ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಇ-ಸ್ಕೂಲ್ ಈಗ, ಸ್ಕೂಲ್ ಯಾವಾಗ?

ತಾಂತ್ರಿಕವಾದ ಶಿಕ್ಷಣದಿಂದ ಯಾಂತ್ರಿಕ-ಗುರು, ಯಾಂತ್ರಿಕ ಶಿಷ್ಯರು ತಯಾರಾಗಿಬಿಡುವ ಅಪಾಯವನ್ನು ನಾವು ಆತಂಕದಿಂದ ಎದುರು ನೋಡಬೇಕಾದ ಸಂದರ್ಭ ಇದು
Last Updated 3 ಜೂನ್ 2020, 3:00 IST
ಅಕ್ಷರ ಗಾತ್ರ

ಚಿಕ್ಕ ಮಕ್ಕಳಲ್ಲಿ ‘ಇ-ಸ್ಕೂಲ್’ ಬೀರುವ ಪರಿಣಾಮಗಳ ಬಗ್ಗೆ ನಿಮ್ಹಾನ್ಸ್‌ನಿಂದ ಶಿಕ್ಷಣ ಸಚಿವರು ಅಭಿಪ್ರಾಯ ಕೇಳಿದ್ದು, 6 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಕಂಪ್ಯೂಟರ್- ಮೊಬೈಲ್ ತೆರೆಗಳನ್ನು ಹೆಚ್ಚು ಹೊತ್ತು ನೋಡುವುದರಿಂದ ದೇಹಕ್ಕೆ-ಮನಸ್ಸಿಗೆ ಹಾನಿಕಾರಕ ಎಂಬುದನ್ನು ಅಲ್ಲಿನ ಪರಿಣತರು ಒತ್ತಿ ಹೇಳಿರು ವುದು ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದರ ಬಗ್ಗೆಯೂ ನಿಮ್ಹಾನ್ಸ್ ಉಲ್ಲೇಖಿಸಿದೆ.

ಪ್ರಸ್ತುತ ಪರಿಸ್ಥಿತಿಯಿಂದ, ಮಕ್ಕಳೊಡನೆ ಹೆಚ್ಚು ಸಮಯ ಕಳೆಯಬೇಕಾದ ಅನಿವಾರ್ಯ ಅವಕಾಶ ಅಪ್ಪ-ಅಮ್ಮಂದಿರಿಗೆ ದೊರಕಿದೆ. ಮಕ್ಕಳ ಬೇಸಿಗೆ ರಜೆಯ ಮಜಾ, ಪ್ರತಿಬಾರಿ ಅಪ್ಪ-ಅಮ್ಮಂದಿರಿಗೆ ‘ಸಜಾ’ ಎಂಬಂತೆ ಅನಿಸುತ್ತಿದ್ದರೂ, ಈ ಬಾರಿ ಅನಿಶ್ಚಿತತೆಯ ಕಠಿಣ ಸಜೆಯಾಗಿಬಿಟ್ಟಿದೆ. ಇದೊಂದು ರೀತಿಯಲ್ಲಿ, ಯಾವಾಗ ಮತ್ತೆ ಶಿಕ್ಷಣದ ಒತ್ತಡ ಆರಂಭವಾಗಬಹುದು ಎಂಬ ಬಗ್ಗೆ ಪೋಷಕರಲ್ಲಿ ಗೊಂದಲವನ್ನೂ ಮಕ್ಕಳ ಮೇಲಿನ ಒತ್ತಡವನ್ನು ಹಗುರ ಮಾಡಿ ನಿರಾಳ ಭಾವವನ್ನೂ ಮೂಡಿಸಿದೆ!

9-10ನೇ ತರಗತಿಯ ಮಕ್ಕಳು, ದ್ವಿತೀಯ ಪಿ.ಯು.ಸಿ.ಗೆ ಕಾಲಿಡುವ ವಿದ್ಯಾರ್ಥಿಗಳಂತೂ ಹೇಗಾದರೂ ಓದಲೇಬೇಕಾದ, ನಾವೆಲ್ಲರೂ ವರ್ಷಗಳಿಂದ ಬೆಳೆಸಿಕೊಂಡಿರುವ ‘ಮಕ್ಕಳು ಓದಲೇಬೇಕೆನ್ನುವ ಚಟ’ದ ಕಾರಣದಿಂದ ಮೊರೆ ಹೋಗುತ್ತಿರುವುದು ಇ-ಸ್ಕೂಲಿಗೆ! ಇ-ಕಲಿಕೆಯು ಮಕ್ಕಳ ಬೆಳವಣಿಗೆಗೆ ಮಾರಕ ಎಂದು ಅಧ್ಯಯನಗಳು ಹೇಳಿದರೂ, ‘ಸ್ಕ್ರೀನ್-ತೆರೆ’ ಎನ್ನುವುದು ಹೊಸ ‘ಕಾಗದ’ ಎನ್ನುವುದನ್ನು ನಾವು ಒಪ್ಪಲೇಬೇಕು. ಪತ್ರ ಬರೆಯಲು, ನಿಘಂಟು ತೆಗೆದು ಹುಡುಕಲು ಇತ್ಯಾದಿಗಳಿಗೆ ಇಂದು ನಾವು ಹೆಚ್ಚಾಗಿ ಬಳಸುವುದು ಕಾಗದವನ್ನಲ್ಲ, ಪುಸ್ತಕವನ್ನಲ್ಲ. ಶಿಕ್ಷಣಕ್ರಮದಲ್ಲಿ ಸುಧಾರಣೆಗಳಿಗೆ, ಹೊಸ ಹೊಸ ಕ್ರಮಗಳಿಗೆ ಹೆಸರಾಗಿರುವ ಫಿನ್ಲೆಂಡ್, ಮಕ್ಕಳಿಗೆ ಕಾಪಿರೈಟಿಂಗ್ ತಿದ್ದಿಸುವುದನ್ನು ಕೈಬಿಟ್ಟು, ಟೈಪಿಂಗ್ ಕಲಿಸುವುದನ್ನು ಈಗಾಗಲೇ ಜಾರಿಗೆ ತಂದಿದೆ.

ಟ್ಯಾಬ್‍ಗಳು- ಮೊಬೈಲ್‍ಗಳನ್ನು ಹತ್ತಿರ ಹಿಡಿದು, ಹೇಗೆ ಬೇಕಾದರೆ ಹಾಗೆ ಕುಳಿತು, ಕಣ್ಣನ್ನು ಮಿಟುಕಿಸದೆ ಪಾಲ್ಗೊಳ್ಳುವ ‘ಇ-ಸ್ಕೂಲ್’ನಿಂದ ಮಕ್ಕಳ ದೈಹಿಕ– ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳೇ ಅಧಿಕ ಎಂಬುದರ ಬಗೆಗೆ ಯಾರಿಗೂ ಅನುಮಾನವಿರಲು ಸಾಧ್ಯವಿಲ್ಲ. ಆದರೆ ‘ಇ-ಸ್ಕೂಲ್’ ಇಲ್ಲ ಎಂದ ಮಾತ್ರಕ್ಕೆ ಮಕ್ಕಳು ಮೊಬೈಲ್- ಟ್ಯಾಬ್- ಇಪ್ಯಾಡ್‍ಗಳನ್ನು ಉಪಯೋಗಿಸುವುದಿಲ್ಲವೇ? ತಾವು ಅವುಗಳ ಬಳಕೆಯನ್ನು ಸೀಮಿತಗೊಳಿಸಿ, ಮಕ್ಕಳು ಅವುಗಳನ್ನು ಬಳಸುವಲ್ಲಿ ಶಿಸ್ತು ಪಾಲಿಸುವಂತೆ ಮಾಡುವ ಸಾಮರ್ಥ್ಯ ಎಷ್ಟು ಪಾಲಕರಿಗಿದೆ? ಹಾಗಾಗಿ ಕೇವಲ ಶಿಕ್ಷಣಕ್ಕಾಗಿ ಮಕ್ಕಳು ತಂತ್ರಜ್ಞಾನ ವನ್ನು ಉಪಯೋಗಿಸುವಂತಿಲ್ಲ ಎಂದು ನಾವು ವಿರೋಧಿಸಿದರೆ ಅದು ಸಾಧುವಲ್ಲ, ಸಾಧ್ಯವೂ ಇಲ್ಲ.

ಮನೋವೈದ್ಯೆಯಾಗಿ, ಶಾಲೆಯಲ್ಲಿ ಓದುತ್ತಿರುವ ಇಬ್ಬರು ಮಕ್ಕಳ ತಾಯಿಯಾಗಿ ನನ್ನಲ್ಲಿ ‘ಇ-ಸ್ಕೂಲ್’ನ ಕಲ್ಪನೆಯು ಎಚ್ಚರ, ಆತಂಕ, ಉತ್ಸಾಹ ಹೀಗೆ ವಿವಿಧ ಭಾವಗಳನ್ನು ಮೂಡಿಸುತ್ತದೆ. ಆನ್‍ಲೈನ್ ಕ್ಲಾಸ್‍ಗಳಿಂದ ಉಪಯೋಗವೂ ಇದೆ, ಆತಂಕಗಳೂ ಕಾದಿವೆ. ಮಕ್ಕಳಿಗೆ ತರಗತಿಗಳಲ್ಲಿ ಹೇಗೆ ಕಲಿಸಲಾಗುತ್ತಿದೆ ಎಂಬುದನ್ನು ನೇರವಾಗಿ ನೋಡುವ ಅವಕಾಶ ಅಪ್ಪ-ಅಮ್ಮಂದಿರಿಗೆ ದೊರೆಯುತ್ತದೆ. ಆದರೆ ಚಿಕ್ಕಮಕ್ಕಳಿಗೆ ಅಂತರ್ಜಾಲದ ಸಂಪರ್ಕ ಸುಗಮಗೊಳಿಸಿಕೊಡುವ, ಹದಿಹರೆಯದ ಮಕ್ಕಳು ‘ಸ್ಪ್ಯಾಮ್’ ಮಾಡುವ, ಗುರುವಿಗೇ ‘ನಿನ್ನನ್ನು ಪ್ರೀತಿಸುತ್ತೇನೆ’ ‘ನೀನೆಷ್ಟು ಸುಂದರವಾಗಿದ್ದೀಯ’ ಎಂದೆಲ್ಲ ಮೆಸೇಜ್ ಹಾಕುವಂತಹ ನಡವಳಿಕೆಯನ್ನು ನಿಭಾಯಿಸಬೇಕಾದ ಹೊಣೆಯೂ ಅವರ ಮೇಲೆ ಬೀಳುತ್ತದೆ. ಮಕ್ಕಳು ಕಲಿಯಬೇಕೆಂದು ಹಿರಿಯರು ಅಪೇಕ್ಷಿಸುವ, ಬಹುವಾಗಿ ಇಷ್ಟಪಡುವ ಶಿಸ್ತು, ವಿಧೇಯ ನಡವಳಿಕೆ, ಸ್ನಾನ ಮಾಡಿ- ತಲೆಬಾಚಿ- ಸರಿಯಾಗಿ ಬಟ್ಟೆ ಧರಿಸಿ, ನೆಟ್ಟಗೆ ಕುಳಿತುಕೊಳ್ಳುವ ನಡವಳಿಕೆಗಳನ್ನು ಇ-ಸ್ಕೂಲು ವಿಧಿಸಲಾರದು!

ದ್ವಿತೀಯ ಪಿ.ಯು.ಸಿ.ಗೆ ಎಷ್ಟೋ ಕಾಲೇಜುಗಳು 8-9 ಗಂಟೆಗಳ ಕಾಲ ಆನ್‍ಲೈನ್ ತರಗತಿಗಳನ್ನು ಆರಂಭಿಸಿವೆ. ವಿದ್ಯಾರ್ಥಿಗಳು ‘ಆನ್‍ಲೈನ್’ ಆದರೂ ಅವರ ಮನಸ್ಸು-ಬುದ್ಧಿಗಳು ‘ಆಫ್‍ಲೈನ್’ ಆಗಿರುತ್ತವೆ ಯೇನೋ ಎಂಬ ಸಂಶಯ ನನಗೆ! ಅದರೊಂದಿಗೆ ‘ಇ-ಸ್ಕೂಲ್’ ಅಭ್ಯಾಸವಾಗಿ ಬಿಟ್ಟರೆ, ಶಾಲೆಗೆಂದು ಪ್ರಯಾಣಿಸಬೇಕಾದ ಅಗತ್ಯವಿರದಿರುವುದು, ಬೇಕಾದ ಹಾಗೆ ಕುಳಿತುಕೊಳ್ಳುವ ಆರಾಮ ಇತ್ಯಾದಿಗಳು ನಮ್ಮ ಮಕ್ಕಳ ಸೋಮಾರಿತನ, ನಮ್ಮ ನಿಷ್ಕ್ರಿಯತೆ ಹೆಚ್ಚಿಸಿ ಬಿಟ್ಟರೆ, ಆಗ ಮತ್ತೆ ಶಾಲೆಗೆ ಹೋಗುವ ಅಭ್ಯಾಸ
ರೂಢಿಸಿಕೊಳ್ಳುವುದೇ ಕಷ್ಟವಾಗಬಹುದು!

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ 9 ವರ್ಷದ ಮಗ ಕೇಳಿದ ‘ಒಂದು ವರ್ಷ ಶಾಲೆಯೇ ಇಲ್ಲದಿದ್ರೆ ಏನಾಗುತ್ತೆ’ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ ಎನಿಸುತ್ತದೆ. ಕೆಲವು ತಿಂಗಳು ಮಕ್ಕಳು ಶಿಕ್ಷಣಕ್ರಮದ ಕಲಿಕೆಯಿಂದ ಕಲಿಯದಿದ್ದರೆ, ಅಪ್ಪ-ಅಮ್ಮ ಒತ್ತಡ ಹೇರದೆ ಮನೆಯಲ್ಲಿಯೇ ತಮಗಾದಷ್ಟು ಕಲಿಸಿದರೆ ಏನಾಗಬಹುದು? ಉತ್ತರವನ್ನು ನಾವು ಕಾದು ನೋಡಬೇಕಾಗಿದೆ!

ತಾಂತ್ರಿಕವಾದ ಶಿಕ್ಷಣದಿಂದ ಯಾಂತ್ರಿಕ-ಗುರು, ಯಾಂತ್ರಿಕ ಶಿಷ್ಯರು ತಯಾರಾಗಿಬಿಡುವ ಅಪಾಯವನ್ನೂ ನಾವು ಆತಂಕದಿಂದ ಎದುರು ನೋಡಬೇಕಾದ ಸಂದರ್ಭ ಇದು. ಹಾಗಾಗದೆ ತಂತ್ರಜ್ಞಾನದ ಉಪಯೋಗವೆಲ್ಲವನ್ನೂ ಬಳಸಿಕೊಂಡು, ನಂತರ ಮತ್ತೆ ನಮ್ಮ ಮಾನವ ಜಗತ್ತಿಗೆ ಮರಳಬೇಕಾದ ಸಾಮರ್ಥ್ಯ ನಮ್ಮಲ್ಲಿ ಉಳಿಯಲಿ ಎಂದು ಪ್ರಾರ್ಥಿಸುವುದಷ್ಟೇ ನಮಗೆ ಈಗ ಸಾಧ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT