ಮಂಗಳವಾರ, ಅಕ್ಟೋಬರ್ 22, 2019
21 °C
ಜನಪ್ರತಿನಿಧಿಗಳ ಅಸಹನೀಯ ರಾಜಕೀಯ ಪ್ರಹಸನಗಳನ್ನು ನೋಡಿಯೂ ಅದರ ವಿರುದ್ಧ ಜನ ದನಿ ಎತ್ತದಿರುವುದಕ್ಕೆ್ ಕಾರಣಗಳೇನು?

ಪ್ರಜಾಪ್ರಭುತ್ವ ಮತ್ತು ಜನದನಿ

Published:
Updated:
Prajavani

ಅಸಂಗತ ರಾಜಕೀಯ ನಾಟಕಗಳನ್ನು ರಾಜ್ಯದಲ್ಲಿ ನಿರಂತರವಾಗಿ ನೋಡುತ್ತಲೇ ಇದ್ದೇವೆ. ಸಾಂವಿಧಾನಿಕ ಹುದ್ದೆಗಳು ಘನತೆ ಕಳೆದುಕೊಂಡಿವೆ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಪ್ರಸಂಗಗಳೂ ನಡೆದಿವೆ. ಪ್ರಜಾಪ್ರಭುತ್ವ ನಿಜಕ್ಕೂ ತನ್ನ ಅರ್ಥ ಕಳೆದುಕೊಂಡು ಕುಳಿತಂತೆ ಇದೆ. ಅದು ‘ಕಣ್‌ಕಟ್ಟು’ ಅನ್ನಿಸುವ ಭಾವನೆ ಮೂಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ಕನಸು, ತ್ಯಾಗ, ಬಲಿದಾನಗಳಿಗೆ ಅರ್ಥವೇ ಇಲ್ಲ ಅನಿಸುತ್ತಿದೆ.

ಇವೆಲ್ಲವನ್ನೂ ನೋಡುತ್ತ ಜನ ಏಕೆ ಮೌನವಾಗಿದ್ದಾರೆ ಎನ್ನುವ ಗಂಭೀರವಾದ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮರೆತಂತೆ, ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ಜನಪ್ರತಿನಿಧಿಗಳು ವರ್ತಿಸುತ್ತಿದ್ದರೂ ಸಂಬಂಧಿಸಿದ ಕ್ಷೇತ್ರ ಮಟ್ಟದಲ್ಲಿ ಜನ ಏಕೆ ಬಂಡಾಯ ಎದ್ದಿಲ್ಲ? ಪ್ರಜಾಪ್ರಭುತ್ವದ ರಕ್ಷಣೆಗಾಗಿ ಒಪ್ಪಿತ ಮಾರ್ಗಗಳಲ್ಲಿ ಹೋರಾಡದೇ ಇರುವುದು ಏಕೆ? ದನಿ ಎತ್ತುವ ಶಕ್ತಿಯನ್ನೇ ಜನರು ಕಳೆದುಕೊಂಡಿದ್ದಾರೆಯೇ? ಪ್ರಭುತ್ವದ ಎದುರು ಅಷ್ಟೊಂದು ಅಸಹಾಯಕರಾಗಿ ಹೋಗಿದ್ದಾರೆಯೇ?

ನಮಗೆ ಗೊತ್ತಿದೆ. ರಾಜರ ಆಳ್ವಿಕೆಗಳಲ್ಲಿ ಅಥವಾ ಸರ್ವಾಧಿಕಾರಿ ಆಡಳಿತದಲ್ಲಿ ಜನರ ಧ್ವನಿ ಉಡುಗಿ ಹೋಗುತ್ತದೆ. ಏಕೆಂದರೆ ಆಳುವವರ ವಿರುದ್ಧ ಅಲ್ಲಿ ದನಿ ಎತ್ತುವುದು ಅಪಾಯಕಾರಿ. ಕ್ರೌರ್ಯದ ಮೂಲಕ ಪ್ರಭುತ್ವವು ಜನರ ಸದ್ದಡಗಿಸುತ್ತದೆ. ದಕ್ಷಿಣ ಕೊರಿಯಾದ ಕಿಮ್ ಜಾಂಗ್‌ ಉನ್‌ ಆಡಳಿತದಲ್ಲಿ ಏನೆಲ್ಲಾ ನಡೆಯುತ್ತವೆ ಎನ್ನುವ ವರದಿಗಳು ಆಗಾಗ ಪ್ರಕಟವಾಗುತ್ತಿರುತ್ತವೆ. ಹಿಂದೆ ಹೋದರೆ, ಚೀನಾದಲ್ಲಿ ಕುಪ್ರಸಿದ್ಧ ಟಿಯನಾನ್ಮೆನ್‌ ಚೌಕದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಾ ಕುಳಿತಿದ್ದ ಪ್ರಜಾಪ್ರಭುತ್ವವಾದಿ ವಿದ್ಯಾರ್ಥಿಗಳ ಮೇಲೆ ಚೀನಾ ಸೇನೆಯು ಎರಗಿತ್ತು. ಟ್ಯಾಂಕ್‍ಗಳು, ಬುಲ್ಡೋಜರ್‌ಗಳನ್ನು ಬಳಸಿ ಸಾವಿರಾರು ವಿದ್ಯಾರ್ಥಿಗಳನ್ನು ಕೊಂದು ಹಾಕಿ ಅವರ ಧ್ವನಿಯನ್ನು ಅಡಗಿಸಿತ್ತು.

ಪ್ರಶ್ನೆ ಎಂದರೆ, ‘ಪ್ರಜಾಪ್ರಭುತ್ವ’ಕ್ಕೆ ಕೂಡ ಜನರ ನಿಜಧ್ವನಿಯನ್ನು ಹಿಸುಕಿ ಹಾಕಲು ಬರುತ್ತದೆಯೇ? ಬಹುಶಃ ಈ ಪ್ರಶ್ನೆಗೆ ‘ಹೌದು’ ಎಂದೇ ಉತ್ತರಿಸಬೇಕಿದೆ. ಇಲ್ಲಿಯೂ ಜನಧ್ವನಿಯನ್ನು ಅಡಗಿಸಬಲ್ಲ ತಂತ್ರಗಳಿವೆ. ಕಣ್ಣಿಗೆ ಕಾಣದ, ಸದ್ದಿಲ್ಲದ ಸೂಕ್ಷ್ಮ ತಂತ್ರಗಳು ಅವು. ನಮ್ಮ ದೇಶದಲ್ಲಿ ಅಂತಹ ತಂತ್ರಗಳ ಬಳಕೆ ವ್ಯಾಪಕವಾಗತೊಡಗಿದೆ.

ಬಹುಶಃ ಇಂತಹ ಒಂದು ತಂತ್ರವೆಂದರೆ, ಜನಧ್ವನಿಯನ್ನು ಅಖಂಡವಾಗಿರಲು ಬಿಡದೆ ಚಿಕ್ಕಚಿಕ್ಕ ಚೂರುಗಳನ್ನಾಗಿ ಒಡೆಯುವುದು. ಅಂದರೆ ಸಮಾಜದ ಛಿದ್ರೀಕರಣ. ಹಾಗೆಯೇ ಈ ಚೂರುಗಳು ಎಂದೆಂದೂ ಒಂದೇ ಧ್ವನಿಯಾಗಿ ಕೂಡಿಕೊಳ್ಳದಂತೆ ನೋಡಿಕೊಳ್ಳುವುದು.  ಮೀಸಲಾತಿ, ಒಳಮೀಸಲಾತಿಯಂತಹ ಸಬಲೀಕರಣದ ಅಸ್ತ್ರಗಳೂ ಜನರ ನಡುವೆ ಬಿರುಕು ಮೂಡಿಸಲು ಬಳಕೆಯಾಗುತ್ತಿವೆ. ಇವುಗಳೊಂದಿಗೆ ನೂರಾರು ಜಾತಿ, ಉಪಜಾತಿಗಳು, ಪ್ರದೇಶ, ಭಾಷೆಗಳಂತಹವು ಕೂಡ ಒಡಕು ಮೂಡಿಸುವ ಅಸ್ತ್ರಗಳಾಗಿ ಮಾರ್ಪಟ್ಟಿವೆ. ಹಿಂದೂ, ಮುಸ್ಲಿಂ, ಕ್ರೈಸ್ತದಂತಹ ದೊಡ್ಡದೊಡ್ಡ ವಿಭಜನೆಗಳನ್ನು ಬಿಟ್ಟು ಬಿಡೋಣ. ಅವುಗಳ ಒಳಗಡೆಯೇ ಸಹಸ್ರಾರು ಒಳವಿಭಜನೆಗಳನ್ನು ಸೃಷ್ಟಿಸಲಾಗಿದೆ. ಪಂಚಾಯಿತಿ ವ್ಯವಸ್ಥೆ ಒಳಗೊಂಡಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವಿಭಜನೆಗೆ ಒಂದು ಹತಾರವಾಗಿ ಬಳಕೆ ಆಗುತ್ತಿವೆ. ಈ ವಿಭಜನೆಗಳು ತಳಮಟ್ಟದಲ್ಲಿ ಕೂಡ ಒಂದರೊಡನೊಂದು ಕೂಡಿಕೊಳ್ಳುವುದೇ ಇಲ್ಲ.

ಒಂದು ವರ್ಗವು ಇನ್ನೊಂದು ವರ್ಗದ ಜತೆ ಧ್ವನಿಗೂಡಿಸುವುದಿಲ್ಲ. ನಾಯಕರು ಎಷ್ಟೇ ಕೊಳೆತು ನಾರಿದರೂ, ಬೆಂಬಲಿಸುವ ಸಮುದಾಯಗಳು ಅವರನ್ನು ಬಿಟ್ಟುಕೊಡುವುದಿಲ್ಲ. ಉಪಜಾತಿ, ಜಾತಿ, ಧರ್ಮದ ನೆಲೆಯಲ್ಲಿ ಸಮರ್ಥನೆಗೆ ನಿಲ್ಲುತ್ತವೆ. ಮೌಲ್ಯಗಳಿಗಿಂತಲೂ ಅವುಗಳಿಗೆ ತಮ್ಮ ಜಾತಿ, ಧರ್ಮಕ್ಕೆ ಸೇರಿದ ನಾಯಕನು ಅಧಿಕಾರಕ್ಕೆ ಏರಬೇಕು, ಅಧಿಕಾರದಲ್ಲಿ ಉಳಿಯಬೇಕು ಎಂಬುದೇ ಮುಖ್ಯವೆನಿಸುತ್ತಿದೆ. ಇಂತಹ ಸಾಮಾಜಿಕ ಛಿದ್ರೀಕರಣವನ್ನು ಹುಟ್ಟುಹಾಕಿದ, ಪೋಷಿಸಿದವರ ತಂತ್ರಗಳು ನಮ್ಮ ಜನರ ಧ್ವನಿಗಳನ್ನೇ ಅಡಗಿಸಿಬಿಟ್ಟಿವೆ. ಯಾರಾದರೂ ಒಳ್ಳೆಯ ಮಾತನಾಡಿದರೆ ಅದನ್ನು ಮುಕ್ತವಾಗಿ ಸ್ವೀಕರಿಸುವ ಮನಃಸ್ಥಿತಿಯೇ ಕಾಣೆಯಾಗುತ್ತಿದೆ. ಪ್ರತಿಯೊಂದರಲ್ಲೂ ಜಾತಿ–ಧರ್ಮದ ಆಯಾಮಗಳನ್ನು ಹುಡುಕುವ ಕುಚೋದ್ಯ ಜನರ ಒಗ್ಗಟ್ಟಿಗೆ ಅಡ್ಡಗೋಡೆ ಯಾಗಿದೆ. ಕಟ್ಟುವ ಮಾತು  ಯಾರಿಗೂ ರುಚಿಸದ ಹಂತಕ್ಕೆ ಮುಟ್ಟಿದೆಯೇನೊ ಎಂದು ಅನಿಸುತ್ತಿದೆ. 

ಈಗಿನ ನಮ್ಮ ರಾಜಕೀಯ ವ್ಯವಸ್ಥೆಯು ಜೀವನದ ಕೇಂದ್ರ ಬಿಂದುವಿನಲ್ಲಿ ಜನಪ್ರತಿನಿಧಿಗಳನ್ನು ಪೂಜೆಗೆ ಕುಳ್ಳಿರಿಸಿದಂತಿದೆ. ಚಿಕ್ಕ‍ಪುಟ್ಟ  ಕೆಲಸಗಳಿಗೂ ಜನಪ್ರತಿನಿಧಿಗಳ ಬಳಿ ಹೋಗಿ ಜನರು ತಲೆ ತಗ್ಗಿಸಿ ನಿಲ್ಲುವುದನ್ನು ಅನಿವಾರ್ಯವಾಗಿಸಿದೆ ಈ ವ್ಯವಸ್ಥೆ. ಹಾಗೆ ಹೋದರೆ ಮಾತ್ರ ಕೆಲಸವಾಗುವುದು. ತಮ್ಮ ಬಳಿ ಬಾರದವರನ್ನು ಜನಪ್ರತಿನಿಧಿಗಳು ‘ಉದ್ಧಟ’ರೆಂದು ಭಾವಿಸುತ್ತಾರೆ. ಅಂತಹವರ ಮೇಲೆ ಮರಿಪುಢಾರಿಗಳು ಒಂದು ಕಣ್ಣಿಟ್ಟಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪರಿಪಾಟ ಕಾಣಸಿಗುತ್ತದೆ. ಶಾಲೆ–ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಪ್ರವೇಶ, ಆಶ್ರಯ ಮನೆ ಮಂಜೂರು, ಶಿಕ್ಷಕರ ವರ್ಗಾವಣೆ... ಎಲ್ಲದಕ್ಕೂ ಜನಪ್ರತಿನಿಧಿಗಳ ಬಳಿ ಎಡತಾಕುವುದು ಅನಿವಾರ್ಯ ಎನ್ನುವ ಸ್ಥಿತಿ ಇದೆ. ಆಳುವವರ ವಿರುದ್ಧ ಧ್ವನಿ ಎತ್ತಿದರೆ ವ್ಯಾಪಾರ, ವ್ಯವಹಾರಕ್ಕೂ ತೊಂದರೆ ಆಗಬಹುದು. ಧ್ವನಿ ಹೊರಡದಿರುವುದರ ಹಿಂದೆ ಇಂತಹ ನಾನಾ ಕಾರಣಗಳು ಕೆಲಸ ಮಾಡುತ್ತಿವೆ. 

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)