95 ಮಾದರಿಯ ಮಾಸ್ಕ್‌ಗಳು. ಹೋಗಲಿ, ಸರ್ಜಿಕಲ್ ಮಾಸ್ಕ್‌ಗಳಾದರೂ ಲಭ್ಯವಿವೆಯೇ ಎಂದರೆ ಅದೂ ಇಲ್ಲ. ಕೇವಲ ಬಟ್ಟೆಯ ಮಾಸ್ಕ್‌ಗಳಿಂದ ಅವರು ಮುಖ ಮುಚ್ಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ‘ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್‌ಹೌಸಿಂಗ್ ಸೊಸೈಟಿ’ಯ ಹೆಚ್ಚುವರಿ ನಿರ್ದೇಶಕರನ್ನು ವಿಚಾರಿಸಿದಾಗ, ಪ್ರತೀ ಜಿಲ್ಲೆಗೂ ಅಗತ್ಯವಿರುವಷ್ಟು ಪ್ರಮಾಣದ ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳ ಪೂರೈಕೆ ಇರುವುದಾಗಿ ತಿಳಿಸಿದರು. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಪೂರೈಕೆಯಲ್ಲಿ ತೀವ್ರ ಕೊರತೆ ಇರುವುದನ್ನು ಎತ್ತಿ ಹೇಳುತ್ತಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಂತೂ ಆಶಾ ಕಾರ್ಯಕರ್ತೆಯರಿಗೆ ಕೊಡಲು ತಮ್ಮಲ್ಲಿ ಯಾವ ಅಗತ್ಯ ವಸ್ತುಗಳೂ ಇಲ್ಲ ಎನ್ನುತ್ತಾರೆ. ಇಂತಹ ತದ್ವಿರುದ್ಧ ಹೇಳಿಕೆಗಳನ್ನು ನೋಡಿದರೆ, ಪೂರೈಕೆಯ ಕೊಂಡಿಯೇ ಕಳಚಿರುವುದು ಸ್ಪಷ್ಟವಾಗುತ್ತದೆ.

ರಾಜ್ಯದಲ್ಲಿ ಒಟ್ಟು ಎಷ್ಟು ಮಂದಿ ಆಶಾ ಕಾರ್ಯಕರ್ತೆಯರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ? ಅವರಿಗೆ ಎಷ್ಟು ಪ್ರಮಾಣದ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳ ಅಗತ್ಯವಿದೆ? ಲಭ್ಯವಿರುವ ಪ್ರಮಾಣವೆಷ್ಟು ಎಂಬಂಥ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವೇ ಇಲ್ಲವಾಗಿದೆ. ಇಂತಹ ಸ್ಥಿತಿಯಲ್ಲಿಕಾರ್ಯಕರ್ತೆಯರು ತಮ್ಮ ಬದುಕನ್ನು ಅಪಾಯಕ್ಕೆ ಒಡ್ಡಿಕೊಳ್ಳುವ ಜೊತೆಗೆ ನಮ್ಮೆಲ್ಲರನ್ನೂ ಅಪಾಯಕ್ಕೆ ಒಡ್ಡುತ್ತಿದ್ದಾರೆ. ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಮೂಲಭೂತ ಹಕ್ಕು. ಅತ್ಯಗತ್ಯ ಮಾಹಿತಿಯನ್ನು ಸಾರ್ವಜನಿಕರಿಂದ ಮುಚ್ಚಿಡುವುದರಿಂದ ಜನರ ಹಿತಾಸಕ್ತಿ ಕಾಪಾಡಲು ಸಾಧ್ಯವಿಲ್ಲ. ಬದಲಾಗಿ, ಅದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಅತೀ ಕಡಿಮೆ ಸಂಬಳಕ್ಕೆ ದುಡಿಯುವ ಕಾರ್ಯಕರ್ತೆಯರು ಈಗ ಅನೇಕ ಗಂಟೆಗಳ ಕಾಲ ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ ಮಾಹಿತಿ ಸಂಗ್ರಹಿಸುವ ಸಮಯದಲ್ಲಿ ಅವರ ಮೇಲೆ ಹಲ್ಲೆಗಳು ನಡೆಯುತ್ತಿರುವುದು ವರದಿಯಾಗುತ್ತಿದೆ. ಇದನ್ನೆಲ್ಲಾನೋಡಿದಾಗ, ಇವರ ಬದುಕು ಎಂತಹ ಅಪಾಯದಲ್ಲಿ ಸಿಲುಕಿದೆ ಎಂಬುದು ತಿಳಿಯುತ್ತದೆ. ಇವರು ಕೊರೊನಾ ಸೋಂಕಿನ ಅಪಾಯಕ್ಕೆ ಮಾತ್ರವಲ್ಲ, ಲಾಕ್‍ಡೌನ್ ಸಮಯದಲ್ಲಿ ಒತ್ತಡ, ಹತಾಶೆಗೆ ಒಳಗಾಗಿರುವವರ ಕ್ರೌರ್ಯ ಮತ್ತು ಅಸಹಿಷ್ಣುತೆಗೂ ಬಲಿಪಶುಗಳಾಗುತ್ತಿದ್ದಾರೆ.

ಅಗತ್ಯ ತರಬೇತಿ ಮತ್ತು ಸಾಮಗ್ರಿಗಳನ್ನು ನೀಡಿ ಸನ್ನದ್ಧಗೊಳಿಸದೆ, ಅವರನ್ನು ಈ ಹೊಸ ಮತ್ತು ಭಯಾನಕ ಯುದ್ಧಭೂಮಿಗೆ ಬಿಡುತ್ತಿದ್ದೇವೆ.ಈ ಮಹಿಳೆಯರು ಸಾಮಾನ್ಯವಾಗಿ ಬಡತನದ ಕುಟುಂಬಗಳಿಂದ ಬಂದವರಾಗಿದ್ದು, ತೀವ್ರ ಆರ್ಥಿಕಮುಗ್ಗಟ್ಟಿಗೆ ಒಳಗಾಗಿರುತ್ತಾರೆ. ಹಾಗಾಗಿ, ಎಂಥದ್ದೇ ಸನ್ನಿವೇಶದಲ್ಲೂ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಕೆಲಸ ಮಾಡಬೇಕಾದ ಅನಿವಾರ್ಯ ಅವರಿಗೆಇರುತ್ತದೆ.

‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’ಯಡಿ ಇವರಿಗೆ ವಿಮೆ ಮಾಡಿಸುವುದಾಗಿ ಸರ್ಕಾರ ಹೇಳುತ್ತಿದೆ. ವಿಮಾ ಕಂಪನಿಗಳು ತಮ್ಮ ಷರತ್ತು ಮತ್ತು ನಿಯಮಗಳನ್ನು ಪಾಲಿಸಿದಾರರಿಗೆ ಅರ್ಥವಾಗದಂತೆ ಅತೀ ಸಣ್ಣ ಅಕ್ಷರಗಳಲ್ಲಿ ಮುದ್ರಿಸಿ, ಪರಿಹಾರವನ್ನು ಮೊಟಕುಗೊಳಿಸುವ ಟೀಕೆಗಳಿಗೆ ಒಳಗಾಗುತ್ತಲೇ ಇರುತ್ತವೆ. ಹೀಗಾಗಿ, ಈ ವಿಮೆಯು ಆಶಾ ಕಾರ್ಯಕರ್ತೆಯರಿಗೆ ಎಷ್ಟರಮಟ್ಟಿಗೆ ನೆರವಾಗುತ್ತದೆ ಎಂದು ಹೇಳಲಾಗುವುದಿಲ್ಲ.

ಈಗಾಗಲೇ ಕೊರೊನಾಗೆ ಸಂಬಂಧಿಸಿದ ಸೇವಾ ಕಾರ್ಯದ ಮೇಲಿದ್ದ ಪ್ರಾಥಮಿಕ ಆರೋಗ್ಯ ಸೇವಾ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದು,ಅವರ ಕುಟುಂಬಕ್ಕೆ ಈ ವಿಮಾ ಯೋಜನೆಯ ಪ್ರಯೋಜನ ಸಿಕ್ಕಿದೆಯೇ ಎನ್ನುವುದು ಪ್ರಶ್ನೆಯೇ ಆಗಿದೆ.

ಇಂತಹ ಸ್ಥಿತಿಯಲ್ಲಿ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ, ಪ್ರತಿಯೊಬ್ಬ ಆಶಾ ಕಾರ್ಯಕರ್ತೆಗೂ ಅಗತ್ಯವಾದ ರಕ್ಷಣಾ ಸಾಮಗ್ರಿಯನ್ನು ಒದಗಿಸಬೇಕು, ಕಳಚಿರುವ ಪೂರೈಕೆಯ ಕೊಂಡಿಯನ್ನು ತಕ್ಷಣವೇ ಸರಿಪಡಿಸಬೇಕು, ಅವರ ಅಪಾಯಕಾರಿ ಹೆಚ್ಚುವರಿ ಸೇವೆಗೆ ಹೆಚ್ಚುವರಿ ಗೌರವಧನ ನೀಡಬೇಕು, ವಿಮೆಯ ನಿಯಮ-ಷರತ್ತುಗಳನ್ನು ಸಾರ್ವಜನಿಕವಾಗಿ ಲಭ್ಯವಾಗಿಸಬೇಕು, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ತಮ್ಮ ವೈಯಕ್ತಿಕ ಸುರಕ್ಷೆಗಾಗಿ ಕಾರ್ಯಕರ್ತೆಯರಿಗೆ ‘ಹಾಟ್‌ಲೈನ್’ ದೂರವಾಣಿ ಸಂಪರ್ಕ ಒದಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT