ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಹಾನಗರದ ಬೆಳಕಿಲ್ಲದ ಬೀದಿಗಳಲ್ಲಿ...

ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣ ಏರಿಕೆ ಆಗಿರುವುದಕ್ಕೆ ಬೀದಿದೀಪಗಳ ಅಸಮರ್ಪಕ ನಿರ್ವಹಣೆ ಪ್ರಮುಖ ಕಾರಣ
Published 22 ಜನವರಿ 2024, 22:34 IST
Last Updated 22 ಜನವರಿ 2024, 22:34 IST
ಅಕ್ಷರ ಗಾತ್ರ

ಇತ್ತೀಚಿನ ಪೊಲೀಸ್ ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಹಿಂದಿನ ವರ್ಷ ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ, ಅಪರಾಧದ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾತ್ರವಲ್ಲ ಸರಗಳ್ಳತನ, ದರೋಡೆ ಮತ್ತು ರಸ್ತೆ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ. ಇದಕ್ಕೆ ಅನೇಕ ಕಾರಣಗಳಿದ್ದರೂ ಬೆಳಕಿಲ್ಲದ ಬೆಂಗಳೂರಿನ ಬೀದಿಗಳು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ದೊಡ್ಡ ಸವಾಲಾಗಿವೆ. ಇದರೊಂದಿಗೆ, ಬಸ್ ನಿಲ್ದಾಣ, ಉದ್ಯಾನ, ಸಾರ್ವಜನಿಕ ಶೌಚಾಲಯಗಳಲ್ಲಿಯೂ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿಲ್ಲ.

ನಗರದ ಮುಖ್ಯ ಸ್ಥಳಗಳಾದ, ಜನರು ಹೆಚ್ಚು ಸಂಚರಿಸುವ ಅನೇಕ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ ಅಥವಾ ಇದ್ದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ರಸ್ತೆಗಳಲ್ಲಿನ ಕಚೇರಿಗಳಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರು ‘ಬೆಳಕಿಲ್ಲದ ಕಡೆ ಬೀದಿಕಾಮಣ್ಣರ ಸಂಖ್ಯೆ ಹೆಚ್ಚು. ತಮ್ಮನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎನ್ನುವ ಧೈರ್ಯ ಅವರಿಗಿರುತ್ತದೆ. ಕೆಲಸಕ್ಕಾಗಿ ಇಲ್ಲಿಗೆ ಬಂದಿರುತ್ತೇವೆ. ಮರಳುವಾಗ ಸಂಜೆ ಆರರಿಂದ ಏಳು ಗಂಟೆ ಆಗುತ್ತದೆ. ಪ್ರತಿದಿನ ಮನೆಗೆ ಹೋಗುವಾಗಲೂ ಅಂತಹ ಜಾಗ ಬಂದಾಗ ಹೆದರಿಕೆಯಾಗುತ್ತದೆ. ಆಗೆಲ್ಲಾ ಮೈಯೆಲ್ಲಾ ಕಣ್ಣಾಗಿಸಿ ಸರಸರ ಹೆಜ್ಜೆ ಹಾಕಿ ಅಥವಾ ಓಡುತ್ತಲೇ ದಾಟುವುದು ರೂಢಿಯಾಗಿದೆ. ಹೆಸರಿಗಷ್ಟೇ ದೀಪವಿದೆ, ಕೆಟ್ಟು ನಿಂತಿದೆ. ಆಶ್ಚರ್ಯವೆಂದರೆ, ಬೇರೆ ಕಡೆ ಬೆಳಿಗ್ಗೆ ಎಂಟರಲ್ಲೂ ಪ್ರಖರವಾಗಿ ಉರಿಯುವ ಬೀದಿದೀಪಗಳಿವೆ. ನಾವಷ್ಟೇ ಅಲ್ಲ, ಶಾಪಿಂಗ್‍ಗೆ ಬರುವ ಕಾಲೇಜಿನ ಹುಡುಗಿಯರಿಗೂ ಇಲ್ಲೆಲ್ಲಾ ತೊಂದರೆ’ ಎಂದು ಬೇಸರಿಸುತ್ತಾರೆ.

ಹೆಚ್ಚುತ್ತಿರುವ ರಸ್ತೆ ಅಪಘಾತಗಳಲ್ಲಿಯೂ ಈ ಬೀದಿದೀಪಗಳ ಪಾತ್ರ ಮಹತ್ವದ್ದು. ಪಾದಚಾರಿಗಳು ರಸ್ತೆ ದಾಟುವಾಗ ಸರಿಯಾಗಿ ಬೆಳಕಿರದೇ ಇದ್ದಲ್ಲಿ, ಬರುತ್ತಿರುವ ವಾಹನಗಳು ಸರಿಯಾಗಿ ಕಾಣುವುದಿಲ್ಲ. ಹಾಗೆಯೇ ರಸ್ತೆ ದಾಟುತ್ತಿರುವವರು ವಾಹನದಲ್ಲಿರುವ ಚಾಲಕರಿಗೆ ಕಾಣುವುದಿಲ್ಲ. ಹೀಗಾಗಿಯೇ ರಾತ್ರಿ ವೇಳೆ ತಿರುವುಗಳಲ್ಲಿ ವೇಗವಾಗಿ ಚಲಿಸುವ ವಾಹನಗಳು ಡಿಕ್ಕಿ ಹೊಡೆದು ನಾಯಿ, ಬೆಕ್ಕಿನಂತಹ ಪ್ರಾಣಿಗಳು ಮಾತ್ರವಲ್ಲ ಜನರಿಗೂ ಅಪಘಾತವಾಗುವ ಸಾಧ್ಯತೆ ಅತಿ ಹೆಚ್ಚು. ಹಲವಾರು ಬಾರಿ ಕತ್ತಲಲ್ಲಿ ಕಾಣಿಸದೇ ಅಡ್ಡ ಬಂದದ್ದನ್ನು ತಪ್ಪಿಸಲು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ, ಸಮತೋಲನ ತಪ್ಪಿ ವಾಹನ ಸವಾರರಿಗೆ ಗಂಭೀರ ಗಾಯಗಳೂ ಆಗುತ್ತವೆ.

ಬಸ್‍ ನಿಲ್ದಾಣಗಳ ಬಳಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಅಪಾಯಕ್ಕೆ ದೊಡ್ಡ ಕಾರಣ. ರಾತ್ರಿಯ ವೇಳೆ ಬಸ್‍ಗಳ ಸಂಚಾರ ಕಡಿಮೆ ಇರುವ ಕಾರಣ ಬಸ್‍ ನಿಲ್ದಾಣಗಳಲ್ಲಿ ಕಾಯಲೇಬೇಕು. ಪುಂಡು ಪೋಕರಿಗಳಿಗೆ ಹೆಣ್ಣುಮಕ್ಕಳು ಕಾಯುವ ಇಂಥ ಕತ್ತಲು, ಮಂದ ಬೆಳಕಿನ ತಾಣ ಪ್ರಶಸ್ತವಾದುದು. ಕೆಟ್ಟ ನೋಟ, ಅಸಭ್ಯ ಮಾತು, ಮೈ ಸವರುವುದು, ಪಿಕ್ ಪಾಕೆಟಿಂಗ್ ಎಲ್ಲವೂ ನಡೆಯುತ್ತವೆ. ದೀಪದ ವ್ಯವಸ್ಥೆ ಸರಿ ಇದ್ದರೆ ಕೆಲಮಟ್ಟಿಗೆ ಇದನ್ನು ತಡೆಗಟ್ಟಬಹುದು.

ಇದರೊಂದಿಗೆ, ಮಹಾನಗರಿಯಾದ, ಬೃಹತ್ತಾಗಿ ಬೆಳೆದಿರುವ ಬೆಂಗಳೂರಿನಲ್ಲಿ ಉದ್ಯೋಗ, ಶಿಕ್ಷಣಕ್ಕಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಪಯಣಿಸುವುದು ಸಾಮಾನ್ಯ. ನಿಸರ್ಗದ ಕರೆಗೆ ಸಾರ್ವಜನಿಕ ಶೌಚಾಲಯ ಉಪಯೋಗಿಸುವುದು ಅನಿವಾರ್ಯ. ಆದರೆ ಬಹುತೇಕ ಸಾರ್ವಜನಿಕ ಶೌಚಾಲಯಗಳಿಗೆ ಭದ್ರವಾದ ಬಾಗಿಲು- ಬೀಗ ಇಲ್ಲ, ಜೊತೆಗೆ ಶೇಕಡ 66ರಷ್ಟು ಶೌಚಾಲಯಗಳಲ್ಲಿ ದೀಪಗಳು ಉರಿಯುತ್ತಿಲ್ಲ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ. ಹಾಗಾಗಿಯೇ ಬಹಳಷ್ಟು ಮಹಿಳೆಯರು ‘ಹಗಲೇನೋ ಪರವಾಗಿಲ್ಲ. ವಾಸನೆ, ಗಲೀಜು ಹೇಗೋ ಸಹಿಸಬಹುದು. ಆದರೆ ಸಂಜೆಯಾಯಿತು ಎಂದರೆ ಚಿಂತೆಯಾಗುತ್ತದೆ. ಹಾಗಾಗಿ ಎಷ್ಟೋ ಬಾರಿ ನೀರು ಕುಡಿಯುವುದನ್ನೇ ಕಡಿಮೆ ಮಾಡುತ್ತೇವೆ. ಒಟ್ಟಾಗಿದ್ದರೆ ಒಬ್ಬರಿಗೊಬ್ಬರು ಕಾವಲು ನಿಂತು ಸರದಿ ಮೇಲೆ ಹೋಗುತ್ತೇವೆ. ಒಬ್ಬರೇ ಇದ್ದರೆ ಶೌಚಾಲಯಕ್ಕೆ ಹೋಗುವುದನ್ನೇ ಮುಂದೂಡುತ್ತೇವೆ’ ಎಂದು ಹೇಳುತ್ತಾರೆ.

ಬಡಾವಣೆಗಳಲ್ಲಿಯೂ ಬೀದಿದೀಪ ಇಲ್ಲದಿರುವುದು ಅಥವಾ ಕೆಟ್ಟಿರುವುದು ದೊಡ್ಡ ಸಮಸ್ಯೆ ಎನ್ನುವುದು ನಿವಾಸಿಗಳ ಕೊರಗು. ‘ಬಹುತೇಕ ಕಡೆ ಕಸದ ನಿರ್ವಹಣೆ ವ್ಯವಸ್ಥಿತವಾಗಿ ನಡೆಯುತ್ತಿದ್ದರೂ ಅದನ್ನು ಪಾಲಿಸದೇ ಜನರು ರಾತ್ರಿ ವೇಳೆ ಮೂಟೆಗಟ್ಟಲೆ ಕಸವನ್ನು ತಂದು ಬಿಸಾಡುವುದು ಬೀದಿದೀಪ ಇಲ್ಲದ ರಸ್ತೆಯ ಬದಿಯಲ್ಲಿ! ಕಸ ಬಿದ್ದಂತೆಲ್ಲಾ ಇಲಿ, ಜಿರಲೆ, ಸೊಳ್ಳೆಗಳ ಕಾಟ ಹೆಚ್ಚುತ್ತದೆ. ಕಸದಲ್ಲಿರುವ ಆಹಾರವನ್ನು ತಿನ್ನಲು ಬೀದಿನಾಯಿಗಳು ಬಂದು ಸೇರುತ್ತವೆ. ರಾತ್ರಿ ಓಡಾಡುವವರಿಗೆ ಸರಿಯಾಗಿ ಕಾಣದೆ ಅಲ್ಲಲ್ಲೇ ಅಡಗಿದ್ದ ನಾಯಿಗಳು ಅಟ್ಟಿಸಿಕೊಂಡು ಬಂದ ಅನೇಕ ಉದಾಹರಣೆಗಳಿವೆ.

ಇಂತಹ ದೂರುಗಳಿಗೆ ಪಾಲಿಕೆ ಹಾಗೂ ವಿದ್ಯುತ್ ಮಂಡಳಿಯವರು ಪರಸ್ಪರರನ್ನು ದೂರುವುದರಿಂದ ಪ್ರಯೋಜನ ಇಲ್ಲದಂತಾಗಿದೆ. ಸಹಾಯವಾಣಿಗೆ ಕರೆ ಮಾಡಿದರೆ, ದೂರು ಸಲ್ಲಿಕೆಯಾಗಿರುವ ಬಗ್ಗೆ ಸಂದೇಶ ಬರುವುದೇನೋ ಸರಿ. ಆದರೆ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಸ್ಮಾರ್ಟ್‌ಸಿಟಿ ಆಗಬೇಕಾದರೆ, ಹೆಚ್ಚು ಬೀದಿ ದೀಪಗಳನ್ನು ಹಾಕುವುದರ ಜತೆಗೆ ಕೆಟ್ಟು ನಿಂತಿರುವ ಬೀದಿದೀಪಗಳನ್ನು ಸರಿಪಡಿಸಬೇಕು ಎಂಬುದು ಬಹುತೇಕರ ಅಭಿಪ್ರಾಯ.

ಮೂಲಭೂತ ಸೌಲಭ್ಯವಾಗಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಬೀದಿದೀಪಗಳ ಸಂಖ್ಯೆ ಹೆಚ್ಚಬೇಕು, ಕೆಟ್ಟಿರುವಂತಹವು ದುರಸ್ತಿಯಾಗಬೇಕು. ಇಲ್ಲದಿದ್ದಲ್ಲಿ ಅಪರಾಧ, ಅಪಘಾತಗಳ ಸಂಖ್ಯೆಯನ್ನು ತಗ್ಗಿಸುವುದು ಕಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT