ಗುರುವಾರ , ಮೇ 19, 2022
21 °C
ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೊಠಾರಿ ಆಯೋಗ ಶಿಫಾರಸು ಮಾಡಿದ್ದ ಶಾಲಾ ಸಂಕೀರ್ಣ ವ್ಯವಸ್ಥೆಯನ್ನು ಹೊಸ ಶಿಕ್ಷಣ ನೀತಿಯೂ ಪ್ರತಿಪಾದಿಸಿದೆ

ಶಾಲೆ ಸಬಲೀಕರಣ ‘ಸಂಕೀರ್ಣ’ವಲ್ಲ!

ಡಾ. ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ವಿಶ್ಲೇಷಣೆಯು ಕುತೂಹಲಕಾರಿ ಅಂಶಗಳನ್ನು ಹೊರಗೆಡಹುತ್ತದೆ. ಶಿಕ್ಷಣ ಇಲಾಖೆಯ 2019-20ನೇ ಸಾಲಿನ ಅಧಿಕೃತ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ 1ರಿಂದ 10ನೇ ತರಗತಿಗೆ ಸಂಬಂಧಿಸಿದಂತೆ ಒಟ್ಟು ಶಾಲೆಗಳ ಸಂಖ್ಯೆ 76,787. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಡೆಸಲಾಗುವ ಶಾಲೆಗಳ ಸಂಖ್ಯೆ 49,597 (ಶೇ 64.59), ಅನುದಾನಿತ ಶಾಲೆಗಳ ಸಂಖ್ಯೆ 7,264 (ಶೇ 9.46) ಹಾಗೂ ಅನುದಾನರಹಿತ ಶಾಲೆಗಳ ಸಂಖ್ಯೆ 19,926 (ಶೇ 25.95).

ಒಟ್ಟು ಶಾಲೆಗಳ ಸಂಖ್ಯೆಯಲ್ಲಿ ಶೇ 64.59ರಷ್ಟಿರುವ ಸರ್ಕಾರಿ ಸ್ವಾಮ್ಯದ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 45.83 ಲಕ್ಷ (ಶೇ 43.92), ಅನುದಾನಿತ ಶಾಲೆಗಳಲ್ಲಿ 13.17 ಲಕ್ಷ (ಶೇ 12.62) ವಿದ್ಯಾರ್ಥಿಗಳು ಕಲಿಯುತ್ತಿದ್ದರೆ, ಅನುದಾನರಹಿತ ಶಾಲೆಗಳಲ್ಲಿ 45.34 ಲಕ್ಷ (ಶೇ 43.45) ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಈ ವಿಶ್ಲೇಷಣೆಯಿಂದ ಕಂಡುಬರುವ ಅಂಶವೆಂದರೆ, ಕಡಿಮೆ ಸಂಖ್ಯೆಯ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೆ, ಹೆಚ್ಚಿನ ಸಂಖ್ಯೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ.

ಸರ್ಕಾರಿ ಶಾಲೆಗಳು ಗ್ರಾಮಗಳಲ್ಲಿ ಸಾಂದ್ರೀಕರಣಗೊಂಡು, ಪ್ರತೀ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದೆ. ಲಾಭದ ಆಕಾಂಕ್ಷೆ ಇಲ್ಲದೆ ಸಾರ್ವಜನಿಕ ಹಿತದೃಷ್ಟಿಯಿಂದ, ಶಿಕ್ಷಣದ ಹಕ್ಕನ್ನು ಎಲ್ಲರಿಗೂ ನೀಡುವ ಉದ್ದೇಶದಿಂದ ಸರ್ವ ಶಿಕ್ಷಣ ಅಭಿಯಾನ ಪ್ರಾರಂಭಗೊಂಡ ಸಂದರ್ಭದಲ್ಲಿ ಹಳ್ಳಿ ಹಳ್ಳಿಗೂ ಶಿಕ್ಷಣ ನೀಡಲು ಶಾಲೆಗಳನ್ನು ತೆರೆದಿದ್ದು ಹಾಗೂ ವರ್ಷದಿಂದ ವರ್ಷಕ್ಕೆ ಜನಸಂಖ್ಯಾ ಏರಿಕೆಯ ದರದಲ್ಲಿ ಕುಸಿತ ಮತ್ತು ಸ್ಥಿರತೆ ಕಂಡುಬಂದ ಕಾರಣ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತವಾಗುತ್ತಿದೆ.

ಈ ವಿದ್ಯಮಾನವು ದೇಶದ ಎಲ್ಲಾ ರಾಜ್ಯಗಳಲ್ಲಿ ಇದೆ. 2016-17ನೇ ಸಾಲಿನ ಅಂಕಿ ಅಂಶದ ಪ್ರಕಾರ, ದೇಶದ ಶೇ 28ರಷ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಶೇ 14.8ರಷ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ಸಂಖ್ಯೆ ಇದ್ದು ಒಂದು ಲಕ್ಷಕ್ಕೂ ಅಧಿಕ ಶಾಲೆಗಳಲ್ಲಿ ಒಬ್ಬರೇ ಅಧ್ಯಾಪಕರಿದ್ದಾರೆ. ನಮ್ಮ ರಾಜ್ಯದಲ್ಲಿ ಶೇ 70ರಷ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಇವುಗಳಲ್ಲಿ ಅನೇಕ ಶಾಲೆಗಳಲ್ಲಿ 5, 10, 15 ಹಾಗೂ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇದ್ದಾರೆ.

ಇಂತಹ ಶಾಲೆಗಳಲ್ಲಿ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಇದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲಾ ತರಗತಿಗಳ ಬೆರಳೆಣಿಕೆಯಷ್ಟು ಮಕ್ಕಳಿಗೆ ಎಲ್ಲಾ ವಿಷಯಗಳಿಗೂ ಅವರೇ ಪಾಠ ಬೋಧನೆ ಮಾಡಬೇಕಾಗು
ತ್ತದೆ. ಅಷ್ಟೇ ಅಲ್ಲ, ಮಕ್ಕಳಿಗೆ ಆಟವಾಡಲು ಜೊತೆಗಾರರೇ ದೊರೆಯುವುದಿಲ್ಲ. ಗುಂಪು ಆಟ, ಗುಂಪು ಚಟುವಟಿಕೆಗಳಿಗೆ ಅವಕಾಶವಿಲ್ಲದೇ ವಿದ್ಯಾರ್ಥಿಗಳ ಸಾಮಾಜಿಕ ಬೆಳವಣಿಗೆಗೆ ಅಡ್ಡಿ ಉಂಟಾಗುತ್ತದೆ. ಕಡಿಮೆ ಸಂಖ್ಯೆಯ ಮಕ್ಕಳಿಗೆ ಬೋಧಿಸಲು ಶಿಕ್ಷಕರಿಗೂ ಉತ್ಸಾಹ ಬರುವುದಿಲ್ಲ. ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳಲ್ಲಿ ಉತ್ತಮವಾದ ಗ್ರಂಥಾಲಯ, ಪ್ರಯೋಗಾಲಯಗಳಂತಹ ಮೂಲಸೌಕರ್ಯಗಳನ್ನು ಸರ್ಕಾರ ಸೃಷ್ಟಿ ಮಾಡಲು ಕಷ್ಟವಾಗುತ್ತದೆ. ಸಂಪನ್ಮೂಲಗಳು ಹಂಚಿಹೋಗುವ ಕಾರಣ ಎಲ್ಲರಿಗೂ ಎದ್ದು ಕಾಣುವಂತಹ ಸೌಲಭ್ಯಗಳನ್ನು ನೀಡಲು ಕಷ್ಟವಾಗುತ್ತದೆ.

ಕಲೆ, ನೃತ್ಯ, ನಾಟಕ, ಕ್ರೀಡೆಗಳಂತಹ ವಿಶೇಷ ವಿಷಯಗಳಿಗೆ ತಜ್ಞ ಶಿಕ್ಷಕರನ್ನು ಒದಗಿಸುವುದೂ ಕಷ್ಟ. ಜೊತೆಗೆ ಹೆಚ್ಚಿನ ಗ್ರಾಮಗಳಲ್ಲಿ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳೇ ಇರುವುದಿಲ್ಲ. ಕೆಲವು ಗ್ರಾಮಗಳಲ್ಲಿ ಕಡಿಮೆ ಸಂಖ್ಯೆಯ ಮಕ್ಕಳಿದ್ದು, ಆ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸುತ್ತಾರೆ.

ಇದಕ್ಕೆ ಪರಿಹಾರವಾಗಿ ರಾಷ್ಟ್ರೀಯ ಶಿಕ್ಷಣ ನೀತಿ– 2020ರಲ್ಲಿ ಶಾಲಾ ಸಂಕೀರ್ಣ ವ್ಯವಸ್ಥೆಯನ್ನು ಪ್ರತಿಪಾದಿಸಲಾಗಿದೆ. ಈ ಅಂಶವು ಕೊಠಾರಿ ಆಯೋಗದ (1964- 66) ವರದಿಯಲ್ಲಿದ್ದರೂ ಅನುಷ್ಠಾನ
ವಾಗಿಲ್ಲ. ಕ್ಲಸ್ಟರ್ ವ್ಯಾಪ್ತಿಯಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಒಂದು ದೊಡ್ಡ ಸರ್ಕಾರಿ ಪ್ರೌಢಶಾಲೆ
ಯನ್ನು ‘ಶಾಲಾ ಸಂಕೀರ್ಣ’ ಎಂದು ಗುರುತಿಸಿ, ಆ ಶಾಲೆಗೆ ಉತ್ತಮ ಸೌಕರ್ಯಗಳನ್ನು ಒದಗಿಸಿ ಅದನ್ನು ಸಬಲೀಕರಿಸುವುದು. ಎಲ್ಲಿ ಸಾಧ್ಯವಿದೆಯೋ ಅಂತಹ ಕಡೆ, ಬೆರಳೆಣಿಕೆಯಷ್ಟು ಮಕ್ಕಳಿರುವ ಶಾಲೆ
ಗಳನ್ನು ಹತ್ತಿರದ ‘ಶಾಲಾ ಸಂಕೀರ್ಣ’ಕ್ಕೆ ಸಂಯೋಜನೆ ಮಾಡುವುದು. ಶಾಲಾ ಸಂಕೀರ್ಣಕ್ಕೆ ಉತ್ತಮ ಗ್ರಂಥಾಲಯ, ಪ್ರಯೋಗಾಲಯ ಒದಗಿಸಿ, ಸಮಾಲೋಚಕರು, ತಜ್ಞ ಶಿಕ್ಷಕರನ್ನು ನೇಮಿಸಿಕೊಂಡು, ಸಂಕೀರ್ಣ ವ್ಯಾಪ್ತಿಯ ಶಾಲೆಗಳು ಈ ಸೌಲಭ್ಯಗಳನ್ನು ಬಳಸಿಕೊಳ್ಳುವ ವ್ಯವಸ್ಥೆ ಮಾಡುವ ಪ್ರಸ್ತಾಪ ಹೊಸ ಶಿಕ್ಷಣ ನೀತಿಯಲ್ಲಿದೆ.

ನಮ್ಮ ರಾಜ್ಯದಲ್ಲಿ ಈಗಾಗಲೇ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದಿದ್ದು, ಇದೇ ಮಾದರಿಯ ಶಾಲೆಗಳನ್ನು ಕ್ಲಸ್ಟರ್‌ಗೆ ಒಂದರಂತೆ ತೆರೆದಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಅನುಕೂಲವಾಗಲಿದೆ. ಸ್ವಯಂಸೇವಾ ಸಂಸ್ಥೆಗಳು ಸಹ ಭವಿಷ್ಯದ ದೃಷ್ಟಿಯಿಂದ ತಮ್ಮ ನೆರವನ್ನು ದೊಡ್ಡ ಶಾಲೆಗೆ ನೀಡುವುದರಿಂದ ಸಂಪನ್ಮೂಲಗಳು ಕ್ರೋಡೀಕರಣಗೊಂಡು ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.