ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಭೂಮಿ ಕಳೆದಿದೆ... ಹುಡುಕಿಕೊಡಿ

ರಾಜ್ಯದಲ್ಲಿ ಜಾರಿಯಲ್ಲಿರುವ ವಿವಿಧ ಕಾನೂನುಗಳ ಬೇಲಿಗಳನ್ನು ದಾಟಿ ಭೂಕಬಳಿಕೆ ನಡೆಯುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ
Published 1 ಜನವರಿ 2024, 23:59 IST
Last Updated 1 ಜನವರಿ 2024, 23:59 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಿತು. ಐಹೊಳೆಯಲ್ಲಿ ಚಾಲುಕ್ಯರು ನಿರ್ಮಿಸಿದ ಐತಿಹಾಸಿಕ ಸ್ಮಾರಕಗಳ ಸುತ್ತಮುತ್ತಲಿನ ಪ್ರದೇಶವನ್ನು ಕೆಲವರು ಒತ್ತುವರಿ ಮಾಡಿ, ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇದರಿಂದ ಐಹೊಳೆಯನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ತೊಂದರೆಯಾಗಿದೆ. ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಕಡಿಮೆಯಾಗ
ತೊಡಗಿದೆ ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾಯಿತು.

ದೇಶದೆಲ್ಲೆಡೆ ದೇವಾಲಯಗಳು, ಐತಿಹಾಸಿಕ ಸ್ಮಾರಕಗಳು, ಗೋಮಾಳ, ಸರ್ಕಾರಿ ಸಂಸ್ಥೆ, ಸಹಕಾರಿ ಸಂಸ್ಥೆಗಳ ಭೂಮಿಯ ಅತಿಕ್ರಮಣ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಹಣಕಾಸಿನ ಭ್ರಷ್ಟಾಚಾರಕ್ಕಿಂತಲೂ ದೊಡ್ಡ ಅಕ್ರಮವಾಗಿದೆ ಭೂಕಬಳಿಕೆ.

ಕೇಂದ್ರ ಸರ್ಕಾರದ ಡಿಜಿಟಲ್ ಭೂ ದಾಖಲೀಕರಣ ಯೋಜನೆ (ನ್ಯಾಷನಲ್ ಜನೆರಿಕ್ ಡಾಕ್ಯುಮೆಂಟ್ ರಿಜಿಸ್ಟ್ರೇಷನ್ ಸಿಸ್ಟಂ– ಎನ್‌ಜಿಡಿಆರ್‌ಎಸ್) ಉಪಯುಕ್ತವಾದುದು. ಇದು ಪರಿಣಾಮಕಾರಿಯಾಗಿ ಜಾರಿ
ಯಾದರೆ  ದೇಶದ ಒಟ್ಟು ಭೂಸಂಪತ್ತನ್ನು ಕಟ್ಟುನಿಟ್ಟಾಗಿ ರಕ್ಷಿಸಬಹುದು. ಆದರೆ ಅದನ್ನು ವ್ಯವಸ್ಥಿತವಾಗಿ ಜಾರಿಗೆ ತರುವ ಕಾರ್ಯ ನಡೆಯುತ್ತಿಲ್ಲ. ರಾಜ್ಯ ಮಟ್ಟದಲ್ಲಿ, ಹಸಿರು ವಲಯಕ್ಕೆ ಸೇರಿದ ಭೂಮಿಯನ್ನು ಕೈಗಾರಿಕೆಗೆ ಬಳಸಿದರೆ, ಕೈಗಾರಿಕೆ ಸ್ಥಾಪನೆ ಉದ್ದೇಶಕ್ಕೆ ಪಡೆದ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನುಗಳು ಜಾರಿಯಲ್ಲಿವೆ. ಆದರೆ ಎಲ್ಲ ಬೇಲಿಗಳನ್ನೂ ದಾಟಿ ಭೂ
ಕಬಳಿಕೆ ನಡೆಯುತ್ತಲೇ ಇದೆ. ಕಾನೂನುಗಳು ಕಟ್ಟುನಿಟ್ಟಾಗಿ ಪಾಲನೆಯಾಗದಿರುವುದು ಆತಂಕಕಾರಿ.

ಭೂಕಬಳಿಕೆ ಮತ್ತು ಒತ್ತುವರಿಯಿಂದಾಗಿ ನದಿಗಳು ಹರಿಯುವ ದಿಕ್ಕು ಕೂಡ ಬದಲಾಗುತ್ತಿರುವುದು ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿ ಪಾತ್ರದ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ಇದರ ಪರಿಣಾಮವಾಗಿ, ನದಿಗಳು ಹರಿಯುವ ಮಾರ್ಗ ಬದಲಾಗಿದೆ. ಪ್ರವಾಹದ ನೀರು ಹೊಲಗಳು, ಗ್ರಾಮಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯನ್ನು ಉಂಟುಮಾಡಿದ ನಿದರ್ಶನಗಳಿವೆ. ಪ್ರವಾಹ ಬಂದಾಗ ಒತ್ತುವರಿ ತೆರವು ಮಾಡುವ, ಕಠಿಣ ಕ್ರಮ ಜರುಗಿಸುವ ಮಾತುಗಳು ಕೇಳಿಬರುತ್ತವೆ. ನಂತರ ಎಲ್ಲರೂ ಮರೆತುಬಿಡುತ್ತಾರೆ.

ನದಿಗಳ ಮಾದರಿಯಲ್ಲೇ ಬಹಳಷ್ಟು ಹಳ್ಳಗಳು, ಕೆರೆಗಳು ಸಹ ಒತ್ತುವರಿಯಿಂದ ಮಾಯವಾಗಿವೆ. ಅಶೋಕ್ ನರೋಡೆ ಅವರು ಮನಕಲಕುವಂತೆ ಬರೆದ ‘ನಮ್ಮೂರ ಹಳ್ಳ ಕಳೆದಿದೆ’ ಎಂಬ ಪ್ರಬಂಧ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. ಭೂಒಡೆತನದ ಮುಖ್ಯ ದಾಖಲೆಯಾದ ಉತಾರದಲ್ಲಿ (ಆರ್‌ಟಿಸಿ) ಮಾಲೀಕ ಹೊಂದಿದ ಭೂಮಿಯ ವ್ಯಾಪ್ತಿಯು ಎಕರೆ ಮತ್ತು ಗುಂಟೆಗಳಲ್ಲಿ ದಾಖಲಾಗಿರುತ್ತದೆ. ಈ ವ್ಯಾಪ್ತಿಯನ್ನು ಮೀರಿ ಯಾವುದೇ ವ್ಯಕ್ತಿ ಹೆಚ್ಚುವರಿ ಭೂಮಿ ಹೊಂದಿದ್ದರೆ ಅದು ಖಂಡಿತವಾಗಿ ಒತ್ತುವರಿ ಆಗಿರುತ್ತದೆ. ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ‘ಕರಾಬು’ ಭೂಮಿ ಎಂದು ಪರಿಗಣಿಸಲು ಅವಕಾಶವಿದೆ. ತಮ್ಮ ಅಧಿಕೃತ ಭೂಮಿಗೆ ಹೊಂದಿಕೊಂಡ ಸರ್ಕಾರಿ ಅಥವಾ ಸಂಸ್ಥೆಗಳ ಭೂಮಿಯನ್ನು ಕರಾಬು ಭೂಮಿ ಎಂದು ಹೇಳಿ ಕೆಲವರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಕರಾಬು ಭೂಮಿಯ ಅಧಿಕೃತ ಮಾಲೀಕತ್ವ ಮತ್ತು ಅಳತೆಯ ದಾಖಲೀಕರಣವನ್ನು ಕಡ್ಡಾಯಗೊಳಿಸಿ ಅದಕ್ಕೆ ಕಂದಾಯ ನಿಗದಿಪಡಿಸಿದರೆ ಒತ್ತುವರಿ
ತಡೆಯಬಹುದಾಗಿದೆ.

ರಾಜ್ಯದಲ್ಲಿ ಎರಡು ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಹೇಳಿದ್ದಾರೆ. ಇದರಿಂದ ವನ್ಯಜೀವಿಗಳು ಗ್ರಾಮಗಳು, ಹೊಲಗಳಿಗೆ ನುಗ್ಗಿ ಹಾನಿ ಉಂಟುಮಾಡುತ್ತಿವೆ. ಅರಣ್ಯ ಭೂಮಿ ಒತ್ತುವರಿ ತೆರವಿಗೆ ಪ್ರಯತ್ನಿಸಿದ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಲೇ ಹಲ್ಲೆ ನಡೆದಿರುವ ಪ್ರಕರಣಗಳು ವರದಿಯಾಗಿವೆ. ಒತ್ತುವರಿಗೆ ಜನಪ್ರತಿನಿಧಿಗಳ ಪರೋಕ್ಷ ಬೆಂಬಲ ಇರುವುದನ್ನು ಇದು ಸ್ಪಷ್ಟಪಡಿಸುತ್ತದೆ.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ 1974ರಲ್ಲಿ ಅನುಷ್ಠಾನಕ್ಕೆ ತಂದ ಭೂಸುಧಾರಣೆ ಕಾಯ್ದೆಯ ಫಲವಾಗಿ ಸುಮಾರು ಎಂಟು ಲಕ್ಷ  ಕೃಷಿ ಕಾರ್ಮಿಕರು ಭೂಮಾಲೀಕರಾದರು. ಜಮೀನ್ದಾರಿ ಪದ್ಧತಿಗೆ ಬ್ರೇಕ್ ಹಾಕಲಾಯಿತು. ಕೃಷಿ ಉತ್ಪಾದನೆಯ ಭೂಮಿಯ ಪ್ರಮಾಣವನ್ನು ಹೆಚ್ಚಿಸಲಾಯಿತು. ಉಳುವವನೇ ಭೂ ಒಡೆಯನಾಗಬೇಕು ಎಂಬುದು ಅರಸು ಅವರ ಚಿಂತನೆಯಾಗಿತ್ತು. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಹೊಂದಿದ್ದ 28 ಎಕರೆ ಸ್ವಂತದ ಭೂಮಿಯು ಅಧಿಕಾರ ತ್ಯಜಿಸಿದಾಗ 24 ಎಕರೆಗೆ ಇಳಿದಿತ್ತು. ತಮ್ಮ ಗೇಣಿದಾರನಿಗೆ 4 ಎಕರೆ ಭೂಮಿಯನ್ನು ಸ್ವತಃ ಬಿಟ್ಟುಕೊಟ್ಟಿದ್ದರು. ಅರಸು ಅವರ ನಿಷ್ಠುರ ನಡೆಯಿಂದ ಅನೇಕ ಬಡವರು ಸ್ವಂತದ ಭೂಮಿ ಪಡೆದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಅವಕಾಶ ದೊರೆಯಿತು.

ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಮೂಲೆಯಲ್ಲಿ ಕುಳಿತು ವಿಶ್ವದ ಪ್ರತಿ ವಸ್ತುವಿನ ನಕ್ಷೆ ತಯಾರಿಸಬಹುದು. ಡಿಜಿಟಲೀಕರಣ ಅತ್ಯಂತ ಪರಿಣಾಮಕಾರಿ ವ್ಯವಸ್ಥೆಯಾಗಿದೆ. ಕಾನೂನು ರಚಿಸಿದರಷ್ಟೇ ಸಾಲದು, ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಬಹಳ ಅವಶ್ಯ. ಭೂ ಕಬಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವ ಕಾನೂನು ಕೂಡ ಜಾರಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT